ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಮಾರ್ಚ್ 30 ನೆಯ ತಾರೀಕಿಗೆ ನೈಸರ್ಗಿಕ ಕುಂಡಲಿಯ ಭಾಗ್ಯ ಮತ್ತು ವ್ಯಯಾಧಿಪತಿ ಗುರುವು ಮಕರ ರಾಶಿಗೆ ಪ್ರವೇಶ ಮಾಡುತ್ತಾನೆ. ಸುಮಾರು 3° ಸಂಚರಿಸಿದ ಮಕರ ಗುರುವು ಮತ್ತೆ ವಕ್ರನಾಗಿ ಜೂನ್ 30ಕ್ಕೆ ಧನುವಿಗೆ ಬರಲಿದ್ದಾನೆ. ಅಲ್ಲಿಂದ ಮತ್ತೆ ಮಕರಕ್ಕೆ ನವೆಂಬರ್ 20ಕ್ಕೆ ಬರಲಿದ್ದಾನೆ. ಮಕರದಲ್ಲಿ 2020 ಎಪ್ರಿಲ್ 4ರವರೆಗಿದ್ದು, ಐದನೆಯ ತಾರೀಕಿಗೆ ಕುಂಭ ರಾಶಿ ಪ್ರವೇಶಿಸುತ್ತಾನೆ.
ಇದೊಂದು ರೀತಿಯ football game ತರಹ ಆಕಾಶದ ಗುರುವಿನ ಅತಿಚಾರವಾಗಿದೆ. ಅತಿಚಾರವು ಅತಿಬುದ್ಧಿವಂತಿಕೆಯನ್ನು ತಂದು ಅನಾಹುತಗಳನ್ನೇ ತೋರಿಸುತ್ತದೆ. ಜಗತ್ತಿನ ಪ್ರಜೆಗಳಿಗೆ ಇದು ವಿಶೇಷವಾಗಿ ಪರಿಣಾಮ ಬೀರುತ್ತದೆ. ಯಾರ ಜನನ ಕಾಲದಲ್ಲಿ ಗುರುವು ಬಲಿಷ್ಟನೂ, ಇಷ್ಟಸ್ಥಿತಿಯಲ್ಲೂ ಇರುತ್ತದೋ ಅಂತವರಿಗೆ ದುಷ್ಪರಿಣಾಮಗಳ ಅನುಭವ ಆಗುವುದಿಲ್ಲ. ಯಾವಾಗಲೂ ಅನುಭವಕ್ಕೆ ಬಾರದಿದ್ದರೆ ಭಯ, ಉದ್ವೇಗಗಳು ಬರುವುದಿಲ್ಲ ಎಂಬುದು ಜಗದ ನಿಯಮ.
ಯಾರಿಗೆ ಗುರುವು ಅನಿಷ್ಟನಾಗಿರುತ್ತದೋ ಅಂತವರು ಅಧಿಕ ಪ್ರಸಂಗ ಮಾಡಿಕೊಂಡು ಅಪಾಯ ತಂದುಕೊಳ್ಳುತ್ತಾರೆ. ಉದಾ: ಒಬ್ಬನಿಗೆ ignoring ಸ್ವಭಾವ ಇದ್ದಾಗ, ಅನಿಷ್ಟಗಳು ಬಂದರೂ ಗೊತ್ತಾಗುವುದಿಲ್ಲ. ದುಷ್ಪರಿಣಾಮಗಳೂ ಆಗುವುದಿಲ್ಲ. ಯಾರಿಗೆ anxiety, aggressive ಇದೆಯೋ ಅಂತವರು ತಮ್ಮ ಅಸ್ಥಿತ್ವ ಕಳೆದುಕೊಂಡಾರು, ಅಪಾಯ ತಂದುಕೊಂಡಾರು.
(ಗುರುವು ಜನ್ಮ ಕುಂಡಲಿಯಲ್ಲಿ ದುಸ್ಥಾನ ಗತನೂ ಆಗಿ ಅನಿಷ್ಟನಾಗಿದ್ದರೆ ಲಾಭಗಳು ಮಾರಕವೇ ಆಗುತ್ತದೆ. ಸುಸ್ಥಾನ ಗತನೂ ಆಗಿ ಇಷ್ಟನಾಗಿದ್ದರೆ ನಷ್ಟಗಳೂ ಲಾಭ ತರಬಹುದು)
ಮೇಷ: ಇವರಿಗೆ ಕರ್ಮ ಪರಿವರ್ತನೆ, ಭಡ್ತಿ, ಹೊಸ ಉದ್ಯೋಗ, ಭೂ ವಾಹನ ಮಾರಾಟ-ಖರೀದಿ ಯೋಗ ಬರುತ್ತದೆ.
ವೃಷಭ: ಈಗ ಗುರುವು ಮೇವರೆಗೆ ನಿಮ್ಮ ಭಾಗ್ಯದಾಯಕನಾಗುತ್ತಾನೆ. ಆದರೂ ಆತಂಕ, ಸ್ಥಾನ ಭಯ ಕಾಡಲಿದೆ. ಸಂತತಿ ಹೀನರಿಗೆ ಪುತ್ರ ಲಾಭವೂ ಇದೆ.
ಮಿಥುನ: ಮೊದಲೇ ಅಷ್ಟಮ ಶನಿ. ಈಗ ಗುರುವೂ ಬರುವುದರಿಂದ ಇನ್ನಷ್ಟು ಪ್ರತಿಕೂಲಗಳೇ ಜಾಸ್ತಿ ಎಂದು ಹೇಳಬೇಕು. ವಾಕ್ ಸ್ಥಾನ ವೀಕ್ಷಣೆ ಮಾಡುವುದರಿಂದ ನಾಲಿಗೆ ಹಿಡಿತ ತಪ್ಪುವ ಸಾಧ್ಯತೆಗಳಿವೆ. ಅಂದರೆ ವಿವಾದಾತ್ಮಕ ಹೇಳಿಕೆಗಳು ಮಾರಕವಾದೀತು. ಇನ್ನೊಂದೆಡೆ ವ್ಯಯ ಸ್ಥಾನ ನೋಡುವುದರಿಂದ ಅಧಿಕ ವ್ಯಯ. ಒಟ್ಟಿನಲ್ಲಿ ಮೌನಸ್ಯ ಕಲಹಂ ನಾಸ್ತಿ ಎಂದು ಸುಮ್ಮನಿದ್ದರೆ ಕ್ಷೇಮ.
ಕರ್ಕ: ಅವಿವಾಹಿತರಿಗೆ ವಿವಾಹ ಯೋಗ. ಸ್ವಲ್ಪ ಭಯದ ವಾತಾವರಣವೂ ಇರುತ್ತದೆ. ಪಾರ್ಟ್ನರ್ ವ್ಯವಹಾರದಲ್ಲಿ ಭಿನ್ನಾಭಿಪ್ರಾಯ, ಸಾರ್ವಜನಿಕ ಕ್ಷೇತ್ರದಲ್ಲಿ ಗೌರವ ಸನ್ಮಾನಗಳು ಇತ್ಯಾದಿ ಶುಭ ಫಲಗಳು ಜಾಸ್ತಿ.
ಸಿಂಹ: ಋಣ ಬಾಧೆ, ಕೋರ್ಟು ಕಚೇರಿ ವ್ಯವಹಾರಗಳು ಸೃಷ್ಟಿಯಾದೀತು. ಉದ್ಯೋಗ ಪರಿವರ್ತನೆ, ಅಧಿಕ ಖರ್ಚು, ವರ್ಗಾವಣೆ, ಉತ್ತಮ ಮುಂದಾಳತ್ವಕ್ಕೆ ಅವಕಾಶಗಳು ದೊರೆಯಲಿದೆ.
ಕನ್ಯಾ: ಪಂಚಮ ಗುರು ಪುತ್ರಲಾಭವನ್ನು ಕೊಟ್ಟರೆ, ಅವನ ಜತೆಗಿರುವ ಪಂಚಮ ಶನಿಯು ಮಾನಸಿಕ ಆರೋಗ್ಯಕ್ಕೂ ಮಾರಕ. ಒಂದೆಡೆ ಸ್ವಜನ ಬಂಧು ಕಲಹವೂ, ಇನ್ನೊಂದೆಡೆ ಮಕ್ಕಳ ಚಿಂತೆಯೂ ಕಾಡಬಹುದು. ಈ ಮದ್ಯೆ ಸಮಾಜ, ಸಂಸಾರದಲ್ಲಿ ಗೌರವಾದರಗಳೂ ಸಿಗಲಿದೆ. ಒಟ್ಟಿನಲ್ಲಿ ಮಿಶ್ರಫಲ.
ತುಲಾ: ಭೂ, ವಾಹನ ಲಾಭಗಳಿವೆ. ಉದ್ಯೋಗದಲ್ಲಿ ಪರಿವರ್ತನೆ, ಅನಾರೋಗ್ಯದಲ್ಲಿರುವವರಿಗೆ ಮರಣ ಚಿಂತೆ, ಭಯ ಕಾಡಬಹುದು. ಆದರೆ ಯಾವುದಕ್ಕೂ ಹೆದರದೆ, ನಮ್ಮ ನಮ್ಮ ಕರ್ತವ್ಯಗಳನ್ನು ಪಾಲಿಸಿಕೊಂಡು ಬಂದರೆ ಯಾವ ಸಮಸ್ಯೆಗಳೂ ಹತ್ತಿರ ಸುಳಿಯದು.
ವೃಶ್ಚಿಕ: ಒಂದೆಡೆ ಶನಿಯು ಸೌಭಾಗ್ಯ ಕೊಟ್ಟರೂ ಅದನ್ನು ದುರುಪಯೋಗ ಮಾಡಿಕೊಂಡರೆ ನಿಶ್ಚಿತವಾಗಿಯೂ ಸ್ಥಾನ ನಾಶವಾದೀತು. ಶಾಂತ ರೀತಿಯಲ್ಲಿದ್ದರೆ, ಉದ್ವೇಗದಲ್ಲಿ ಇರದಿದ್ದರೆ ಭಯವಿಲ್ಲ. ನಮಗೆ ಉದಾಹರಣೆ ಮೋದಿಯ ನಡೆ. ಯಾವ ಕಾಲಕ್ಕೆ ಹೇಗಿರಬೇಕೋ ಹಾಗಿದ್ದಾರೆ. ಅದೇ ನೀತಿ ಪಾಲಿಸಿಕೊಂಡರೆ ಉತ್ತಮ.
ಧನು: ದ್ವಿತೀಯ ಗುರು ಉತ್ತಮ ನಾಯಕತ್ವ ಪಡೆಯಲು ಸಕಾಲ. ಧನಾಗಮನದ ದಾರಿಗಳು ತೋರಲಿದೆ. ಕರ್ಮ ಪರಿವರ್ತನೆಗಳಾಗಲಿದೆ. ಹೊಸ ಉದ್ದಿಮೆ ವ್ಯವಹಾರಗಳಿಗೆ ಪ್ರೇರಣೆಯೂ, ಶುರು ಮಾಡುವ ಯೋಗವೂ ಇದೆ.
ಮಕರ: ಜನ್ಮೇ ಗುರು, ಶನಿ. ದುಃಖದಾಯಕ. ಅಂದರೆ ಕಪೋಲ ಕಲ್ಪಿತ ಸಮಸ್ಯೆಗಳನ್ನು ಸೃಷ್ಟಿಸಿಕೊಂಡು ದುಃಖಿಸುವುದು. ಕೊನೆಗೆ ಅದೇ ದುಃಖ ಶಾಶ್ವತವೂ ಆಗಬಹುದು. ಶಾರೀಕ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಪುತ್ರಾರ್ಥಿಗಳಿಗೆ ಸಂತಾನ ಭಾಗ್ಯವಿದೆ. ದುಃಖ ತಂದುಕೊಂಡರೆ ಯೋಗ ನಷ್ಟವೂ ಆದೀತು. ಅವಿವಾಹಿತರಿಗೆ ಕಂಕಣ ಬಲ ಕೂಡಿ ಬರಲಿದೆ.
ಕುಂಭ: ಅಧಿಕ ಖರ್ಚು ಸದ್ವಿನಿಯೋಗಿಸಿದರೆ (ಸರಿಯಾದ ದಾರಿಯ investment) ಮಾಡಿಕೊಂಡರೆ ಕ್ಷೇಮ. ವಾಹನ, ಭೂಮಿ ಖರೀದಿಸುವ, ಮಾರಾಟ ಮಾಡುವ ಯೋಗ ಪ್ರಾಪ್ತಿ ಇದೆ. ಅದೇ ರೀತಿ ನಷ್ಟ, ಮರಣ ಭಯಗಳೂ ಕಾಡಲಿದೆ. ನಾಳೆಯ ಭವಿಷ್ಯ ಚೆನ್ನಾಗಿರುತ್ತದೆ ಎಂಬ ನಂಬಿಕೆ ಇದ್ದವರಿಗೆ ಈ ಭಯಗಳಿರದು.
ಮೀನ: ಉದ್ಯೋಗ ಬಡ್ತಿ, ಮಿತ್ರತ್ವ ವೃದ್ಧಿ, ಲಾಭಗಳು, ಪ್ರಶಸ್ತಿ ಸನ್ಮಾನಗಳು ನಿಮ್ಮ ಉತ್ತಮ ಯೋಗಗಳ ಫಲ. ಆದರೂ ಮೀನ ರಾಶಿಯವರು ಖಿನ್ನತೆಗೆ ಹೋಗುವುದು ಬೇಗ. ಹೀಗೆ ಖಿನ್ನರಾದರೆ ಸತ್ಫಲ ನಷ್ಟವೂ ಆದೀತು ಅಥವಾ ಅನುಭವಕ್ಕೆ ಬಾರದೆ ದುಃಖಿತರೂ ಆಗಬಹುದು. ಒಟ್ಟಿನಲ್ಲಿ ಮೀನ ರಾಶಿಗೆ ಇದು ಅತ್ಯುತ್ತಮ ಫಲದ ಕಾಲ. ಯೋಗಸ್ಯ ಪರಿರಕ್ಷಣಂ ಎಂಬಂತೆ, ಯೋಗವನ್ನು ಕಾಪಾಡಿಕೊಳ್ಳಿ.
Get in Touch With Us info@kalpa.news Whatsapp: 9481252093
Discussion about this post