ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಕೊರೋನಾ ಹೊಡೆತಕ್ಕೆ ಇಡೀ ಜಗತ್ತೇ ಸ್ತಬ್ಧವಾಗಿದೆ. ದೇಶದ ಸರ್ವ ಚಟುವಟಿಕೆಗಳು ನಿಂತುಹೋಗಿವೆ. ವೈರಸ್ ಸೋಂಕಿನ ಬಗ್ಗೆ ಆತಂಕ ಹೆಚ್ಚುತ್ತಿದೆ. ಇಂಥ ಸಂಕಷ್ಟದ ಕಾಲದಲ್ಲಿ ಜನರಿಗೆ ಖಚಿತ ಮತ್ತು ಅಧಿಕೃತ ಮಾಹಿತಿಯನ್ನು ತಲುಪಿಸುವ ನಿಟ್ಟಿನಲ್ಲಿ ಪತ್ರಿಕೆಗಳು ದೊಡ್ಡ ಹೋರಾಟವನ್ನೇ ನಡೆಸುತ್ತಿವೆ. ಕೊರೊನಾ ವೈರಸ್ ವಿರುದ್ಧದ ಈ ಹೋರಾಟದ ಮುಂಚೂಣಿಯಲ್ಲಿ ನಿಂತು ಓದುಗರ ಮನೆಬಾಗಿಲಿಗೆ ಪತ್ರಿಕೆಗಳನ್ನು ವಿತರಕರು ತಲುಪಿಸುತ್ತಿದ್ದಾರೆ.
ಸೋಷಿಯಲ್ ಮೀಡಿಯಾಗಳ ಸುಳ್ಳು ಮತ್ತು ಭಯ ಹುಟ್ಟಿಸುವ ತಪ್ಪು ಮಾಹಿತಿಗಳ ನಡುವೆ ಖಚಿತವಾದ ಸುದ್ದಿಯನ್ನು ನೀಡುತ್ತವೆ ಎನ್ನುವ ಕಾರಣಕ್ಕಾಗಿಯೇ ಕೇಂದ್ರ ಸರಕಾರ ಮತ್ತು ಹಲವು ರಾಜ್ಯ ಸರಕಾರಗಳು ಪತ್ರಿಕೆಗಳನ್ನು ಅಗತ್ಯ ಸೇವೆ ಎಂದು ಪರಿಗಣಿಸಿ ಅಧಿಸೂಚನೆಯನ್ನೇ ಪ್ರಕಟಿಸಿವೆ. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಎರಡೂ ಭಾಷಣಗಳಲ್ಲಿ ಪತ್ರಿಕಾ ಮಾಧ್ಯಮದ ಸೇವೆಯನ್ನು ವೈದ್ಯರು, ಪೊಲೀಸರ ಸೇವೆಯ ಸಾಲಿನಲ್ಲಿ ಸೇರಿಸಿ ಕೊಂಡಾಡಿದ್ದಾರೆ.
ಪತ್ರಿಕೆಗಳ ಪಾಲಿಗೆ ಇದೊಂದು ಐತಿಹಾಸಿಕ ಸಂದರ್ಭ. ಮಹಾಯುದ್ಧಗಳು, ಪ್ರವಾಹದಂಥ ಭೀಕರ ಸಂದರ್ಭದಲ್ಲಿ ನಡೆಸಿದಂತಹುದೇ ಸಾಹಸಿಕ ಮತ್ತು ಕಾಳಜಿಪೂರ್ವಕ ಸೇವೆಯನ್ನು ನೀಡುವ ಸನ್ನಿವೇಶ. ಈ ಕಾಯಕದಲ್ಲಿ ದೇಶದ ಹಲವಾರು ಕಡೆ ಪತ್ರಿಕೆಗಳ ಕಾರ್ಯಾಚರಣೆಗೆ ಅಡೆತಡೆಗಳು ಎದುರಾಗಿವೆ. ಆದರೆ, ಕರ್ನಾಟಕದ ಪತ್ರಿಕಾ ವಿತರಕರು ಎಲ್ಲ ಸವಾಲುಗಳನ್ನು ಎದುರಿಸಿ ಜನರಿಗೆ ಮಾಹಿತಿ ಒದಗಿಸುವ ಕಾಯಕ ನಡೆಸುತ್ತಿದ್ದಾರೆ. ಸೋಂಕು ಪತ್ತೆಯಾದ ದಿನದಿಂದ ಆರಂಭಿಸಿ, ಲಾಕ್‌ಡೌನ್‌ನ ಈ ದಿನಗಳಲ್ಲೂ ಸವಾಲುಗಳಿಗೆ ಅಂಜದೆ, ಅಳುಕದೆ ಪತ್ರಿಕೆಗಳನ್ನು ಓದುಗರಿಗೆ ತಲುಪಿಸುವ ಕರ್ತವ್ಯಕ್ಕೆ ಬೆನ್ನು ತೋರಿಸದೆ ಗಟ್ಟಿಯಾಗಿ ನಿಂತಿದ್ದಾರೆ. ತಮಗೆ ಹಾಗೂ ಓದುಗರಿಗೆ ಯಾವ ತೊಂದರೆಯೂ ಆಗದಂತೆ ಗರಿಷ್ಠ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಕೆಲಸ ಮಾಡುತ್ತಿರುವ ರಾಜ್ಯದ ಸಹಸ್ರಾರು ವಿತರಕರಿಗೆ ಅತ್ಯಂತ ಗೌರವದಿಂದ ಸಲಾಮ್ ಹೇಳುತ್ತಿದೆ.
ಕೊರೋನಾ ಸೋಂಕು ಹಬ್ಬುತ್ತಿರುವ ಕಷ್ಟ ಕಾಲದಲ್ಲಿ ವೈದ್ಯಕೀಯ ಸಿಬ್ಬಂದಿ, ಪೊಲೀಸರು ಹೇಗೆ ಜನರ ಸೇವೆಯೇ ತಮ್ಮ ಧ್ಯೇಯವೆಂದು ನಂಬಿ ಕೆಲಸ ಮಾಡುತ್ತಾರೋ ಅಂಥಹುದೇ ಶ್ರದ್ಧೆಯಿಂದ ಪತ್ರಿಕಾ ವಿತರಕರೂ ಕಾರ್ಯಾಚರಿಸುತ್ತಿದ್ದಾರೆ. ಖಚಿತ, ಅಧಿಕೃತ ಮತ್ತು ಪರಾಮರ್ಶಿತ ಸುದ್ದಿಗಳನ್ನು ಜನರಿಗೆ ತಲುಪಿಸುವುದು ಜನರಿಗೆ ಮಾಡಬಹುದಾದ ಬಹು ದೊಡ್ಡ ಸೇವೆ ಎನ್ನುವ ಅವರ ಧ್ಯೇಯ ನಿಷ್ಠೆಗೆ ಮತ್ತೊಮ್ಮೆ ವಂದನೆ ಅಭಿನಂದನೆ.
Get in Touch With Us info@kalpa.news Whatsapp: 9481252093
Discussion about this post