ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನಂಬಿ ಬಂದ ಭಕ್ತರ ಪಾಲಿನ ಕಾಮಧೇನುವಾಗಿ, ಮನೋಭಿಷ್ಟಗಳನ್ನು ಕರುಣಿಸುತ್ತಿರುವ ಶ್ರೀವಾದಿರಾಜರ ಆರಾಧನೆ ಮಾರ್ಚ್ 12ರ ನಾಳೆ ನಡೆಯಲಿದ್ದು, ಇದಕ್ಕಾಗಿ ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಸಕಲ ಸಿದ್ದತೆ ನಡೆದಿದೆ.
ಪೇಜಾವರ ಮಠಾಧೀಶರಾದ ಪರಮಪೂಜ್ಯ ಶ್ರೀ ವಿಶ್ವಪ್ರಸನ್ನ ತೀರ್ಥರ ಆದೇಶದಂತೆ ಶ್ರೀ ವಾದಿರಾಜ ಗುರುಸಾರ್ವಭೌಮರ ಆರಾಧನೆ ಮಹೋತ್ಸವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ.
ಆರಾಧನಾ ಮಹೋತ್ಸವದ ಪ್ರಯುಕ್ತ ವಾದಿರಾಜರ ವಿರಚಿತ ಹಾಡುಗಳು, ಹೋಮ-ಹವನ-ಗ್ರಂಥ ಪಾರಾಯಣ-ಪ್ರವಚನ-ಭಜನೆ-ತೊಟ್ಟಿಲು ಪೂಜೆ-ರಥೋತ್ಸವವನ್ನು ಏರ್ಪಡಿಸಲಾಗಿದೆ.
ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನದ ಗೌರವ ಕಾರ್ಯದರ್ಶಿ ಯು. ಕೇಶವಾಚಾರ್ಯ ಅವರು ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದೊಂದಿಗೆ ಮಾತನಾಡಿದ್ದು, ಶ್ರೀವಾದಿರಾಜ ಗುರುಸಾರ್ವಭೌಮರ ಆರಾಧನೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ತನು-ಮನ-ಧನ ರೂಪದಲ್ಲಿ ಸೇವೆ ಸಲ್ಲಿಸಿ ಶ್ರೀ ವಾದಿರಾಜಗುವಂತರ್ಗತ ಹಯಗ್ರೀವ ರೂಪಿ ಶ್ರೀ ಕೃಷ್ಣ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ವಿನಂತಿಸಿದ್ದಾರೆ.
ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಶ್ರೀವಾದಿರಾಜ ಗುರುಸಾರ್ವಭೌಮರು
ಶ್ರೀ ಮಧ್ವಾಚಾರ್ಯರು ಹಾಗೂ ಶ್ರೀಶ್ರೀ ವಾದಿರಾಜ ಗುರುಸಾರ್ವಭೌಮರು ಒಂದೇ ಸನ್ನಿಧಿಯಲ್ಲಿ ಇರುವುದು ಬೆಂಗಳೂರಿನ ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಮಾತ್ರ. ಈ ರೀತಿ ಒಂದೇ ಸನ್ನಿಧಾನದಲ್ಲಿ ಇರುವುದು ವಿರಳ!! ನನ್ನ ಜ್ಞಾನಕ್ಕೆ ತಿಳಿದ ಹಾಗೆ ಕರ್ನಾಟಕದಲ್ಲಿ ಎಲ್ಲಿಯೂ ಇಲ್ಲ!!
ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ವಿಶ್ವಸಂತರು. ಇಂತಹ ಶ್ರೀಗಳು ಮಧ್ವ ಹಾಗೂ ವೈಷ್ಣವ ಸಿದ್ಧಾಂತ ಉಳಿಯಬೇಕು ಎಂಬ ಉದ್ದೇಶದಿಂದ ಪೂರ್ಣಪ್ರಜ್ಞ ವಿದ್ಯಾಪೀಠ ಎಂಬ ಗುರುಕುಲ ಪ್ರತಿಷ್ಠಾಪಿಸಿದರು. ನಿತ್ಯ ಉಪಾಸಾನೆಗೆ ಕೇಂದ್ರ ಬಿಂದುವಾಗಿ ಶ್ರೀ ಕೃಷ್ಣ ಪರಮಾತ್ಮನನ್ನು ಹಾಗೂ ಶ್ರೀ ಮಧ್ವಾಚಾರ್ಯ ಗುರುಗಳನ್ನು ಪ್ರತಿಷ್ಠಾಪಿಸಿದರು.
ನಮ್ಮೊಂದಿಗೆ ಮಾತನಾಡಿದ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನದ ಗೌರವ ಕಾರ್ಯದರ್ಶಿ ಯು. ಕೇಶವಾಚಾರ್ಯ ಅವರು, ಕೋಟೇಶ್ವರದ 3500 ಭಕ್ತರ ಪ್ರಾರ್ಥನೆಯಂತೆ ಸೋಂದಾ ಕ್ಷೇತ್ರಕ್ಕೆ ಹೋಗಿ ಬರಲು ದೂರವಾಗುತ್ತದೆ. ಶ್ರೀ ವಾದಿರಾಜರ ಉಪಾಸನೆ ಆಗಬೇಕು ಎಂದು ಕೋಟೇಶ್ವರದ ಮಹಾ ಬಂಧುಗಳ ವಿನಂತಿಗೆ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಸಾಲಿಗ್ರಾಮ ಶಿಲೆಯ ಶ್ರೀ ವಾದಿರಾಜರ ಶಿಲಾಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದರು ಎನ್ನುತ್ತಾರೆ.
ಮಧ್ವಾಚಾರ್ಯರ ಗುರು ಪರಂಪರೆಯ 200 ವರುಷಗಳ ನಂತರ ವಾದಿರಾಜರು ಬಂದಿದ್ದು. ಮಹಾನ್ ವಿದ್ವಾಂಸರು, ಮಹಾಜ್ಞಾನಿಗಳು, ಕ್ರಾಂತಿಕಾರರು, ವ್ಯಾಸರಾಜರ ಸಮಕಾಲೀನರು ಹಾಗೂ ಮಧ್ವಾಚಾರ್ಯರ ಭಾವಿ ಸಮೀರರು ಎನ್ನುತ್ತಾರೆ ಅವರು.
ವಾದಿರಾಜ ಗುರುಸಾರ್ವಭೌಮರ ಆರಾಧನೆ
ಬದುಕನ್ನು ಸರ್ವ ವಿಷಯದಲ್ಲಿಯೂ ಭಗವಂತನಿಗೆ ಮೀಸಲಿಟ್ಟವರು ವಾದಿರಾಜ ಗುರುಸಾರ್ವಭೌಮರು. ಅವರು ರಚಿಸಿದ ಗ್ರಂಥಗಳ ಪಠನ, ಹಾಡುಗಳ ಶ್ರವಣ ನಿಜವಾದ ಆರಾಧನೆಯಾಗಿದೆ.
ವಾದಿರಾಜರು ದಾಸ, ವ್ಯಾಸ ಸಾಹಿತ್ಯದಲ್ಲಿ ಪಳಗಿದವರು. ಕನ್ನಡ, ಸಂಸ್ಕೃತದಲ್ಲಿ ಬಹುಕೃತಿಯನ್ನು ರಚಿಸಿದವರು. ವ್ಯಾಸರ ಕೃತಿಗಳನ್ನು ತಮ್ಮೊಳಗೆ ತುಂಬಿಕೊಂಡು ವ್ಯಾಸರದಾಸ ಎಂದೆನಿಸಿಕೊಂಡವರು.
ಗುರು ವಾದಿರಾಜರ ಮಹಾಭಾರತ ತಾತ್ಪರ್ಯ ನಿರ್ಣಯಕ್ಕೆ ಬರೆದ ವ್ಯಾಖ್ಯಾನ ಅತ್ಯಂತ ಸುಂದರವಾಗಿದ್ದು, ಸಂಶೋಧನಾತ್ಮಕವಾಗಿದೆ.
ಶ್ರೀವಾದಿರಾಜರು ಇಡೀ ಭರತ ಖಂಡವನ್ನು ನಾಲ್ಕು ಬಾರಿ ಸಂಚರಿಸಿ ಪ್ರಪ್ರಥಮ ಪ್ರವಾಸ ಸಾಹಿತ್ಯವೆನ್ನಬಹುದಾದ ತೀರ್ಥ ಪ್ರಬಂಧ ಎಂಬ ಕೃತಿ ರಚಿಸಿದರು.
ಶ್ರೀ ವಾದಿರಾಜರು ಕನಕ ಬಂದಾಗ ಭಕ್ತ ಶ್ರೀ ಕೃಷ್ಣ ಪರಮಾತ್ಮನ ನೋಡುವ ಮನದ ಇಂಗಿತವನ್ನು ಕನಕದಾಸರ ಮುಖ ನೋಡಿ ತಿಳಿದು ಅವರು ಪರಮಾತ್ಮನ ದರ್ಶನಕ್ಕೆ ಅನುವು ಮಾಡಿಕೊಟ್ಟರು!!
ಉಡುಪಿಯಲ್ಲಿ ಕನಕದಾಸರ ಭಕ್ತಿಗೆ ಒಲಿದ ಶ್ರೀ ಕೃಷ್ಣ ಅವರಿಗೆ ಗೋಡೆಯ ಕಿಂಡಿಯಲ್ಲಿ ದರ್ಶನ ಕೊಟ್ಟ!!
ಅದನ್ನು ಕನಕನ ಕಿಂಡಿ ಎಂದು ಕರೆದು ಕೃಷ್ಣನ ಮೊದಲ ಧೂಳಿ ದರ್ಶನ ಕಿಂಡಿಯ ಮೂಲಕವೇ ನಡೆಯಬೇಕು ಎಂಬ ಪದ್ಧತಿಯನ್ನು ರೂಢಿಗೆ ತಂದು ಕನಕ ಭಕ್ತಿಗೆ ಉಡುಪಿಯಲ್ಲೊಂದು ಐತಿಹಾಸಿಕ ದಾಖಲೆ ಸೃಷ್ಟಿಸಿದರು.
ಉಡುಪಿಯ ಅಷ್ಟ ಮಠಗಳಲ್ಲಿ ಶ್ರೀಕೃಷ್ಣನ ಪೂಜೆ ಎರಡು ತಿಂಗಳಿಗೊಮ್ಮೆ (ಪರ್ಯಾಯ) ನಡೆಯುವ ವ್ಯವಸ್ಥೆ ಇದ್ದಿತು. ಅದನ್ನು ಶ್ರೀವಾದಿರಾಜರು ಎರಡು ವರ್ಷಗಳಿಗೆ ವಿಸ್ತರಿಸಿ ದೇಶ ಸಂಚಾರ ಮತ್ತು ಅಧ್ಯಯನಗಳಿಗೆ ವಿಶೇಷ ಅನುಕೂಲ ಕಲ್ಪಿಸಿದರು.
ಶ್ರೀವಾದಿರಾಜರು ತಮ್ಮ ಜೀವಿತಾವಧಿಯಲ್ಲಿ ಒಟ್ಟು ಐದು ಬಾರಿ ಪರ್ಯಾಯ ಪೀಠವನ್ನಲಂಕರಿಸಿದ ಮೊದಲ ಯತಿವರೇಣ್ಯರು. ಸಶರೀರರಾಗಿ ವೃಂದಾವನ ಪ್ರವೇಶ ಮಾಡಿದರು. ಇಂತಹ ಮಹಾನ್ ಪುರುಷರ ನಾಮಸ್ಮರಣೆ ಕೇವಲ ಆರಾಧನೆ ಸಮಯಕ್ಕೆ ಸೀಮಿತವಾಗದೆ ನಿರಂತರ ನಡೆಯಬೇಕು.
ಪೂರ್ಣಪ್ರಜ್ಞ ವಿದ್ಯಾಪೀಠದ ಬಗ್ಗೆ
ದೇಶ ಹಾಗೂ ಹಿಂದೂ ಧರ್ಮಕ್ಕೆ ತನ್ನದೇ ಆದ ರೀತಿಯಲ್ಲಿ ವಿಶಿಷ್ಟ ಕೊಡುಗೆ ನೀಡುತ್ತಾ ಬಂದಿರುವ ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠ ವಿದ್ಯಾಪೀಠ ಬೆಂಗಳೂರಿನ ಕತ್ರಿಗುಪ್ಪೆಯಲ್ಲಿರುವ ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠ ನಗರದ ಪ್ರಮುಖ ಆಧ್ಯಾತ್ಮಿಕ ಸಂಸ್ಥೆಯಾಗಿದೆ.
ವೇದ, ಉಪನಿಷತ್ತುಗಳ ಸಮಗ್ರ ಮತ್ತು ಗಾಢ ಅಧ್ಯಯನದ ಮೂಲಕ ವಿದ್ಯಾರ್ಥಿಗಳಿಗೆ ಭಾರತೀಯ ಸಂಸ್ಕೃತಿಯ ಪರಿಪೂರ್ಣ ಜ್ಞಾನವನ್ನು ಈ ಸಂಸ್ಥೆ ನೀಡುತ್ತದೆ.
ಆಧ್ಯಾತ್ಮಿಕ ಆಚಾರ-ವಿಚಾರ ಮತ್ತು ಸಂಸ್ಕೃತ ಅಧ್ಯಯನದಲ್ಲಿ ಇಡೀ ದೇಶದಲ್ಲಿಯೇ ಗಣ್ಯ ಸಂಸ್ಥೆಯಾಗಿದೆ. 1957-58 ರ ಸುಮಾರಿಗೆ ಬೆಂಗಳೂರಿನ ದಕ್ಷಿಣ ಭಾಗದಲ್ಲಿರುವ ಕತ್ರಿಗುಪ್ಪೆ ರಸ್ತೆಯಲ್ಲಿ ಮೂರುವರೆ ಎಕರೆ ನಿವೇಶದಲ್ಲೂ ಸಮುಚ್ಚಯ ನಿರ್ಮಿಸಲಾಯಿತು. ಆರಂಭದ ದಿನದಿಂದಲೂ ವಿದ್ಯಾರ್ಥಿ ಸಮುದಾಯಕ್ಕೆ ಶಾಲಾ ಕೊಠಡಿ, ವಸತಿಗೃಹ, ಗ್ರಂಥ ಭಂಡಾರ, ಸಭಾಗೃಹಗಳನ್ನು ಒದಗಿಸಿದೆ. ವಿದ್ಯಾಪೀಠದ ಆವರಣದಲ್ಲಿ ಶ್ರೀಕೃಷ್ಣನ ಗುಡಿಯನ್ನು 1980 ರಲ್ಲಿ ನಿರ್ಮಿಸಲಾಯಿತು.
ಸನ್ನಿಧಾನ
ಶ್ರೀ ಕೃಷ್ಣ ಪರಮಾತ್ಮ, ಶ್ರೀ ಮಧ್ವಾಚಾರ್ಯರು, ಶ್ರೀವಾದಿರಾಜ ಗುರುಸಾರ್ವಭೌಮರು, ಶ್ರೀಗುರು ರಾಘವೇಂದ್ರ ಸ್ವಾಮಿಗಳು, ಶ್ರೀ ದುರ್ಗಾದೇವಿ ಅಮ್ಮನವರು, ಶ್ರೀನಾಗದೇವರು, ಮನೋನಿಯಾಮಕ ರುದ್ರ ದೇವರು ಮತ್ತು ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಮೂಲ ಬೃಂದಾವನ ಇಲ್ಲಿದೆ.
Get in Touch With Us info@kalpa.news Whatsapp: 9481252093
Discussion about this post