ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ಅಕಾಲಿಕವಾಗಿ ಸುರಿದ ಮಳೆಯಿಂದಾಗಿ ಕಡಲೆ ಬೆಳೆಗೆ ಕೊಳೆ ರೋಗ ಹರಡಿದ್ದು, ಬಿತ್ತನೆ ಮಾಡಿದ ರೈತ ಇಂದು ಕಂಗಾಲಾಗಿ ನಿಂತಿದ್ದಾನೆ.
ಹೌದು…
ಚಳ್ಳಕೆರೆ ಬಳಿಯ ಬಾಲೇನಹಳ್ಳಿ ಹಾಗೂ ರಾಮಜೋಗಿಹಳ್ಳಿ ಸುತ್ತಮುತ್ತಲಿನ ಗ್ರಾಮಗಳ ಜಮೀನಿನಲ್ಲಿ ಈ ಸಮಸ್ಯೆ ಕಾಣಿಸಿಕೊಂಡಿದೆ.
ಈ ಕುರಿತಂತೆ ಮಾತನಾಡಿದ ರೈತ ತಿಪ್ಪೇಸ್ವಾಮಿ, ರೈತರು ಕಡಲೆ ಬಿತ್ತನೆ ಮಾಡಿದ್ದರು. ಇದು ಹೂವು ಬಿಡುವ ಸಮಯದಲ್ಲಿ ಬೆಳೆಗೆ ಕೊಳೆರೋಗ ಹರಡಿದ್ದು, ಇದನ್ನು ಹತೋಟಿಗೆ ತರಲು ರಾಸಾಯನಿಕ ಸಿಂಪಡನೆಯನ್ನೂ ಸಹ ಮಾಡಲಾಗಿದೆ. ಆದರೆ, ಇದು ಹತೋಟಿಗೆ ಬಾರದೇ, ಬೆಳೆಯೆಲ್ಲಾ ನಾಶವಾಗಿದ್ದು, ಇದರಿಂದ ನಮಗೆ ಬಹಳಷ್ಟು ನಷ್ಟವಾಗಿದೆ ಎಂದಿದ್ದಾರೆ.
ಈ ಹಿನ್ನೆಲೆಯಲ್ಲಿ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಮಾತನಾಡಿದ ಕೃಷಿ ಸಹಾಯಕ ನಿರ್ದೇಶಕ ಡಾ. ಮೋಹನ್ ಕುಮಾರ್, ಸಾಮಾನ್ಯವಾಗಿ ಕಡಲೆ ಬೆಳೆ ಕಪ್ಪುಮಣ್ಣಿನಲ್ಲೇ ಹೆಚ್ಚಾಗಿ ಬೆಳೆಯಲಾಗುತ್ತದೆ. ಈ ಪ್ರದೇಶ ಕಪ್ಪು ಮಣ್ಣಿನಿಂದ ಕೂಡಿದ್ದು ಈ ವರ್ಷ ಕೊನೆ ಹಂತದಲ್ಲಿ ಸುರಿದ ಮಳೆಯಿಂದಾಗಿ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿ ಬೆಳೆಗೆ ಕೊಳೆ ರೋಗ ತಗುಲಿದೆ ಎಂದಿದ್ದಾರೆ.
ರೈತರು ಹೆಚ್ಚಾಗಿ ರಾಸಾಯಿನಿಕ ಗೊಬ್ಬರ ಬಳಸುವುದರಿಂದ, ಕೀಟನಾಶಕ ಬಳಕೆಯಿಂದ ಭೂಮಿಯಲ್ಲಿನ ಫಲವತ್ತಗೆ ಕಡಿಮೆಯಾಗಿ ಕೊಳೆ ರೋಗಕ್ಕೆ ತುತ್ತಾಗುವ ಕಾರಣವು ಸಹ ಇದೆ. ಹೀಗಾಗಿ, ಕೊಟ್ಟಿಗೆ ಗೊಬ್ಬರ, ಬೀಜೋಪಚಾರ ಮಾಡುವುದರಿಂದ ಬೆಳೆಯನ್ನು ಕಾಪಾಡಿಕೊಳ್ಳಬಹುದಾಗಿದೆ ಎಂದರು.
ಕಡಲೆ ಬೆಳೆ ಕೊಳೆ ರೋಗ ಹರಡಿರುವುದರಿಂದ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗುತ್ತದೆ. ಹಿರಿಯ ಅಧಿಕಾರಿಗಳಿಗೆ ವರದಿ ಕಳುಹಿಸಲಾಗುವುದು. ಬೆಳೆ ವಿಮೆ ಕಂಪನಿ ಜೊತೆಗೆ ಮಾತನಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಕೃಷಿ ಅಧಿಕಾರಿ ಶಿವಕುಮಾರ್, ರೈತರಾದ ರಾಮಣ್ಣ, ಶ್ರೀನಿವಾಸ, ಅಜ್ಜಪ್ಪ ರೆಡ್ಡಿ, ಸುದರ್ಶನ್, ಚಿದಾನಂದ, ತಿಪ್ಪೇಸ್ವಾಮಿ, ಇದ್ದರು.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
Get in Touch With Us info@kalpa.news Whatsapp: 9481252093
Discussion about this post