ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಕೋವಿಡ್19 ಲಾಕ್ ಡೌನ್ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದ ಎಸ್’ಎಸ್’ಎಲ್’ಸಿ ಪರೀಕ್ಷೆ ಜೂನ್ 25ರಿಂದ ನಡೆಯಲಿದೆ.
ಈ ಕುರಿತಂತೆ ಮಾತನಾಡಿರುವ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್, ಜೂನ್ 25ರಿಂದ ಜುಲೈ 4ರವರೆಗೆ ಎಸ್’ಎಸ್’ಎಲ್’ಸಿ ಪರೀಕ್ಷೆಗಳು ನಡೆಯಲಿದ್ದು, ಹಾಗೇ, ಜೂನ್ 18ಕ್ಕೆ ಪಿಯುಸಿಯ ಇಂಗ್ಲಿಷ್ ಪರೀಕ್ಷೆ ನಡೆಯಲಿದೆ ಎಂದರು.
ಎಸ್’ಎಸ್’ಎಲ್’ಸಿಯ ಇಂಗ್ಲಿಷ್, ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ಪರೀಕ್ಷೆಗಳಿಗೆ ಒಂದೊಂದು ದಿನದ ಅಂತರವಿರಲಿದೆ. ಒಟ್ಟಾರೆ ಎಲ್ಲಾ ಪರೀಕ್ಷೆಗಳು 10 ದಿನದಲ್ಲಿ ಮುಗಿಯಲಿದೆ ಎಂದರು.
ಪರೀಕ್ಷೆಗೆ ಬದಲಾದ ಪರಿಸ್ಥಿತಿಯಲ್ಲಿ ಹೆಚ್ಚುವರಿ ಕೊಠಡಿ ಬಳಸುತ್ತೇವೆ. 2879 ಪರೀಕ್ಷಾ ಕೇಂದ್ರಗಳಲ್ಲಿ 43720 ಕೊಠಡಿ ಬಳಸುತ್ತಿದ್ದೇವೆ. ಆರೋಗ್ಯ ಇಲಾಖೆಯ ಅಧಿಕಾರಿಗಳ ಸಲಹೆ ಪಡೆದು ಪ್ರತಿ ಸಭಾಂಗಣದಲ್ಲಿ ವಿದ್ಯಾರ್ಥಿಗಳ ನಡುವೆ ಅಂತರ ಕಾಯ್ದುಕೊಳ್ಳುವ ವ್ಯವಸ್ಥೆ ಮಾಡುತ್ತೇವೆ. ಪರೀಕ್ಷೆ ನಡೆಯುವ ಶಾಲೆಗಳ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಲಾಗುವುದು ಮತ್ತು ಎಲ್ಲಾ ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಪ್ರತಿ ವಿದ್ಯಾರ್ಥಿಗೆ ಮಾಸ್ಕ್ ಕಡ್ಡಾಯ. ಸ್ಕೌಟ್ಸ್ ಮತ್ತು ಗೈಡ್ಸ್ ಸಿಬ್ಬಂದಿ ವತಿಯಿಂದ ಮಾಸ್ಕ್ ವಿತರಣೆಗೆ ವ್ಯವಸ್ಥೆ ಮಾಡಲಾಗುವುದು ಎಂದು ಸೂಚಿಸಿದ್ದಾರೆ.
ರಾಜ್ಯದಲ್ಲಿ ಎಂಟು ಲಕ್ಷದ ನಲವತ್ತೆಂಟು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ. ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಚಂದನ ವಾಹಿನಿ ಮೂಲಕ ಪುನರ್ ಮನನ ಕಾರ್ಯಕ್ರಮ ಮಾಡಲಾಗಿದೆ. ಇದು ಈ ತಿಂಗಳ ಅಂತ್ಯದವರೆಗೆ ಮುಂದುವರೆಯಲಿದೆ ಎಂದರು.
(ವರದಿ: ಡಿ.ಎಲ್. ಹರೀಶ್, ಬೆಂಗಳೂರು)
Get in Touch With Us info@kalpa.news Whatsapp: 9481252093
Discussion about this post