ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶ್ರೀಮಧ್ವಾಚಾರ್ಯರಿಂದ ಪ್ರತಿಪಾದಿಸಲ್ಪಟ್ಟ ದ್ವೈತ ಸಿದ್ಧಾಂತ ಮತ್ತು ಉತ್ತರಾದಿ ಮಠದ ಯತಿ ಪರಂಪರೆಯಲ್ಲಿ ವಿಶಿಷ್ಠ ಸ್ಥಾನ ಹೊಂದಿದವರು ಶ್ರೀ ಜಯತೀರ್ಥರು. ಮಧ್ವಾಚಾರ್ಯರ ವಿಚಾರಧಾರೆಗಳನ್ನು ಎಳೆಎಳೆಯಾಗಿ ಬಿಡಿಸಿ ಜನಸಾಮಾನ್ಯರಿಗೂ ಅರ್ಥೈಸಿದವರು ಅವರು.
ಭಾರತೀಯ ದಾರ್ಶನಿಕ ಜಗತ್ತಿನ ಆಗಸದಲ್ಲಿ ಮಿನುಗುವ ತಾರೆಗಳು ಹಲವಾರು, ಕಪಿಲ, ಗೌತಮ, ಕಾಣಾದ, ಶಂಕರ, ರಾಮಾನುಜ, ಕುಮಾರಿಲಭಟ್ಟ, ಪ್ರಭಾಕರ, ಉದಯನಾಚಾರ್ಯ-ಮೊದಲಾದವರು ವಿಭಿನ್ನ ದಾರ್ಶನಿಕ ಸಂಪ್ರದಾಯಗಳ ಪ್ರವರ್ತಕಾಚಾರ್ಯರೆನಿಸಿದರೆ, ಪ್ರಶಸ್ತಪಾದ, ವಾತ್ಸಾಯನ, ವಾಚಸ್ಪತಿಮಿತ್ರ, ಚಿತ್ಸುಖಾಚಾರ್ಯ, ಸುದರ್ಶನಸೂರಿ-ಮೊದಲಾದವರು ವಿಭಿನ್ನ ದರ್ಶನ ಪದ್ಧತಿಗಳ ವ್ಯಾಖ್ಯಾಕಾರರೆನಿಸಿ ಆಯಾಯ ದರ್ಶನಗಳ ಅಪೂರ್ವತೆಯನ್ನು ನೆಲೆಯೂರುವಂತೆ ಮಾಡಿದವರು.
ಇಂತಹ ದಾರ್ಶನಿಕ ಸಂಪ್ರದಾಯ ಪ್ರವರ್ತಕಾಚಾರ್ಯರಲ್ಲಿ ಶ್ರೀಮಧ್ವರು ಪ್ರಮುಖರಾಗಿ ಬೆಳಗುವ ಸೂರ್ಯನಂತಿದ್ದಾರೆ. ಅಂತೆಯೇ ದಾರ್ಶನಿಕ ವ್ಯಾಖ್ಯಾಕಾರರ ಮಧ್ಯೆ ಪ್ರಜ್ವಲಿಸುವ ತಾರೆ ಶ್ರೀಜಯತೀರ್ಥರು. ಶ್ರೀಮಧ್ವದರ್ಶನದ ಸೂಕ್ಷ್ಮಾತಿಸೂಕ್ಷ್ಮ ಪ್ರಮೇಯಗಳನ್ನು ಎಳೆ ಎಳೆಯಾಗಿ ಬಿಡಿಸಿ, ಪ್ರತಿವಾದಿಗಳು ಅವುಗಳ (ಅನುಭವ-ತರ್ಕ-ಶ್ರುತಿಗಳ ಸುಭದ್ರ ನೆಲೆಗಟ್ಟಿನಲ್ಲಿ) ಸಮಂಜಸತೆಯನ್ನು ಸ್ವತಃ ಒಪ್ಪುವಂತೆ ಮಾಡುವ ಅದ್ಭುತ ಕೌಶಲ ಶ್ರೀಜಯತೀರ್ಥರದು. ಅನುಭವ-ತರ್ಕ, ಶ್ರುತಿ ಸುಭದ್ರನೆಲೆಗಟ್ಟಾದ ಶ್ರೀಮಧ್ವದರ್ಶನವನ್ನು ಎಂದೆಂದೂ ಅಲ್ಲಾಡದಂತೆ ನಿಲ್ಲಿಸಿದ ವಿಶಿಷ್ಟ ಕೀರ್ತಿ ಅವರಿಗೆ ಸೇರಿದ್ದು.
ಅತಿಸರಳವೆಂದು ತೋರುವ ಶ್ರೀಮಧ್ವರ ವಾಕ್ಯಗಳಿಗೆ ಅರ್ಥಗಾಂಭೀರ್ಯವನ್ನೂ, ವಿವಿಧ ರೀತಿಯ ವಿಶಿಷ್ಟ ವ್ಯಾಖ್ಯಾನವನ್ನೂ ನೀಡಿ ಅವುಗಳ ಮಹತ್ವವನ್ನು ಎತ್ತಿತೋರಿದ ಶ್ರೀಜಯತೀರ್ಥರ ವ್ಯಾಖ್ಯಾನಕುಶಲತೆಯು ಅನುಪಮ, ಅದ್ಭುತ, ಆದ್ದರಿಂದಲೇ ಅವರಿಗೆ ಟೀಕಾಕೃತ್ಪಾದರೆಂಬ ಹೆಸರು ಅನ್ವರ್ಥ. ಶ್ರೀಜಯತೀರ್ಥರ ವ್ಯಾಖ್ಯೆಗಳಿಗೆ ಟಿಪ್ಪಣಿಗಳನ್ನು ರಚಿಸಿದ ಶ್ರೀವ್ಯಾಸರಾಜರು, ಶ್ರೀರಾಘವೇಂದ್ರಸ್ವಾಮಿಗಳೇ ಮೊದಲಾದವರು ಶ್ರೀಜಯತೀರ್ಥರನ್ನು ಸರ್ವಜ್ಞಕಲ್ಪರೆಂದು ಕರೆದರು. ಶ್ರೀಮಧ್ವರು ಸರ್ವಜ್ಞರು. ಅವರ ಜ್ಞಾನ ಮೇರು ಸದೃಶ. ಅದನ್ನು ಹೋಲುವ ಮತ್ತು ಅದರ ಸನಿಹಕ್ಕೆ ಬರುವ ಅಪಾರಜ್ಞಾನವನ್ನು ಪಡೆದವರು ಸರ್ವಜ್ಞಕಲ್ಪರು.ನದಿಯ ಪ್ರವಾಹವನ್ನು ಮೀರಿದ ಚೈತನ್ಯಪೂರ್ಣ ವಾಗ್ಗಂಗೆ ಶ್ರೀಜಯತೀರ್ಥರ ಮಾತುಗಳು. ನದಿಗೆ ಅಡೆತಡೆಯ ತರಂಗಳಿರುವುಂಟು. ಜಯತೀರ್ಥರ ಮಾತಿಗೆ ತಡೆಯೇ ಇಲ್ಲ, ಅದೊಂದು ಚೇತೋಹಾರಿ ಆನಂತ ಪ್ರವಾಹ. ಸಿದ್ಧಾಂತ, ಪ್ರಮಾಣಗಳ ಆವ್ಯಾಹತ ತೀರ್ಥಧಾರೆ.
ಶ್ರೀಜಯತೀರ್ಥರು ತಮ್ಮ ಪ್ರೌಢ-ಲಲಿತ ಶಾಸ್ತ್ರೀಯ ಶೈಲಿಯಿಂದ ಜಟಿಲವಾದ ಆಧ್ಯಾತ್ಮಿಕ ಸಮಸ್ಯೆ-ಪ್ರಮೇಯಗಳಿನ್ನು ಎಳೆಎಳೆಯಾಗಿ ಬಿಡಿಸಿ, ಜ್ಞಾನದ ಅಮೃತರಸಧಾರೆಯನ್ನು ಹರಿಸಿ, ಇಹ ಜಗತ್ತಿಗೆ ಅದರ ಪಾನ ಮಾಡಿಸಿದ್ದಾರೆ. ಸುಧಾ ಗ್ರಂಥವಂತೂ ಗಂಗಾಪ್ರವಾಹದಂತೆ ಭವ್ಯವಾಗಿ, ಅಕರ್ಷಿತವಾಗಿ, ಚೇತೋಹಾರಿಯಾಗಿ ಹರಿದಿದೆ. ಶ್ರೀಮಜ್ಜಯತೀರ್ಥರ ವಾಣಿ ಕಾಮಧೇನು, ಕಲ್ಪತರುವಿನಂತೆ ಬೇಡಿದ ಇಷ್ಟಾರ್ಥಗಳನ್ನೆಲ್ಲ ನೆರವೇರಿಸುವಂತಹುದು. ದುಷ್ಟಕಾಮವೆಂಬ ಮನ್ಮಥನ ಬಾಣವನ್ನು ಮುರಿದು ವೈರಾಗ್ಯಯೋಗ್ಯರನ್ನಾಗಿ ಮಾಡುವಂತಹುದು.
ಶ್ರೀಮದಾಚಾರ್ಯರ ಅವತಾರಕ್ಕಿಂತ ಪ್ರಾಚೀನರಾದ ಶ್ರೀಹರ್ಷ, ವಿದ್ಯಾಸಾಗರ, ವಾಚಸ್ಪತಿ, ಭಾಸರ್ವಜ್ಞ, ಉದಯನ-ಇವರೇ ಮೊದಲಾದ ನೂರಾರು ಗ್ರಂಥರಚನಕಾರರ ವಿಮರ್ಶೆಯನ್ನು ಟೀಕಾಕೃತ್‌ಪಾದರು ಮಾಡಿದ್ದಾರೆ. ತಮ್ಮ ಕಾಲದವರೆಗೆ ಉಪಲಬ್ಧವಾದ ಎಲ್ಲ ಗ್ರಂಥಗಳನ್ನೂ ವಿಮರ್ಶೆ ಮಾಡಿರುವುದು ಶ್ರೀಟೀಕಾಚಾರ್ಯರ ವೈಶಿಷ್ಟ್ಯ.
ಋಗ್ವೇದದಲ್ಲಿ ವೃಷಾಯಮಾನ್ ಎಂಬ ಮಾತು ಬರುತ್ತದೆ. ದೇವೇಂದ್ರನಿಗೆ ವೃಷಭಾಕೃತಿ ಉಂಟು ಎನ್ನುತ್ತದೆ ವೇದವಾಕ್ಯ. ಅಂತೆಯೇ ತ್ರಿಯುಗ ಹೂತಿಯಾದ ಪರಮಾತ್ಮನು ಧರ್ಮ ಸಂಸ್ಥಾಪನೆ ಮತ್ತು ಸಿದ್ಧಾಂತ ಸ್ಥಾಪನೆಗಾಗಿ ತನ್ನ ಪ್ರಥಮಾಂಗ ಭೂತರಾದ ವಾಯುದೇವರಿಗೆ ಆಜ್ಞಾಪಿಸಿದ ಬಳಿಕ ಶ್ರೀಮನ್ಮಧ್ವರು ಅವತರಿಸಿದರೆಂಬುದು ಪುರಾಣ ಪ್ರಾಮಾಣಿತ, ವಾಯುದೇವರ ಮುಖದಿಂದ ಭಗವತ್ತತ್ವ ಶ್ರವಣ ಕೇಳಲು ದೇವತೆಗಳೇ ಭೂಮಿಗೆ ಬಂದಾಗ ಇಂದ್ರ ದೇವರು ಎತ್ತಿನ ರೂಪದಲ್ಲಿ ಆನಂದತೀರ್ಥರು ನಿತ್ಯಪಠಿಸುವ ಉದ್ಗ್ರಂಥಗಳನ್ನು ಹೊತ್ತರು ಮತ್ತು ಶ್ರವಣಾನಂದ ಪೂರ್ಣರಾದರು ಎಂದೇ ಪ್ರತೀತಿ.
ಶ್ರೀಮದಾನಂದತೀರ್ಥರನ್ನು ಶಿಷ್ಯರು ಪ್ರಶ್ನಿಸಿದರಂತೆ:‘‘ಶೇಷದೇವರಿಗೂ ಅಗಮ್ಯ ಎನ್ನಬಹುದಾದ ನಿಮ್ಮ ಗ್ರಂಥ ಸರ್ವಸ್ವದ ಮೂಲಾರ್ಥವನ್ನು ಮುಂದೆ ವಿಶ್ಲೇಷಿಸಿ ಬರೆಯುವವರು ಯಾರು?’’ ಶ್ರೀ ಮದಾಚಾರ್ಯರು ಕೂಡಲೇ ಸಮೀಪದಲ್ಲಿಯೇ ಇದ್ದ ಎತ್ತನ್ನು ತೋರಿಸಿ ಈ ಎತ್ತು ವ್ಯಾಖ್ಯಾನಿಸುತ್ತದೆ ಎಂದು ಆದೇಶಿಸಿದರಂತೆ.
ಕಾಲಾನುಕ್ರಮದಲ್ಲಿ ದೇಶಪಾಂಡೆಯವರ ಘನರಾವುತ ಕೂಸಾದ ದೊಂಢು ನರಸಿಂಹನಿಗೆ ಶ್ರೀಮದಕ್ಷೋಭ್ಯತೀರ್ಥ ಶ್ರೀಪಾದರು ಕಿಂ ಪಶು ಪೂರ್ವದೇಹೇ ಎಂದು ಪ್ರಶ್ನಿಸಿದಾಗ ಜ್ಞಾನಸ್ಮತಿ ಪಡೆದ ಯತಿಯಾಗಿ ಜಯತೀರ್ಥರು ರೂಪತಾಳಿರಂತೆ. ವಿಂದ್ಯಾವಳಿ ಪರ್ವತ ತಪ್ಪಲಿನಲ್ಲಿ ಹನ್ನೆರಡು ವರುಷಗಳ ಕಠಿಣ ತಪಶ್ಚರ್ಯ ನಡೆಸಿ, ಸಕಲ ವೇದ ವಾಙ್ಮನೋನಿಯಾಮಕಳಾದ ದುರ್ಗದೇವಿಯ ಅನುಗ್ರಹಪಾತ್ರರಾದರು-ಜಯತೀರ್ಥರು. ಸಂಕ್ಷಿಪ್ತವಾಗಿ ಇದು ಜಯತೀರ್ಥರ ಪೂರ್ವಶ್ರಮದ ಹಿನ್ನೆಲೆ.
ಭಾಗವತ ಧರ್ಮವನ್ನು ವಿಶೇಷವಾಗಿ ಪ್ರಸಾರ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಆಚಾರ್ಯರ ವಿಚಾರಗಳನ್ನು ಸಮರ್ಥಿಸಿ ಜನತೆಗೆ ತಿಳಿಸುವ ಸಮರ್ಥರು ಬೇಕಾಗಿದ್ದ ಕಾಲ ಆಗಿತ್ತು. ಅಂತೆಯೇ ಟೀಕಾ ಗ್ರಂಥಗಳ ಅನಿವಾರ್ಯತೆಯೂ ಇತ್ತು. ಈ ಮಹತ್ತರವಾದ ಕಾರ್ಯವು ಸಾಮಾನ್ಯರಿಂದ ಸಾಧ್ಯವಲ್ಲದ ಕಾರಣ ಇದಕ್ಕೆ ದೈವೀ ಪುರುಷರೇ ಅವತರಿಸಿ ಬರಬೇಕಾದ ಸಂದರ್ಭವಿತ್ತು. ಆದ್ದರಿಂದ ಜ್ಞಾನ ಪ್ರಸಾರ ಮಾಡಲು ಜ್ಞಾನ ಪ್ರದಾಯಕರಾದ ಶೇಷದೇವರೇ ಜಯತೀರ್ಥರಾಗಿ ಅವತರಿಸಿದರು.
ಜಯ ಎಂದರೆ ಇಂದ್ರಿಯಗಳನ್ನು ಜಯಿಸಿದವರೂ ತೀರ್ಥ ಎಂದರೆ ಜ್ಞಾನ ಸಂಪನ್ನರೂ ಎಂದು. ಚಿಕ್ಕವಯಸ್ಸಿನಲ್ಲಿಯೇ ರಾಜದರ್ಬಾರಿನಲ್ಲಿದ್ದರೂ ಸಕಲ ವೈಭೋಗಗಳನ್ನೂ ತ್ಯಜಿಸಿ ವೈರಾಗ್ಯದಿಂದ ಸನ್ಯಾಸದೀಕ್ಷೆ ಪಡೆದವರು. ತ್ಯಾಗಿಗಳಾದ ನಂತರ ಜಯತೀಥರು ದುರ್ಗಾದೇವಿ ಮತ್ತು ಶ್ರೀಹರಿಯಿಂದ ಅನುಗ್ರಹಿಸಲ್ಪಟ್ಟು ಉತ್ತಮ ಗ್ರಂಥಗಳಿಗೆ ಅಪೂರ್ವ ವ್ಯಾಖ್ಯಾನ ರಚಿಸಿದರು. ಮುಂದೆ ಯರಗೊಳಕ್ಕೆ ಬಂದು ಏಕಾಂತ ಪರಿಸರದ ಗುಹೆಯಲ್ಲಿ ಪ್ರಾಣದೇವರನ್ನು ಸ್ಥಾಪಿಸಿ ಉಪಾಸನೆ ಮಾಡಿದರು. ಈ ಪರಿಸರದಲ್ಲಿಯೇ 18 ದಿವ್ಯ ಟೀಕೆಗಳನ್ನೂ ಮೂರು ಸ್ವತಂತ್ರ ಕೃತಿಗಳನ್ನೂ ರಚಿಸಿದರು. ತಮ್ಮ ತಪಃ ಶಕ್ತಿಯಿಂದ ಅನೇಕ ಮಹಿಮೆಗಳನ್ನು ಅಂದರೆ ಯರಗೊಳದ ಒಡ್ಡು ಒಡೆದ ಕೆರೆಯನ್ನು ನಿಲ್ಲಿಸಿದ ಹಾಗೂ ಇನ್ನಿತರ ಪವಾಡಗಳಿಂದ ಜನರ ಕಷ್ಟ ನಿವಾರಿಸಿದರು.
ಮುಂದೆ ಜಯತೀರ್ಥರು ಉತ್ತರ-ದಕ್ಷಿಣ ಭಾರತದ ಸಂಚಾರ ಕೈಗೊಂಡು ಅಹಮದಾಬಾದಿಗೆ ಬಂದು ಅಲ್ಲಿ ಆರು ತಿಂಗಳು ಬೌದ್ಧರ ಗ್ರಂಥಾಲಯದಲ್ಲಿ ಗ್ರಂಥಾವಲೋಕನ ಮಾಡಿದರು. ಬೌದ್ಧರ ಗೌರವಕ್ಕೆ ಪಾತ್ರರಾದರು. ಕಾಮದೇವ ಎಂಬ ಕುಲಪತಿಯು ಜಯತೀರ್ಥರ ಗೌರವಾರ್ಥ ಶಾಸನವೊಂದನ್ನು ಸ್ಥಾಪಿಸಿದ್ದಾನೆ. ನ ಭೂತೋ ನ ಭವಿಷ್ಯತಿ ಎಂಬಂತೆ ಜೈನ, ಬೌದ್ಧ, ಸಾಂಖ್ಯ, ಅದ್ವೈತ, ವಿಶಿಷ್ಟಾದ್ವೈತ, ಮೀಮಾಂಸ ತರ್ಕ, ವ್ಯಾಕರಣ ಮೊದಲಾದ ಸಕಲ ಶಾಸ್ತ್ರಗಳಲಿಯೂ ಪರಿಪೂರ್ಣ ಪಾಂಡಿತ್ಯವನ್ನು ಪಡೆದರು ಇವರು. ಇವರ ಕಾರ್ಯ ಕ್ಷೇತ್ರವನ್ನು ಮೂರು ವಿಧವಾಗಿ ಹೇಳಬಹುದು: 1) 22 ಗ್ರಂಥಗಳ ರಚನೆ, 2) ವಾಕ್ಯಾರ್ಥ, ವಾದಿ ನಿಗ್ರಹ, ಗ್ರಂಥಾವಲೋಕನ, ಮಧ್ವಸಿದ್ದಾಂತ ಪ್ರತಿಪಾದನೆ 3) ಸಿದ್ದಾಂತ ಪ್ರಸಾರ, ವೈಷ್ಣವ ದೀಕ್ಷೆ, ಪ್ರಚಾರ, ಶಿಷ್ಯರನ್ನು ಉದ್ಧರಿಸುವ ಕಾರ್ಯ, ಜ್ಞಾನ-ಭಕ್ತಿಯ ಪ್ರವಾಹ ನಿರಂತರವಾಗಿ ಜನ-ಮನಗಳಲ್ಲಿ ಹರಿಯುವಂತೆ ಮಾಡಿದ ಜ್ಞಾನಯಜ್ಞ. ಅದ್ಭುತ ಪ್ರತಿಭೆ, ಪ್ರಚಂಡ ಪಾಂಡಿತ್ಯ, ಚಿಂತನಶೈಲಿ, ಪ್ರೌಢಚಿಂತನೆ, ಖಚಿತ ನಿರೂಪಣೆ ಹಾಗೂ ತೂಕದ ವಿಶ್ಲೇಷಣೆ ಜಯತೀರ್ಥರ ವೈಶಿಷ್ಟ್ಯ.
ಶ್ರೀ ಜಯತೀರ್ಥರ ಬದುಕೇ ಅತಿದೊಡ್ಡ ಅಧ್ಯಾತ್ಮಿಕ ಸಂದೇಶ. ಅವರ ವ್ಯಕ್ತಿತ್ವವೇ ಎಲ್ಲರ ಬದುಕಿಗೆ ಆಧಾರ. ಇಂತಹ ಶ್ರೀಜಯತೀರ್ಥರ ಅನುಗ್ರಹದಿಂದ ಮಾನವನು ಸರ್ವಸ್ವವನ್ನೂ ಪಡೆಯಬಲ್ಲ. ಅಂತೆಯೇ ದಾಸ ಶ್ರೇಷ್ಠರಾದ ಶ್ರೀವಿಜಯದಾಸರು ಸಾರಿಭಜಿಸಿರೋ ಟೀಕಾರಾಯರಂಘ್ರಿಯಾ ಘೋರ ಪಾರಕಾಂಬುಧಿಯ ದೂರಮಾಳ್ಪರಾ ಎಂದು ಹಾಡಿ ಹೊಗಳಿದ್ದಾರೆ.
ಕೇವಲ 43 ವರ್ಷಗಳ ಆಯುಷ್ಯದಲ್ಲಿ ಮಹತ್ಕಾರ್ಯ ಸಾಧಿಸಿದ ದೈವಿಕ ಚೇತನರು ಇವರು. ಈ ಅತ್ಯಲ್ಪಕಾಲದಲ್ಲಿ ಇಪ್ಪತ್ತು ವರ್ಷಗಳಷ್ಟು ದೀರ್ಘಕಾಲ ಏಕಾಂತದಲ್ಲಿ ಕುಳಿತು, ಜ್ಞಾನ ತಪಸ್ಸನ್ನು ಸಾಧಿಸಿ, ದ್ವೈತವಾಙ್ಮಯದ ಅತ್ಯುನ್ನತ ಶಿಖರವನ್ನೇರಿದ ದೇವಾಂಶ ಸಂಭೂತರು ಶ್ರೀಜಯತೀರ್ಥರು.
ಜಯತೀರ್ಥರ ಪೂರ್ವಶ್ರಮದ ಹೆಸರು ಧೊಂಡೋನರಸಿಂಹಪಂತ. ಧೋಂಡು ಎಂದರೆ ಮರಾಠಿ ಭಾಷೆಯಲ್ಲಿ ಕಲ್ಲು ಎಂದರ್ಥ. ನರಸಿಂಹನ ತಂದೆ ಧುಂಡಿರಾಜ. ಧುಂಡಿರಾಜನ ಕಾರ್ಯಕ್ಷೇತ್ರ ಮಂಗಳವೇಡೆ. ಶ್ರೀಆಚಾರ್ಯಮಧ್ವರು, ಅವರ ಶಿಷ್ಯರುಗಳಾದ ಶ್ರೀಪದ್ಮನಾಭತೀರ್ಥರು, ಶ್ರೀ ನರಹರಿತೀರ್ಥರು, ಶ್ರೀಮಾಧವತೀರ್ಥರು ಮತ್ತು ಶ್ರೀಅಕ್ಷೋಭ್ಯತೀರ್ಥರು ಮಂಗಳವೇಡೆಯನ್ನು ಸಂದರ್ಶಿಸಿ ಉಲ್ಲೇಖಗಳು ಇತಿಹಾಸದಲ್ಲಿದೆ.
ವಿಜಯನಗರದ ಸಂಸ್ಥಾಪಕ ಗುರುಗಳಾದ ಶ್ರೀವಿದ್ಯಾರಣ್ಯರನ್ನು ವಾದದಲ್ಲಿ ಜಯಿಸಿದ ಬಳಿಕ ಮಹಾಮಹಿಮರಾದ ಶ್ರೀ ಅಕ್ಷೋಭ್ಯತೀರ್ಥರು ಪಂಢರಾಪುರದ ಭೀಮನದಿ ದಂಡೆಯಲ್ಲಿ ವಿಠಲನ ಸೇವೆಯಲ್ಲಿದ್ದಾಗ ಶೀಘ್ರದಲ್ಲಿಯೇ ತಮಗೊಬ್ಬ ಶಿಷ್ಯ ದೊರಕುವನೆಂಬ ಸ್ವಪ್ನ ಆದೇಶ ದೊರಕಿತ್ತು. ರಾವುತನೊಬ್ಬ ಕುದುರೆಯ ಮೇಲೆ ಕುಳಿತೇ ಪಶುವಿನಂತೆ ನೀರು ಕುಡಿಯಲು ಭೀಮರಥಿಗೆ ಬರಲಿದ್ದಾನೆ. ಆತನೇ ನಿಮ್ಮ ಶಿಷ್ಯ- ಇದು ಸ್ವಪ್ನ ಸಂದೇಶ. ನದಿಯಲ್ಲಿ ಮಿಂದು, ಶ್ರೀಮೂರಾಮನನ್ನು ಎದುರುನೋಡುತ್ತಿದ್ದ ಕನಸು ನನಸಾಗುವ ಸಂದರ್ಭ ಒದಗಿಬಂತು.
ಮಧ್ಯಾಹ್ನದ ಉರಿಬಿಸಿಲಿನಲ್ಲಿ ನಾಲ್ಕೈದು ಕುದುರೆಯನ್ನೇರಿ ಬಂದ ರಾವುತರು ನದಿಗಿಳಿದರು. ಆ ಪೈಕಿ ರಾಜಪುರುಷನಂತಿದ್ದ ರಾವುತನೊಬ್ಬ ನೇರ ಕುದುರೆಯೊಂದಿಗೆ ನೀರಿಗೆ ನುಗ್ಗಿ ಕುದುರೆಯಿಂದ ಕೆಳಗಿಳಿಯದೆ ಪಶುವಿನಂತೆ ನೇರ ನೀರಿಗೆ ಬಾಯಿಹಾಕಿದುದನ್ನು ಅಕ್ಷೋಭ್ಯತೀರ್ಥರು ಗುರುತಿಸಿದರು.
ಶ್ರೀಪಾದರಿಗರಿವಿಲ್ಲದೆ ಪ್ರಶ್ನೆಯೊಂದು ಹೊರಬಿತ್ತು.
‘‘ಕಿಂ ಪಶು ಪೂರ್ವದೇಹೇ’’ ನೀನೇದರೂ ಹಿಂದಿನಜನ್ಮದಲ್ಲಿ ಪಶುವಾಗಿದ್ದೆಯೇನು? ಇದು ಯತಿವರ್ಯರ ಪ್ರಶ್ನೆಯಾಗಿತ್ತು ಅಲ್ಲಿಂದ ಮುಂದೆ ನಡೆದದ್ದೆಲ್ಲಾ ಪವಾಡವಾಯಿತು.
‘‘ಕಿಂ ಪಶುಃ ಪೂರ್ವದೇಹೇ?’’ ಈ ಪ್ರಶ್ನೆ ಕೇಳಿ ಆ ಯುವಕನಲ್ಲಿ ವಿದ್ಯುತ್ ಸಂಚಾರವಾದಂತೆ ಆಯಿತು.
ಕುದುರೆಏರಿ ನೀರು ಕುಡಿಯಲು ನದಿಗೆ ಇಳಿದಾಗ ದೋಂಡುನರಸಿಂಹ. ಒಂದು ಕ್ಷಣಕ್ಕೆ ತನ್ನ ಜನ್ಮಾಂತರಗಳ ನೆನಪುಂಟಾಗಿ ಜೀವನಸಾಗರದಲ್ಲಿ ತಾನು ಹಲವಾರು ನೀರ್ಗುಳ್ಳೆಗಳಾಗಿ ರೂಪಗೊಂಡದ್ದನ್ನು ನೋಡಿದ ಧೋಂಡು. ಒಂದಾದ ಮೇಲೆ ಒಂದರಂತೆ ನೂರಾರು, ಸಾವಿರಾರು ಜನ್ಮಗಳನ್ನೆತ್ತಿದ ಪೂರ್ವಸ್ಮರಣೆ ಅವನಿಗೆ ಆ ಕ್ಷಣಕ್ಕೆ ಉಂಟಾಯಿತು.
ಯಾವುದೋ ಒಂದು ಕಲ್ಪದಲ್ಲಿ ಎಂಟನೇ ಕಕ್ಷದಲ್ಲಿ-ತಾನು ಆದಿತಿ ಕಶ್ಯಪರ ಪುತ್ರನಾಗಿ ಹುಟ್ಟಿದುದನ್ನು ಕಂಡ ಧೋಂಡು. ಕಾಲಗತಿಯಲ್ಲಿ ಶ್ರೀಮನ್ಮಹಾವಿಷ್ಣುವನ್ನು ಕುರಿತು ತಪಸ್ಸು ಮಾಡಿ ಇಂದ್ರ ಪದವಿಗೇರಿದಂತೆ ಭಾಸವಾಯಿತು. ಯಜ್ಞ, ರೋಚನ, ಸತ್ಯಜಿತ್, ತ್ರಿಶಿಖ, ವಿಭು, ಮಂತ್ರದ್ರುವ, ಪುರಂದರ, ಬಲಿ, ಅದ್ಭುತ, ಶಂಭು, ವೈವೃತಿ, ಋತುದಾಮ, ದಿವಸ್ಪತಿ, ಶಚಿಗಳೆಂಬ ಹದಿನಾಲ್ಕು ಮಂದಿ ಇಂದ್ರರಲ್ಲಿ ಈ ಜೀವ ಏಳನೆಯ ಇಂದ್ರನಾಗಿ ಅವತರಿಸಿದ ಸ್ಮರಣೆಯಾಯಿತು ಆತನಿಗೆ.
ವೃತ್ರಾಸುರನನ್ನು ಕೊಂದು ಬ್ರಹ್ಮಹತ್ಯೆಗೆ ಗುರಿಯಾಗಿ ದಧೀಚಿಋಷಿಯ ಆಸ್ಥಿಯಿಂದ ಹಾಗೂ ಪರಮಾತ್ಮನ ಅನುಗ್ರಹದಿಂದ ವಜ್ರಾಯುಧ ಪಡೆದುದನ್ನೂ ತಾರಕಾಸುರನೊಡನೆ ನಡೆದ ಕದನ ಮತ್ತು ಆನಂತರದ ಘಟನೆಗಳನ್ನೂ ಕಂಡಂತಾಯಿತು. ಅಹಲ್ಯೆಯ ಪಾತಿವ್ರತ್ಯವನ್ನು ಭಂಗಗೊಳಿಸಿ ಸಹಸ್ರಾಕ್ಷನಾದುದು, ತ್ರೇತಾಯುಗದ ಶ್ರೀರಾಮನಿಂದ ಅಹಲ್ಯಾಶಾಪ ವಿಮೋಚನೆಯಾದುದು ಇವುಗಳನ್ನೂ ನೋಡಿದನು… ತನ್ನ ಅಂಶದಿಂದ ಹುಟ್ಟಿದ ವಾಲಿಯನ್ನು ನೋಡಿದ… ಧೋಂಡು. ದ್ವಾಪರಯುಗದಲ್ಲಿ ಕುಂತಿದೇವಿ ಮಗ ಅರ್ಜುನನಾಗಿ ಹುಟ್ಟಿ ಶ್ರೀಕೃಷ್ಣನ ಅನುಗ್ರಹಕ್ಕೆ ಪಾತ್ರನಾಗಿ ಭೂಭಾರಹರಣ ಕಾರ್ಯದಲ್ಲಿ ನೆರವಾದುದ್ದು ಸ್ಮತಿಸಾರದಲ್ಲಿ ಮೂಡಿತು.
ಈ ಕಲಿಯುದಲ್ಲಿ ಶ್ರೀವಾಯುದೇವರ ಅವತಾರರಾದ ಶ್ರೀಮಧ್ವಾಚಾರ್ಯರು ಜನಿಸಿದಾಗ ತಾನು ಅವರ ಧರ್ಮಸ್ಥಾಪನಾಕಾರ್ಯದಲ್ಲಿ ಎತ್ತಾಗಿ ಹುಟ್ಟಿ ಅವರ ಗ್ರಂಥಗಳನ್ನು ಊರಿಂದೂರಿಗೆ ಹೊತ್ತು ಸೇವೆ ಸಲ್ಲಿಸಿದುದನ್ನೂ ಅವರ ಮುಖದಿಂದ ಸಚ್ಛಾಸ್ತ್ರ ಶ್ರವಣವಾದುದನ್ನೂ ಕಂಡ. ಆ ಜೀವನು ಈ ಜನ್ಮದಲ್ಲಿ ಧುಂಡಿರಾಜನಿಗೆ ಮಗನಾಗಿ ಧೋಂಡುನರಸಿಂಹನಾಗಿ ಜನಿಸಿದುದನ್ನೂ ಆತ ನೋಡಿದ.
ಅವನಿಗೆ ಆ ಕ್ಷಣದಲ್ಲಿ ತನ್ನ ಜೀವಿತದ ಪರಮ ಉದ್ದಿಶ್ಯ ತಿಳಿಯಿತು. ತಾನು ಸನ್ಯಾಸವನ್ನು ಸ್ವೀಕರಿಸಿ- ಶ್ರೀಮಧ್ವಾಚಾರ್ಯರ ಸರ್ವಮೂಲ ಗ್ರಂಥಗಳಿಗೆ ವ್ಯಾಖ್ಯಾನ ಮಾಡಬೇಕಾಗಿರುವ ಜೀವಿತದ ಉದ್ದಿಶ್ಯವು ಸ್ಪಷ್ಟವಾಯಿತು. ಕೂಡಲೇ ತನ್ನ ಸೈನಿಕ ಉಡುಪನ್ನು ತೆಗೆದುಹಾಕಿ ಜೊತೆಯವರನ್ನು ಹಿಂದಕ್ಕೆ ಕಳುಹಿಸಿದ. ಸರಳವಾದ ಉಡುಪನ್ನು ಧರಿಸಿ, ಒಬ್ಬನೇ ತನ್ನ ಆತ್ಮೋದ್ಧಾರಕ ಗುರುಗಳಾದ ಅಕ್ಷೋಭ್ಯತೀರ್ಥರ ಬಳಿಗೆ ಹೋಗಿ ನಮಸ್ಕರಿಸಿದ. ಘಟನೆ ಎಲ್ಲಿ ನಡೆಯಿತು ಎಂಬ ಬಗೆಗೆ ಇತಿಹಾಸ ಸಂಶೋಧಕರಲ್ಲಿ ಜಿಜ್ಞಾಸೆ ಇದೆ.
ಶ್ರೀಜಯತೀರ್ಥರ ಗ್ರಂಥ ವೈಶಿಷ್ಟ್ಯತೆಗಳನ್ನು ಒಂದೇ ಮಾತಿನಲ್ಲಿ ಹೇಳುವುದು ಬಹು ಪ್ರಯಾಸಕರ. ಬ್ರಹ್ಮ ಮೀಮಾಂಸೆ ಎನ್ನಬಹುದಾದ ದ್ವೈತಸಿದ್ಧಾಂತ ಪ್ರತಿಪಾದಕ ಶ್ರೀ ಮಧ್ವಾಚಾರ್ಯಅರ ಬ್ರಹ್ಮ ಸೂತ್ರಭಾಷ್ಯಕ್ಕೆ ತತ್ವಪ್ರಕಾಶಿಕೆ ಮತ್ತು ಶ್ರೀಮನ್ನ್ಯಾಯಸುಧೆಯ ರತ್ನಾಭರಣ ತೊಡಿಸಿದವರು ಶ್ರೀಜಯತೀರ್ಥರು. ವಿಷಯ ಪ್ರತಿಪಾದನೆ, ಶೈಲಿ, ಸಂಯಮದ ನಿರೂಪಣೆ, ವಿಶಾಲ ಮನೋಭಾವ, ಹರಿತವಾದ ತರ್ಕ, ಕಲ್ಪನೆ, ವಾದಕೌಶಲ್ಯ, ಸಿದ್ಧಾಂತ ಪ್ರತಿಪಾದನೆ-ಇವು ಶ್ರೀಜಯತೀರ್ಥರ ಕೃತಿರಚನಾ ವಿಶೇಷಣಗಳು.
ಶ್ರೀಜಯತೀರ್ಥರ ಹಿರಿಮೆ-ಸಂದೇಶ
ತತ್ವಜ್ಞಾನ ಕಲ್ಪನೆಯ ಕೂಸಲ್ಲ. ವಿಜ್ಞಾನ ಬಹಿರಂಗದ ತಿಳಿವಳಿಕೆಯಲ್ಲ.ಅದೊಂದು ಅಂತರಂಗದ ಅನ್ವೇಷಣೆ. ಧರ್ಮ ಕೇವಲ ತಿಳಿಯುವ ವಸ್ತುವಲ್ಲ. ಅನುಭವದ ವಸ್ತು. ಅನುಭವ ವಿಚಾರಗಳನ್ನು ಮೀರಿದ್ದರೂ ವಿಚಾರದ ವಿರೋಧಿಯಲ್ಲ.ಸಾರ್ವಕಾಲಿಕವಾದ ಅನುಭವದ ಅಭಿವ್ಯಕ್ತಿಗೆ ಶಾಸ್ತ್ರ ಪ್ರಪಂಚವೇ ಮಾಧ್ಯಮ. ಶಾಸ್ತ್ರದ ಅಧ್ಯಯನವೆಂದರೆ ಗಿಳಿಪಾಠವಲ್ಲ. ಪುಣ್ಯಕ್ಕಾಗಿ ಮಾಡುವ ಕರ್ಯವಲ್ಲ. ನಹಿ ಅದೃಷ್ಟಾರ್ಥಂ ಶಾಸ್ತ್ರಶ್ರವಣಾದಿಕಂ ಎಂದರೆ ಕಾಣದ ಪುಣ್ಯಕ್ಕಾಗಿ ಮಾಡುವ ಶ್ರವಣವಲ್ಲ. ಜ್ಞಾನದಲ್ಲಿ ಖಚಿತತೆ ಬೇಕು. ಬದುಕಿನಲ್ಲಿ ಬುದ್ಧಿಯ ಪಾತ್ರ ಬಹಳ ದೊಡ್ಡದಾಗಿದೆ. ಬದುಕಿಗೆ ಅದುವೇ ಆಧಾರವಾಗಿದೆ. ಆಧ್ಯಾತ್ಮಿಕ ಅನುಭವಗಳನ್ನು ಗ್ರಹಿಸುವಾಗ, ಸಕಲ ಶಾಸ್ತ್ರಗಳನ್ನು ತಿಳಿಯುವಾಗ, ಸಿದ್ಧ, ಶುದ್ಧ ತತ್ವವನ್ನು ಸಮರ್ಥಿಸುವಾಗ ಪ್ರಚಂಡ ಬುದ್ಧಿಯ ಅವಶ್ಯಕತೆಯಿದೆ. ಇಲ್ಲಿ ನಂಬಿಕೆಯ ಪಾತ್ರ ಕಿರಿದಾಗಿದ್ದು, ಬುದ್ಧಿಯ ಪಾತ್ರ ಹಿರಿದಾಗಿದೆ ಎಂದು ವಿವರಿಸುತ್ತಾರೆ.
ಬದುಕಿಗೊಂದು ಗುರಿ ಬೇಕು
ಜಯತೀರ್ಥರು ದೈವೀ ಪುರುಷರು. ಅವರದ್ದು ಸ್ವಾಭಾವಿಕ ಜ್ಞಾನ, ತಾವು ಬೆಳೆಯುವುದು ಮಾತ್ರವಲ್ಲ. ತಮ್ಮೊಡನೆ ಎಲ್ಲರೂ ಬೌದ್ಧಿಕವಾಗಿ ತಮ್ಮೊಡನೆ ಎಲ್ಲರೂ ನಡೆಯಬೇಕೆಂಬ ಸಂಕಲ್ಪ ತೊಟ್ಟ ವಿಶ್ವ ಕುಟುಂಬರು. ವಿಶ್ವದ ಹಿತಕ್ಕಾಗಿಯೇ ತಮ್ಮ ಸತ್‌ಶಕ್ತಿ, ಚಿತ್‌ಶಕ್ತಿಗಳನ್ನು ಸದಾ ಜಡ್ಡುಗಟ್ಟಿದ ಅವೈದಿಕ ನಂಬಿಕೆಗಳನ್ನು, ಮೂಢ ವಿಶ್ವಾಸಗಳನ್ನು ಅಪ್ರಾಮಾಣಿಕ ವಿಚಾರಗಳನ್ನು ಖಂಡಿಸಿ ಶುದ್ಧ ವಿಚಾರಗಳನ್ನು ಮಂಡಿಸಿದರು. ಇದರಿಂದಾಗಿ ಸನಾತನ ಸಿದ್ಧಾಂತ ಜಗತ್ತಿನಲ್ಲಿಯೇ ಸಾರ್ವಭೌಮ ತತ್ವವಾಗಿ ಮೆರೆಯಿತು.
ಜಯತೀರ್ಥರ ವಾಙ್ಮಯ, ಮೋಕ್ಷ ಮರ್ಗದ ಪಥಿಕರಿಗೆ ದಾರಿದೀಪವಾಯಿತು. ಅವರು ಧರ್ಮ, ಜ್ಞಾನಗಳ ಅಡಿಯಲ್ಲಿ ಸಂಘರ್ಷದ ಬದುಕಿಗೆ ನಿಶ್ಚಿತವಾದ, ಧ್ಯೇಯ, ದಾರಿಗಳನ್ನು ಒದಗಿಸಿದರು. ಅವರ ಮಾತು, ಮಾತುಗಳಲ್ಲಿ ಹುದುಗಿರುವ ಖಚಿತ ನಿರೂಪಣೆ, ತಿಳಿಸುವ ಕಳಕಳಿ, ತಿದ್ದುವ ಬುದ್ಧಿವಂತಿಕೆ, ಮನದಣಿಸುವ ಯುಕ್ತಿ ಬದ್ಧತೆ ಎಂತಹವರನ್ನು ಬೆರಗುಗೊಳಿಸುತ್ತದೆ. ಅಂತೆಯೇ ಶ್ರೀ ರಾಘವೇಂದ್ರ ಸ್ವಾಮಿಗಳು ಇವರ ಗ್ರಂಥಗಳ ಬಗ್ಗೆ ಪ್ರತ್ಯಕ್ಷರಂ ಪ್ರತಿಪದಂ ಅನೇಕಾಕೋತ ಗರ್ಭಿತಾ, ಪ್ರತಿಭಾತಿ ಸುಧಾ ಎಂದು ವ್ಯಾಖ್ಯಾನಿಸಿದ್ದಾರೆ.
ಶ್ರೀ ವೇದವ್ಯಾಸರ ವಿಶಾಲ ವಾಙ್ಮಯಗಳಾದ ವೇದ, ಉಪನಿಷತ್ತು, ಇತಿಹಾಸ, ಪುರಾಣ, ಬ್ರಹ್ಮಸೂತ್ರ, ಭಗವದ್ಗೀತೆ, ಸ್ಮತಿ, ಆಗಮಗಳಿಗೆ ಶ್ರೀವ್ಯಾಸರ ಹೃದಯವನ್ನು ತೆರೆದು, ತೋರಿದವರೇ ಶ್ರೀ ಮಧ್ವರು ಅವರ ಸರ್ವಮೂಲ ಗ್ರಂಥಗಳಿಗೆ ವ್ಯಾಖ್ಯಾನ ಬರೆದು ಶ್ರೀ ಮಧ್ವರ ಕೃತಿಗಳಿಗೆ ಟೀಕೆ ಎನ್ನುವರು. ಮಧ್ವರ ಅಭಿಪ್ರಾಯಗಳನ್ನು ಸ್ಪಷ್ಟಪಡಿಸುವುದು, ಅಲ್ಲಲ್ಲಿ ಹೇಳಿದ್ದನ್ನು ಒಂದೆಡೆ ಸಂಗ್ರಹಿಸುವುದು, ಬಂದ ಆಕ್ಷೇಪಗಳನ್ನು ಪರಿಹರಿಸುವುದು. ಸಂಕ್ಷಿಪ್ತವಾದುದನ್ನು ವಿಸ್ತರಿಸುವುದೇ ಟೀಕಾ ಕಾರ್ಯ. ಇದನ್ನು ವಿದ್ವತ್ ಪ್ರಪಂಚದಲ್ಲಿಯೇ ಪರಿಪೂರ್ಣವಾಗಿ ಮಾಡಿ ಟೀಕಾಚಾರ್ಯರು ಎಂದೆನಿಸಿದ್ದಾರೆ ಜಯತೀರ್ಥರು.
ಶ್ರೀ ಜಯತೀರ್ಥರ ಗ್ರಂಥಗಳ ಅಭಿಪ್ರಾಯವನ್ನು ವಿಸ್ತಾರವಾಗಿ ಜಗತ್ತಿಗೆ ತಿಳಿಸಲು ಕಳೆದ ಆರು ಶತಮಾನಗಳಿಂದ ಇಂದಿನವರೆಗೆ ನೂರಾರು ಗ್ರಂಥಕಾರರು ಶ್ರಮಿಸಿದ್ದಾರೆ. ಅವರಲ್ಲಿ ಶ್ರೀಪಾದರಾಜರು, ಶ್ರೀವ್ಯಾಸರಾಜರು, ಶ್ರೀವಾದಿರಾಜರು, ಶ್ರೀರಾಘವೇಂದ್ರ ಸ್ವಾಮಿಗಳು, ಶ್ರೀ ಸತ್ಯಧರ್ಮರು, ಶ್ರೀ ಸತ್ಯಧ್ಯಾನರು, ಯಾದವಾಚಾರ್ಯರು, ಶ್ರೀನಿವಾಸ ತೀರ್ಥರು ಮುಖ್ಯರಾಗಿದ್ದಾರೆ. ವಿಜಯದಾಸರು, ಗೋಪಾಲದಾಸರು, ಜಗನ್ನಾಥ ದಾಸರು, ಮೋಹನದಾಸರಂತೆ ಹರಿದಾಸ ಶ್ರೇಷ್ಠರೂ ಜಯತೀರ್ಥರನ್ನು ಕುರಿತಂತೆ ನೂರಾರು ಕೃತಿಗಳನ್ನು ರಚಿಸಿದ್ದಾರೆ.
ಜಯತೀರ್ಥರು ಮಹಾರಾಷ್ಟ್ರದ ಮಂಗಳವೇಡೆ ಗ್ರಾಮದಲ್ಲಿ ಜನಿಸಿದರು. ಸಿರಿವಂತಿಕೆಯಲ್ಲಿ ಮೆರೆದು ಜನಾನುರಾಗಿಯಾಗಿದ್ದರು. ಆಗಿನ ಉತ್ತರಾಧಿಮಠಾಧೀಶರಾಗಿದ್ದ ಶ್ರೀ ಅಕ್ಷೋಭ್ಯತೀರ್ಥರು ಯೋಗ್ಯ ಉತ್ತರಾಧಿಕಾರಿಯ ಅನ್ವೇಷಣೆಯಲ್ಲಿರುವಾಗ ಸ್ವತಃ ರಾಮದೇವರು ಸ್ವಪ್ನದಲ್ಲಿ ಬಂದು, ಅತಿ ತೇಜಸ್ವಿಯಾದ ವ್ಯಕ್ತಿಯೊಬ್ಬ ಆಶ್ವಾರೂಢನಾಗಿ ಭೀಮಾನದಿ ದಾಟಿತ್ತಿರುವಾಗ ಕೆಳಗಿಳಿಯದೆ ನೀರು ಕುಡಿಯುತ್ತಾನೆ. ಆತನೇ ಈ ಪೀಠ ಮುಂದಿನ ಯತಿ ಎಂದನಂತೆ.
ಒಂದು ದಿನ ಅಕ್ಷೋಭ್ಯತೀರ್ಥರು ಧ್ಯಾನಿಸುತ್ತಿರುವಾಗ ಸ್ವಪ್ನದಲ್ಲಿ ಶ್ರೀರಾಮ ಹೇಳಿದ ಸಂಗತಿ ಸಾಕ್ಷಾತ್ಕರಿಸಿತು. ಇದನ್ನು ಕಂಡ ಶ್ರೀಗಳು ನೇರವಾಗಿ ಅವರ ಪಾಲಕರ ಬಳಿ ತೆರಳಿ ತಮ್ಮ ಸಂಕಲ್ಪವನ್ನು ತಿಳಿಸಿದರು. ಇದ್ದ ಒಬ್ಬ ಮಗನನ್ನು ಕಳೆದುಕೊಳ್ಳಲು ಇಷ್ಟವಿಲ್ಲದ ದೇಶಪಾಂಡೆ ದಂಪತಿಗಳು ದಂಡೋಪಂತ (ಜಯತೀರ್ಥರ ಪೂರ್ವಾಶ್ರಮದ ಹೆಸರು)ನಿಗೆ ತರಾತುರಿಯಲ್ಲಿ ವಿವಾಹ ಮಾಡುತ್ತಾರೆ. ಆದರೆ ವಿಧಿಯ ನಿಯಮದಂತೆ ದೋಂಡೊಪಂತ ಸಂಸಾರ ತ್ಯಜಿಸಿ 1365ರಲ್ಲಿ ಅಕ್ಷೋಭ್ಯತೀರ್ಥರಿಂದ ಸಂನ್ಯಾಸ ಸ್ವೀಕರಿಸಿ ಉತ್ತರಾಧಿ ಮಠದ ಜವಾಬ್ದಾರಿ ವಹಿಸಿಕೊಂಡರು.
ಶ್ರೀಮನ್ಯಾಯ ಸುಧಾ, ತತ್ತ್ವಪ್ರಕಾಶಿಕಾ ಮುಂತಾದ 21 ಗ್ರಂಥಗಳನ್ನು ಜಯತೀರ್ಥರು ರಚಿಸಿದ್ದಾರೆ. ಅದರಲ್ಲಿ ಶ್ರೀಮನ್ಯಾಯಸುಧಾ ಅದ್ವಿತೀಯ ಕೃತಿ. ಚಿಕ್ಕ ವಾಕ್ಯಗಳು, ಸುಲಭ ಶಬ್ದಗಳು, ತುಲನಾತ್ಮಕ ವಿಶ್ಲೇಷಣೆ, ತರ್ಕ, ವ್ಯಾಕರಣ, ಮೀಮಾಂಸೆ ಈ ಗ್ರಂಥದಲ್ಲಿ ಅದ್ಭುತವಾಗಿ ಮೂಡಿಬಂದಿವೆ. ಜಗತ್ತಿನ ತತ್ವಜ್ಞಾನ ಕ್ಷೇತ್ರದಲ್ಲಿ ಅಂತರ್ಭಾವ, ಬಹಿರ್ಭಾವ ಪ್ರಶ್ನೆಗಳಿಗೆ ಸಮಂಜಸ ಉತ್ತರ ನೀಡುವ ಗ್ರಂಥ ಇದಾಗಿದೆ.
ಆಚಾರ್ಯರು ಹಿಂದಿನ ಜನ್ಮದಲ್ಲಿ ವೃಷಭಾವತಾರದಲ್ಲಿ ಮಧ್ವಾಚಾರ್ಯರ ಗ್ರಂಥಗಳನ್ನು ಕೇಳಿ, ಮುಂದೆ ಜಯತೀರ್ಥರಾಗಿ ಅವುಗಳಿಗೆ ವ್ಯಾಖ್ಯಾನ ಬರೆದಿದ್ದಾರೆ ಎಂಬ ಪ್ರತೀತಿ ಇದೆ. ಅವರು ರಚಿಸಿದ ಗ್ರಂಥಗಳಿಗೆ ಯಾರೂ ಟೀಕೆ ರಚಿಸಲಿಲ್ಲ. ಅಂತಲೇ ಜಯತೀರ್ಥರಿಗೆ ಟೀಕಾಚಾರ್ಯ ಎಂದು ಇನ್ನೊಂದು ಹೆಸರು. ಜಯತೀರ್ಥರು 18 ಗ್ರಂಥಗಳಿಗೆ ಟೀಕೆ ಬರೆದಿದ್ದಾರೆ.
ಜಯತೀರ್ಥರು ಯಾದಗಿರಿ ಜಿಲ್ಲೆಯ ಯರಗೋಳದ ಗುಹೆಯಲ್ಲಿ ತಪಸ್ಸನ್ನು ಆಚರಿಸಿದ್ದಾರೆ. ದೇಶದೆಲ್ಲೆಡೆ ಸಂಚರಿಸಿ ಮಧ್ವಮತದ ಪ್ರಚಾರ ಮಾಡಿದ್ದಾರೆ. 22 ವರ್ಷ ಶ್ರೀ ಮೂಲಾರಾಮದೇವರ ಪೂಜೆ ಮಾಡಿ ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಮಳಖೇಡ ಗ್ರಾಮದ ಕಾಗಿಣಿ ನದಿಯ ತೀರದಲ್ಲಿ 1388ರಂದು ಆಷಾಢ ಬಹುಳ ಪಂಚಮಿಯಂದು ತಮ್ಮ ಗುರುಗಳಾದ ಅಕ್ಷೋಭ್ಯತೀರ್ಥರ ಸನ್ನಿಧಾನದಲ್ಲಿ ವೃಂದಾವನಸ್ಥರಾದರು. ಪ್ರತಿ ವರ್ಷ ಆಷಾಢ ಬಹುಳ ಪಂಚಮಿಯಂದು ಜಯತೀರ್ಥರ ಆರಾಧನೆ ನಡೆಯುತ್ತದೆ.
Get In Touch With Us info@kalpa.news Whatsapp: 9481252093
Discussion about this post