ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಕೋಲಾರ: ಹೆಚ್ಚುವರಿ ಹಾಪ್ ಕಾಮ್ಸ್ ಮಳಿಗೆಗಳನ್ನು ತೆರೆಯುವ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ತಿಳಿಸಿದರು.
ಕೋಲಾರ ಜಿಲ್ಲಾಕೇಂದ್ರದಲ್ಲಿದ್ದು ಕೃಷಿ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.
ರಾಜ್ಯದ ಇತರೆಡೆಗೆ ಹೋಲಿಸಿದರೆ ಕೋಲಾರದಲ್ಲಿ ಗಣನೀಯ ಪ್ರಮಾಣದಲ್ಲಿ ತರಕಾರಿ – ಮಾವು ಬೆಳೆಯುತ್ತಾರೆ. ಈ ಬಾರಿ ಟೊಮ್ಯಾಟೊ – ಕ್ಯಾಪ್ಸಿಕಂ ಉತ್ತಮ ಇಳುವರಿ ಬಂದಿದೆ. ಆದರೆ ಎಂದಿನಂತೆ ಮಾರುಕಟ್ಟೆ ಇಲ್ಲದಿರುವುದರಿಂದ ತೊಂದರೆಯಾಗಿದೆ ಎಂಬುದು ಸರ್ಕಾರದ ಗಮನಕ್ಕೂ ಬಂದಿದೆ. ಆದ್ದರಿಂದ ರಾಜ್ಯದ್ಯಂತ ಈಗ ಇರುವುದಕ್ಕಿಂತಲೂ ದುಪ್ಪಟ್ಟು ಸಂಖ್ಯೆಯ ಹಾಪ್ ಕಾಮ್ಸ್ ಮಳಿಗೆ ತೆರೆಯುವ ನಿಟ್ಟಿನಲ್ಲಿ ತೋಟಗಾರಿಕಾ ಸಚಿವರು ನಿರ್ಧಾರ ಕೈಗೊಳ್ಳುತ್ತಿದ್ದಾರೆ ಎಂದರು.
ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸಲು ಯಾವುದೇ ನಿರ್ಬಂಧವೂ ಇರುವುದಿಲ್ಲ. ಇದಲ್ಲದೇ ಕೃಷಿ ಚಟುವಟಿಕೆಗೂ ಅಡ್ಡಿಯಿಲ್ಲ. ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸಲು ಹೆಚ್ಚುವರಿ ವಾಹನ ಬಳಸುವ ಕುರಿತು ಚಿಂತನೆ ನಡೆದಿದೆ ಎಂದರು.
ಕೋಲಾರ ಜಿಲ್ಲೆಯಲ್ಲಿ ಮುಂಗಾರು ಹಂಗಾಮು ಚಟುವಟಿಕೆ ನಡೆಸಲು ಬೇಕಾದ ಬಿತ್ತನೆಬೀಜ – ರಸಗೊಬ್ಬರಗಳಿಗೆ ಯಾವುದೇ ಕೊರತೆಯೂ ಇಲ್ಲ. ರೈತರು ಆತಂಕಪಡದೇ ನಿಶ್ಚಿಂತೆಯಿಂದ ಚಟುವಟಿಕೆಯಿಂದಿರಬೇಕೆಂದು ಮನವಿ ಮಾಡಿದರು.
ಈಗಾಗಲೇ ಪುಷ್ಪಕೃಷಿ ಬೆಳೆಗಾರರ ಸ್ಥಿತಿಗತಿ ಸರ್ಕಾರದ ಗಮನಕ್ಕೆ ಬಂದಿದೆ. ಪುಷ್ಪಕೃಷಿ ಕ್ಷೇತ್ರದ ಸ್ಥಿತಿಗತಿ ಬಗ್ಗೆ ಸಮೀಕ್ಷೆ ನಡೆಸಲು ಮುಖ್ಯಮಂತ್ರಿ ಯಡಿಯೂರಪ್ಪ ಸೂಚನೆ ನೀಡಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಕೃಷಿಕರ ಕಷ್ಟನಷ್ಟಗಳು ಸರ್ಕಾರದ ಗಮನಕ್ಕೆ ಬಂದಿವೆ. ಲಾಕ್ ಡೌನ್ ಮುಗಿದ ನಂತರ ಪರಿಹಾರಗಳ ಬಗ್ಗೆ ಚಿಂತನೆ ನಡೆಸಿ ಕ್ತಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಪತ್ರಿಕಾಗೋಷ್ಠಿಗೂ ಮುನ್ನ ಜಿಲ್ಲೆಯ ಜನಪ್ರತಿನಿಧಿಗಳು, ಜಿಲ್ಲಾ – ತಾಲ್ಲೂಕುಮಟ್ಟದ ಅಧಿಕಾರಿಗಳು, ರೈತ ಮುಖಂಡರ ಸಭೆ ನಡೆಸಿ ಮಾಹಿತಿ ಸಂಗ್ರಹಿಸಿದರು.
Get in Touch With Us info@kalpa.news Whatsapp: 9481252093
Discussion about this post