ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ರಾಜ್ಯ ಬ್ರಾಹ್ಮಣ ಅಭಿವೃದ್ಧಿ ನಿಗಮಯ ನೂತನ ಅಧ್ಯಕ್ಷ ಎಚ್.ಎಸ್. ಸಚ್ಚಿದಾನಂದ ಮೂರ್ತಿ ಅವರಿಗೆ ಅಭಿನದಂನೆ ಹಾಗೂ ಸಂವಾದ ಕಾರ್ಯಕ್ರಮವನ್ನು ಫೆ.15ರಂದು ಆಯೋಜಿಸಲಾಗಿದೆ.
ಈ ಕುರಿತಂತೆ ಮಾಹಿತಿ ನೀಡಿರುವ ಸಮಾಜದ ಪ್ರಮುಖ ಎಸ್. ದತ್ತಾತ್ರಿ, ಅಂದು ಸಂಜೆ 6 ಗಂಟೆಗೆ ಕೋಟೆ ರಸ್ತೆ ಶ್ರೀ ಗಾಯತ್ರಿ ದೇವಾಲಯದಲ್ಲಿ ಸ್ನೇಹ ಮಿಲನ ಹಾಗೂ ಸಂವಾದ ಕಾರ್ಯಕ್ರಮ ನಡೆಯಲಿದ್ದು, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಶಿವಮೊಗ್ಗ ವಲಯ ತಾಲೂಕು ಬ್ರಾಹ್ಮಣ ಸಂಘದ ಸಹಯೋಗವಿದೆ ಎಂದರು.
ರಾಜ್ಯ ಬ್ರಾಹ್ಮಣ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಇದೇ ಮೊದಲ ಬಾರಿಗೆ ನಗರಕ್ಕೆ ಆಗಮಿಸುತ್ತಿರುವ ಸಚ್ಚಿದಾನಂದ ಮೂರ್ತಿ ಅವರನ್ನು ಅಭಿನಂದಿಸಲು ತೀರ್ಮಾನಿಸಲಾಗಿದೆ. ಆನಂತರ ನಗರದ ವಿವಿಧ ವಿಪ್ರ ಸಂಘಟನೆಗಳೂ ಹಾಗೂ ಸಮಾಜದ ಪ್ರಮುಖರೊಂದಿಗೆ ಸಂವಾದವನ್ನೂ ಸಹ ಏರ್ಪಡಿಸಲಾಗಿದೆ ಎಂದರು.
ವಿಪ್ರ ಸಮಾಜದ ಅಭಿವೃದ್ಧಿಯ ಬೆಂಬಲಕ್ಕೆ ನಿರಂತರ ಶ್ರಮಿಸುತ್ತಿರುವ ಸಂಸದ ಬಿ.ವೈ. ರಾಘವೇಂದ್ರ, ಸಚಿವ ಈಶ್ವರಪ್ಪ ಅವರುಗಳನ್ನು ಗೌರವಿಸಲಾಗುತ್ತಿದ್ದು, ಇವರೊಂದಿಗೆ ಪಾಲಿಕೆ ನೂತನ ಉಪಮೇಯರ್ ಸುರೇಖಾ ಮುರಳೀಧರ್ ಅವರನ್ನು ಅಭಿನಂದಿಸಲಾಗುವುದು ಎಂದರು.
ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಜಿ.ಕೆ. ಮಾಧವ ಮೂರ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಕೈಗಾರಿಕೋದ್ಯಮಿ, ಹೊಯ್ಸಳ ಕರ್ನಾಟಕ ಬ್ರಾಹ್ಮಣ ಸಂಘದ ಅಧ್ಯಕ್ಷ ವೇಣುಗೋಪಾಲ್ ಉದ್ಘಾಟಿಸಲಿದ್ದಾರೆ. ಎಸ್. ಚಂದ್ರಶೇಖರ್ ಹಾಗೂ ಅಬಸೆ ದಿನೇಶ್ ಕುಮಾರ್ ಎನ್. ಜೋಷಿ ಅವರು ಅಭಿನಂದನಾ ನುಡಿ ಆಡಲಿದ್ದು, ಶಿವಮೊಗ್ಗ ಶೃಂಗೇರಿ ಶಂಕರಮಠದ ಧರ್ಮಾಧಿಕಾರಿ ಡಾ.ಪಿ. ನಾರಾಯಣ್ ಹಾಗೂ ಗಾಯತ್ರಿ ಪ್ರತಿಷ್ಠಾನದ ಅಧ್ಯಕ್ಷ ಎಚ್.ವಿ. ಸುಬ್ರಹ್ಮಣ್ಯ ಅಭಿನಂದನೆ ನಡೆಸಿಕೊಡಲಿದ್ದಾರೆ.
ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್, ಎಂ.ಬಿ. ಭಾನುಪ್ರಕಾಶ್, ಬ್ರಾಹ್ಮಣ ಮಹಾಸಭಾದ ಪ್ರಧಾನ ವಕ್ತಾರ ಮ.ಸ. ನಂಜುಂಡಸ್ವಾಮಿ ಉಪಸ್ಥಿತರಿರಲಿದ್ದಾರೆ ಎಂದರು.
ಬ್ರಾಹ್ಮಣ ಅಭಿವೃದ್ಧಿ ನಿಗಮ ಅಸ್ಥಿತ್ವಕ್ಕೆ ಬರಲು ಹಲವಾರು ಮಂದಿ ಕಾರಣಕರ್ತರಿದ್ದಾರೆ. ಮಂಡಳಿಯನ್ನು ಅಸ್ಥಿತ್ವಕ್ಕೆ ತರುವಂತೆ ಮಾಜಿ ಶಾಸಕ ಕೆ.ಬಿ. ಪ್ರಸನ್ನ ಕುಮಾರ್ ಅವರು ರಾಜ್ಯ ಸರ್ಕಾರದ ಮುಂದೆ ಪ್ರಸ್ತಾವನೆ ಸಲ್ಲಿಸಿದ್ದರು. ಇದಕ್ಕೆ ಎಲ್ಲ ಶಾಸಕ ಬೆಂಬಲ ದೊರೆತು ಹಿಂದಿನ ಸರ್ಕಾರ ಇದನ್ನು ಸೃಜಿಸಿತ್ತು. ಹೀಗಾಗಿ, ಮಂಡಳಿ ಅಸ್ಥಿತ್ವಕ್ಕೆ ಬರಲು ಕಾರಣರಾದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇವೆ ಎಂದರು.
ಇನ್ನು, ವಿಪ್ರ ಸಮಾಜದ ಸಮಗ್ರ ಅಭಿವೃದ್ಧಿಗಾಗಿ ಮಂಡಳಿಗೆ 100 ಕೋಟಿ ರೂ. ಅನುದಾನ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದಿದ್ದಾರೆ.
ದತ್ತಾತ್ರಿ ಅವರೊಂದಿಗೆ ಶಿವಮೊಗ್ಗ ವಲಯ ಉಪಾಧ್ಯಕ್ಷ ಎಚ್.ಎನ್. ಛಾಯಾಪತಿ, ಎಚ್.ಕೆ. ಕೇಶವಮೂರ್ತಿ, ಸತ್ಯನಾರಾಯಣ , ಎಂ. ಶಂಕರ್, ವೇಣುಗೋಪಾಲ್, ಸಂತೋಷ್ ಇದ್ದರು.
Get in Touch With Us info@kalpa.news Whatsapp: 9481252093
Discussion about this post