ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಿತ್ರದುರ್ಗ: ಕೋವಿಡ್-19 ವೈರಸ್ ಸೋಂಕಿಗೆ ಸಂಬಂಧಿಸಿದಂತೆ ಮೇ 5 ರಂದು ಅಹಮದಾಬಾದ್‌ನಿಂದ ಚಿತ್ರದುರ್ಗ ಜಿಲ್ಲೆಗೆ ಆಗಮಿಸಿದ್ದ 15 ಜನ ತಬ್ಲೀಘಿಗಳ ಪೈಕಿ 03 ಜನರಲ್ಲಿ ಸೋಂಕು ಇರುವುದು ದೃಢಪಟ್ಟಿದ್ದು, ಉಳಿದ 12 ಜನರ ವರದಿ ನೆಗೆಟೀವ್ ಬಂದಿದೆ ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಹೇಳಿದ್ದಾರೆ.
ಕೋವಿಡ್-19 ಸೋಂಕು ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಅವರು ವಿವರ ನೀಡಿದರು.
ಗುಜರಾತ್ ರಾಜ್ಯದ ಅಹಮದ್‌ಬಾದ್‌ನ ಜಿನಾತ್‌ಪುರ ತರ್ಕೇಜ್ ಮಸೀದಿಯಲ್ಲಿ ನಡೆದ ಸಮಾವೇಶದಲ್ಲಿ ಭಾಗವಹಿಸಲು ಚಿತ್ರದುರ್ಗ ಜಿಲ್ಲೆಯ 15 ಹಾಗೂ ತುಮಕೂರು ಜಿಲ್ಲೆಯ 18 ಜನ ಮಾ. 08 ರಂದು ಹೋಗಿದ್ದರು. ನಂತರ ಲಾಕ್‌ಡೌನ್ ಜಾರಿಯಾದ ಕಾರಣದಿಂದಾಗಿ ಜಿಲ್ಲೆಗೆ ಹಿಂದಿರುಗಿರಲು ಸಾಧ್ಯವಾಗಿರಲಿಲ್ಲ. ಲಾಕ್‌ಡೌನ್ ಸಡಿಲಿಕೆ ಕಾರಣದಿಂದಾಗಿ 33 ಜನರೂ ಕೂಡ ಅಲ್ಲಿನ ಜಿಲ್ಲಾಡಳಿತದಿಂದ ಅನುಮತಿ ಪಡೆದು, ಔರಂಗಾಬಾದ್, ಸೂರತ್, ನಾಸಿಕ್, ಸೊಲ್ಲಾಪುರ, ವಿಜಯಪುರ, ಹೊಸಪೇಟೆ ಮಾರ್ಗವಾಗಿ ಇವರು ಚಿತ್ರದುರ್ಗ ಜಿಲ್ಲೆಗೆ ಪ್ರವೇಶಿಸಿದ್ದರು. ದಾರಿ ಮಧ್ಯೆ ವಿಜಯಪುರ ಹಾಗೂ ಇಳಕಲ್ ನಲ್ಲಿ ಪಾರ್ಸೆಲ್ ಮೂಲಕ ಆಹಾರ ಪಡೆದಿದ್ದಾರೆ. ಹೀಗಾಗಿ ಬೇರೆಡೆ ಸಂಪರ್ಕ ಮಾಡಿರುವ ಸಾಧ್ಯತೆಗಳಿಲ್ಲ. ತುಮಕೂರು ಜಿಲ್ಲೆಯ 18 ಜನರನ್ನು ಮೇ 5 ರಂದೇ ಕಳುಹಿಸಿಕೊಡಲಾಗಿದೆ ಎಂದರು.
ಚಿತ್ರದುರ್ಗ ಜಿಲ್ಲೆಯ ಎಲ್ಲ 15 ತಬ್ಲೀಘಿಗಳನ್ನು ಸ್ಟ್ಯಾಂಡರ್ಸ್ ಆಪರೇಷನ್ ಪ್ರೊಟೊಕಾಲ್ (ಎಸ್‌ಒಪಿ) ಪ್ರಕಾರ ಚಿತ್ರದುರ್ಗದಲ್ಲಿ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇರಿಸಿ, ಎಲ್ಲರ ಗಂಟಲು ದ್ರವ ಸಂಗ್ರಹಿಸಿ ಮೇ 6 ರಂದು ಪರೀಕ್ಷೆಗೆ ಕಳುಹಿಸಿಕೊಡಲಾಗಿತ್ತು. ಇದೀಗ 15 ಜನರ ಪೈಕಿ 03 ಜನರಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಒಟ್ಟು 15 ಜನರ ಪೈಕಿ ನಾಲ್ವರಿಗೆ ಅಹಮದಾಬಾದ್‌ನಲ್ಲಿಯೇ ಸೋಂಕು ಇರುವುದು ಕಳೆದ ಏ.5 ರಂದು ದೃಢಪಟ್ಟಿತ್ತು. ಬಳಿಕ ಅಲ್ಲಿಯೇ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು, ನಂತರ ಎರಡು ಬಾರಿ ನಡೆಸಿದ ಪರೀಕ್ಷೆಯಲ್ಲಿಯೂ ವರದಿ ನೆಗೆಟೀವ್ ಬಂದಿತ್ತು. ಹೀಗಾಗಿ ಇವರಿಗೆ ಅಲ್ಲಿನ ಜಿಲ್ಲಾಡಳಿತ ಪ್ರಯಾಣಕ್ಕೆ ಅನುಮತಿ ನೀಡಿ ಕಳುಹಿಸಿತ್ತು ಎಂದರು.
ಚಿತ್ರದುರ್ಗದಲ್ಲಿ ಮೇ 6 ರಂದು ಎಲ್ಲ 15 ಜನರ ಗಂಟಲುದ್ರವವನ್ನು ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದು, ಈ ಪೈಕಿ 03 ಜನರಿಗೆ ಸೋಂಕು ದೃಢಪಟ್ಟಿದೆ. ಉಳಿದ 12 ಜನರ ವರದಿ ನೆಗೆಟೀವ್ ಬಂದಿದೆ. ಅಹಮದಾಬಾದ್‌ನಲ್ಲಿ ಸೋಂಕಿಗೆ ಒಳಗಾಗಿದ್ದ ನಾಲ್ವರ ಪೈಕಿಯೇ, ಮತ್ತೆ ಮೂವರಿಗೆ ಇಲ್ಲಿಯೂ ಸೋಂಕು ದೃಢಪಟ್ಟಿರುವುದು ವಿಶೇಷ. ಸೋಂಕು ದೃಢಪಟ್ಟ ಮೂವರ ಸೋಂಕಿತರ ಸಂಖ್ಯೆ ಪಿ-751, ಪಿ-752, ಪಿ-753. ಮೂವರೂ 64 ವರ್ಷದ ಪುರುಷರು. ಸೋಂಕು ದೃಢಪಟ್ಟ ರೋಗಿಗಳನ್ನು ಚಿತ್ರದುರ್ಗದ ಜಿಲ್ಲಾಸ್ಪತ್ರೆಯ ಕೋವಿಡ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸ್ಥಳಾಂತರಿಸಲಾಗಿದೆ. 15 ಜನ ತಬ್ಲೀಘಿಗಳಿಗೆ ಕುಟುಂಬದವರೇ ಊಟ ಪೂರೈಸುತ್ತಿದ್ದರು. ಮುಂಜಾಗ್ರತಾ ಕ್ರಮವಾಗಿ ಈ ರೀತಿ ಸಂಪರ್ಕಕ್ಕೆ ಒಳಗಾದವರ ಬಗ್ಗೆ ಮಾಹಿತಿ ಪಡೆಯಲಾಗುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಖಾಸಗಿ ಬಸ್ ಮೂಲಕ ಜಿಲ್ಲೆಯನ್ನು ಪ್ರವೇಶಿಸಿದ ಇವರ ದಾಖಲಾತಿಯನ್ನು ಪರಿಶೀಲಿಸಿದ ಚೆಕ್‌ಪೋಸ್ಟ್‌ಸಿಬ್ಬಂದಿ ಹಾಗೂ ಇವರನ್ನು ಕ್ವಾರಂಟೈನ್‌ನಲ್ಲಿ ಇರಿಸುವ ಸಂದರ್ಭದಲ್ಲಿ ಸಂಪರ್ಕದಲ್ಲಿದ್ದ ಉಪವಿಭಾಗಾಧಿಕಾರಿ, ತಹಸಿಲ್ದಾರ್, ಹಾಸ್ಟೆಲ್ ವಾರ್ಡನ್, ಪೊಲೀಸ್ ಇಲಾಖೆಯೂ ಸೇರಿದಂತೆ ಒಟ್ಟು 20 ಜನ ಅಧಿಕಾರಿ, ಸಿಬ್ಬಂದಿಗಳಿಗೆ ಹೋಂ ಕ್ವಾರಂಟೈನ್‌ನಲ್ಲಿ ಇರುವಂತೆ ಸೂಚನೆ ನೀಡಲಾಗಿದೆ. ಅಲ್ಲದೆ ಮುಂಜಾಗ್ರತಾ ಕ್ರಮವಾಗಿ ಈ ಎಲ್ಲರ ಗಂಟಲುದ್ರವವನ್ನು ಸಂಗ್ರಹಿಸಿ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದೆ.
ಸೋಂಕು ಪೀಡಿತ ಪ್ರದೇಶವಾಗಿರುವ ಸೂರತ್‌ನಿಂದ ಮೇ 8 ರಂದು ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆಗೆ ಒಟ್ಟು 21 ಜನರು ಆಗಮಿಸಿದ್ದು, ಇವರೆಲ್ಲರನ್ನೂ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಇವರೆಲ್ಲರ ಗಂಟಲುದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಪಾಲಾಕ್ಷ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ತುಳಸಿ ರಂಗನಾಥ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಇನ್ನು, ಒಟ್ಟು 77 ಜನರ ಗಂಟಲುದ್ರವ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಇದುವರೆಗೂ 1111 ಶಂಕಿತರ ಗಂಟಲು ದ್ರವ ಹಾಗೂ ರಕ್ತ ಮಾದರಿಯನ್ನು ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಿದ್ದು ಈ ಪೈಕಿ ಈವರೆಗೆ 945 ಜನರ ವರದಿ ನೆಗಟೀವ್ ಎಂದು ವರದಿಯಾಗಿದೆ. 122 ಜನರ ಪರೀಕ್ಷಾ ವರದಿ ಬರುವುದು ಬಾಕಿ ಇದೆ.
ಸದ್ಯ ಜಿಲ್ಲೆಯಲ್ಲಿ 256 ಜನರನ್ನು ಹೋಂ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಈವರೆಗೆ ಜಿಲ್ಲೆಯಲ್ಲಿ 310 ಜನರು 28 ದಿನಗಳ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿದ್ದಾರೆ. ಸದ್ಯ ಹೊರ ಜಿಲ್ಲೆ, ಹೊರ ರಾಜ್ಯದಿಂದ ಬಂದವರು ಹಾಗೂ ಶಂಕಿತರ ಸಂಪರ್ಕ ಹಿನ್ನೆಲೆ ಹೊಂದಿರುವ 256 ಜನರನ್ನು ಹೋಂ ಕ್ವಾರಂಟೈನ್ ನಿಗಾನಲ್ಲಿ ಇರಿಸಲಾಗಿದೆ. 968 ಜನರಿಗೆ ಮೇ. 08 ರಂದು ಸ್ಕ್ರೀನಿಂಗ್ ಮಾಡಲಾಗಿದ್ದು, ಇದುವರೆಗೂ ಹೊರ ರಾಜ್ಯ ಹಾಗೂ ಜಿಲ್ಲೆಗಳಿಂದ ಈ ಜಿಲ್ಲೆಗೆ ಆಗಮಿಸಿದ 239545 ಜನರಿಗೆ ಸ್ಕ್ರೀನಿಂಗ್ ಮಾಡಲಾಗಿದೆ. ಮೇ. 08 ರಂದು ಫಿವರ್ ಕ್ಲಿನಿಕ್‌ಗಳಲ್ಲಿ 230 ಜನರಿಗೆ ಜ್ವರ ತಪಾಸಣೆ ಮಾಡಿದ್ದು, ಇದುವರೆಗೂ ಜಿಲ್ಲೆಯಲ್ಲಿ ಫಿವರ್ ಕ್ಲಿನಿಕ್‌ನಲ್ಲಿ ಒಟ್ಟು 12423 ಜನರಿಗೆ ಜ್ವರ ತಪಾಸಣೆ ಮಾಡಲಾಗಿದೆ. ಜಿಲ್ಲೆಯಲ್ಲಿ ಈವರೆಗೆ 505 ಜನರಿಗೆ ಮಾನಸಿಕ ಆರೋಗ್ಯ ತಜ್ಞರಿಂದ ಮೂರ್ನಾಲ್ಕು ದಿನಗಳಿಗೊಮ್ಮೆ ಆಪ್ತ ಸಮಾಲೋಚನೆ ಮಾಡಿಸಲಾಗಿದೆ. ಜಿಲ್ಲೆಯಲ್ಲಿ ಸದ್ಯ 29 ಜನರನ್ನು ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಇದುವರೆಗೂ ಉಸಿರಾಟದ ತೊಂದರೆ, ತೀವ್ರ ಜ್ವರ ನಂತಹ ಆರೋಗ್ಯ ಸಮಸ್ಯೆ ಹೊಂದಿರುವ 946 ರೋಗಿಗಳಿಗೆ ತಪಾಸಣೆ ಮಾಡಲಾಗಿದೆ.
ಜಿಲ್ಲೆಯಲ್ಲಿ ಮೇ. 17 ರವರೆಗೆ ಲಾಕ್‌ಡೌನ್ ಮುಂದುವರೆಸಲಾಗಿದ್ದು, ಯಾವುದೇ ಆರೋಗ್ಯ ಮಾಹಿತಿಗೆ 104 ಅಥವಾ 08194-1077 ಸಂಖ್ಯೆಗೆ ಅಥವಾ ಸಂಬಂಧಪಟ್ಟ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸಂಪರ್ಕಿಸಬೇಕು ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ತಿಳಿಸಿದ್ದಾರೆ.
Get in Touch With Us info@kalpa.news Whatsapp: 9481252093
Discussion about this post