ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಗೌರಿಬಿದನೂರು: ಸಮಾಜದಲ್ಲಿ ಹೆಣ್ಣು ಸಾಮಾಜಿಕ ಮತ್ತು ಮಾನಸಿಕವಾಗಿ ಸದೃಢವಾಗಿ ಬೆಳೆದಲ್ಲಿ ಯಾವುದೇ ಸಮಸ್ಯೆಗಳು ಎದುರಾದರೂ ಧೈರ್ಯವಾಗಿ ನಿಭಾಯಿಸಬಲ್ಲರು ಎಂದು ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಬಸವರಾಜು ತಿಳಿಸಿದರು.
ತಾಲೂಕಿನ ಕಲ್ಲಿನಾಯಕನಹಳ್ಳಿಯಲ್ಲಿ ಗ್ರಾಮ ಪಂಚಾಯ್ತಿ ವತಿಯಿಂದ ಆಯೋಜಿಸಿದ್ದ ಮಹಿಳೆಯರ ಗ್ರಾಮ ಸಭೆಯನ್ನು ಉದ್ಧೇಶಿಸಿ ಅವರು ಮಾತನಾಡಿದರು.
ಸರ್ಕಾರ ಹಾಗೂ ವಿವಿಧ ಸಂಘಸಂಸ್ಥೆಗಳು ಮಹಿಳೆಯರ ಸಬಲೀಕರಣಕ್ಕಾಗಿ ಸಾಕಷ್ಟು ಯೋಜನೆಗಳ ಮೂಲಕ ಶ್ರಮಿಸುತ್ತಿವೆ. ಅವುಗಳ ಬಗ್ಗೆ ಅರಿತು ಗ್ರಾಮೀಣ ಭಾಗದ ಎಲ್ಲಾ ಹೆಣ್ಣು ಮಕ್ಕಳು ಮತ್ತು ಮಹಿಳೆಯರು ಪ್ರಯೋಜನ ಪಡೆಯಬೇಕಾಗಿದೆ. ಮಹಿಳೆಯರ ಮೇಲೆ ದೌರ್ಜನ್ಯ ಹಾಗೂ ಅನ್ಯಾಯವಾದಲ್ಲಿ ಕೂಡಲೇ ಸಂಬಂಧಪಟ್ಟ ಸಹಾಯವಾಣಿಯನ್ನು ಸಂಪರ್ಕಿಸಿ ದೂರನ್ನು ನೀಡಬೇಕಾಗಿದೆ. ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಸಮಾಜದ ಸ್ವಾಸ್ಥ್ಯವನ್ನು ಕಾಪಾಡಲು ಎಲ್ಲರೂ ಕೈಜೋಡಿಸಬೇಕಾಗಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಇಲಾಖೆಯ ಮೇಲ್ವಿಚಾರಕಿ ಸಲ್ಮಾ ಮಾತನಾಡಿ, ಗ್ರಾಮೀಣ ಭಾಗದಲ್ಲಿನ ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೆ ನಿಜವಾದ ಸ್ವಾತಂತ್ರ್ಯ ಇನ್ನೂ ದೊರೆತಿಲ್ಲ. ಅವರು ನಿರ್ಭೀತಿಯಿಂದ ಸಮಾಜದಲ್ಲಿ ಬದುಕುವ ಸ್ಥೈರ್ಯ ಬರುವವರೆಗೂ ಮಹಿಳೆಯರ ಸಬಲೀಕರಣ ಆಗುವುದಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಹೆಣ್ಣು ಮಕ್ಕಳ ಜನನ ಹಾಗೂ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಾಗುತ್ತದೆ. ಮನೆಯಲ್ಲಿ ಅತ್ತೆ ಮತ್ತು ತಾಯಿ ಇಬ್ಬರನ್ನೂ ಕೂಡ ಸಮಾನವಾಗಿ ಕಾಣಬೇಕಾಗಿತ್ತದೆ. ಹೆಣ್ಣು ಮಕ್ಕಳಿಗೆ ಬಾಲ್ಯ ವಿವಾಹ ಮಾಡುವುದನ್ನು ತಡೆಗಟ್ಟಿ ಇತರರಿಗೆ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆ ಮಂಜುಳಾ ಮಹಿಳಾ ಗ್ರಾಮಸಭೆಯ ಉದ್ದೇಶ ಮತ್ತು ಸಿಆರ್’ಪಿ ಭ್ರಮರಾ, ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ವಿಜಯ್ ಕುರ್ಮಾ, ಗ್ರಾಮ ಪಂಚಾಯ್ತಿ ಸದಸ್ಯೆ ಚಿಕ್ಕಮ್ಮಯ್ಯ, ಅಂಗನವಾಡಿ ಕಾರ್ಯಕರ್ತೆಯರಾದ ಸುನಂದಮ್ಮ, ಸುಲೋಚನ, ವಿಜಯಲಕ್ಷ್ಮಿ, ಗಂಗಮ್ಮ, ರಾಮಲಕ್ಷ್ಮಮ್ಮ, ಕಮಲಮ್ಮ, ಸತ್ಯವತಿ ಹಾಗೂ ಆಶಾ ಕಾರ್ಯಕರ್ತರು ಭಾಗವಹಿಸಿದ್ದರು.
(ವರದಿ: ಬಿ.ಎಂ. ಅಜಯ್, ಗೌರಿಬಿದನೂರು)
Get in Touch With Us info@kalpa.news Whatsapp: 9481252093
Discussion about this post