ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಅಲ್ಲಿ ಕೇವಲ ರಂಜನೆ ಇರಲಿಲ್ಲ, ಅಂತರಂಗದ ಭಕ್ತಿ ಭಾವ ಪಸರಿಸಿತ್ತು. ಸಂತೋಷ ಮಾತ್ರ ಇರಲಿಲ್ಲ, ಅಂತರಂಗದ ಸಂಭ್ರಮ ಮೇಳೈಸಿತ್ತು. ಮನಸ್ಸಿಗೆ ಆ ಕ್ಷಣದ ಹಿತ ಮಾತ್ರ ವಿರದೇ ಹಲವು ದಿನಗಳ ಕಾಲ ಮೊಗೆದಷ್ಟು ದೊರಕುವ ಆನಂದದ ಘಮಲಿತ್ತು. ಆತ್ಮಾನಂದಕ್ಕೆ ಪಾರವೇ ಇಲ್ಲ ಎಂಬಷ್ಟರ ಮಟ್ಟಿಗಿನ ಅನನ್ಯತೆ ಅದು. ನಾವು ಅನೇಕ ಬಾರಿ ಮನೋರಂಜನೆ ಹುಡುಕಿ ಹೋಗುತ್ತೇವೆ. ಸಂಗೀತದಲ್ಲಿ ದೊರಕುವ ಆನಂದ ಮತ್ತು ಆತ್ಮಾನಂದ ಇವೆಲ್ಲವನ್ನೂ ಮೀರಿದ ಸ್ಥಿತಿ. ಇದು ಶಾಶ್ವತವಾಗಿ ನಿಲ್ಲಬಲ್ಲ, ಮರೆಯಲಾರದ ಮಾನಸೋಲ್ಲಾಸ ನೀಡುವ ಪ್ರಕ್ರಿಯೆ. ಅಂಥದ್ದೊಂದು ಮಹೋತ್ಸವಕ್ಕೆ ಸಾಕ್ಷಿಯಾಗಿದ್ದು ಶಿವಮೊಗ್ಗದ ಶ್ರೀ ಗುರುಗುಹ ಸಂಗೀತ ಮಹಾವಿದ್ಯಾಲಯ ಆಯೋಜಿಸಿದ್ದ ಶ್ರೀ ಪುರಂದರ ದಾಸರ, ಶ್ರೀ ತ್ಯಾಗರಾಜರ ಆರಾಧನಾ ಉತ್ಸವ.
ಹೌದು.
5 ದಿನಗಳ ಮಹೋತ್ಸವದಲ್ಲಿ ಶಾಸೀಯ ಸಂಗೀತ ಕಲಿತ, ಕಲಿಯುತ್ತಿರುವ ವಿದ್ವಾಂಸರು, ವಿದ್ಯಾರ್ಥಿಗಳು ವೇದಿಕೆಯಲ್ಲಿ ಪ್ರೌಢಿಮೆ ಒರೆಗೆ ಹಚ್ಚಿದ್ದು ಒಂದು ಭಾಗ.
ಯುವ ಪ್ರತಿಭೆಗಳ ವಯಲಿನ್ ಸೋಲೋ, ದೇವರ ನಾಮ ಉಚಿತ ಕಲಿಕಾ ಶಿಬಿರದ ಮಾತೆಯರ ಗಾಯನ, ನವರತ್ನ ಮಾಲಿಕೆ ಗೋಷ್ಠಿಗಳ ನಡುವೆಯೇ ಬಾಲ ಪ್ರತಿಭೆ ಚಿನ್ಮಯಿ ನಾಗೇಂದ್ರ ಹಾಡುಗಾರಿಕೆ ಮನೋಜ್ಞವಾಗಿತ್ತು. ಕಲಾಸಾಧನೆಗೆ ಅನಗತ್ಯ ಒತ್ತಡ ಹೇರುವ ರೆಗ್ಯುಲರ್ ಶಾಲೆಗೆ ಗುಡ್ ಬೈ ಹೇಳಿ ನ್ಯಾಷನಲ್ ಓಪನ್ ಸ್ಕೂಲಿಂಗ್‌ನಲ್ಲಿ (ಮುಕ್ತ ಶಿಕ್ಷಣ) ಪರೀಕ್ಷೆಗಳನ್ನು ಕಟ್ಟುತ್ತಲೇ ನಿತ್ಯವೂ ಶಾಸೀಯ ಸಂಗೀತಾಭ್ಯಾಸದಲ್ಲಿ ತೊಡಗಿಕೊಂಡಿರುವ ಈ ಬಾಲಕಿ ಗಾಯನ ಪಕ್ಕವಾದ್ಯದಲ್ಲಿದ್ದ ಹಿರಿಯ ವಿದ್ವಾಂಸರೇ ಮನಸೋಲುವವಷ್ಟರ ಮಟ್ಟಿಗೆ ಪ್ರೌಢವಾಗಿತ್ತು. ನಗರದ ಪ್ರಥಮ ಮಹಿಳಾ ವೈದ್ಯೆ, ವಯೋವೃದ್ಧ ಡಾ. ನಂದಿನಿ ಅಮಿತೋತ್ಸಾಹದಲ್ಲಿ ನಡೆಸಿದ ಸಂಗೀತ ಸೇವೆ, ಯುವ ಪ್ರತಿಭೆಗಳಾದ ಸುಜನಾ, ನಿಧಿ ರಾವ್, ವಿದುಷಿ ಭವಾನಿ ಅನಂತರಾಂ ಮತ್ತು ಸಮ್ಮಿತ್ ನಟೇಶ್ ಗಾಯನಗಳು ತಜ್ಞರ ಮೆಚ್ಚುಗೆಗೆ ಪಾತ್ರವಾದವು. ಇಂತಿಂಥವರೇ ಹಾಡಬೇಕು ಎಂದು ವಿದ್ವಾನ್ ನಾಗರಾಜರ ಆಯ್ಕೆ ಎಂದಮೇಲೆ ಅದರ ಬಗ್ಗೆ ಹೆಚ್ಚು ಹೊಗಳುವ ಅಗತ್ಯವೇ ಇಲ್ಲ. ಇನ್ನು ಪಂಚರತ್ನ ಗೋಷ್ಠಿ ಗಾಯನ, ಪ್ರಾಣಪ್ರತಿಷ್ಠಾಪನೆಗೊಂಡ ತ್ಯಾಗರಾಜರ ಮೂರ್ತಿಗೆ ವಿಶೇಷ ಪೂಜೆ, ಅಭಿಷೇಕ- ಶ್ರೇಷ್ಠದಲ್ಲಿ ಶ್ರೇಷ್ಠ.
ಭಕ್ತಿಯಲ್ಲಿ ಭಾವ, ಆರಾಧನೆಯಲ್ಲಿ ಅತ್ಯಮೂಲ್ಯ ಭಕ್ತಿ, ಆರತಿಯಲ್ಲಿ ಅಮೂರ್ತತೆಯ ದರ್ಶನ, ಅಲಂಕಾರದಲ್ಲಿ ಮಹಾವತಾರದ ಮೂರ್ತಿಯನ್ನು ಕಾಣುವ ಭಾಗ್ಯ.
ಮಂಗಳೋತ್ಸವ
ಇಲ್ಲಿ ಬಹು ಮುಖ್ಯವಾಗಿ ಉಲ್ಲೇಖಿಸಲೆತ್ನಿಸಿದ್ದು ಮಂಗಳವಾದ್ಯ ಕಲಾವಿದರ ಮಹಾಮೇಳದ ಬಗ್ಗೆ. ಇಡೀ ಉತ್ಸವಕ್ಕೆ ಅತ್ಯಂತ ಕಳೆಗಟ್ಟಿದ ಸಂದರ್ಭವೆಂದರೆ ನಾದಸ್ವರ ವಾದನ ಮತ್ತು ಡೋಲು ಮಹಾಮೇಳ. ಹಾಗಾಗಿಯೇ ಇದು ಎಲ್ಲರೂ ಮಾಡುವ ಆರಾಧನೆ- ಮಹಾ ಉತ್ಸವಕ್ಕಿಂತ ಭಿನ್ನ, ವಿಭಿನ್ನ ಎನಿಸಿದ್ದು. ಅಭಿಮುಖ ಪ್ರಾಕಾರೋತ್ಸವ- ಶ್ರೀ ರಾಮದೇವರ ಮತ್ತು ಶ್ರೀತ್ಯಾಗರಾಜರ ಭವ್ಯ ಮೂರ್ತಿಗಳು ಪಲ್ಲಕ್ಕಿಯಲ್ಲಿ ವಿರಾಜಮಾನರಾಗಿದ್ದರು.
ಪುರುಷರು ರಾಮರನ್ನು, ಯುವತಿಯರು- ಮಾತೆಯರು ಶ್ರೀ ತ್ಯಾಗರಾಜರಮೂರ್ತಿ ಪಲ್ಲಕ್ಕಿನ್ನು ಅಭಿಮುಖವಾಗಿ ಹೊತ್ತಿದ್ದ ಸಂದರ್ಭ. ಜಯನಗರದ ಶ್ರೀ ರಾಮಮಂದಿರದ ಸುತ್ತಲೂ ಇರುವ ರಸ್ತೆಯಲ್ಲಿ 3 ಸುತ್ತು ಪ್ರದಕ್ಷಿಣಾಕಾರವಾಗಿ ಉತ್ಸವ ಹೊರಟಾಗ ಅದನ್ನು ಕಳೆಗಟ್ಟುವಂತೆ ಮಾಡಿದವರು ಶಿವಮೊಗ್ಗ ಜಿಲ್ಲಾ ಮಂಗಳವಾದ್ಯ ಕಲಾವಿದರ ಸಂಘದ ತಂಡದವರು.
ವಿದ್ವಾನ್ ಸುಂದರಮೂರ್ತಿ ಮತ್ತು ತಂಡದವರು ತ್ಯಾಗರಾಜರ ಆರಾಧನೋತ್ಸವದ ಮೂರನೇ ದಿನ ಸೂರ್ಯಾಸ್ತದ ಸಮಯದಲ್ಲಿ ಕಛೇರಿ ನೀಡಿದ್ದಲ್ಲದೇ ಅಭಿಮುಖ ಪ್ರಾಕಾರೋತ್ಸವಕ್ಕೂ ಸೇವೆ ಸಲ್ಲಿಸಿದ್ದು ಬಹುಜನರ ಜನಮನ ಸೆಳೆಯಿತು.
ರಸ್ತೆಯಲ್ಲಿ ಮೂರು ಸುತ್ತು ಪ್ರದಕ್ಷಿಣೆ ಮಾತ್ರವಲ್ಲದೇ ಜಯನಗರ ರಾಮಮಂದಿರದ ಒಳಾಣಗಣದಲ್ಲೂ ಪ್ರಾಕಾರೋತ್ಸವ ಸಂದರ್ಭ ಡೋಲು ಕಲಾವಿದರು ನುಡಿಸಿದ ದಾಸರ ಜನಪ್ರಿಯ ಕೃತಿಗಳಿಗೆ ಆಬಾಲ ವೃದ್ಧರಾಗಿ ಎಲ್ಲರೂ ಹೆಜ್ಜೆ ಹಾಕಿದ್ದು, ವಯಸ್ಸು ಮರೆತು ನರ್ತಿಸಿದ್ದು ಭಕ್ತಿ ಭಾವದ ಪರಾಕಾಷ್ಠೆಯಾಗಿತ್ತು.
ಮುಖ್ಯ ವಾಹಿನಿ ಸೇವೆ
ಮಂಗಳವಾದ್ಯ ಎಂದರೆ ಕೇವಲ ಶುಭ ಸಭೆ, ಸಮಾರಂಭದಲ್ಲಿ ಕೆಲವು ಸಂದರ್ಭಕ್ಕಷ್ಟೇ ಕರೆಸುತ್ತಾರೆ. ಉಳಿದಂತೆ ನಮ್ಮನ್ನು ನಿಕೃಷ್ಟವಾಗಿ ಕಾಣುವ ಸಂದರ್ಭವೇ ಹೆಚ್ಚು. ಕಲಾವಿದರಾಗಿದ್ದರೂ ಹೆಚ್ಚಿನ ಮಾನ್ಯತೆ ಇಲ್ಲದವರಂತೆಯೇ ಇರುವ ಸಮುದಾಯ ನಮ್ಮದು. ಶ್ರೀ ತ್ಯಾಗರಾಜರ ಸೇವೆ ಮಾಡುವಲ್ಲಿ ಮೇಲು ಕೀಳು ಸಲ್ಲ ಎಂದು ನಿರ್ಧರಿಸಿದ ನಾಗರಾಜರು ಕಳೆದ 5 ವರ್ಷಗಳಿಂದ ನಮಗೆ ಕಛೇರಿ ನೀಡಿದ್ದಾರೆ. ಪ್ರಕಾರೋತ್ಸವ ಸೇವೆಯ ಮುಖ್ಯವಾಹಿನಿಯಲ್ಲಿ ನಮ್ಮನ್ನು ಒಗ್ಗೂಡಿಸಿದ್ದಾರೆ. ಇಂಥಾ ಮಹಾನ್ ಯೋಗವನ್ನು ಕರುಣಿಸಿದ ವಿದ್ವಾನ್ ನಾಗರಾಜರಿಗೆ ನಾವು ಎಷ್ಟು ಕೃತಜ್ಞರಾಗಿದ್ದರೂ ಸಾಲದು ಎನ್ನುತ್ತಾರೆ ತವಿಲ್ ವಿದ್ವಾನ್ ಸಿ.ಎಸ್. ರಾಮಕೃಷ್ಣ.
ಸೇವೆಗೆ ತಾರತಮ್ಯವೇಕೆ
ಶ್ರದ್ಧಾ ಭಕ್ತಿಯಿಂದ ಸಂತ ತ್ಯಾಗರಾಜರ ಸೇವೆ ಮಾಡುತ್ತೇವೆ ಎಂದವರಿಗೆ ನಾವು ತಾರತಮ್ಯ ಮಾಡಬಾರದು. ಕಲಾರಾಧನೆಗೆ ಜಾತಿ, ಕುಲ ಅಂತಸ್ತು ಇಲ್ಲವೇ ಇಲ್ಲ. ಹಾಗಿರುವಾಗ ಹತ್ತಾರು ವರ್ಷ ಸಾಧನೆ ಮಾಡಿರುವ ಡೋಲು-ವಾಲಗ, ಸ್ಯಾಕ್ರೋನ್ ಕಲಾವಿದರಿಗೂ ನಮ್ಮ ಉತ್ಸವದಲ್ಲಿ ಮುಕ್ತ ಆಹ್ವಾನವಿದೆ. ಈ ವರ್ಗವನ್ನೂ ದಾಸರ ಸೇವೆಗೆ, ಭಕ್ತಿವಾಹಿನಿಗೆ ಬೆರೆಸಬೇಕು. ನೂರಾರು ಜನರು ಉತ್ಸವ ಪೂರ್ಣ ನರ್ತನ ಸೇವೆಯನ್ನೂ ಮಾಡಲು ಪ್ರೇರೇಪಿಸಿದ ಮಂಗಳವಾದ್ಯ ತಂಡದವರ ಕಲಾಭಿಜ್ಞತೆ ಶ್ರೀ ಸ್ವಾಮಿಗೆ ಸಮರ್ಪಣೆಯಾಗಿದೆ ಎಂದು ಮುಕ್ತಕಂಠದಿಂದ ಹೇಳುತ್ತಾರೆ ವಿದ್ವಾನ್ ನಾಗರಾಜ್.
ಶ್ರೀ ಗುರುಗುಹ ಸಂಗೀತ ಮಹಾವಿದ್ಯಾಲಯದ 38ನೇ ವರ್ಷದ ಶ್ರೀ ತ್ಯಾಗರಾಜರ ಆರಾಧನೋತ್ಸವ ಅದ್ಭುತ, ಆಪ್ಯಾಯ, ಅತ್ಯುಚ್ಚ ಮಟ್ಟದ್ದಾಗಿತ್ತು. ಅಪರೂಪದಲ್ಲಿ ಇದು ಅಪ್ರತಿಮ.
ಲೇಖನ: ಶ್ರೀ ಸುಧಾ
Get in Touch With Us info@kalpa.news Whatsapp: 9481252093
Discussion about this post