ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಖ್ಯಾತ ನಿರ್ಮಾಪಕ ಜಾಕ್ ಮಂಜು ನಿರ್ಮಾಣದಲ್ಲಿ, ಅನೂಪ್ ಭಂಡಾರಿ ನಿರ್ದೇಶಿಸುತ್ತಿರುವ, ಕಿಚ್ಚ ಸುದೀಪ ನಟನೆಯ ಚಿತ್ರ ಫ್ಯಾಂಟಂ. ಕೊರೋನಾ ಕಂಟಕದ ನಡುವೆಯೂ ಯಾವುದೇ ಅಡೆ ತಡೆ ಇಲ್ಲದೆ ಎರಡನೇ ಹಂತದ ಚಿತ್ರೀಕರಣಕ್ಕೆ ಫ್ಯಾಂಟಂ ಟೀಂ ಅಣಿಯಾಗುತ್ತಿದೆ. ಹಾಗೆ ನೋಡಿದರೆ, ಕೋವಿಡ್-19 ನಿಂದ ಎದುರಾದ ಸಂಕಷ್ಟದ ನಡುವೆಯೂ, ಚಿತ್ರೀಕರಣಕ್ಕೆ ಅವಕಾಶ ದೊರೆತ ನಂತರ ಫಸ್ಟ್ ಶೂಟಿಂಗ್ ಆರಂಭಿಸಿದ ಭಾರತೀಯ ಸಿನಿಮಾ ಫ್ಯಾಂಟಂ.
ಇಂಥಾ ಸಂದಿಗ್ಧ ಸಮಯದಲ್ಲಿ ಇರುವ ಲೊಕೇಷನ್ನುಗಳಲ್ಲಿ ಚಿತ್ರೀಕರಿಸಲೂ ಚಿತ್ರೋದ್ಯಮದ ಮಂದಿ ಭಯ ಪಡುತ್ತಿದ್ದಾರೆ. ಆದರೆ, ಫ್ಯಾಂಟಂ ಚಿತ್ರಕ್ಕಾಗಿ ನಿರ್ಮಾಪಕ ಜಾಕ್ ಮಂಜು ದೊಡ್ಡ ಮಟ್ಟದ ಧೈರ್ಯ ಮಾಡಿದ್ದಾರೆ. ಅದೇನೆಂದರೆ, ಜೂನ್ ತಿಂಗಳಿನಿಂದಲೇ ಹೈದರಾಬಾದಿನ ಅನ್ನಪೂರ್ಣ ಸ್ಟುಡಿಯೋದಲ್ಲಿ ಫ್ಯಾಂಟಂಗಾಗಿ ಸೆಟ್ ನಿರ್ಮಾಣ ಕಾರ್ಯ ಆರಂಭಗೊಂಡಿದೆ. ಅದೂ ಅಂತಿಂತಾ ಸೆಟ್ ಅಲ್ಲ, ಬೃಹತ್ ಕಾಡನ್ನು ಈ ಸ್ಟುಡಿಯೋದಲ್ಲಿ ರೂಪಿಸಲಾಗುತ್ತಿದೆ. ಕಾಡಿನ ನಡುವೆ ಧುಮ್ಮಿಕ್ಕುವ ಜಲಪಾತ, ಶಿಥಿಲಗೊಂಡ ಸೇತುವೆ, ಅಲ್ಲಲ್ಲಿ ಪಾಳುಬಿದ್ದ ಮನೆ, ಗುಡಿಸಲುಗಳು ಥೇಟು ದಟ್ಟ ಅರಣ್ಯವೇ ನಾಚುವಂತಾ ಸೆಟ್ಟನ್ನು ಇಲ್ಲಿ ಸೃಷ್ಟಿಸಲಾಗಿದೆ. ಇದಕ್ಕಾಗಿ ಬರೋಬ್ಬರಿ ಐದು ಲಕ್ಷ ಗಿಡಗಳನ್ನು ಆಮದುಮಾಡಿಕೊಳ್ಳಲಾಗಿದೆ. ಮೂರು ಫ್ರೋರ್ಗಳಲ್ಲಿ ನಿರ್ಮಾಣಗೊಂಡಿರುವ ಸೆಟ್ ರೂಪಿಸುವ ಕಾರ್ಯಕ್ಕೆ ಸುಮಾರು ನೂರೈವತ್ತು ಜನ ಕಲಾವಿದರು, ತಂತ್ರಜ್ಞರು ಇದಕ್ಕಾಗಿ ಶ್ರಮಿಸಿದ್ದಾರೆ. ಕೋವಿಡ್ ಸಮಸ್ಯೆ ಇರುವುದರಿಂದ ನುರಿತ ವೈದ್ಯರನ್ನು ನೇಮಿಸಿಕೊಂಡು ಸೆಟ್ ಕೆಲಸವನ್ನು ಪೂರ್ಣಗೊಳಿಸಲಾಗಿದೆ.
ಫ್ಯಾಂಟಂ ಚಿತ್ರಕ್ಕಾಗಿ ಕಿಚ್ಚ ಸುದೀಪ ತಿಂಗಳುಗಟ್ಟಲೆ ಕಸರತ್ತು ನಡೆಸಿ ಸಿಕ್ಸ್ ಪ್ಯಾಕ್ ದೇಹವನ್ನು ಹುರಿಗೊಳಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ತೀರಾ ಹೊಸ ಬಗೆಯಲ್ಲಿ ಕಾಣಿಸಿಕೊಳ್ಳಬೇಕು ಅಂತಾ ಸ್ವತಃ ಕಿಚ್ಚ ತೀರ್ಮಾನಿಸಿದ್ದಾರೆ. ಈ ಕಾರಣಕ್ಕೇ ನಿರ್ದೇಶಕ ಅನೂಪ್ ಭಂಡಾರಿ ಕಲ್ಪನೆಗೆ ತಕ್ಕಂತೆ ತಯಾರಾಗಿದ್ದಾರೆ. ವಿಕ್ರಾಂತ್ ರೋಣನಾಗಿ ಫ್ಯಾಂಟಂ ಚಿತ್ರದಲ್ಲಿ ಸುದೀಪ್ ಅವತಾರವೆತ್ತಲಿದ್ದಾರೆ. ಸೆಟ್ಗಾಗಿಯೇ ಆರು ಕೋಟಿಗೂ ಅಧಿಕ ಹಣ ಖರ್ಚು ಮಾಡಿರುವ ಜಾಕ್ ಮಂಜು ಇಡೀ ಸಿನಿಮಾವನ್ನು ದೊಡ್ಡ ಬಜೆಟ್ಟಿನಲ್ಲೇ ನಿರ್ಮಿಸುತ್ತಿದ್ದಾರೆ.
ಇಂದು ಬೆಳಿಗ್ಗೆ ಸರಳವಾಗಿ ಪೂಜೆ ನೆರವೇರಿಸುವ ಮೂಲಕ ಹೈದ್ರಾಬಾದಿನಲ್ಲಿ ಫ್ಯಾಂಟಂ ಚಿತ್ರದ ಶೂಟಿಂಗ್ ಆರಂಭವಾಗಿದೆ. ಸಾಮಾನ್ಯವಾಗಿ ಹೊರ ರಾಜ್ಯಗಳಲ್ಲಿ ಚಿತ್ರೀಕರಣ ನಡೆದಾಗ ಅಲ್ಲಿನ ಕಾರ್ಮಿಕರಿಗೆ ಕೆಲಸ ನೀಡುವುದು ವಾಡಿಕೆ. ಆದರೆ ಈ ಸಲ ಸುದೀಪ್ ಅವರ ಆಜ್ಞೆಯಂತೆ ಸರಿಸಮಾರು ಇನ್ನೂರೈವತ್ತು ಮಂದಿ ಕಾರ್ಮಿಕರನ್ನು ಬೆಂಗಳೂರಿನಿಂದಲೇ ಕರೆದುಕೊಂಡು ಹೋಗಿ ಉದ್ಯೋಗ ನೀಡಲಾಗಿದೆ. ಈ ಚಿತ್ರದ ಕುರಿತಾಗಿ ಇನ್ನೂ ಸಾಕಷ್ಟು ಕುತೂಹಲಕಾರಿ ವಿಚಾರಗಳಿದ್ದು ಅವೆಲ್ಲವೂ ಹಂತಹಂತವಾಗಿ ಹೊರಬರಲಿದೆ.
Get In Touch With Us info@kalpa.news Whatsapp: 9481252093
Discussion about this post