ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಕೋಟೆ ಶ್ರೀಮಾರಿಕಾಂಬಾ ದೇವಿ ಜಾತ್ರೆಯ ಎರಡನೆಯ ದಿನವಾದ ಇಂದು ಕೋಟೆ ರಸ್ತೆಯ ಮಾರಿಗದ್ದುಗೆಯಲ್ಲಿ ಭಕ್ತಿ ಮತ್ತು ವಿಜೃಂಭಣೆಯೊಂದಿಗೆ ಮುಂದುವರಿಯಿತು.
ಗಾಂಧಿಬಜಾರಿನ ತವರು ಮನೆಯಿಂದ ನಿನ್ನೆ ರಾತ್ರಿ ವೈಭವದ ಮೆರವಣಿಗೆಯೊಂದಿಗೆ ಹೊರಟು ಇಂದು ಮುಂಜಾನೆ ಐದು ಗಂಟೆಗೆ ಮಾರಿಗದ್ದುಗೆಯಲ್ಲಿ ಪ್ರತಿಷ್ಠಾಪನೆಗೊಂಡ ಮಾರಿಕಾಂಬಾ ದೇವಿಯು ಉತ್ಸವ ಮೂರ್ತಿ ದರ್ಶನ ಪಡೆಯಲು ಭಕ್ತರು ತಡ ರಾತ್ರಿಯೇ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು.

ಗದ್ದುಗೆಯಲ್ಲಿ ಮಾರಿಕಾಂಬಾ ದೇವಿ ಪ್ರತಿಷ್ಠಾಪನೆಯ ಧಾರ್ಮಿಕ ವಿಧಿ ವಿಧಾನಗಳನ್ನು ಸಾಂಪ್ರಾದಾಯಿಕ ಬಾಬುದಾರ ಚೌಡಿಕೆ ಕುಟುಂಬವು ಕೋಟೆ ಮಾರಿಕಾಂಬಾ ಸೇವಾ ಸಮಿತಿಯ ಪದಾಧಿಕಾರಿಗಳ ಸಮ್ಮುಖದಲ್ಲಿ ನೆರವೇರಿಸಿ ಪೂಜೆ ಸಲ್ಲಿಸಿದ ನಂತರ ಸಾರ್ವಜನಿಕರ ದರ್ಶನಕ್ಕೆ ಮುಕ್ತಗೊಳಿಸಲಾಯಿತು.
ಇದಕ್ಕೂ ಮೊದಲು ದೇವಿ ಉತ್ಸವ ಮೂರ್ತಿಯನ್ನು ಗದ್ದುಗೆಗೆ ತರುವ ವೇಳೆ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಜನರ ನೂಕುನುಗ್ಗಲು ಉಂಟಾಗಿದ್ದು. ಡಿಎಸ್ಪಿ ಉಮೇಶ್ ಈಶ್ವರ ನಾಯ್ಕ್, ಸರ್ಕಲ್ ಇನ್ಸ್’ಪೆಕ್ಟರ್ ವಸಂತಕುಮಾರ್ ನೇತೃತ್ವದ ಪೊಲೀಸ್ ತಂಡ ಬಿಗಿ ಬಂದೋಬಸ್ತು ಹಾಕುವ ಮೂಲಕ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಯಶಸ್ವಿಯಾದರು. ದೇವಿಯ ದರ್ಶನದಲ್ಲಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದರು.
ಜಾತ್ರೆಯ ಎರಡನೆ ದಿನವಾದ ಇಂದು ಸಾವಿರಾರು ಜನ ದೇವಿಗೆ ಬೇವಿನುಡಿಗೆ ಮತ್ತಿತರ ಹರಕೆ ಗಳನ್ನು ತೀರಿಸುವ ಮೂಲಕ ಒಳಿತಿಗಾಗಿ ಪ್ರಾರ್ಥಿಸಿದರು. ಜಿಲ್ಲಾ ಹೆಚ್ವುವರಿ ರಕ್ಷಣಾ ಧಿಕಾರಿ ಶೇಖರ್ ಅವರ ದಂಪತಿ ಸಮೇತ ಗದ್ದುಗೆಗೆ ಆಗಮಿಸಿ ಮಾರಿಕಾಂಬೆಯ ದರ್ಶನ ಪಡೆದರು.
ಜಾತ್ರೆ ಪ್ರಯಕ್ತ ಆಯೋಜಿಸಲಾಗಿರುವ ಹೆಲಿ ಟೂರಿಸಂ ಜನರ ಕಣ್ನಮನ ಸೆಳೆಯಿತು. ಹೆಲಿಕಾಪ್ಟರ್ ಮೂಲಕ ಕೋಟೆ ಮಾರಿಕಾಂಬಾ ದೇವಿ ದೇವಸ್ಥಾನ ಪ್ರದಕ್ಷಿಣೆ ಹಾಕುವ ವೈಮಾನಿಕ ಅನುಭವಕ್ಕೆ ಭಕ್ತರು ಮುಗಿಬಿದ್ದರು.
ಜಾತ್ರೆಯೂ ಫೆ.28 ಶನಿವಾರದವರೆಗೂ ನಡೆಯಲಿದ್ದು, ಜಾತ್ರೆಗೆ ಜಿಲ್ಲೆ ಹೊರ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತ ಸಾಗರ ಹರಿದು ಬರುತ್ತಿದೆ.
Get in Touch With Us info@kalpa.news Whatsapp: 9481252093

















