ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಗರದ ಭಾರತರತ್ನ ಸರ್.ಎಂ. ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಜನಸ್ಪಂದನ ವೇದಿಕೆ ಹಾಗೂ ಸುವರ್ಣ ಮಹಿಳಾ ವೇದಿಕೆ ವತಿಯಿಂದ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
ನಗರಸಭಾ ವ್ಯಾಪ್ತಿಯ ಹಾಲಪ್ಪ ಕಾಲೋನಿ ಕೊಳಚೆ ಪ್ರದೇಶದಲ್ಲಿ ಬಡತನ ರೇಖೆಗಿಂತ ಕೆಳಮಟ್ಟದಲ್ಲಿರುವ ಬಹುತೇಕ ಪರಿಶಿಷ್ಟ ಜಾತಿ ಜನಾಂಗದ ಸುಮಾರು 50 ವರ್ಷಕ್ಕೂ ಹೆಚ್ಚು ಕಾಲದಿಂದ ವಾಸಿಸುತ್ತಿರುವ ಮನೆಗಳು ಸಂಪೂರ್ಣ ಹಾಳಾಗಿದ್ದು ಮುಂದಿನ ಮಳೆಗಾಲದಲ್ಲಿ ಬೀಳುವ ಸಂಭವವಿದೆ. ಈ ಹಿಂದೆ ಈ ಪ್ರದೇಶವನ್ನು ಪ್ರಾಥಮಿಕ ಕೊಳಚೆ ಪ್ರದೇಶವೆಂದು ಘೋಷಿಸಲಾಗಿದ್ದು, ಸರ್ವೆ ನಂಬರ್ ತಪ್ಪಾಗಿ ನಮೂದಾಗಿರುವ ಕಾರಣದಿಂದ ಅಂತಿಮ ಕೊಳಚೆ ಪ್ರದೇಶವೆಂದು ಘೋಷಣೆಯಾಗಿರುವುದಿಲ್ಲ ಹಾಗೂ ತಾಲೂಕು ಆಡಳಿತದಿಂದ ಸರ್ವೆ ನಂ: 63 ರ ಹಾಲಪ್ಪ ಕಾಲೋನಿ ಕೊಳಚೆ ಪ್ರದೇಶವೆಂದು ಘೋಷಣೆ ಮಾಡುವಂತೆ ಒತ್ತಾಯಿಸಿದರು.
ಜನ್ನಾಪುರ ಸರ್ವೆ ನಂ: 70 ರಲ್ಲಿ ಸುಮಾರು 45 ಎಕರೆ 20 ಗುಂಟೆ ವಿಸ್ತೀರ್ಣವುಳ್ಳ ಜನ್ನಾಪುರ ಕೆರೆಯಲ್ಲಿ ಸ್ವಚ್ಚತಾ ಕಾರ್ಯ ಮಾಡದಿರುವುದರಿಂದ ಅಲ್ಲಿನ ನಿವಾಸಿಗಳು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಮುಂದೆ ಅಗಬಹುದಾದ ಅಹಿತಕರ ಘಟನೆ ತಪ್ಪಿಸಲು ಕೆರೆಯ ಅಭಿವೃದ್ದಿ ಕಾರ್ಯಕ್ಕೆ ಸಭೆ ಕರೆದು ಸ್ವಚ್ಚತೆ ಮಾಡುವಂತೆ ಸಂಬಂಧಿತ ಇಲಾಖೆಯಿಂದ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ತಿಳಿಸಿದ್ದಾರೆ.
ನಗರಸಭೆಯ ವಾರ್ಡ್ ನಂಬರ್ 2 ರ ದೊಣಬಘಟ್ಟ ಹಳ್ಳದ ಪ್ರದೇಶದಲ್ಲಿ ಪ್ರವಾಹದಿಂದ ಮುಳುಗಡೆಗೊಳ್ಳುತ್ತಿರುವ 30 ಮನೆಗಳನ್ನು ಸಾರ್ವಜನಿಕರಿಗೆ ಪುನರ್’ವಸತಿ ಕಲ್ಪಿಸಲು ಸರಕಾರದಿಂದ 5 ಲಕ್ಷ ರೂ. ಸಹಾಯಧನ ದೊರಕಿಸಿಕೊಡುವುದು, ಎನ್’ಟಿಬಿ ಕಚೇರಿಯಲ್ಲಿ ಈ ಹಿಂದೆ ಆಧಾರ್ ಕೌಂಟರ್ ಇದ್ದು ಇತ್ತೀಚೆಗೆ ಆಧಾರ್ ಕೌಂಟರನ್ನು ಸ್ಥಗಿತಗೊಳಿಸಿರುವುದರಿಂದ ಇಲ್ಲಿನ ನಿವಾಸಿಗಳಿಗೆ ಅನಾನುಕೂಲವಾಗಿದೆ. ಅದೇ ಸ್ಥಳದಲ್ಲಿ ಕೂಡಲೆ ಕೌಂಟರ್ ತೆರೆದು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವುದು ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಮನವಿಯಲ್ಲಿ ಒತ್ತಾಯಿಸಿದರು.
ಟ್ರಸ್ಟ್ ಅಧ್ಯಕ್ಷ ಹಾಗೂ ನಗರಸಭಾ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್.ವೇಣುಗೋಪಾಲ್ ನೇತೃತ್ವದಲ್ಲಿ ಮುಖಂಡರಾದ ಕೃಷ್ಣ, ಷಣ್ಮುಕಪ್ಪ, ಪ್ರಕಾಶ್, ಗೋವಿಂದ, ಮಾದೇಶ್ವರ, ಪುಟ್ಟಸ್ವಾಮಿ, ಲಕ್ಷ್ಮೀ, ಮುರುಗೇಶ್, ರವಿ, ರಘು, ಕೆ.ಭವಾನಿ ಶಂಕರ್ ಮತ್ತಿತರರಿದ್ದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Get in Touch With Us info@kalpa.news Whatsapp: 9481252093
Discussion about this post