ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಸಾಮಾನ್ಯವಾಗಿ ಸರ್ಕಾರಿ ಕಚೇರಿ ಎಂದರೆ ಕೆಲಸದಿಂದ ತಪ್ಪಿಸಿಕೊಳ್ಳುವವರು, ರಜೆಗೆ ಸಣ್ಣ ಕಾರಣ ಸಿಕ್ಕರೆ ಸಾಕು ಮನೆಯಲ್ಲಿ ಕುಳಿತುಕೊಳ್ಳುವವರೇ ಹೆಚ್ಚು ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಲೇ ಇರುತ್ತದೆ. ಅದರಲ್ಲೂ ಒಂದಷ್ಟು ತುರ್ತು ಪರಿಸ್ಥಿತಿ ಸಿಕ್ಕರೆ ಸಾಕು, ಮನೆಯಿಂದ ಹೊರಕ್ಕೆ ಬರಲೇ ಚಿಂತಿಸುತ್ತಾರೆ. ಆದರೆ, ಇವೆಲ್ಲಕ್ಕೂ ಅಪವಾದ ಎಂಬಂತಿದೆ ಭದ್ರಾವತಿ ಮುಖ್ಯ ಅಂಚೆ ಕಚೇರಿಯ ಸಿಬ್ಬಂದಿಗಳ ಕರ್ತವ್ಯಪರತೆ.
ಕೋವಿಡ್ 19 ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಎಪ್ರಿಲ್ 14ರವರೆಗೂ ಲಾಕ್’ಡೌನ್ ಘೋಷಣೆ ಮಾಡಿದ್ದು, ಯಾವುದೇ ಸಾರ್ವಜನಿಕರು ಮನೆಯಿಂದ ಹೊರಕ್ಕೆ ಬಾರದಂತೆ ಕೇಂದ್ರ ಸರ್ಕಾರ ಆದೇಶಿಸಿದೆ. ಇದೇ ವೇಳೆ, ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ಅಗತ್ಯ ಸೇವೆಗಳಿಗೆ ಸರ್ಕಾರ ರಿಯಾಯ್ತಿ ನೀಡಿದ್ದು ಇದರಲ್ಲಿ ಅಂಚೆ ಸೇವೆಯೂ ಸಹ ಸೇರಿದೆ. ನಗರದಲ್ಲಿ ಲಾಕ್ ಡೌನ್ ಪರಿಸ್ಥಿತಿಯ ಕುರಿತಾಗಿ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ನಗರ ಪ್ರದಕ್ಷಿಣೆ ನಡೆಸಿದ್ದು, ಅಂಚೆ ಕಚೇರಿಗೆ ಭೇಟಿ ನೀಡಿದ ವೇಳೆ ಇಲ್ಲಿನ ಸಿಬ್ಬಂದಿಗಳ ಸಾಮಾಜಿಕ ಕಳಕಳಿ ತಿಳಿಯಿತು.
ಕರ್ಫ್ಯೂ ರೀತಿಯಲ್ಲಿ ತುರ್ತು ಪರಿಸ್ಥಿತಿಯ ಇಂತಹ ಸಂದರ್ಭದಲ್ಲಿ ಭದ್ರಾವತಿ ಮುಖ್ಯ ಅಂಚೆ ಕಚೇರಿಯ ಅರ್ಧದಷ್ಟು ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಇಲ್ಲಿನ ಪಬ್ಲಿಕ್ ರಿಲೇಶನ್ ಆಫೀಸರ್ ಶ್ರೀ ವಿ. ಶಶಿಧರ್ ಅವರೇ ಸದ್ಯ ಉಸ್ತುವಾರಿ ಪೋಸ್ಟ್ ಮಾಸ್ಟರ್ ಆಗಿದ್ದು, ಇವರಿಗೆ 58 ವರ್ಷ. ಪ್ರಮುಖವಾಗಿ 50 ವರ್ಷ ದಾಟಿರುವ ಸಿಬ್ಬಂದಿಗಳಿಗೆ ವಿನಾಯ್ತಿ ನೀಡಿದ್ದಾರೆ. ಆದರೆ, ಸ್ವತಃ ಶಶಿಧರ್ ಅವರು ತಮ್ಮ ವಯಸ್ಸನ್ನು ಲೆಕ್ಕಿಸದೇ ಕರ್ತವ್ಯಕ್ಕೆ ಪ್ರತಿನಿತ್ಯ ಹಾಜರಾಗುತ್ತಿದ್ದಾರೆ.
ಈ ಕುರಿತಂತೆ ಅವರನ್ನು ಮಾತನಾಡಿಸಿದರೆ, ನನಗೆ ವಯಸ್ಸು 58 ಅಷ್ಟೆ. ನನ್ನ ಆರೋಗ್ಯ ಚೆನ್ನಾಗಿದೆ. ಹೀಗಿರುವಾಗ ಸುಖಾಸುಮ್ಮನೆ ಮನೆಯಲ್ಲಿ ಕುಳಿತರೆ ಸಾರ್ವಜನಿಕರ ಸೇವೆಗೆ ತೊಂದರೆಯಾಗುತ್ತದೆ. ಹೀಗಾಗಿ, ನಾನು ಕರ್ತವ್ಯಕ್ಕೆ ಹಾಜರಾಗುತ್ತಿದ್ದೇನೆ ಎನ್ನುತ್ತಾರೆ.
ಇನ್ನು, ಇಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇಬ್ಬರು ಯುವ ಸಿಬ್ಬಂದಿಗಳ ಬಗ್ಗೆ ಹೇಳಲೇಬೇಕು. ಸಾಮಾನ್ಯವಾಗಿ ಸರ್ಕಾರಿ ನೌಕರಿಯಲ್ಲಿರುವ ಯುವಕರಲ್ಲಿ ಹಲವರು ಕೆಲಸದಿಂದ ತಪ್ಪಿಸಿಕೊಳ್ಳಲೇ ಚಿಂತಿಸುವವರು ಹೆಚ್ಚು. ಆದರೆ, ತುರ್ತು ಪರಿಸ್ಥಿತಿಯ ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂದು ಸ್ವಯಂ ಪ್ರೇರಿತರಾಗಿ ಉತ್ಸಾಹದಿಂದ ಕರ್ತವ್ಯ ನಿರ್ವಹಿಸುತ್ತಿರುವ ಇಬ್ಬರು ಯುವ ನೌಕರರ ಕುರಿತು ನೀವು ತಿಳಿಯಲೇಬೇಕು.
ಆ ಯುವ ನೌಕರರೇ ಪ್ರಸನ್ನ ಕುಮಾರ್ ಹಾಗೂ ಬಿ.ಸಿ. ರಾಘವೇಂದ್ರ.
ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದೊಂದಿಗೆ ಮಾತನಾಡಿದ ಪೋಸ್ಟ್ ಮಾಸ್ಟರ್ ಶಶಿಧರ್ ಅವರು ಈ ಇಬ್ಬರೂ ಯುವ ಸಿಬ್ಬಂದಿಗಳ ಕುರಿತಾಗಿ ಆಡಿದ ಪ್ರಶಂಸೆ ಮಾತುಗಳು ಯುವಕರಿಗೆ ಪ್ರೇರಣಾದಾಯಕ.
ಈ ವಯಸ್ಸಿನ ಯುವಕರು ಕೆಲಸದಿಂದ ತಪ್ಪಿಸಿಕೊಳ್ಳುವುದೇ ಹೆಚ್ಚು. ಆದರೆ, ಈ ಇಬ್ಬರು ಮಾತ್ರ ಅವರಾಗಿಯೇ ನನ್ನ ಬಳಿ ಬಂದು: ಸರ್, 50 ವರ್ಷ ದಾಟಿರುವ ಹಿರಿಯರಿಗೆ ವಿನಾಯ್ತಿ ನೀಡಿ. ನೀವು ಈ ವಯಸ್ಸಿನಲ್ಲಿ ಬಂದು ಕರ್ತವ್ಯ ನಿರ್ವಹಿಸುತ್ತಿದ್ದೀರಿ. ಇನ್ನು, ನಾವು ಹೇಗೆ ಮನೆಯಲ್ಲಿ ಕೂರುವುದು. ನಮಗೆ ನಮ್ಮ ಹಿತಕ್ಕಿಂತ ಕರ್ತವ್ಯ ಹಾಗೂ ಜನ ಸೇವೆ ಮುಖ್ಯ. ನಾವು ನಿಮ್ಮೊಂದಿಗಿದ್ದೇವೆ ಎಂದು ಈ ಇಬ್ಬರೂ ನನ್ನ ಬಳಿ ಬಂದು ಹೇಳಿದರು ಎನ್ನುತ್ತಾರೆ ಶಶಿಧರ್.
ತುರ್ತು ಪರಿಸ್ಥಿತಿಯ ಈ ಸಂದರ್ಭದಲ್ಲಿ ತಮ್ಮ ಸ್ವಹಿತಕ್ಕಿಂತಲೂ ತಮ್ಮ ಅಗತ್ಯಕ್ಕಾಗಿ ಅಂಚೆ ಕಚೇರಿಗೆ ಬರುವ ನಾಗರಿಕರ ಸೇವೆ ನಮಗೆ ಮುಖ್ಯ ಎನ್ನುವ ಈ ಯುವಕರ ಈ ಮನಃಸ್ಥಿತಿ ಅನುಕರಣೀಯವಾಗಿದೆ.
ಶುಕ್ರವಾರ ಒಂದೇ ದಿನ ವಿವಿಧ ಯೋಜನೆಗಳ ಅಡಿಯಲ್ಲಿ ಹಣ ಪಡೆಯುವ ಫಲಾನುಭವಿಗಳು ಹಾಗೂ ತಮ್ಮ ಹಣ ಪಡೆಯುವ ಸಲುವಾಗಿ 50ಕ್ಕೂ ಅಧಿಕ ಸಾರ್ವಜನಿಕರು ಇಲ್ಲಿಗೆ ಭೇಟಿ ನೀಡಿದ್ದಾರೆ. ಅಲ್ಲದೇ, ಇಲ್ಲಿರುವ ಸಿಬ್ಬಂದಿಗಳಲ್ಲಿ ಅರ್ಧದಷ್ಟು ಮಂದಿಗೆ ವಿನಾಯ್ತಿ ನೀಡಿದ್ದು, ಅಗತ್ಯವಿದ್ದರೆ ಮಾತ್ರ ಕರೆಸಿಕೊಳ್ಳುತ್ತಿದ್ದಾರೆ.
ಬಹಳ ಮುಖ್ಯವಾಗಿ, ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಭಯದಲ್ಲಿಯೇ ಅಂಚೆ ಕಚೇರಿಗೆ ಆಗಮಿಸುವ ಸಾರ್ವಜನಿಕರೊಂದಿಗೆ ಅತ್ಯಂತ ವಿನಯದಿಂದ ವರ್ತಿಸಿ, ಅವರ ಕೆಲಸ ಮಾಡಿಕೊಡುತ್ತಾ ಆತ್ಮಸ್ಥೈರ್ಯ ತುಂಬುತ್ತಿರುವುದು, ಸಾರ್ವಜನಿಕರಿಗೆ ಕಚೇರಿ ಹಾಗೂ ಅಂಚೆ ಎಟಿಎಂನಲ್ಲಿ ಸ್ಯಾನಿಟೈಸರ್ ಇಟ್ಟಿರುವುದು ಶ್ಲಾಘನೀಯ.
Get in Touch With Us info@kalpa.news Whatsapp: 9481252093

















