ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ವಾಮನಾವತಾರ
ಬಲಿ ಚಕ್ರವರ್ತಿ ಪ್ರಹ್ಲಾದನ ವಂಶಸ್ಥ. ಇಲ್ಲಿ, ವಾಮನನು ಭೂಮನ್ಯಾಕಾಶಗಳಿಗೂ ವ್ಯಾಪಿಸಿ, ಒಂದು ಹೆಜ್ಜೆಯನ್ನು ಭೂಮಿಗೂ, ಇನ್ನೊಂದು ಹೆಜ್ಜೆಯನ್ನು ಆಕಾಶಕ್ಕೂ ಹಾಗೂ ಮತ್ತೊಂದು ಹೆಜ್ಜೆಯನ್ನು ಬಲಿಯ ತಲೆಯ ಮೇಲಿಟ್ಟದ್ದು ಎಲ್ಲರಿಗೂ ತಿಳಿದ ವಿಷಯ. ಅಂತರಾರ್ಥವೆಂದರೆ, ನಾವೆಲ್ಲರೂ ಈ ಜಗತ್ತಿಗೆ ವಾಮನರಾಗಿಯೇ ಬಂದವರು. ಜ್ಞಾನದ ಮೂಲಕ, ಸಾಧನೆಯ ಮೂಲಕ, ತಪಸ್ಸಿನ ಮೂಲಕ, ಸರ್ವವ್ಯಾಪಕತ್ವದಿಂದ ತ್ರಿವಿಕ್ರಮರಾಗಿ ಬೆಳೆಯಬೇಕು. ತ್ರಿಕರಣಶುದ್ಧರಾಗುವುದೇ ಮೂರು ಹೆಜ್ಜೆಗಳು.
ಅಹಂಕಾರವೆಂಬ ಸಂಕುಚಿತ ಭಾವವೇ ವಾಮನತ್ವ. ವಾಮನತ್ವದ ಬಲುಯಾದೊಡನೆಯೇ ವ್ಯಕ್ತಿಯು ತ್ರಿವಿಕ್ರಮನಾಗಿ ಬೆಳೆಯುತ್ತಾನೆಂಬುದು ಸಾರಾಂಶ. ಸಮಸ್ತ ಜಗತ್ತೂ ಮೂರು ವಕಾರಗಳಿಂದ ಸಂಪನ್ನವಾಗಿದೆ. ವ್ಯಕ್ತಿ, ವಸ್ತು ಹಾಗೂ ವಿಷಯಗಳು. ಇವು ಮೂರು ವಕಾರಗಳು. ಅಷ್ಟೇ ಅಲ್ಲ, ಮೂರು ವಿಕಾರಗಳು ಕೂಡಾ! ಈ ಮೂರು ವಿಕಾರಗಳನ್ನು ಕ್ರಮಬದ್ಧವಾಗಿ ಕ್ರಮಿಸಿದಾಗ ಮಾನವನು ತನ್ನಲ್ಲಿರಬಹುದಾದ ದಾನವತ್ವವನ್ನು ಕಳೆದುಕೊಂಡು ದೈವತ್ವವನ್ನು ಹೊಂದುತ್ತಾನೆಂಬುದು ತತ್ತ್ವಾರ್ಥ.
ಮಾನವ ವರ್ಗದ ಆರಂಭಿಕ ದಿನಗಳಲ್ಲಿ ಕಾಣಿಸಿಕೊಂಡವರು ಕುಬ್ಜರು ಎಂಬುದನ್ನು ಇದರ ಜೀವನ ಚಕ್ರದ ಸಂಕೇತದಲ್ಲಿ ಅರ್ಥಮಾಡಿಕೊಳ್ಳಬಹುದು. ಜೊತೆಗೆ ಈ ಕತೆ ಅಹಂಕಾರವನ್ನು, ವಾಮನನು ತುಳಿಯುವ ಕ್ರಿಯೆ ಹೇಳುವ ಮೂಲಕ ಇದಕ್ಕೆ ಅಹಂಕಾರ ಮರ್ಧನನದ ಸಂಕೇತಾರ್ಥವನ್ನು ನೀಡಿ ಕಾವ್ಯಾತ್ಮವಾಗಿಯೂ ಸೊಗಸಾಗಿಯೂ ರೂಪುಗೊಂಡಿದೆ.
ಪರಶುರಾಮಾವತಾರ
ಜಮದಗ್ನಿ ಮತ್ತು ರೇಣುಕಾಂಬಾ ಇವರ ಮಗನೇ ಪರಶುರಾಮ. ತಾತ್ತ್ವಿಕವಾಗಿ, ಭೃಗುಕುಲ ರಾಮ ಪರೇಶ ನಮೋ ಎಂದಂತೆ ಇವನ ಹೆಸರು ಪರೇಶ ರಾಮ! ಇವನು ಗಣಪತಿಯ ಆರಾಧಕನಾದ್ದರಿಂದಲೋ ಏನೋ, ಅವನ ಪ್ರೀತಿಯ ಸಂಖ್ಯೆಯಾದ ಇಪ್ಪತ್ತೊಂದನ್ನು ಅನುಸರಿಸಿ, ಇಪ್ಪತ್ತೊಂದು ಬಾರಿ ಭೂಮಂಡಲವನ್ನು ಪ್ರದಕ್ಷಿಣೆ ಹಾಕಿ ಮದಾಂಧರಾಗಿದ್ದ ಕ್ಷತ್ರಿಯರನ್ನು ಸದೆಬಡಿಯುತ್ತಾನೆ. ಕ್ಷತ್ರಿಯ ಧರ್ಮಕ್ಕೆ ವಿರುದ್ಧರಾದವರನ್ನು ಸದೆಬಡಿದವನು ಪರೇಶರಾಮನು!
ಜಮದಗ್ನಿ ಮತ್ತು ರೇಣುಕೆಯರ ಮಗನಾಗಿ ಜನಿಸಿದ ಇವನು ಪ್ರಜಾ ಪೀಡಕರಾಗಿದ್ದ ಕಾರ್ತವೀರ್ಯನನ್ನು ಮತ್ತು ಇತರ ಕ್ಷತ್ರಿಯರನ್ನು ನಾಶಗೊಳಿಸಿದನು, ಇತಿಹಾಸದ ದೃಷ್ಟಿಯಿಂದ ಇದು ಬ್ರಾಹ್ಮಣ ಮತ್ತು ಕ್ಷತ್ರಿಯರ ನಡುವೆ ಅಧಿಕಾರದ ಪಾರಮ್ಯಕ್ಕಾಗಿ ನಡೆದ ಹೋರಾಟವನ್ನು ಸೂಚಿಸುತ್ತದೆ ಜೊತೆಗೆ ಸಮಾಜ ಒಂದು ವ್ಯವಸ್ಥೆಯನ್ನು ಆರಿಸಿಕೊಳ್ಳಬೇಕಾಗಿದ್ದ ಸಂಕ್ರಮಣ ಸ್ಥಿತಿಯನ್ನೂ ಇದು ಸೂಚಿಸುತ್ತದೆ.
(ನಾಳೆ: ರಾಮಾವತಾರ ಹಾಗೂ ಕೃಷ್ಣಾವತಾರ)
Get in Touch With Us info@kalpa.news Whatsapp: 9481252093
Discussion about this post