ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ತಾಲೂಕಿನ ಸುಣ್ಣದಹಳ್ಳಿ ಗ್ರಾಮದಲ್ಲಿರುವ ವ್ಯಾಸರಾಜ ಪ್ರತಿಷ್ಠಾಪಿತ ಶ್ರೀವೀರಾಂಜನೇಯ ಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.
ದಿ.9ರಿಂದ ದೇವಾಲಯದ ಪ್ರಧಾನ ಅರ್ಚಕರ ಪೌರೋಹಿತ್ಯದಲ್ಲಿ ರಥೋತ್ಸವದ ಪೂರ್ವಭಾವಿ ಪೂಜಾವಿಧಿಗಳು ಆರಂಭಗೊಂಡಿತು. ಅಂದು ಬೆಳಿಗ್ಗೆ ಅಭಿಷೇಕ ಪೂಜೆ ನಂತರ ಸಂಜೆ ಸ್ವಸ್ತಿವಾಚನ, ವಾಸ್ತುರಕ್ಷೋಘ್ನ ಹೋಮ, ವಾಸ್ತುಪೂಜೆ, ದಿಗ್’ಬಲಿ ಯಾಗಶಾಲ ಪ್ರವೇಶ ಮಾಡಲಾಯಿತು.
ದಿ.10ರಂದು ಬೆಳಿಗ್ಗೆ ಪೂಜೆ ಅಭಿಷೇಕಾ ನಂತರ ಮಹಾಮಂಗಳಾರತಿ, ಅಂಕುರಾರ್ಪಣೆ, ನವಗ್ರಹ ಹೋಮ, ಗರುಡಹೋಮ, ಭೇರಿತಾಡನ, ಕಂಕಣಬಂಧನ, ಧ್ವಜಾರೋಹಣ, ಮಹಾಮಂಗಳಾರತಿ ನೆರವೇರಿತು. ಸಂಜೆ ಅಗ್ನಿಜನನ, ರಂಗಪೂಜೆ, ತಂತ್ರಬಲಿ, ಮಂಗಳಾರತಿ ಮಾಡಲಾಯಿತು.
ದಿ.11ರ ಬುಧವಾರ ಬೆಳಿಗ್ಗೆ ಮೂಲದೇವರ ನಿರ್ಮಾಲ್ಯ ವಿಸರ್ಜನೆ ನಂತರ ಪಂಚಮೃತ ಅಭಿಷೇಕ ನೆರವೇರಿಸಿ ವಿಶೇಷ ಅಲಂಕಾರ ಮಾಡಿದ ನಂತರ ವಿವಿಧ ವರ್ಣಗಳ ಪತಾಕೆಗಳಿಂದ ಅಲಂಕೃತಗೊಂಡಿದ್ದ ರಥದ ಶುದ್ಧೀಕರಣ, ಪ್ರಧಾನಹೋಮ ನೆರವೇರಿತು. ಮುಖ್ಯಪ್ರಾಣ ಹನುಮಂತ ದೇವರ ರಜತ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿರಿಸಿ ದೇವಾಲಯದ ಒಳಪ್ರಾಕಾರದಲ್ಲಿ ಮಂಗಳವಾದ್ಯ ಸಹಿತವಾಗಿ ಪಲ್ಲಕ್ಕಿ ಉತ್ಸವ ಮಾಡಿದ ನಂತರ ರಥದ ಪೂಜೆ ನೆರವೇರಿಸಲಾಯಿತು.
ರಥದ ಸುತ್ತ ಬಲಿ ಅನ್ನವನ್ನು ಹಾಕಿ ನಂತರ ರಥದ ಸುತ್ತ ಉತ್ಸವ ಮೂರ್ತಿಯೊಂದಿಗೆ ಪ್ರದಕ್ಷಿಣಾ ಉತ್ಸವ ಮಾಡಿದ ನಂತರ ಉತ್ಸವ ಮೂರ್ತಿಯನ್ನು ರಥದಲ್ಲಿರಿಸುತ್ತಿದ್ದಂತೆ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಿಂದ ಆಗಮಿಸಿದ್ದ ಸಾವಿರಾರು ಭಕ್ತಾದಿಗಳು ಆಂಜನೇಯನಿಗೆ ಜಯಕಾರ ಹಾಕುತ್ತಾ ಗೋವಿಂದಾ ಗೋವಿಂದ ಎನ್ನುತ್ತಾ ರಥದ ಕಳಸಕ್ಕೆ ಬಾಳೆಹಣ್ಣು, ಉತ್ತತ್ತಿ, ಕರಿಮೆಣಸಿನ ಕಾಳುಗಳನ್ನು ಬೀರಿದರು. ರಥಾರೂಢನಾದ ಶ್ರೀವೀರಾಂಜನೇಯ ಸ್ವಾಮಿಗೆ ಅರ್ಚಕರು ಮಂಗಳಾರತಿ ಮಾಡಿದ ನಂತರ ಭಕ್ತಾದಿಗಳು ಗೋವಿಂದಾ, ಗೋವಿಂದಾ, ಜೈಹನುಮಾನ್ ಎನ್ನುತ್ತಾ ರಥವನ್ನು ಎಳೆದರು.
ರಥವನ್ನು ಗ್ರಾಮದ ಪ್ರವೇಶದ್ವಾರದವರಗೆ ಎಳೆದು ತಂದು ನಿಲ್ಲಿಸಿದ ನಂತರ ಭಕ್ತಾದಿಗಳು ದೇವರಿಗೆ ಹಣ್ಣುಕಾಯಿ ಸಮರ್ಪಿಸಿದರು. ಬಿಸಿಲ ಬೇಗೆ ನೀಗಿಸುವ ಸಲುವಾಗಿ ಭಕ್ತಾದಿಗಳಿಗೆ ಅಲ್ಲಲ್ಲಿ ಉಚಿತವಾಗಿ ಪಾನಕ, ನೀರು, ಮಜ್ಜಿಗೆ ನೀಡಲಾಗುತ್ತಿತ್ತು. ದೇವಾಲಯದ ಸಮಿತಿ ವತಿಯಿಂದ ಭಕ್ತಾದಿಗಳಿಗೆ ಪ್ರಸಾದ ರೂಪದ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಸಂಜೆ ರಥವನ್ನು ಪುನಃ ಆ ಸ್ಥಳದಿಂದ ದೇವಾಲಯದವರೆಗೆ ಭಕ್ತಾದಿಗಳು ಎಳೆದು ತಂದರು. ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿರಿಸಿ ದೇವಾಲಯದ ಒಳಪ್ರಾಕರದಲ್ಲಿ ಪಲ್ಲಕ್ಕಿ ಉತ್ಸವ ನಡೆಸಲಾಯಿತು.
ಆನಂತರ ಅರ್ಚಕರು ಅಷ್ಠಾವದಾನ ಸೇವೆ, ಬಲಿ, ಶಯನೋತ್ಸವ ಮಂಗಳಾರತಿ ಮಾಡುವುದರೊಂದಿಗೆ ರಥೋತ್ಸವ ಮುಕ್ತಯಗೊಂಡಿತು.
ರಥೊತ್ಸವದ ಅಂಗವಾಗಿ ಇಂದು ಬೆಳಿಗ್ಗೆ ನಿತ್ಯ ಪುಜೆ ಅಭಿಷೇಕಾ ನಂತರದಲ್ಲಿ ಅವಭೃತ ಸ್ನಾನ, ಪ್ರಧಾನ ಹೋಮದ ಪೂರ್ಣಾಹುತಿ ಗಣಹೋಮ ನಡೆದಿದೆ. ಸಂಜೆ ದೇವರ ರಾಜಬೀದಿ ಉತ್ಸವ ಏರ್ಪಡಿಸಿದೆ.
ದಿ.13ರಂದು ಕಲಾತತ್ವ ಹೋಮ
ದಿ.13ರಂದು ನಿತ್ಯಪೂಜೆ ನಂತರ ಕಲಾತತ್ವಹೋಮ, ಕುಂಭಾಭಿಷೇಕ ಮತ್ತು ಮಹಾಮಂಗಳಾರತಿಯೊಂದಿಗೆ ಶ್ರೀವೀರಾಂಜನೇಯ ಸ್ವಾಮಿಯ ರಥೋತ್ಸವ ಕಾರ್ಯಕ್ರಮ ಮುಕ್ತಾಯವಾಗಲಿದೆ.
(ವರದಿ: ಕೆ.ಎಸ್. ಸುಧೀಂದ್ರ, ಭದ್ರಾವತಿ)
Discussion about this post