ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ರಾಷ್ಟ್ರೀಯ ಲೋಕ ಅದಾಲತ್’ನ ಭಾಗವಾಗಿ ಸಂಧಾನ ಮೂಲಕ ಬರೋಬ್ಬರಿ 811 ಪ್ರಕರಣಗಳನ್ನು ಇತ್ಯರ್ಥಪಡಿಸಿರುವ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮಾದರಿ ಕಾರ್ಯ ಮಾಡಿದೆ.
ಫೆ.8ರಂದು ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ವಿವಿಧ ರೀತಿಯ ಸುಮಾರು 7,797 ಪ್ರಕರಣಗಳನ್ನು ತೆಗೆದುಕೊಂಡು, ಅವುಗಳ ಪೈಕಿ ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆಯ ಹಂತದಲ್ಲಿ ಬಾಕಿ ಇದ್ದ 656 ಪ್ರಕರಣಗಳನ್ನು ಹಾಗೂ 155 ವ್ಯಾಜ್ಯ ಪೂರ್ವ ಪ್ರಕರಣಗಳನ್ನು ರಾಜಿ ಸಂಧಾನ ಮಾಡಿಸುವ ಮೂಲಕ ಇತ್ಯರ್ಥಪಡಿಸಲಾಗಿದೆ.
ಈ ಕುರಿತಂತೆ ಮಾಹಿತಿ ನೀಡಿರುವ ಜಿಲ್ಲಾ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಎನ್. ಸರಸ್ವತಿ ಅವರು, ಪ್ರಕರಣಗಳನ್ನು ರಾಜಿ ಮಾಡಿಸಲು ಶಿವಮೊಗ್ಗ ನಗರದಲ್ಲಿ 16 ಪೀಠಗಳನ್ನು, ಭದ್ರಾವತಿಯಲ್ಲಿ 07 ಪೀಠ, ಹೊಸನಗರದಲ್ಲಿ 02, ಸಾಗರದಲ್ಲಿ 04 ಪೀಠಗಳನ್ನು ರಚಿಸಲಾಗಿತ್ತು. ಲೋಕ ಅದಾಲತ್‌ನಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಾಸ್ಟರ್ ಆರ್’ಕೆಜಿಎಂಎಂ ಮಹಾಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ರಾಜಿ ಸಂಧಾನ ಮಾಡಿಸಲಾಯಿತು ಎಂದರು.
ಈ ಅದಾಲತ್’ನಲ್ಲಿ ಜಿಲ್ಲೆಯ ಎಲ್ಲಾ ನ್ಯಾಯಾಧೀಶರು, ವಿವಿಧ ವಿಮಾ ಕಂಪನಿಗಳ ಹಾಗೂ ಬ್ಯಾಂಕುಗಳ ಅಧಿಕಾರಿಗಳು, ವಿಮಾ ಕಂಪನಿಯ ಹಾಗೂ ಬ್ಯಾಂಕುಗಳ ಪ್ಯಾನಲ್ ವಕೀಲರುಗಳು, ಅರ್ಜಿದಾರರ ಪರ ವಕೀಲರುಗಳು ಹಾಗೂ ಕಕ್ಷಿದಾರರು ಭಾಗವಹಿಸಿದ್ದರು ಎಂದವರು ತಿಳಿಸಿದ್ದಾರೆ.
Get in Touch With Us info@kalpa.news Whatsapp: 9481252093
Discussion about this post