ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಸರ್ಕಾರವು ಕೆಎಂಎಫ್ ಮುಖಂಡರ ಜೊತೆಗೆ ಸಮಾಲೋಚನೆ ಮಾಡಿದ್ದರ ಫಲಶೃತಿಯಿಂದಾಗಿ ರಾಜ್ಯದ ಎಲ್ಲಾ ಪಶು ಆಹಾರ ಉತ್ಪನ್ನ ಘಟಕಗಳಲ್ಲಿ ಕೇಂದ್ರ ಸರ್ಕಾರ ನಿಗಧಿಪಡಿಸಿದ ದರದಲ್ಲಿ ಮೆಕ್ಕೆಜೋಳ ಖರೀದಿ ಪ್ರಕ್ರಿಯೆ ನಾಳೆಯಿಂದ ಆರಂಭಗೊಳ್ಳಲಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಈ ಸಂಬಂಧ ಅವರು ಇಂದು ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿ ಮಾತನಾಡುತ್ತಿದ್ದರು.
ಪ್ರತಿ ಕ್ವಿಂಟಾಲ್‌ಗೆ ರೂ.2,000 ಇದ್ದ ಮೆಕ್ಕೆಜೋಳ ಇಂದು ಮಾರುಕಟ್ಟೆದಲ್ಲಿ 1,200 ರೂ.ಗೆ ಬಂದು ನಿಂತಿದೆ. ಇದರಿಂದಾಗಿ ರೈತರು ಭಾರೀ ನಷ್ಟ ಅನುಭವಿಸುವಂತಾಗಿದೆ. ಈ ಅಹವಾಲನ್ನು ಆಲಿಸಿದ ಸರ್ಕಾರವು ರೈತರ ನೆರವಿಗೆ ಧಾವಿಸಿದ್ದು, ಯಾವುದೇ ಮದ್ಯವರ್ತಿಗಳಿಗೆ ಅವಕಾಶವಿಲ್ಲದಂತೆ ಮೆಕ್ಕೆಜೋಳ ಬೆಳೆಗಾರರು ಅದರಲ್ಲೂ ಸಣ್ಣ ಮತ್ತು ಅತಿ ಸಣ್ಣ ಹಿಡುವಳಿದಾರರು ಗರಿಷ್ಟ 50 ಕ್ವಿಂಟಾಲ್‌ವರೆಗಿನ ತಮ್ಮ ಕೃಷಿ ಉತ್ಪನ್ನವನ್ನು ಪಶು ಆಹಾರ ಉತ್ಪನ್ನ ಘಟಕ ಕೇಂದ್ರಗಳಲ್ಲಿ ಮಾರಾಟ ಮಾಡಬಹುದಾಗಿದೆ ಎಂದರು.
ರಾಜ್ಯದ ಬಾಗಲಕೋಟೆ, ಬಳ್ಳಾರಿ, ಬೆಳಗಾವಿ, ಚಿತ್ರದುರ್ಗ, ಧಾರವಾಡ, ಗದಗ, ಹಾಸನ, ಹಾವೇರಿ ಮತ್ತು ಶಿವಮೊಗ್ಗದ ಕೇಂದ್ರಗಳಲ್ಲಿ ಸುಮಾರು 22,000 ಮೆಟ್ರಿಕ್ ಟನ್‌ನಷ್ಟು ಮೆಕ್ಕೆಜೋಳ ಖರೀದಿಸುವ ಉದ್ದೇಶ ಹೊಂದಲಾಗಿದೆ. ರೈತರು ಹಿಂಗಾರು, ಮುಂಗಾರು ಮತ್ತು ಬೇಸಿಗೆ ಹಂಗಾಮು ಸೇರಿ ರಾಜ್ಯದ 13.14 ಲಕ್ಷ ಹೆಕ್ಟೇರ್ ಭೂ ಪ್ರದೇಶದಲ್ಲಿ 43.97000 ಮೆಟ್ರಿಕ್ ಟನ್‌ನಷ್ಟು ಮೆಕ್ಕೆಜೋಳ ಬೆಳೆದಿದ್ದಾರೆ ಎಂದ ಅವರು ಜಿಲ್ಲೆಯಲ್ಲಿ ಎಲ್ಲಾ ಹಂಗಾಮುಗಳು ಸೇರಿದಂತೆ 57.105 ಹೆಕ್ಟೇರ್ ಭೂ ಪ್ರದೇಶದಲ್ಲಿ 2.78 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಬೆಳೆದಿದ್ದಾರೆ. ಒಂದು ಅಂದಾಜು ಸಮೀಕ್ಷೆಯಂತೆ 2,75,000 ಕ್ವಿಂಟಾಲ್ ಮೆಕ್ಕೆಜೋಳ ಇನ್ನೂ ಮಾರಾಟವಾಗದ ಇನ್ನೂ ರೈತರಲ್ಲಿಯೇ ಉಳಿದಿದೆ. ಶಿಕಾರಿಪುರ ಸಂಡದ ಪಶು ಆಹಾರ ಉತ್ಪಾದನಾ ಘಟಕದಲ್ಲಿ 1750 ರೂ.ದರದಲ್ಲಿ ಸುಮಾರು 80,000 ಕ್ವಿಂಟಾಲ್ ಮೆಕ್ಕೆಜೋಳ ಖರೀದಿಸಲು ತೀರ್ಮಾನಿಸಲಾಗಿದೆ ಎಂದರು.
ಬೆಳೆಗಾರರು ತಾವು ತಮ್ಮ ಹೊಲದಲ್ಲಿ ಬೆಳೆದ ಕೃಷಿ ಉತ್ಪನ್ನವನ್ನು ಪಹಣಿಯಲ್ಲಿ ಗುರುತಿಸಿಕೊಂಡಿರಬೇಕು. ಒಂದು ವೇಳೆ ನಮೂದಾಗಿರದಿದ್ದರೆ ಬೆಳೆದ ಬೆಳೆಯನ್ನು ಗಮನಿಸಿ ದೃಡೀಕರಣ ಪತ್ರ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದ ಅವರು ರೈತರು ಕೆಎಂಎಫ್‌ನ ಫ್ರೂಟ್ಸ್ ತಂತ್ರಾಂಶದ ಮೂಲಕ ಶಿವಮೊಗ್ಗ ಶಿಮುಲ್(ಮೂರು ಜಿಲ್ಲೆ ಸೇರಿ) ವ್ಯಾಪ್ತಿಯಲ್ಲಿನ 1250ಹಾಲು ಉತ್ಪಾದಕರ ಸೊಸೈಟಿಗಳಿದ್ದು, ಅವುಗಳಲ್ಲಿ ಶಿವಮೊಗ್ಗ ಜಿಲ್ಲೆಯೊಂದರಲ್ಲಿ 650 ಸೊಸೈಟಿಗಳಿವೆ. ಅಲ್ಲಿ ಕೃಷಿಕರು ತಮ್ಮ ಗುರುತು ಸಂಖ್ಯೆಯನ್ನು ನಮೂದಿಸಿ ಬೆಳೆಯನ್ನು ದಾಖಲಿಸಬಹುದಾಗಿದೆ ಎಂದರು.
ಕೊರೋನಾ ಸೋಂಕಿನಿಂದಾಗಿ ಸರ್ಕಾರವು ಲಾಕ್‌ಡೌನ್ ಘೋಷಿಸಿದ ಹಿನ್ನೆಲೆಯಲ್ಲಿ ರಾಜ್ಯ ಹೂವಿನ ಬೆಳೆಗಾರರು ತಮ್ಮ ಉತ್ಪನ್ನವನ್ನು ಮಾರಾಟ ಮಾಡಲು ಸಾಧ್ಯವಾಗದೆ ನಷ್ಟ ಅನುಭವಿಸುತ್ತಿರುವುದು ನೋವಿನ ಸಂಗತಿ ಈ ಸಂದರ್ಭದಲ್ಲಿ ಸರ್ಕಾರವು ಪುಷ್ಪ ಕೃಷಿಕರಿಗೆ ಪ್ರತಿ ಹೆಕ್ಟೇರ್‌ಗೆ 25,000 ರೂ.ಗಳ ಸಹಾಯಧನವನ್ನು ನೀಡಲು ಉದ್ದೇಶಿಸಿರುವುದು ಸ್ವಾಗತಾರ್ಹ. ಜಿಲ್ಲೆಯಲ್ಲಿ 151 ಹೆ. ಪ್ರದೇಶದಲ್ಲಿ ಹೂವು ಬೆಳೆದ 330 ಪುಷ್ಪ ಬೆಳೆಗಾರರು ಈ ಯೋಜನೆಯಡಿ ಸಹಾಯಧನ ಪಡೆಯಲಿದ್ದಾರೆ ಎಂದರು.
ಗೋಷ್ಠಿಯಲ್ಲಿ ಟಿ.ಡಿ. ಮೇಘರಾಜ್, ದತ್ತಾತ್ರಿ ಉಪಸ್ಥಿತರಿದ್ದರು.
Get in Touch With Us info@kalpa.news Whatsapp: 9481252093
Discussion about this post