ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಮರಗಳಲ್ಲಿ ದೈವತ್ವವನ್ನು ಕಾಣುವ, ಅವನ್ನು ಪವಿತ್ರ ವೃಕ್ಷಗಳನ್ನಾಗಿ ಕಾಣುವ ಸಂಪ್ರದಾಯ ಇನ್ನೂ ಇದೆ. ದೇವರ ಕಾಡುಗಳೂ ಇವೆ. ಮರಗಳ ಜೈವಿಕ ವೈವಿಧ್ಯ ಕಾಪಾಡುವಲ್ಲಿ ಇವು ಮಹತ್ವದ ಪಾತ್ರ ವಹಿಸಿವೆ. ಮೇಲಿನ ವಿಷಯಗಳನ್ನೆಲ್ಲಾ ಗಮನಿಸಿದರೆ ನಮ್ಮ ಸಂಸ್ಕೃತಿ, ಸಸ್ಯ ಸಂಸ್ಕೃತಿಯಾಗಿದೆ. ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ಅಂಡಗಿ ಬಳಿಯ ಕ್ಯಾದಗಿ ಕೊಪ್ಪದಲ್ಲಿ ಪ್ರತಿ ಅಮಾವಾಸ್ಯೆ ಜಾತ್ರೆಯಾಗುತ್ತದೆ. ಭಕ್ತರು ಕಾಡಿನ ಮರಗಳಿಗೆ ಸೀರೆ, ರವಿಕೆ, ಬಳೆಗಳನ್ನು ಇಲ್ಲಿರುವ ನಾಮಾಧಾರಿ ಮಠದವರ ಮೂಲಕ ತೊಡಿಸುತ್ತಾರೆ. ವೃಕ್ಷಗಳನ್ನು ಪೂಜಿಸುತ್ತಾರೆ. ಇಲ್ಲಿ ಎಲ್ಲಾ ಮರಗಳೂ ಬಟ್ಟೆ ಧರಿಸಿ ನವಸ್ತ್ರೀಯರಂತೆ ಕಾಣುತ್ತವೆ (ಸಂಧ್ಯಾ ಹೆಗಡೆ, ಪ್ರಜಾವಾಣಿ 24-4-12). ನಮ್ಮ ಹತ್ತಿರವಿರುವ ಮರಗಳೊಡನೆ ನಮಗೇ ತಿಳಿಯದಂತೆ ನಂಟು ಬೆಳೆದಿರುತ್ತದೆ. ತೋರುದತ್ (Torudutt) Our casuarinas tree ಎಂಬ ಕವನವನ್ನು ಸರ್ವೆ ಮರದ ಮೇಲೆ ಬರೆದಿದ್ದಾರೆ. ಸದೆ (Southey) ಯವರು ಆಲದ ಮರದ ಮೇಲೆ ಕವಿತೆ ಬರೆದಿದ್ದಾರೆ. ಅರಳಿಕಟ್ಟೆ, ಬೇವಿನ ಕಟ್ಟೆಗಳಿಲ್ಲದಿರುವ ಹಳ್ಳಿಯನ್ನು ಹುಡುಕುವುದೇ ನಮಗೆ ಕಷ್ಟವಾಗುತ್ತದೆ. ದೇವಾಲಯಗಳ ಹತ್ತಿರ ಬಿಲ್ವಪತ್ರೆ ಮರ, ಪಾರಿಜಾತ ಇಲ್ಲವೇ ಬನ್ನಿ ಮರಗಳಿರುತ್ತವೆ.
ವೇದಗಳಲ್ಲಿ ಅನೇಕ ಲೌಕಿಕ ಜಾನಪದ ವಿಷಯಗಳಿರುವುದು ವಿದ್ವಾಂಸರ ಗಮನ ಸೆಳೆದಿಲ್ಲ. ಇವುಗಳ ಪೈಕಿ ಜುಜೂ ಒಂದು. ಪ್ರಾಚೀನ ಜೂಜಾಟ ಪಗಡೆ (ಅಕ್ಷ) ತಯಾರಿಸುತ್ತಿದ್ದುದು ವಿಭೀತಕ (ತಾರೆಮರ)ದ ಮರದಿಂದ, ಜೂಜಗಾರನ ಜೀವನಚಿತ್ರಕ್ಕೆ ಒಂದು ಸುಂದರ ಕಾವ್ಯದ ಸೂಕ್ತ ‘ಅಕ್ಷ ಸೂಕ್ತ ಋಗ್ವೇದದಲ್ಲಿದೆ.
ಇಲ್ಲಿ ಯಾವ ದೇವರ ಸ್ತ್ರೋತ್ರವೂ ಇಲ್ಲ. ಜೂಜುಗಾರನ ದೈನಂದಿನ ಜೀವನದ ಹಾಗೂ ಅವನ ಪಶ್ಚಾತ್ತಾಪದ ನೈಜ ಚಿತ್ರಣವಿದೆ. ಜೂಜಾಡಬೇಡ ಜೀವನ ಹಾಳು ಮಾಡಿಕೊಳ್ಳಬೇಡ. ಕೃಷಿ ಮಾಡು ಎಂಬ ಸಂದೇಶವಿದೆ.
ವೇದಗಳಲ್ಲಿ ಶಾಶ್ವತ ಮೌಲ್ಯಗಳು ಮತ್ತು ವಿಜ್ಞಾನ ವಿಷಯಗಳಿಗೆ ಸಂಬಂಧಪಟ್ಟಂತೆ ಮಾತ್ರವಲ್ಲ. ಅನೇಕ ವೃತ್ತಿಗಳು (ಉದಾ: ಲೋಹಕಾರರು, ಬಡಗಿ, ಕೃಷಿಕಾರ, ಚರ್ಮ ಹದಮಾಡುವವ, ನೇಯಿಗೆಯವ, ಕಾಳು ಬೀಸುವುದು, ರಥಕಾರ, ನಾವಿಕ, ನಟ, ಜೂಜುಗಾರ, ಸೌದೆ ತರುವವ, ಕ್ಷೌರಿಕ, ಪುರೋಹಿತ, ಸೈನಿಕ) ಪ್ರಸ್ತಾವಗೊಂಡಿವೆ. ಇಲ್ಲಿ ಯಾವುದೂ ನಿಕೃಷ್ಟವಲ್ಲ. ಆಯುರ್ವೇದ ಅಥರ್ವವೇದದ ಉಪವೇದವಾದ್ದರಿಂದ ಮರಗಳ ಅನೇಕ ಔಷಧೋಪಯೋಗಗಳು ಮತ್ತು ಜಾನಪದ ಪದ್ಧತಿಗಳು ಆ ಕಾಲದ ಜನರಿಗೆ ಗೊತ್ತಿತ್ತು.
ವೇದಗಳು, ಉಪನಿಷತ್ತುಗಳು, ಪುರಾಣಗಳು ಹಾಗೂ ಮಹಾಕಾವ್ಯಗಳಲ್ಲೆಲ್ಲಾ ತರುಲತೆಗಳು ಹಾಗೂ ವನಸ್ಪತಿಗಳ ಬಗ್ಗೆ ಪ್ರಸ್ತಾಪಗಳಿವೆ. ಋಗ್ವೇದದಲ್ಲಿ ಮರಗಳಿಗೆ ಉಪಯೋಗಿಸಿರುವ ಪದ ‘ವೃಕ್ಷ, ಸಸ್ಯಗಳಿಗೆ ಉಪಯೋಗಿಸಿರುವ ಸಾಮಾನ್ಯ ಹೆಸರು ‘ವಿರುಧ. ಕಾಯಿಲೆ ಗುಣಪಡಿಸುವ ಶಕ್ತಿಯುಳ್ಳ ಸಸ್ಯಗಳನ್ಹು ‘ಔಷಧಿ ಎಂದು ಕರೆಯಲಾಗಿದೆ.
ಋಗ್ವೇದದ ಕಾಲದಲ್ಲಿ ಮರದ ನೇಗಿಲುಗಳನ್ನು, ರಥಗಳನ್ನು ಉಪಯೋಗಿಸುತ್ತಿದ್ದರು. ಯಜ್ಞಯಾಗಾದಿಗಳಿಗೆ ಬೇಕಾದ ಪಾತ್ರೆಗಳನ್ನು (ಸೃಕ್, ಸ್ರುವ, ದರ್ವಿ, ಆಕರ್ಷಫಲಕ, ಪ್ರಣೀತಾ, ಪೋಕ್ಷಿಣೀ, ಶಮ್ಯಾ, ಉಲೂಖಲ, ಮುಸಲ, ಶೂರ್ಪ, ಧೃಷ್ಟಿ, ಪಾತ್ರೀ, ಶಡವಟ್ಟಪಾತ್ರಂ, ಪ್ರಾಶಿತ್ರ ಅಭ್ರಿ, ವಿಘನ ಅಧಿಶವಣ ಫಲಕ, ದ್ರೋಣ ಕಲಶ, ಪರಿಪ್ಲೂ, ಗ್ರಹಾಸ್, ಚಮಸಗಳು, ಯೂಪ, ವಸೋರ್ಧಾರ, ಉಪಯಮನೀ, ಶಫೌ, ಧಾವಿತ್ರಾನಿ ಮುಂತಾದವು) ಮರಗಳಿಂದಲೇ ಮಾಡುತ್ತಿದ್ದರು.
ಋಗ್ವೇದ ಕಾಲದಲ್ಲಿ ಮರಗಳ ಬುಡಕ್ಕೆ ‘ಸ್ಕಂಧ ಎಂದೂ, ಬೇರುಗಳಿಗೆ ‘ಮೂಲ ಎಂದೂ, ಕಾಂಡಕ್ಕೆ ‘ಕಾಂಡವೆಂದೂ ಟೊಂಗೆಗೆ (twig)- ‘ವಲ್ಸಾ ಎಂದೂ ಕವಲುಗಳಿಗೆ ‘ಶಾಖ ಎಂದೂ ಎಲೆಗಳಿಗೆ ‘ಪರ್ಣಗಳೆಂದೂ, ಹೂಗಳಿಗೆ ‘ಪುಷ್ಪಗಳೆಂದೂ, ಹಣ್ಣುಗಳಿಗೆ ‘ಫಲಗಳೆಂದೂ ಕರೆಯಲಾಗಿದೆ.
ಸಸ್ಯಗಳನ್ನು, ವೃಕ್ಷಗಳು (ಮರಗಳು), ಔಷಧಿ (ಗಿಡಗಳು) ಲತೆಗಳು (ಮೀರತ್) ಹೂಬಿಡುವ (ಪುಷ್ಪವತಿ), ಫಲಬಿಡುವ (ಫಲವತಿ) ಹಾಗೂ ಫಲಬಿಡದ ಸಸ್ಯಗಳನ್ನಾಗಿ ವರ್ಗೀಕರಿಸುತ್ತಿದ್ದರು.
ಮರಗಳ ಪ್ರಾಮುಖ್ಯದ ಬಗ್ಗೆ ವೇದಗಳಲ್ಲಿ ಸವಿಸ್ತಾರವಾದ ವರ್ಣನೆಗಳಿವೆ. ಮರಗಿಡಗಳು ಮತ್ತು ಕಾಡುಗಳು ಮಾನವನಿಗೆ ದೇವರ ವರಪ್ರಸಾದ, ಇವುಗಳಲ್ಲದೆ ಮಾನವನ ಉಳಿವು ಕಷ್ಟ (ಋ.9.12.7; ಅ.ವೇ.20.76.1) ಅಥರ್ವವೇದದ ಪ್ರಕಾರ ದೈವಿಶಕ್ತಿ ಮರಗಿಡಗಳಲ್ಲಿದೆ. ಮರಗಳು ಮಾನವನಿಗೆ ರಕ್ಷಣೆ ಮತ್ತು ಜೀವಶಕ್ತಿಯನ್ನೇ ಕೊಡುತ್ತವೆ. ಮಾಲಿನ್ಯವನ್ನು ಕಡಿಮೆ ಮಾಡುತ್ತವೆ. (ಋ.10.17.4; 10.97.3; ಯ.ವೇ. 12.78; 12.773, 29.35).
ಋಗ್ವೇದದಲ್ಲಿ ಮಾನವನ ಉಳಿವಿಗೆ ಮರಗಳು ಅಗತ್ಯ ನಮ್ಮಿಂದ ದೂರವಾಗಬಾರದೆಂದು ಅವುಗಳನ್ನು ಕುರಿತು ಪ್ರಾರ್ಥಿಸಲಾಗಿದೆ. (ಋ. 3.53.20; 5. 41.11; 6.21.9). ನಮ್ಮ ಗೃಹಾಭ್ಯುದಯಕ್ಕೆ ಅವುಗಳ ಅಗತ್ಯವಿದೆ. ಅವುಗಳ ನಾಶ ಮಾನವನ ಅಳಿವಿಗೆ ಕಾರಣ. ವಾಸ್ತೋಶ್ಪತಿ ಮನೆಕಟ್ಟುವ ಜಾಗದ ಅಧಿಪತಿ.
ಯಜುರ್ವೇದದ ಪ್ರಕಾರ (ಯ.ವೇ.28.20) ಮರಗಳು ಮಧುರ ಫಲಗಳನ್ನು ಕೊಡುತ್ತವೆ. ಮಳೆ ಮೋಡಗಳನ್ನು ಆಕರ್ಷಿಸಿ ಮಳೆ ಬೀಳಲು ಕಾರಣವಾಗುತ್ತವೆ.
ಯಜುರ್ವೇದ ತರುಲತೆಗಳನ್ನು ಕಡಿಯುವುದನ್ನು ನಿಷೇಧಿಸುತ್ತದೆ (ಯ.ವೇ. 1.25). ಈ ಬಗ್ಗೆ ಋಗ್ವೇದದಲ್ಲಿ (ಋ. 6.48.17) ಪ್ರಸ್ತಾಪವಿದೆ. ‘ಅವು ಮಾಲಿನ್ಯ ಪರಿಹಾರಕಗಳಾದ್ದರಿಂದ ಅವನ್ನು ಕಡಿದುರುಳಿಸಬಾರದು.
ಮರಗಳ ಜೊತೆಗಿನ ಸಾಮರಸ್ಯ ಪೂರ್ಣ ಜೀವನವನ್ನು ಋಗ್ವೇದ ಪ್ರತಿಪಾದಿಸುತ್ತದೆ. ‘‘ಮರಗಳು ಬೆಳೆಯಲಿ, ಹೂ, ಹಣ್ಣುಗಳನ್ನು ಬಿಡಲಿ. ಇದರಿಂದಾಗಿ ನಾವು ಬದುಕುಳಿಯಬಹುದು (ಋ. 3.8.11). ನಾವು ಅರಣ್ಯಗಳನ್ನು ನಿರ್ಲಕ್ಷಿಸಬಾರದು (ಋ. 5.8.11). ‘ಮರಗಳು ನಮ್ಮ ಸ್ನೇಹಿತರಿದ್ದಂತೆ. ಅವನ್ನು ಸರಿಯಾಗಿ ಬೆಳೆಸಿ ರಕ್ಷಿಸೋಣ (ಋ. 6.47.26). ಮೇಲಿನ ವಾಕ್ಯಗಳಿಂದ ನಮಗೆ ಗೊತ್ತಾಗುವುದೆಂದರೆ ಋಗ್ವೇದದ ಕಾಲದಲ್ಲೇ ಪರಿಸರದ ಬಗ್ಗೆ ಉತ್ತಮ ತಿಳುವಳಿಕೆ ಇದ್ದಿತು. ಆ ಕಾಲದಲ್ಲಿ ಭೂರಮೆ, ಸಸ್ಯಶ್ಯಾಮಲೆಯಾಗಿದ್ದರೂ, ದಟ್ಟವಾದ ಅಡವಿಗಳಿದ್ದರೂ, ಅಪಾರ ವೃಕ್ಷ ಸಂಪತ್ತಿದ್ದರೂ, ಕಾಡು ಹಾಗೂ ವನಸ್ಪತಿಗಳ ಬಗ್ಗೆ ಅವರಿಗಿರುವ ಪವಿತ್ರ ಭಾವನೆ ಅವುಗಳಿಗೆ ಅವರು ಕೊಡುತ್ತಿದ್ದ ಪ್ರಾಮುಖ್ಯ, ಅವುಗಳ ರಕ್ಷಣೆಯ ಬಗ್ಗೆ ಅವರಿಗಿದ್ದ ಆಸಕ್ತಿ ಇವು ಪ್ರಶಂಸನೀಯವಾದವುಗಳು.
ಆದ್ದರಿಂದ ವೇದಗಳ ಸಂಸ್ಕೃತಿ ದ್ವಿಮುಖವಾದದ್ದು ಒಂದು ಸಾಮಾಜಿಕವಾಗಿದ್ದು ಅಂದಿನ ಜಾನಪದ ಜನಜೀವನವನ್ನು ಪ್ರತಿಫಲಿಸಿದರೆ ಹಾಗೂ ಅವರಿಗಿರುವ ಸುತ್ತಮುತ್ತಲಿನ ಪರಿಸರ, ಗಿಡಮರಗಳು ಪ್ರಾಣಿಗಳನ್ನು ತಿಳಿಸಿದರೆ ಮತ್ತೊಂದು ವೈಜ್ಞಾನಿಕ. ಅಂದು ಅವರಿಗೆ ತಿಳಿದಿದ್ದ ವೈಜ್ಞಾನಿಕ ಅಂಶಗಳನ್ನು ಅವರು ಬರೆದಿಟ್ಟಿದ್ದಾರೆ. ಆ ಪೈಕಿ ಆಯುರ್ವೇದವೂ ಒಂದು. ವೇದವೃಕ್ಷಗಳಲ್ಲಿ ಇಂತಹ ಸಾಮಾಜಿಕ ಹಾಗೂ ವೈಜ್ಞಾನಿಕ ಅಂಶಗಳೆರಡನ್ನೂ ಪರಿಗಣಿಸಲಾಗಿದೆ.
ಋಗ್ವೇದ ಕಾಲದ ಋಷಿಮುನಿಗಳಿಗೆ ಅಂದಿನ ಸಸ್ಯವರ್ಗದ ಬಗ್ಗೆ ಹಾಗೂ ತಮ್ಮ ಪರಿಸರದ ಬಗ್ಗೆ ಸ್ಪಷ್ಟವಾದ ತಿಳುವಳಿಕೆ ಇತ್ತು. ಅಶ್ವತ್ಥ, ಔದುಂಬರ, ಮುತ್ತುಗ, ಶಮಿ ಮುಂತಾದ ವೃಕ್ಞಗಳನ್ನು ದೈವೀಭಾವನೆಯಿಂದ ಪೂಜಿಸುವ ಸಂಪ್ರದಾಯ ಬಹುಶಃ ಋಗ್ವೇದದ ಕಾಲದಿಂದಲೇ ಬಂದಿರಬಹುದು ಅಥವಾ ಇದು ಇನ್ನೂ ಪ್ರಾಚೀನ ಸಂಪ್ರದಾಯವಾಗಿರಬಹುದು.
ದೇವ ವೈದ್ಯರುಗಳಾದ ಅಶ್ವಿನಿದೇವತೆಗಳ ಬಗ್ಗೆ ವಿವರಗಳು ದೊರಕಲು ಪ್ರಾರಂಭವಾಗುವುದೇ ಋಗ್ವೇದದಿಂದ. ಮುದಿತನ ಹಾಗೂ ಜೀರ್ಣ ಶರೀರಗಳಿದ್ದ ಚ್ಯವನನಿಗೆ ಮುಪ್ಪನ್ನು ಜಯಿಸುವಂತೆ ಮಾಡಿ ದೀರ್ಘಾಯುವಾಗುವಂತೆ ಮಾಡಿದ ಹಿರಿಮೆ ಅಶ್ವಿನಿದೇವತೆಗಳಿದ್ದು. ಮುಂದೆ ಆಯುರ್ವೇದ ಸ್ವತಂತ್ರವಾಗಿ ಬೆಳೆಯುವುದಕ್ಕೆ ಇದು ನಾಂದಿಯಾಗಿರಬಹುದೆಂದು ಕೆಲವರ ಅಭಿಪ್ರಾಯ. ಅಥರ್ವಣ ವೇದಕ್ಕೆ ಆಯುರ್ವೇದ ಉಪದೇಶವಾಗಿದೆ.
‘‘ಯುವಂ ಚ್ಯವನಂ ಜರಸ್ತೋಮು ಮುಕ್ತಂ (ಋ. 6.17.5) ಚ್ಯವನನ ಜೀರ್ಣದೇಹಕ್ಕೆ ಯೌವನವನ್ನು ತರಿಸಿಕೊಟ್ಟದ್ದು ಆಯುರ್ವೇದದ ಒಂದು ಚಮತ್ಕಾರ. ಇಂದಿಗೂ ಕೂಡ ಕೇರಳದ ಆಯುರ್ವೇದ ಔಷಧಾಲಯಗಳು ಕಾಯಕಲ್ಪ ಚಿಕಿತ್ಸೆಗಳನ್ನು ನೀಡುತ್ತಿವೆ.
ಇಷ್ಟು ಮಾತ್ರವಲ್ಲ ವಂದನನಿಗೆ ದೃಷ್ಟಿಯನ್ನು ಕಣ್ಣಿನ ಚಿಕಿತ್ಸೆಯನ್ನು ಅಶ್ವಿನಿಗಳು ನೀಡಿದ್ದಾರೆ:
‘‘ಉದ್ ವಂದನಂ ಐರಯತಂ ಸ್ವದೃಶೇ (ಋ. 1.112.5)
ದೇವತೆಗಳಾದ ಇಂದ್ರ, ರುದ್ರ ಹಾಗೂ ವರುಣರಿಗೂ ರೋಗ ನಿವಾರಣಾಶಕ್ತಿ ಇತ್ತು. ರುದ್ರನಲ್ಲಿ ಸಾವಿರಾರು ಔಷಧ ಸಸ್ಯಗಳಿವೆ:
‘‘ಸಹಸ್ರಂ ತೇ ಸ್ವಪಿವಾತ ಭೇಷಜಾ (ಋ. 7.46.3.) ಇಲ್ಲಿ ಯಜ್ಞಗಳು, ಹೋಮಗಳಿಗೆ ಉಪಯೋಗಿಸಲಾಗುವ ಅನೇಕ ಗಿಡಮರಗಳ ಸಮಿತ್ತುಗಳು ಹಾಗೂ ಘೃತ (ತುಪ್ಪ), ತಿಲ (ಎಳ್ಳು), ದರ್ಭೇ- ಇತ್ಯಾದಿಗಳಲ್ಲೂ ರೋಗನಾಶಕ ಶಕ್ತಿ ಇರುವುದೆಂದು ನಂಬಲಾಗಿದೆ.
ಪ್ರಕೃತಿಯ ಅವಿಭಾಜ್ಯ ಅಂಗಗಳಾದ ಉಷೆ, ನದಿ, ಪರ್ವತಗಳಂತೆಯೇ ಋಗ್ವೇದದ ಚಿಂತನೆಯ ಪರಿಧಿಯಲ್ಲಿ ಮರಗಳೂ ದೈವಿಕತೆ ಪಡೆದಿವೆ.
ದೇವರ ಸರ್ವ ವ್ಯಾಪಕತೆ ಹಾಗೂ ಸರ್ವಾಂತರ್ಯಾಮಕ ಶಕ್ತಿಯನ್ನು ಋಗ್ವೇದ ಸಾಕ್ಷಾತ್ಕರಿಸಿಕೊಂಡಿದೆ. ಪ್ರಕೃತಿ, ವೃಕ್ಷಗಳು ಹಾಗೂ ಪಕ್ಷಿಗಳಲ್ಲೂ ಜೀವ ಹಾಗೂ ದೈವಿಕತೆಯನ್ನು ಕಾಣಲಾಗಿದೆ.
ಖದಿರ, ಪಲಾಶ, ಶಮಿ, ಶಾಲ್ಮಲಿ, ಔದುಂಬರ, ಶಿಂಶುಪಾ ಮೊದಲಾದ ಅನೇಕ ವೃಕ್ಷಗಳ ಪ್ರಸ್ತಾಪ ಋಗ್ವೇದದಲ್ಲಿದ್ದರೂ ಅಶ್ವತ ಅಥವಾ ಅರಳೀಮರ ಹೆಚ್ಚಿನ ಪ್ರಾಮುಖ್ಯ ಪಡೆದಿದೆ. ಈ ಮರದಿಂದಲೇ ಸೋಮರಸದ ಪಾತ್ರೆಗಳನ್ನ ತಯಾರಿಸುತ್ತಿದ್ದರು. ಇದರ ಒಣಮರದ ತುಂಡನ್ನು (ಅರಣಿಗಳು) ಕಡೆಯುವುದರ ಮೂಲಕ ಪವಿತ್ರಾಗ್ನಿಯನ್ನು ಉತ್ಪತ್ತಿ ಮಾಡುತ್ತಿದ್ದರು. ಇಂದಿಗೂ ಕೂಡ ಅರಳೀಮರದ ಸಮಿತ್ತುಗಳನ್ನು ಯಜ್ಞಯಾಗಾದಿಗಳಲ್ಲಿ, ಹೋಮಗಳಲ್ಲಿ ಉಪಯೋಗಿಸುವುದನ್ನು ನಾವು ಕಾಣಬಹುದು. ಕಬ್ಬು, ಬಾರ್ಲಿ, ದರ್ಬೆ, ಎಳ್ಳು, ಅರಣ್ಯಗಳಿಂದ ಬಗೆಬಗೆಯ ಹಣ್ಣುಗಳು, ಸುಂದರವಾದ ಹೂಬಿಡುವ ಬಳ್ಳಿಗಳು ಇವುಗಳ ಬಗ್ಗೆ ಋಗ್ವೇದದಲ್ಲಿ ಪ್ರಸ್ತಾಪಿಸಲಾಗಿದೆ. ಈ ವೇದದ ‘ಅರಣ್ಯಾನಿ ಮಂಡಲದಲ್ಲಿ ಅರಣ್ಯಗಳ ಸುಂದರ ವರ್ಣನೆ ಇದೆ.
ನಾಳೆ: ಪ್ರಕೃತಿ ಪೂಜೆಯ ಧರ್ಮಕ್ಕೂ ಋಗ್ವೇದೀಯ ಸಮಾಜವೇ ಕಾರಣ
Get In Touch With Us info@kalpa.news Whatsapp: 9481252093
Discussion about this post