ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭರತ ಭೂಮಿ ಹಲವು ಧರ್ಮಗಳ ಸಂಗಮಸ್ಥಾನ ಭವ್ಯಕಲಾ ಪರಂಪರೆಯ ಕೇಂದ್ರ ಹಲವು ಪುಣ್ಯ ಪುರುಷರ, ಸಾಧಕರ, ಕರ್ಮಯೋಗಿಗಳ ಜನ್ಮಭೂಮಿ. ಇಂತಹ ಮಹಾನ್ ವ್ಯಕ್ತಿಗಳು ಇಲ್ಲಿನ ಧರ್ಮ, ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ಉದ್ಧಾರಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಸಾಧನೆಗೈದಿದ್ದಾರೆ ಇಂತಹ ಮಹಾನ್ ವ್ಯಕ್ತಿಗಳ ಪೈಕಿ ಸಂಗೀತ ಲೋಕದ ಧೃವತಾರೆ, ಕರ್ನಾಟಕ ಸಂಗೀತದ ಪಿತಾಮಹರಲ್ಲೊಬ್ಬರಾದ ನಾದಬ್ರಹ್ಮ ಶ್ರೀತ್ಯಾಗರಾಜರ ಹೆಸರು ಅಜರಾಮರ.
ತ್ಯಾಗರಾಜರು ಇದ್ದ ಕಾಲ ತುಂಬಾ ಹಿಂದಿನದ್ದೇನಲ್ಲ. ಆದರೂ ಸಾವಿರಾರು ವರ್ಷಗಳ ಹಿಂದಿದ್ದ ಋಷಿಗಳಂತೆ ಅವರ ವಿಚಾರವಾಗಿ ನಮ್ಮ ಕಲ್ಪನೆಯಿದೆ. ದೇವಲೋಕದ ಋಷಿ ನಾರದರ ಅವತಾರವೆಂದೇ ಅವರ ಶಿಷ್ಯ ಪರಂಪರೆಯ ನಂಬಿಕೆ. ರಾಮಾಯಣವನ್ನು ರಚಿಸಿದ ವಾಲ್ಮೀಕಿ ಋಷಿಗಳೇ ತ್ಯಾಗರಾಜರಾಗಿ ಅವತರಿಸಿದರೆಂದೂ ಸಹ ಹೇಳುತ್ತಾರೆ. ಪುರಂದರದಾಸರನ್ನು ಕರ್ನಾಟಕ ಸಂಗಿತಕ್ಕೆ ‘‘ಪಿತಾಮಹ ಅಂದರೆ ತಾತ ಎಂದು ಕರೆಯುತ್ತಾರೆ. ಅವರ ನಂತರ ಸಂಗೀತದಲ್ಲಿ ಅಷ್ಟು ಹೆಸರುವಾಸಿಯಾದವರು ತ್ಯಾಗರಾಜರು. ಅವರು ಪುರಂದರದಾಸರ ಪರಂಪರೆಗೇ ಸೇರಿದವರು. ಪುರಂದರದಾಸರು ತಮ್ಮ ಹಾಡುಗಳನ್ನೆಲ್ಲ ಕನ್ನಡದಲ್ಲಿ ಹಾಡಿದ್ದಾರೆ; ತ್ಯಾಗರಾಜರ ಹಾಡುಗಳು ಬಹುಮಟ್ಟಿಗೆ ತೆಲುಗು ಭಾಷೆಯಲ್ಲಿವೆ, ಕೆಲವು ಸಂಸ್ಕೃತದಲ್ಲಿವೆ. ತ್ಯಾಗರಾಜರಿದ್ದ ಕಾಲದಲ್ಲಿಯೇ ಅದೇ ಪ್ರಾಂತ್ಯದಲ್ಲಿ ಇನ್ನಿಬ್ಬರಿದ್ದರು ಅವರು ಸಹ ತ್ಯಾಗರಾಜರಂತೆ ಸಂತರು, ಕವಿಗಳು ಸಂಗೀತ ಪದ್ಧತಿಯನ್ನು ಬೆಳೆಸಿ, ನೂರಾರು ಕೀರ್ತನೆಗಳನ್ನು ರಚಿಸಿದವರು. ಅವರಲ್ಲಿ ಒಬ್ಬರು ಶ್ಯಾಮಶಾಸ್ತ್ರಿಗಳು ಇನ್ನೊಬ್ಬರು ಮುತ್ತುಸ್ವಾಮಿದೀಕ್ಷಿತರು. ನಮ್ಮ ಸಂಗೀತಕ್ಕೆ ಈ ಮೂವರೂ ಮೂರು ಕಣ್ಣುಗಳ ಹಾಗೆ, ಮೂವರು ದೇವತೆಗಳ ಹಾಗೆ. ಅದಕ್ಕಾಗಿಯೇ ಇವರನ್ನು ಕರ್ಣಾಟಕ ಸಂಗೀತದ ತ್ರಿಮೂರ್ತಿಗಳು ಎಂದು ಕರೆಯುತ್ತಾರೆ.
ತ್ಯಾಗರಾಜರ ಪೂರ್ವಿಕರು ಮೂಲತಃ ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಗೆ ಸೇರಿದ ಕಾಕರ್ಲ ಎಂಬ ಹಳ್ಳಿಯವರು. ತ್ಯಾಗರಾಜರ ಮುತ್ತಾತ ಪಂಚನಾದಬ್ರಹ್ಮ ಎನ್ನುವವರು ಈ ಹಳ್ಳಿಯನ್ನು ಬಿಟ್ಟು ಕ್ರಿ.ಶ. 1600ರ ಸುಮಾರಿಗೆ ತಂಜಾವೂರಿನ ಬಳಿಯಿರುವ ತಿರುವಾರೂರು ಎಂಬ ಹಳ್ಳಿಗೆ ಬಂದು ಅಲ್ಲಿ ನೆಲೆಸಿದರು ಅವರು ಮಗ ಎಂದರೆ ತ್ಯಾಗರಾಜರ ತಾತ ಗಿರಿ ರಾಜಬ್ರಹ್ಮ ಸಹ ದೊಡ್ಡ ಪಂಡಿತರು ಹಾಗೂ ಕವಿಗಳು. ತಂಜಾವೂರು ದೊರೆ ಅವರನ್ನು ತನ್ನ ಆಸ್ಥಾನಕ್ಕೆ ಕರೆಸಿಕೊಂಡು ಸನ್ಮಾನ ಮಾಡಿದ್ದ. ಇಂಥವರ ಮಗ ರಾಮಬ್ರಹ್ಮ ಅವರೂ ಸಹ ಒಳ್ಳೆಯ ವಿದ್ವಾಂಸರು ಹೀಗೆ ತ್ಯಾಗರಾಜರ ವಂಶವೇ ವಿದ್ವನ್ಮಣಿಗಳ ಸಾಲು.
ರಾಮ ಬ್ರಹ್ಮ ಪಂಡಿತರು ಮಾತ್ರವಲ್ಲ, ರಾಮಭಕ್ತರು ಮನೆಯಲ್ಲಿ ರಾಮಪಂಚಾಯತನ (ಎಂದರೆ ರಾಮನ ಐವರು ಪರಿವಾರ ಲಕ್ಷ್ಮಣ ಭರತ ಶತ್ರುಘ್ನ ಹನುಮಂತ ಮತ್ತು ಸೀತೆ ನಾವು ಕಾಣುವ ತ್ಯಾಗರಾಜರ ಪೋಟೋದಲ್ಲಿ ಅವರು ಪೂಜೆ ಮಾಡುತ್ತಿರುವ ವಿಗ್ರಹ) ವನ್ನು ದಿನವೂ ಭಕ್ತಿಯಿಂದ ಪೂಜೆ ಮಾಡುವವರು ರಾಮನವಮಿಯ ಸಂದರ್ಭದಲ್ಲಿ ಸಡಗರದಿಂದ ಉತ್ಸವ ಮಾಡುವರು. ತಂಜಾವೂರು ದೊರೆ ತುಲಜಾಜಿ ಮಹಾರಾಜ ಇವರನ್ನು ತನ್ನ ಅರಮನೆಗೆ ಕರೆಸಿಕೊಂಡು ಅವರಿಂದ ರಾಮಾಯಣವನ್ನು ಓದಿಸುತ್ತಿದ್ದ. ರಾಮಬ್ರಹ್ಮನ ಹೆಂಡತಿ ಸೀತಮ್ಮ; ಆಕೆಯೂ ಗಂಡನಂತಯೇ ಸಾಧು ದೈವಭಕ್ತೆ. ರಾಮಬ್ರಹ್ಮ ಸೀತಮ್ಮ ದಂಪತಿಗಳಿಗೆ ಮೂವ್ವರು ಮಕ್ಕಳು ಪಂಚನದ ಬ್ರಹ್ಮ (ಅಥವಾ ಜಪ್ಯೇಶ), ಪಂಚಾಪಕೇಶಬ್ರಹ್ಮ ಮತ್ತು ತ್ಯಾಗಬ್ರಹ್ಮ ಎಂದು.
ಮೊದಲ ಇಬ್ಬರು ಮಕ್ಕಳು ತುಂಬ ದುಷ್ಟರಾಗಿ ಬೆಳೆದರು. ಹಳ್ಳಿಯಲ್ಲೆಲ್ಲ ಪಟಿಂಗರೆಂದು ಹೆಸರಾದರು. ತಂದೆ ತಾಯಿಯವರಿಗೆ ತುಂಬ ದುಃಖವಾಯಿತು. ಏನು ಮಾಡಬೇಕೆಂದು ತೋಚದೆ ಊರಿನ ದೇವರಾದ ತ್ಯಾಗರಾಜಸ್ವಾಮಿಯಲ್ಲಿ ಮೊರೆಯಿಟ್ಟರು ಹುಟ್ಟಿದ ಮಗುವಿಗೆ ಊರದೇವರ ಹೆಸರನ್ನೇ ಇಟ್ಟರು. ಮನೆತನದ ಹೆಸರಿನಲ್ಲಿ ಕಡೆಗೆ ಬ್ರಹ್ಮ ಎಂದು ವಾಡಿಕೆ: ಹೀಗೆ ಮಗುವಿಗೆ ತ್ಯಾಗಬ್ರಹ್ಮ ಎಂದು ಹೆಸರಾಯಿತು. ತ್ಯಾಗಯ್ಯ ಎಂದೂ ಕರೆಯುತ್ತಿದ್ದರು. ದೇವರ ಹೆಸರಿನಿಂದ ತ್ಯಾಗರಾಜರೆಂದೇ ಪ್ರಸಿದ್ಧರಾದರು.
ನಾದಬ್ರಹ್ಮ
ಭಾರತೀಯ ಸಂಗೀತದ ಉಗಮ ವೇದಗಳ ಕಾಲಕ್ಕೆ ನಮ್ಮನ್ನು ಕರೆದೊಯ್ಯುತ್ತದೆ. ಋಗ್ವೇದದಲ್ಲಿ ‘ವಾಕ್ ಎಂಬುದು ನಾದದ ಮೂಲಭೂತ ತತ್ತ್ವ ಎಂದು ತಿಳಿಸಲಾಗಿದೆ ಎನ್ನುತ್ತಾರೆ. ತತ್ಸಂಬಂಧಿತ ವಿದ್ವಾಂಸರು. ವೇದಾಂತ, ಉಪನಿಷತ್ ಹಾಗೂ ತಾಂತ್ರಿಕ ಅಖಂಡ ಭಾವ ಪ್ರವಾಹದಲ್ಲಿ ‘ನಾದಬ್ರಹ್ಮ ಎಂಬ ಪರಿಕಲ್ಪನೆ. ನಾದ ಬ್ರಹ್ಮ ಎಂಬುದು ಅದ್ಭುತವಾದ ಪಾರಮಾರ್ಥಿಕ ಪರಿಕಲ್ಪನೆ. ಬ್ರಹ್ಮನ ಪತ್ನಿ ಸರಸ್ವತಿ ಅಥವಾ ಭಾರತಿ ವಾಕ್ ದೇವತೆ ಎಂದು ಪರಿಗಣಿಸಲ್ಪಟ್ಟು ಎಲ್ಲ ಕಲಾರಾಧಕರ ಆರಾಧ್ಯ ದೇವತೆಯಾಗಿದ್ದಾಳೆ. ನಾದಬ್ರಹ್ಮ ಎಂದರೆ ಬ್ರಹ್ಮನನ್ನು ಸಂಬೋಧಿಸುವ ಇನ್ನೊಂದು ಹೆಸರೆಂದು ನಾದಯೋಗಿಗಳ ನಂಬಿಕೆ.
ನಾದಬ್ರಹ್ಮ ಪರಿಕಲ್ಪನೆ ಹಾಗೂ ಪವಿತ್ರವಾದ ಓಂಕಾರಗಳು ಭಾರತೀಯ ಸಂಗೀತ ಶಾಸ್ತ್ರದ ಕಲೆ ಹಾಗೂ ವಿಜ್ಞಾನಗಳಿಗೆ ತಳಹದಿಯಾಗಿದೆ. ಭಾರತೀಯ ಸಂಗೀತವು ಚತುರ್ವಿಧ ಪುರುಷಾರ್ಥಗಳಾದ ಧರ್ಮ, ಅರ್ಥ, ಕಾಮ, ಮೋಕ್ಷ ಸಾಧನೆಗೆ ಮಾಧ್ಯಮ ಎಂದು ಕೂಡ ಸಂಗೀತ ಸಾಧಕರಿಂದ ಪರಿಗಣಿಸಲ್ಪಟ್ಟಿದೆ. ಆದರೆ ಆ ಮಾರ್ಗದಲ್ಲಿ ಯಶಸ್ಸನ್ನು ಗಳಿಸಬೇಕಾದರೆ ಆ ಕುರಿತ ಸಾಧಕನ ಭಾವನೆ, ಪ್ರಯತ್ನ ಹಾಗೂ ಅದರಲ್ಲಿ ಅವನ ತಾದಾತ್ಮ್ಯತೆಗಳ ಮೇಲೆ ಅವಲಂಬಿತವಾಗಿದೆ. ಜನರಂಜನೆ ಹೇಗೆ ಸಂಗೀತದ ಒಂದು ಭಾಗವೋ ಹಾಗೆಯೇ ಭವಭಂಜನೆಯೂ ಅದರ ಒಂದು ಗುರಿ. ಭವಭಂಜನೆ ಎಂದರೆ ಲೌಕಿಕದ ಬಂಧನಗಳನ್ನೆಲ್ಲ ಕಡಿದುಕೊಂಡು ಮೋಕ್ಷ ಸಾಧನೆ ಎಂದು ಅರ್ಥ.
ನಮ್ಮ ದಕ್ಷಿಣಾದಿ ಸಂಗೀತ ಪರಂಪರೆಯಲ್ಲಿ ಕರ್ನಾಟಕ ಸಂಗೀತ ಪಿತಾಮಹರೆಂದು ಕರೆಸಿಕೊಂಡವರು ಪುರಂದರದಾಸರು. ಸಂಗೀತವನ್ನು ಭಕ್ತಿಮಾರ್ಗಕ್ಕೆ ಕೊಂಡೊಯ್ದು ಜನಪ್ರಿಯಗೊಳಿಸಿದ ಮಹಾನುಭಾವರು. ಅಂತೆಯೇ ಸಂಗೀತವನ್ನೇ ತಮ್ಮ ಜೀವನದ ಉಸಿರನ್ನಾಗಿ ಸ್ವೀಕರಿಸಿ, ತ್ರಿಕರಣಪೂರ್ವಕ ಅದರ ಸಾಧನೆ ಮಾಡಿ ಅದರಲ್ಲೇ ಅವರ ಆರಾಧ್ಯ ದೈವ ಶ್ರೀರಾಮನನ್ನು ಸಾಕ್ಷಾತ್ಕರಿಸಿಕೊಂಡ ಭಕ್ತಾಗ್ರೇಸರು ಶ್ರೀ ತ್ಯಾಗರಾಜರು. ತ್ಯಾಗರಾಜರು ಸಂಗೀತ ಸಾಧನಾ ಮಾರ್ಗದಲ್ಲಿಯೇ ಮೋಕ್ಷ ಪಡೆದ ಸಾಧಕರು. ನಮ್ಮ ಸಂಗೀತ ಪರಂಪರೆಯ ಸರ್ವಶ್ರೇಷ್ಠ ಸಂಗೀತಗಾರರೂ ವಾಗ್ಗೇಯಕಾರರೂ ನಾದಯೋಗಿಗಳೂ ಆದ ತ್ಯಾಗಯ್ಯನವರ ನೆನಪು ಮಾಡಿಕೊಳ್ಳುವುದು ಅತ್ಯಂತ ಸೂಕ್ತ ಹಾಗೂ ಸಾಮಯಿಕ.
ಶ್ರೀ ತ್ಯಾಗರಾಜರು ನಾದಯೋಗಿಗಳು ಯೋಗ ಎಂಬ ಪದಕ್ಕೆ ಹಲವು ಅರ್ಥಗಳುಂಟು. ಯೋಗ ಎಂಬ ಸಂಸ್ಕೃತ ಶಬ್ದ ‘ಯುಜ್ ಎಂಬ ಧಾತುವಿನಿಂದ ಹುಟ್ಟಿದೆ. ಯುಜ್ ಎಂದರೆ ಸೇರಿಸುವುದು ಎಂದರ್ಥ. ನಮ್ಮ ಪರಂಪರೆಯಲ್ಲಿ ಜೀವಾತ್ಮನು ಪರಮಾತ್ಮನೊಂದಿಗೆ ಸೇರುವುದೇ ಯೋಗ ಸಾಧನೆಯ ಅಂತಿಮ ಗುರು ಎಂಬ ನಂಬಿಕೆ ಉಂಟು. ಅದರ ಅರ್ಥ ಸಂಕುಚಿತವೂ ಸೀಮಿತವೂ ಆದ ಅಹಂಕಾರ ತುಂಬಿದ ವ್ಯಕ್ತಿತ್ವವನ್ನು ವಿಶಾಲಗೊಳಿಸುತ್ತಾ ಹೋಗಿ ಸರ್ವ ವ್ಯಾಪಕವೂ ಶಾಶ್ವತವೂ ಆನಂದಕರವೂ ಆದ ಸತ್ಯ ಸ್ಥಿತಿಗೆ ಸೇರಿಸುವುದು ಎಂಬುದೇ ಆಗಿದೆ.
ಯೋಗ ಎಂಬುದನ್ನು ಅನೇಕ ಮಹಾನುಭಾವರು ಅರ್ಥೈಸಿದ್ದಾರೆ. ಅರವಿಂದ ಮಹರ್ಷಿಗಳ ಪ್ರಕಾರ ವ್ಯಕ್ತಿಯಲ್ಲಿನ ಸುಪ್ತ ಸಾಮರ್ಥ್ಯಗಳನ್ನು ವಿಕಾಸಗೊಳಿಸುವುದರ ಮೂಲಕ ಪರಿಪೂರ್ಣತೆಯ ಕಡೆಗೆ ಕರೆದೊಯ್ಯುವ ಕ್ರಮಬದ್ಧ ಪ್ರಯತ್ನವೇ ಯೋಗ. ಶಾರೀರಿಕ, ಮಾನಸಿಕ, ಬೌದ್ಧಿಕ, ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಸರ್ವಾಂಗೀಣ ಬೆಳವಣಿಗೆಗೆ ರಾಜಮಾರ್ಗವೇ ಯೋಗ.
ಅದ್ವೈತವು ಜೀವಾತ್ಮ ಮತ್ತು ಪರಮಾತ್ಮರ ಐಕ್ಯತೆಯೇ ಯೋಗ ಎಂದು ಯೋಗದ ಪರಮೋದ್ದೇಶವನ್ನು ಸಾರಿದೆ.. ನಮ್ಮ ಪೂರ್ವಿಕರು ಸತ್ಯಸಾಕ್ಷಾತ್ಕಾರಕ್ಕೆ ನಾಲ್ಕು ಯೋಗಗಳನ್ನು ಸಾಧನಗಳನ್ನಾಗಿ ಹೇಳಿದ್ದಾರೆ. ಅವೇ ಜ್ಞಾನ, ಕರ್ಮ, ರಾಜ ಹಾಗೂ ಭಕ್ತಿ ಯೋಗಗಳು. ಶ್ರೇಷ್ಠ ಸಂಗೀತ ಸಾಧಕರು ಇದಕ್ಕೆ ಮತ್ತೊಂದು ಯೋಗವನ್ನು ಸೇರಿಸುತ್ತಾರೆ. ಅದೇ ನಾದಯೋಗ. ಶ್ರೀ ತ್ಯಾಗರಾಜರು ಈ ನಾದಯೋಗ ಮಾರ್ಗಿಗಳಾಗಿ ಸಂಚರಿಸಿ ಮೋಕ್ಷ ಪಡೆದವರು.
ತ್ಯಾಗರಾಜರ ಪ್ರಕಾರ ಭಗವಂತನು ನಾದಾತ್ಮ, ನಾದ ಸ್ವರೂಪಿ, ನಾದಲೋಲ, ನಾದ ಶರೀರ ಹಾಗೂ ನಾದಮಯಪ್ರಾಣ. ತ್ಯಾಗರಾಜರು ತಮ್ಮ ಆರಾಧ್ಯ ದೈವ ಶ್ರೀರಾಮನನ್ನು ತಮ್ಮ ಕೀರ್ತನೆಗಳಲ್ಲಿ ಸಂಗೀತಲೋಲ, ಗಾನಲೋಲ, ಗೀತಪ್ರಿಯ, ಸಾಮಗಾನಲೋಲ ಮುಂತಾಗಿ ಸಂಬೋಧಿಸಿದ್ದಾರೆ. ಅವನು ನಾದಸುಧಾರಸ ಪ್ರಿಯ. ಅರಭಿರಾಗದ ‘ನಾದಸುಧಾರಸಂಬಲನು… ಎಂಬ ಕೀರ್ತನೆಯಲ್ಲಿ ಹೀಗೆ ಅವನನ್ನು ಕರೆದಿದ್ದಾರೆ.
ಹೀಗಾಗಿ ಭಗವಂತನು ನಾದಸುಧಾರಸನಾಗಿ, ಸಮಸ್ತ ಕಾವ್ಯ ಹಾಗೂ ಗೀತೆಗಳಲ್ಲಿ ಅಡಗಿರುವುದರಿಂದ ನಾದವು ಬ್ರಹ್ಮ ಸಾಕ್ಷಾತ್ಕಾರಕ್ಕೆ ಸಾಧನವೂ ಸಾಧ್ಯವೂ ಆಗಿದೆ. ಸಂಗೀತ ಎಂಬುದು ಶಬ್ದಗಳ ವ್ಯವಸ್ಥಿತ ಅರ್ಥ ಜೋಡಣೆಯಲ್ಲ. ಅದು ದೇವರನ್ನೇ ವಸ್ತುವಾಗುಳ್ಳದ್ದು, ದೈವಾಂಶದ್ದು, ಪಾರಮಾರ್ಥಿಕವಾದದ್ದು. ಆದುದರಿಂದ ಅದು ಮನುಷ್ಯನ ಮುಕ್ತಿಗೆ ಒಂದು ಅತ್ಯುತ್ತಮ ಸಾಧನ. ಉಳಿದೆಲ್ಲ ಕಲೆಗಳಿಗಿಂತ ಸುಲಭವಾಗಿ ಕ್ಷಣಾರ್ಧದಲ್ಲಿ ಕೇಳುಗರ ಅಂತರಾಳವನ್ನು ಮಿಡಿಸಬಲ್ಲ ಶಕ್ತಿ ಉಳ್ಳ ದೈವಿಕವಾದ ಕಲೆ ಸಂಗೀತ.
ಈ ಅಂಶವು ನಮ್ಮ ದ್ರಷ್ಟರರಾದ ಋಷಿಮುನಿಗಳಿಗೆ ಗೋಚರಿಸಿದ್ದರಿಂದ ವೇದಗಳಲ್ಲೇ ಸಂಗೀತಕ್ಕೆ ಸ್ಥಾನ ದೊರೆತು, ವೇದಗಳ ಪಠನೆಯ ವೇಳೆ ‘ಋಕ್‌ಗಳು ‘ಸಾಮಗಳಾದವು. ತುಂಬುರರು, ನಾರದರು ಸಂಗೀತವಾಹಕರಾದರು. ದೇವರು ಸಂಗೀತ ಅವನಿಗೆ ಸಲ್ಲಿಸುವ ಸೇವೆಗಳಲ್ಲಿ ಸಂಗೀತ ಒಂದಾಯಿತು.
ಭಾರತೀಯ ಸಂಗೀತದಲ್ಲಿ ಭಕ್ತಿಗೂ ಸಂಗೀತಕ್ಕೂ ಅವಿನಾಭಾವ ಸಂಬಂಧ. ಪುರಂದರ, ಕನಕ, ತ್ಯಾಗರಾಜ, ಮುತ್ತಯ್ಯ ಭಾಗವತರು, ಶ್ಯಾಮಶಾಸ್ತ್ರಿಗಳು ದಕ್ಷಿಣಾದಿ ಸಂಗೀತಕ್ಕೆ ಭಕ್ತಿಭಾವವನ್ನು ತುಂಬಿ ಅದನ್ನು ದೈವಿಕವನ್ನಾಗಿ ಮಾಡಿದರೆ ಮುಂತಾದ ಸಹಸ್ರಾರು ಭಕ್ತಿ ಮಾರ್ಗಾನುಯಾಯಿಗಳು ಭಗವಂತನನ್ನು ತಮ್ಮ ಕೃತಿಗಳಲ್ಲಿ ಆರಾಧಿಸುವುದನ್ನು ಕಾಣಬಹುದು. ಸಂಗೀತ ಮತ್ತು ಭಕ್ತಿ ನಾಣ್ಯದ ಎರಡು ಮುಖಗಳಿದ್ದಂತೆ. ಭಕ್ತಿಯೊಡಗೂಡಿದ ಗಾನವು ಯೋಗವಾಗುತ್ತದೆ. ಆ ಯೋಗದಿಂದ ಜೀವಿಯು ಅದ್ವೈತ ಸ್ಥಿತಿಯನ್ನು ತಲುಪುವನೆಂದು ಸೂತ ಸಂಹಿತೆ ಸಾರುತ್ತದೆ.
ಸಂಗೀತ ಜ್ಞಾನದ ಮಹತ್ತ್ವವನ್ನು ರಸೃಷಿ ತ್ಯಾಗಯ್ಯನವರು ತಮ್ಮ ಹಲವು ಕೀರ್ತನೆಗಳಲ್ಲಿ ಕ್ರೋಢೀಕರಿಸಿ ಭಾರತೀಯ ಸಂಗೀತದ ಸತ್ಯ ದರ್ಶನ ಮಾಡಿಸಿದ್ದಾರೆ; ‘‘ಸಂಗೀತ ಜ್ಞಾನವು ಲಭ್ಯವಾಗುವುದು ಅದು ಭಕ್ತಿಯೊಂದಿಗೆ ಒಡಗೂಡಿರುವಾಗ ಮಾತ್ರ. ಭಕ್ತಿಹೀನನಿಗೆ ಸಂಗೀತ ಜ್ಞಾನವಷ್ಟೇ ಅಲ್ಲ, ಸನ್ಮಾರ್ಗವಾಗಲಿ, ಮುಕ್ತಿಯಾಗಲಿ ಪ್ರಾಪ್ತವಾಗುವುದಿಲ್ಲ. ಮೂಲಭೂತವಾಗಿ ಭಕ್ತಿ ಹೊಂದಿರದೆ ಬಾಹ್ಯ ರೂಪದಲ್ಲಿ ಒಬ್ಬನು ಎಷ್ಟೇ ಪ್ರಸಿದ್ಧನೆನಿಸಿದರೂ ಶಿಸ್ತುಗಾರನೆನಿಸಿದರೂ ಅದು ಕೇವಲ ಶುಷ್ಕ ಅಂಥವನಿಗೆ ದೈವ ಸಾಕ್ಷಾತ್ಕಾರ ಸಾಧ್ಯವಿಲ್ಲ.
ತ್ಯಾಗರಾಜರ ಎಲ್ಲ ಕೀರ್ತನೆಗಳೂ ಭಗವದ್ಭಕ್ತಿಗೆ ಉದಾಹರಣೆಗಳೇ ‘ನಾಮ ಕುಸುಮಾಲಚೇ ಪೂಜಿಂಚೇ ನರಜನ್ಮಮೇ ಜನ್ಮಮು.. ಎಂದು ಭಗವಂತನನ್ನು ಸಂಗೀತದ ಮೂಲಕ ಪೂಜಿಸುವವನ ಜನ್ಮ ಸಾರ್ಥಕ ಎಂದು ತ್ಯಾಗಬ್ರಹ್ಮರು ಸಾರಿದ್ದಾರೆ.
ತ್ಯಾಗರಾಜರ ಹಿರಿಮೆ
ಶ್ರೀ ತ್ಯಾಗರಾಜರ ಹೆಸರು ಭಗವದ್ಭಕ್ತ ವಲಯದಲ್ಲಿ ಮನೆಮಾತಾಗಿರುವಂಥದ್ದು. ದಕ್ಷಿಣಾದಿ ಸಂಗೀತ ಕ್ಷೇತ್ರದಲ್ಲಿ ಅವರನ್ನು ಮೀರಿಸುವ ಇನ್ನೊಬ್ಬ ಸಂಕೀರ್ತನಕಾರರಿಲ್ಲ. ಸರಳಜೀವನದ ಸಾಕಾರಮೂರ್ತಿಯೇ ಆಗಿದ್ದ ಅವರು, ತ್ಯಾಗ-ವೈರಾಗ್ಯಕ್ಕೆ ಮತ್ತೊಂದು ಹೆಸರಾಗಿದ್ದರು. ಭಗವದ್ ಸಂಕೀರ್ತನೆಗಳನ್ನು ಹುಟ್ಟುಹಾಕುತ್ತ, ಉದರಭರಣಕ್ಕಾಗಿ ಮನೆಮನೆಯಲ್ಲಿ ಭಿಕ್ಷಾಟನೆ ಮಾಡುತ್ತ ಸಂತೃಪ್ತ ಜೀವನವನ್ನು ನಡೆಸುತ್ತಿದ್ದರು, ತ್ಯಾಗರಾಜರ ಪ್ರತಿಭೆ ಮತ್ತು ವ್ಯಕ್ತಿತ್ವದಿಂದ ಪ್ರಭಾವಿತನಾದ ಶ್ರೀಮಂತನೊಬ್ಬನಿಗೆ ಅವರು ಭಿಕ್ಷಾಟನೆ ಮಾಡುವುದು ಸರಿಕಾಣಲಿಲ್ಲ. ಅವರ ಬಡತನ ನಿವಾರಣೆಗೆ ಹಣದ ಕೊಡುಗೆ ನೀಡುವ, ದವಸ-ಧಾನ್ಯಗಳನ್ನು ಮನೆಗೇ ತಲುಪಿಸುವ ಪ್ರಲೋಭನೆ ಒಡ್ಡಿದರೂ ಅವೆಲ್ಲವನ್ನೂ ತಿರಸ್ಕರಿಸಿದ ತ್ಯಾಗರಾಜರು ತಮ್ಮ ಹಾಗೂ ಮಡದಿಯ ಜೀವನ ನಿರ್ವಹಣೆಗೆ ಭಿಕ್ಷಾಟನೆಯನ್ನೇ ನೆಚ್ಚಿದ್ದರು.
ಹೇಗಾದರೂ ಮಾಡಿ ತ್ಯಾಗರಾಜರ ಮನಸ್ಸು ಮತ್ತು ಜೀವನದ ಹಾದಿ ಬದಲಿಸಬೇಕೆಂದು ಪಟ್ಟುಹಿಡಿದ ಶ್ರೀಮಂತ, ಅಕ್ಕಿಯ ತದ್ರೂಪದ ಚಿನ್ನದ ಕಾಳುಗಳನ್ನು ಮಾಡಿಸಿ, ಅವರು ಭಿಕ್ಷೆಗೆಂದು ಬಂದಿದ್ದಾಗ ಅವನ್ನು ಅಕ್ಕಿಯ ಜತೆಗೆ ಬೆರೆಸಿ ಭಿಕ್ಷೆಯಾಗಿ ಜೋಳಿಗೆಗೆ ಹಾಕಿದ. ತ್ಯಾಗರಾಜರಿಗೆ ತಿಳಿಯದಂತೆಯೇ ಸಂಪತ್ತನ್ನು ವರ್ಗಾಯಿಸಿದ್ದಕ್ಕಾಗಿ ತೃಪ್ತಿಹೊಂದಿದ.
ಭಿಕ್ಷಾಟನೆ ಮುಗಿಸಿ ಮನೆಗೆ ಬಂದ ತ್ಯಾಗರಾಜರು ಜೋಳಿಗೆಯನ್ನು ಪತ್ನಿಗೆ ಒಪ್ಪಿಸಿ ವಿಶ್ರಾಂತಿಗೆ ತೆರಳಿದನು. ಪತ್ನಿಯು ಅದರಲ್ಲಿದ್ದ ಅಕ್ಕಿಯನ್ನು ಪಾತ್ರೆಗೆ ಸುರಿಯಲಾಗಿ ಅದರೊಳಗೆ ಸೇರಿಕೊಂಡಿದ್ದ ವಿಶಿಷ್ಟ ರೀತಿಯ ಮತ್ತಷ್ಟು ಅಕ್ಕಿಕಾಳುಗಳು ಕಂಡವು. ಅತ್ಯಂತ ಮುಗ್ಧೆಯಾಗಿದ್ದ ಆಕೆಗೆ ಅವು ಚಿನ್ನದ ಅಕ್ಕಿಕಾಳುಗಳೆಂಬುದು ತಿಳಿಯದೆ ಹೋಯಿತು. ಅದೇನೆಂದು ಪತಿಯನ್ನೇ ಕೇಳಬೇಕು ಎಂದುಕೊಂಡಳು ವಿಶ್ರಾಂತಿ ಮುಗಿಸಿ ಹೊರಬಂದ ತ್ಯಾಗರಾಜರಿಗೆ ಆ ಕಾಳುಗಳನ್ನು ತೋರಿಸಿದಾಗ, ಧನಿಕಭಕ್ತನು ಜಾಣ್ಮೆಯಿಂದ ತನ್ನ ಜೋಳಿಗೆಯಲ್ಲಿ ಚಿನ್ನದ ಅಕ್ಕಿಕಾಳುಗಳನ್ನು ಹಾಕಿರುವುದು ಅವರಿಗೆ ಗೊತ್ತಾಯಿತು. ತಕ್ಷಣ ಅವರು ಪತ್ನಿಗೆ, ‘ಆ ಅಕ್ಕಿಕಾಳುಗಳು ಹಾಳಾಗಿವೆ, ಚರಂಡಿಯಲ್ಲಿ ಸುರಿದುಬಿಡು ಎಂದಷ್ಟೇ ಹೇಳಿ ತ್ಯಾಗ-ವೈರಾಗ್ಯವನ್ನು ಮೆರೆದರು.
ಕೆಲವರು ಹಣ ಮತ್ತು ಚಿನ್ನದಲ್ಲಿ ಸುಖವನ್ನು ಕಂಡರೆ, ಮತ್ತೆ ಕೆಲವರಿಗೆ ಪದವಿ-ಅಧಿಕಾರ-ಸವಲತ್ತುಗಳಲ್ಲಿ ಸುಖ ಗೋಚರಿಸುತ್ತದೆ. ಈ ಎಲ್ಲವೂ ನಶ್ವರ, ಭಗವಂತನ ಕೃಪಾಶೀರ್ವಾದವೊಂದೇ ಶಾಶ್ವತ ಎಂದು ನಂಬಿದವರಿಗೆ, ಭಕ್ತಿ-ಸಂಕೀರ್ತನೆ-ತ್ಯಾಗ-ವೈರಾಗ್ಯಗಳಲ್ಲೇ ಸುಖ ಕಾಣುತ್ತದೆ ಎಂಬುದಕ್ಕೆ ಈ ದೃಷ್ಟಾಂತ ಒಂದು ಉದಾಹರಣೆಯಾಗಿದೆ. ಈ ಲೌಕಿಕ ಪ್ರಪಂಚದಲ್ಲಿ ದಿನದೂಡುತ್ತಿರುವವರಾದ ನಾವು ಈ ಮಟ್ಟಿಗೆ ಅಲ್ಲದಿದ್ದರೂ, ಲೋಕದ ವ್ಯಾಪಾರಕ್ಕೆ ಎಷ್ಟು ಅಂಟಿಕೊಂಡಿರಬೇಕೋ ಅಷ್ಟುಮಾತ್ರವೇ ಅದರೊಂದಿಗೆ ನಂಟುಹೊಂದಿದ್ದು, ದೀನ-ದಲಿತರ ಸೇವೆ ಮತ್ತು ಭಗವಂತನ ನಾಮಸ್ಮರಣೆಗೇ ಹೆಚ್ಚಿನ ಮಹತ್ವ ನೀಡಬೇಕು. ಅದೇ ನಿಜವಾದ ಬದುಕು ಎಂಬುದನ್ನು ಮರೆಯದಿರೋಣ.
Get in Touch With Us info@kalpa.news Whatsapp: 9481252093
Discussion about this post