ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಸೊರಬ: ಲಾಕ್ ಡೌನ್’ನಿಂದ ಸಂಕಷ್ಟಕ್ಕೆ ಒಳಗಾಗಿರುವ ರೈತರು, ಕೂಲಿ ಕಾರ್ಮಿಕರು ಹಾಗೂ ಬಡವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಪರಿಹಾರ ಒದಗಿಸುತ್ತಾರೆಂಬ ಜನರ ನಿರೀಕ್ಷೆ ಹುಸಿಯಾಗಿದೆ. ಇತ್ತ ರಾಜ್ಯ ಸರ್ಕಾರವು ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕುವಲ್ಲಿ ವಿಫಲವಾಗಿರುವುದರಿಂದ ಸರಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ಕಾಂಗ್ರೆಸ್ ಮುಖಂಡ ರಾಜು ಎಂ. ತಲ್ಲೂರು ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಲಾಕ್ ಡೌನ್’ನಿಂದ ಕೈಗಾರಿಕೆಗಳು ಮುಚ್ಚಿವೆ. ಕೃಷಿ ಕ್ಷೇತ್ರ ಬಡವಾಗಿದೆ. ಕಾರ್ಮಿಕರು ಕಂಗಾಲಾಗಿದ್ದಾರೆ. ಹಳ್ಳಿ ಜನರ ತೊಂದರೆ ಹೇಳತೀರದಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಪ್ರಧಾನಿಯವರು ಆರ್ಥಿಕವಾಗಿ ಚೈತನ್ಯ ತುಂಬುವ, ಕೃಷಿ ಕ್ಷೇತ್ರ ಮೇಲೆತ್ತುವ ಕೆಲಸ ಮಾಡಬೇಕಿತ್ತು. ಕೋಟ್ಯಂತರ ಮಂದಿ ವಲಸೆ ಕಾರ್ಮಿಕರು ಇಂದಿಗೂ ಬೀದಿಯಲ್ಲಿದ್ದಾರೆ. ಸರಕಾರದ ಕಾರ್ಯಕ್ರಮ ಇದುವರೆಗೂ ಅವರನ್ನು ತಲುಪಿಲ್ಲ. ಇಂತಹ ಸಂದರ್ಭದಲ್ಲಿ ಜನರು ಪ್ರಧಾನಿಯವರ ಮೇಲಿಟ್ಟಿದ್ದ ನಿರೀಕ್ಷೆ ಹುಸಿಯಾಗಿದೆ ಎಂದು ದೂರಿದರು.
ರಾಜ್ಯ ಸರ್ಕಾರ ನೊಂದವರ ನೆರವಿಗೆ ನಿಲ್ಲುವ ಕೆಲಸವನ್ನು ಪರಿಣಾಮಕಾರಿಯಾಗಿ ಮಾಡುತ್ತಿಲ್ಲ. ರೈತರ ಜಮೀನುಗಳಲ್ಲೇ ಮಾವು ಕಲ್ಲಂಗಡಿ ಅನಾನಸ್ ಕೊಳೆಯುತ್ತಿವೆ ಎಂದರು.
ರಾಜ್ಯ ಸರ್ಕಾರ ಖಜಾನೆ ಭರ್ತಿ ಮಾಡಲು ಬಿಡಿಎ ಕಾರ್ನರ್ ಸೈಟುಗಳ ಹರಾಜಿಗೆ ಮುಂದಾಗಿದೆ. ರಾಜೀವ್ ಗಾಂಧಿ ಆರೋಗ್ಯ ವಿವಿಯಲ್ಲಿ ಹಣ ಇದ್ದು ಬಳಕೆ ಮಾಡಿಕೊಳ್ಳಲಿ. ನಿಗಮ ಮಂಡಳಿಗಳ ಅಧ್ಯಕ್ಷರಿಗೆ ನಿಗದಿ ಮಾಡಿರುವ ಕಾರುಗಳನ್ನು ಅಧಿಕಾರಿಗಳೇ ಕಚೇರಿ, ಮನೆ ಕೆಲಸಗಳಿಗೆ ಬಳಸುತ್ತಿದ್ದಾರೆ. ಆ ಕಾರುಗಳನ್ನು ವಾಪಾಸ್ ಪಡೆದು ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕಬೇಕು. ವಿಶೇಷ ಪ್ಯಾಕೇಜ್ ಘೋಷಣೆ ಮಾಡದ ಹೊರತು ಆರ್ಥಿಕವಾಗಿ ಚೈತನ್ಯ ತುಂಬಲಾಗದು. ಹಣಕಾಸು ಇಲಾಖೆಯನ್ನು ಸರಿಯಾಗಿ ನಿಭಾಯಿಸದಿರುವುದು ಆರ್ಥಿಕ ದಿವಾಳಿಗೆ ಪ್ರಮುಖ ಕಾರಣ ಎಂದು ತಿಳಿಸಿದ್ದಾರೆ. ಲಾಕ್ ಡೌನ್ ವಿಸ್ತರಣೆಗೆ ವಿರೋಧ ಮಾಡುವುದಿಲ್ಲ. ಕೊರೋನಾ ಸೋಂಕು ಭಯಾನಕವಾಗಿದೆ. ಆದ್ದರಿಂದ ವಿಸ್ತರಣೆಗೆ ನಮ್ಮ ಸಹಮತವು ಇದೆ. ಜನರ ಬೆಂಬಲ ನೀಡಬೇಕಾಗುತ್ತದೆ. ಈ ವಿಚಾರದಲ್ಲಿ ಸರಕಾರಕ್ಕೆ ನಮ್ಮ ಸಹಕಾರವಿದೆ ಎಂದಿದ್ದಾರೆ.
Get in Touch With Us info@kalpa.news Whatsapp: 9481252093
Discussion about this post