ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಗೌರಿಬಿದನೂರು: ತಾಲೂಕಿನ ತೊಂಡೇಬಾವಿ ಬಳಿ ಯಲಹಂಕ-ಗೌರಿಬಿದನೂರು ರಸ್ತೆಯಲ್ಲಿ ಕೆಆರ್’ಡಿಎಲ್ ಸಂಸ್ಥೆಯವರು ನಿರ್ಮಾಣ ಮಾಡಲಾಗಿರುವ ರಸ್ತೆಯಲ್ಲಿನ ಮೋರಿಯ ಬಳಿ ತಡೆಗೋಡೆ ಇಲ್ಲದೆ ಇರುವುದರಿಂದ ಪ್ರಯಾಣಿಕರಿಗೆ ಆತಂಕ ಎದುರಾಗಿದೆ.
ನಿತ್ಯ ಈ ರಸ್ತೆಯಲ್ಲಿ ನೂರಾರು ವಾಹನಗಳು ಸಂಚರಿಸುತ್ತವೆ. ಅಲ್ಲದೆ ವೇಗವಾಗಿ ಚಲಿಸುವ ವಾಹನಗಳು ಈ ಭಾಗದಲ್ಲಿ ಅಪಘಾತಗಳಿಗೆ ಕಾರಣವಾಗಬಹುದಾಗಿದೆ. ರಸ್ತೆ ಕಾಮಗಾರಿ ಮಾಡುವ ವೇಳೆ ಅವೈಜ್ಞಾನಿಕವಾಗಿ ನಿರ್ಮಾಣ ಮಾಡದೇ ಉಳಿಕೆ ಬಿಟ್ಟ ಮೋರಿಯ ತಡೆಗೋಡೆ ಕಾಮಗಾರಿಯು ಅಪಘಾತಗಳಿಗೆ ಆಹ್ವಾನ ನೀಡುವಂತಿದೆ. ಇನ್ನು ಈ ರಸ್ತೆಯಲ್ಲಿ ಪ್ರತೀ ವಾರಕ್ಕೆ ನಾಲ್ಕೈದು ಅಪಘಾತಗಳು ಸಂಭವಿಸುತ್ತಲೇ ಇವೆ. ಈ ರೀತಿಯ ಸ್ಥಳಗಳಲ್ಲಿ ದ್ವಿಚಕ್ರ ವಾಹನ ಸವಾರರು ಆಕಸ್ಮಿಕವಾಗಿ ಮೋರಿಗೆ ಬೀಳುವ ಸಾಧ್ಯತೆಗಳು ಹೆಚ್ಚಾಗಿವೆ.
ಈ ಬಗ್ಗೆ ಸ್ಥಳೀಯರಾದ ನಾಗರಾಜ್ ಮಾತನಾಡಿ, ಈ ಪ್ರದೇಶದಲ್ಲಿ ಸಾಕಷ್ಟು ಅಪಘಾತಗಳು ಸಂಭವಿಸಿರುವ ನಿದರ್ಶನಗಳಿವೆ. ಇದರ ಬಗ್ಗೆ ಅನೇಕ ಬಾರಿ ಸಂಸ್ಥೆಯ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಭಾಗದಲ್ಲಿ ಅಪಘಾತಗಳೇನಾದರೂ ಸಂಭವಿಸಿದರೆ ಅದಕ್ಕೆ ಸಂಸ್ಥೆಯ ಅಧಿಕಾರಿಗಳೇ ನೇರ ಹೊಣೆಯಾಗುತ್ತಾರೆ. ಕೂಡಲೇ ಇದರ ಬಗ್ಗೆ ಪರಿಶೀಲಿಸಿ ಅಪೂರ್ಣಗೊಂಡಿರುವ ಮೋರಿಯ ತಡೆಗೋಡೆಯನ್ನು ನಿರ್ಮಿಸಿ ಮುಂದಾಗುವ ಅನಾಹುತಗಳನ್ನು ತಡೆಯಬೇಕಾಗಿದೆ ಎಂದರು.
ಈ ವಿಚಾರವಾಗಿ ಕೆಆರ್’ಡಿಎಲ್ ಸಂಸ್ಥೆಯ ಅಧಿಕಾರಿಗಳಿಂದ ಮಾಹಿತಿ ಪಡೆಯಲು ಕರೆ ಮಾಡಿದರೂ ಸಂಪರ್ಕಕ್ಕೆ ಸಿಗಲಿಲ್ಲ.
(ವರದಿ: ಬಿ.ಎಂ. ಅಜಯ್, ಗೌರಿಬಿದನೂರು)
Get in Touch With Us info@kalpa.news Whatsapp: 9481252093
Discussion about this post