ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶ್ರಾವಣ ಸರ್ವರಿಗೂ ಸಂಭ್ರಮದ ಮಾಸ. ಶ್ರಾವಣದ ತುಂತುರು ಹನಿಗಳ ನಡುವೆಯೇ ಹಬ್ಬಗಳನ್ನು ಎದುರುಗೊಳ್ಳುವ ಆತುರದಿಂದ ಸುಣ್ಣ-ಬಣ್ಣ ತಳಿರು ತೋರಣಗಳಿಂದ ಮನೆಗಳನ್ನು ಸಿಂಗರಿಸುತ್ತಾರೆ, ಹಾಗೆ ನೋಡಿದರೆ ಶ್ರಾವಣ ಪ್ರತಿದಿನವೂ ಹಬ್ಬವೇ ಆಯಾ ಜನಾಂಗಗಳಿಗೆ ಆಯಾ ಪಂಗಡಗಳಿಗೆ ಅವರವರ ನಂಬಿಕೆಗಳುನಸಾರವಾಗಿ ಒಂದೊಂದು ದಿನಕ್ಕೆ ಒಂದೊಂದು ಮಹತ್ವ.
ಈ ಪವಿತ್ರಮಾಸದುದ್ದಕ್ಕೂ ವ್ರತಾಚರಣೆ ಮಾಡುತ್ತ ಕೇವಲ ಫಲಾಹಾರ ಹಾಗೂ ಹಾಲುಗಳ ಸೇವನೆ ಹಾಗೂ ಮಾಂಸ-ಕುಡಿತಗಳ ತ್ಯಾಗ ಮಾಡುವ ಪದ್ಧತಿ ಎಲ್ಲ ಕುಲಗಳಲ್ಲೂ ಉಂಟು. ದೇವಾಸುರರು ಸಮುದ್ರಮಂಥನ ಮಾಡಿದ್ದು ಈ ಮಾಸದಲ್ಲೇ ಎನ್ನುವ ನಂಬಿಕೆ ಇದೆ. ಲಕ್ಷ್ಮಿಯೂ ಸೇರಿದಂತೆ ಚತುರ್ದಶರತ್ನಗಳು ಉದ್ಭವಿಸಿ ಲೋಕಗಳನ್ನು ಸಮೃದ್ಧಗೊಳಿಸಿದರಿಂದ ಈ ಮಾಸದಲ್ಲಿ ಮಾಡುವ ಎಲ್ಲ ನೇಮಗಳೂ ಸಮೃದ್ಧಿಕಾರಕ ಎನ್ನಲಾಗುತ್ತದೆ.
ಶ್ರಾವಣ ಪ್ರತಿಯೊಬ್ಬರ ಬದುಕಿನಲ್ಲಿ ಹೊಸತನ ತರುತ್ತದೆ. ನವಚೈತನ್ಯ ತುಂಬುತ್ತದೆ. ಈ ಹೊಸತನ ಈ ನವಚೈತನ್ಯ ಪ್ರಕೃತಿಯ ಕೊಡುಗೆ. ಪ್ರಕೃತಿ ನಮ್ಮನ್ನು ಪೊರೆಯುತ್ತಿರುವ ತಾಯಿ, ತಾಯಿ ತನ್ನ ಮೈತುಂಬ ಹಸಿರುಟ್ಟು, ತಲೆತುಂಬ ವಿಭಿನ್ನ ಬಗೆಯ ಹೂವುಗಳನ್ನು ಮುಡಿದು ನಲಿಯ ತೊಡಗಿದಾಗ ಮಕ್ಕಳಾದ ನಮಗೆ ಕುಣಿಯಬೇಕೆನ್ನಿಸುತ್ತದೆ. ನಿಸರ್ಗದ ಮಕ್ಕಳು ಈ ತಿಂಗಳು ಹಾಡುತ್ತಾರೆ, ಕುಣಿಯುತ್ತಾರೆ. ಹಬ್ಬಗಳನ್ನು ಆಚರಿಸುತ್ತಾರೆ. ಪ್ರಕೃತಿಯ ವೈಭವವೇ ನಮ್ಮ ವೈಭವ. ಅದನ್ನು ಮರೆತು ಬಾಳುವುದು ಎಂದರೆ ಅದು ಜಡ ಬದುಕಾದೀತು ಎಚ್ಚರ!
ಶ್ರಾವಣ ಸಂಭ್ರಮದ ತಿಂಗಳು ಎನ್ನುವುದರಲ್ಲಿ ಸಂದೇಹವಿಲ್ಲವಾದರೂ ಅದು ಈಗ ಹಿಂದಿನಂತೆ ಆಚರಣೆಗೊಳ್ಳುತ್ತಿಲ್ಲ ಎಂಬುದನ್ನೂ ನಾವು ಒಪ್ಪಿಕೊಳ್ಳಬೇಕು. ಶ್ರಾವಣದ ಸಂಭ್ರಮ ಗ್ರಾಮೀಣ ವಲಯದಲ್ಲಾದರೂ ಇದೆ ಎಂದು ಅತ್ತ ಹೋದರೆ ಅಲ್ಲಿಯೂ ಪಟ್ಟಣದ ಥಳಕು ಬೆಳಕಿನ ಆಧುನಿಕ ಜೀವನ ಪ್ರವೇಶ ಪಡೆದಿದ್ದು ಸಾಂಪ್ರದಾಯಿಕ ಹಬ್ಬ ಹರಿದಿನಗಳು ತಮ್ಮ ಮೊದಲಿನ ವೈಭವ ಕಳೆದುಕೊಳ್ಳುತ್ತಿದೆ. ಉದಾಹರಣೆಗೆ ಶ್ರಾವಣ ಮಾಸದಲ್ಲಿ ನಡೆಯುವ ಹೊಸ್ತಿಲ ಪೂಜೆಯನ್ನೇ ನೋಡಿ, ನವನಾಗರೀಕತೆಯ ಸೋಂಕಿನಲ್ಲಿ ಎಲ್ಲೆಲ್ಲೂ ತಲೆಯೆತ್ತಿ ನಿಂತಿರುವ ಕಾಂಕ್ರೀಟ್ ಬಂಗಲೆಗಳಲ್ಲಿ ಹೊಸ್ತಿಲುಗಳಿಗೆ ಮಾನ್ಯತೆಯೇ ಇಲ್ಲ. ಕೆಲವು ಮನೆಗಳಲ್ಲಿ ಹೊರ ಬಾಗಿಲಿನಲ್ಲಿ ಮಾತ್ರ ಹೆಸರಿಗೆ ಎನ್ನುವಂತೆ ಒಂದು ಹೊಸ್ತಿಲು ಇರುತ್ತದೆ. ಕೆಲವಡೆ ಅದೂ ಇರುವುದಿಲ್ಲ. ಅಂದಾಗ ಹೊಸ್ತಿಲ ಪೂಜೆ ನಡೆಯುವುದೆಲ್ಲಿ? ಇಂದಿನ ಜನರು ನಾಗರೀಕತೆಯ ಬದುಕಿಗೆ ಒಗ್ಗಿಕೊಂಡಿದ್ದು, ಹಿಂದಿನ ಆಚರಣೆಗಳಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ.
ಕಲ್ಲು ಪ್ರಕೃತಿ ಅದು ಶಿಲ್ಪಿಯ ಕೈಯಲ್ಲಿ ಕಡೆದಾಗ ಸಂಸ್ಕೃತಿ ಎನಿಸುತ್ತದೆ. ಮನುಷ್ಯನು ಜೀವನವನ್ನು ಹೇಗೋ ಒಂದು ಗಳಿಗೆಯಲ್ಲಿ ಬಾಳಿ ಮುಗಿಸುವುದಂತೂ ಇದ್ದೇ ಇರುತ್ತದೆ. ಆದರೆ ಅದರಲ್ಲಿ ಧ್ಯೇಯ ಹಾಗೂ ವಿಕಾಸಪ್ರಾಯ ಜೀವನಶೈಲಿ ಇರದಿದ್ದಲ್ಲಿ ಅದು ಅರ್ಥಹೀನವೇ ಸರಿ. ಮೌಲ್ಯ, ಸಂಸ್ಕೃತಿ, ಧರ್ಮಪ್ರಜ್ಞೆ, ಸರ್ವಹಿತದೃಷ್ಟಿ ಹಾಗೂ ಪರತತ್ವದ ಜಿಜ್ಞಾಸೆಗಳೆಂಬ ವಿಚಾರ ಹಾಗೂ ಅನುಷ್ಠಾನ ಎನ್ನುವ ಆಚಾರ ಸೇರಿದಾಗಲೇ ಜೀವನಕ್ಕೆ ಒಂದು ಊರ್ಧ್ವಮುಖತೆ ಸಿಗುವುದು. ಭಾರತೀಯ ಚಿಂತನಧಾರೆಯಲ್ಲಿ ಹರಿದು ಬಂದ ಈ ಆಚಾರ-ವಿಚಾರಗಳ ಹಲವು ಮುಖಗಳ ಇಣುಕು ನೋಟವಿದು.
ಹಬ್ಬಗಳ ಸಾಮ್ರಾಟ
ಶ್ರವಣ ನಕ್ಷತ್ರ ವಿಷ್ಣುವಿನ ಜನ್ಮನಕ್ಷತ್ರವಂತೆ , ಶ್ರಾವಣ ಹುಣ್ಣಿಮೆಯಂದು ಶ್ರವಣ ನಕ್ಷತ್ರ ಬರುವುದರಿಂದ ಇಡೀ ಮಾಸಕ್ಕೆ ಪಾವಿತ್ರ್ಯ ಬಂತು ಎನ್ನುತ್ತಾರೆ. ಕೇರಳದಲ್ಲಿ ಅದರಲ್ಲಿನ ಶ್ರ’’ಕಳೆದು ವಣಂ ಮಾತ್ರ ಉಳಿಯಿತು. ಅದು ಅನಂತಶಯನನಾದ ಶ್ರೀವಿಷ್ಣುವಿನ ನಕ್ಷತ್ರವಾಗಿ ತಿರು(ಶ್ರೀ) ವೋಣಂ ಆಯ್ತು. ಬಲಿ ಚಕ್ರವರ್ತಿ ಮತ್ತು ವಿಷ್ಣುವಿನ ವಾಮನಾವತಾರದ ನಡುವಿನ ಕತೆಯೂ ಇದರೊಂದಿಗೆ ಹೊಂದುಕೊಂಡಿದೆ.
ಇದನ್ನು ಪ್ರಸೂತಿನಿ ಮಾಸವೆಂದು ಕರೆಯುತ್ತಾರೆ. ಯಾವುದೇ ದೋಷವಿದ್ದರೂ ಈ ಮಾಸದಲ್ಲಿ ರವಿಯು ಸಿಂಹಪ್ರವಿತನಾಗಿರುವಾಗ ಶಾಂತಿ ಮಾಡಿಸಿದರೆ ಪರಿಹಾರವಾಗುತ್ತದೆ ಎನ್ನುವ ನಂಬಿಕೆ ಇದಕ್ಕೆ ಕಾರಣ. ಆಷಾಢ ಜಡಿ ಮಳೆನೀರನ್ನು ಸ್ವೀಕರಿಸಿ ಉಬ್ಬಿ ಉಗ್ರಗೊಂಡಿರುವ ಸಮುದ್ರವು ಶ್ರಾವಣ ಹುಣ್ಣಿಮೆಯಂದು ಶಾಂತವಾಗುತ್ತದೆ. ಕರಾವಳಿಯಲ್ಲಿ ಈ ದಿನ ವರುಣದೇವತೆಯೆಂದು ಸಮುದ್ರಕ್ಕೆ ಪೂಜೆ ಸಲ್ಲಿಸಿ ಸಂಭ್ರಮಿಸುತ್ತಾರೆ. ಶ್ರಾವಣ ಮಾಸಕ್ಕೆ ಅಧಿದೇವತೆ ಶಿವನಾದ್ದರಿಂದ ಇಲ್ಲಿ ಗಂಗೆಯನ್ನು ಶಿರದಲ್ಲಿ ಧರಿಸಿದ ಈಶ್ವರ ಮುಕ್ಕಣನೆಂದು ತೆಂಗಿನ ಕಾಯಿಯನ್ನು ಸಮುದ್ರಕ್ಕೆ ಸಲ್ಲಿಸಿ, ಈ ಮೂಲಕ ಗಂಗೆಯನ್ನು ಧರಿಸಿದ ಶಿವನನ್ನೂ ವಿಶೇಷವಾಗಿ ಪೂಜಿಸುತ್ತಾರೆ.
ವಾಲ್ಮಿಕಿಯ ಅವತಾರವೆನ್ನುವ ಹನುಮಾನ್ ಚಾಲೀಸ ರಚಿಸಿದ ತುಲಸೀದಾಸರು ಕೂಡ ಹುಟ್ಟಿದ ತಿಂಗಳು ಇದುವೇ. ಕಾರ್ತೀಕದಲ್ಲಿ ಸೋಮವಾರ, ಮಾರ್ಗಶಿರದಲ್ಲಿ ಗುರುವಾರ ಮತ್ತು ಮಾಘದಲ್ಲಿ ಭಾನುವಾರ ಶ್ರೇಷ್ಟವಾದರೆ ಶ್ರಾವಣದಲ್ಲಿ ಮಾತ್ರ ಮೂರು ವಾರಗಳು ಪ್ರಶಸ್ತ ಶ್ರಾವಣ ಶುಕ್ರವಾರ, ಶ್ರಾವಣ ಶನಿವಾರ, ಶ್ರಾವಣ ಮಂಗಳವಾರ .ನಮ್ಮ ಬಹುತೇಕ ಜನರು ಪೂಜಾಮನಸ್ಕರು ಮತ್ತು ಪುರಾಣವತ್ಸಲರು, ಶ್ರಾವಣ ದಲ್ಲಿ ಇದರ ನೆಪ ಮಾಡಿ ಪುಣ್ಯ ಸಂಚಯಕ್ಕೆ ವೇದಿಕೆಯಾಗಿಸಿಕೊಳ್ಳುತ್ತಾರೆ. ಈ ಕಾರಣದಿಂದಾಗಿ ಶ್ರಾವಣ ಮಾಸಕ್ಕೆ ಪ್ರತಿಸ್ಪರ್ಧೆಯೇ ಇಲ್ಲ ,ಹಾಗೆಯೆ ನಾವು ಬರಿ ವ್ರತ ಅನುಷ್ಠಾನಕ್ಕೆ ಮೀಸಲಾಗಿರಿಸದೆ ಸಾಧನಾಮಾಸವನ್ನಾಗಿ ಪರಿವರ್ತಿಸಿ ಮಾಸನಿಯಾಮಕ ಶ್ರೀಧರರೂಪಿ ಪರಮಾತ್ಮನಿಗೆ ಅರ್ಪಿಸಬೇಕು.
ಆಧ್ಯಾತ್ಮಿಕ ಪರ್ವಗಳಷ್ಟೆ ಅಲ್ಲದೆ ಹೋರಾಟ-ತ್ಯಾಗ ಬಲಿದಾನಗಳ ನೆನಪಿಸುವ ಸ್ವಾತಂತ್ರದಿನವೂ ಶ್ರಾವಣದಲ್ಲೆ, ಇಂದು ನಾವೆಲ್ಲರೂ ನಿರುಮ್ಮಳವಾಗಿರುಂತೆ ಅನುಕೂಲ ಮಾಡಿಕೊಟ್ಟವರ ಸ್ಮರಣೆ. ಮೇಳು- ಕೀಳು ಎನ್ನುವ ಭೇದಗಳಿಗೆ ಬೇಕಾದಷ್ಟು ಕಾರಣಗಳು ದೊರೆಯುವ ಕಾಲವಿದು. ಇಂತಹ ಕಾಲದಲ್ಲಿ ಸಾಮಾಜಿಕ ಜೀವನದ ಸೊಬಗಿನಲ್ಲಿ ಮಾನವೀಯತೆ ಪ್ರಧಾನವಾಗಬೇಕು ಎನ್ನುವ ಆಶಯ ಬಿತ್ತಿದ ಮಹರ್ಷಿ ಅರವಿಂದರ ಜನ್ಮದಿನ ಈ ಮಾಸದಲ್ಲೆ.
ಶ್ರಾವಣದ ಹಬ್ಬಗಳಲ್ಲಿ ಮಹಿಳೆಯರ ಅಂತರಂಗ ತೆರೆದುಕೊಳ್ಳುತ್ತದೆ. ಸಮಾಜದೊಂದಿಗೆ ಬೆಸೆಯುತ್ತದೆ. ಇಲ್ಲಿ ಖಾಸಗಿತನವಿದೆ, ಸಮೂಹದ ಸಂಭ್ರಮವಿದೆ. ಪ್ರತಿ ಶ್ರಾವಣದಲ್ಲೂ ಹೆಣ್ಣು ಹೊಸಬಳಾಗುತ್ತಾಳೆ. ಈ ಹೊಸದಾಗುವ ಕ್ರಿಯೆಯೇ ಶ್ರಾವಣ ಹೂರಣವೂ ಹೌದು, ಇಂಥ ಎಲ್ಲಾ ನೆನೆಪುಗಳೊಂದಿಗೆ ಮತ್ತೆ ಬಂದಿದೆ ಶ್ರಾವಣ. ಮಹಿಳೆಯರ ಕಣ್ಣಿನಲ್ಲಿ ಮಿನುಗುತಿದೆ ಕಾಂತಿಯ ಕಿರಣ.
ಮೇಲೇರಿದವನು ಚಿಕ್ಕವನಿರಬೇಕೆಲೆ
ವ್ಯಕ್ತಿ ಎಷ್ಟೇ ಸಿರವಂತನಿರಬಹುದು. ಆತ ಸದಾ ಸಂತೃಪ್ತನೇ ಇರಬಹುದು. ಎಲ್ಲರಿಗೂ ದಾನ-ಧರ್ಮ ಮಾಡುತ್ತ ತಾನೇ ಮೇಲಿದ್ದೇನೆ ಎಂಬ ತೃಪ್ತಿ ಆತನಲ್ಲಿರಬಹುದು. ಆದರೆ ಆತನನ್ನು ಮೀರಿದ ಶಕ್ತಿಯೊಂದಿದೆ ಎಂಬುದನ್ನು ನೆನಪಿಸಿಕೊಳ್ಳುವ ಅಪೂರ್ವಅ ವೇಳೆ ಇದು. ಪ್ರತಿ ಶ್ರಾವಣ ಶನಿವಾರಗಳಂದು ಕಿರಿಯರು-ಹಿರಿಯರೆನ್ನದೆ ಎಲ್ಲರೂ ನಾಮ ಹಾಕಿ ಭಿಕ್ಷೆ ಬೇಡುವ ಆಚರಣೆಯೂ ವೈಷ್ಣವರಲ್ಲಿದೆ. ಇದಕ್ಕೆ ಪಡಿ ಬೇಡುವುದು ಅನ್ನುತ್ತಾರೆ. ಈ ಮೂಲಕ ನಮ್ಮೊಳಗಿನ ಅಹಂಕಾರ ತೊಡೆದು ವಿನಮ್ರತೆ ಸಾರಬೇಕೆಂಬುದು ಇದರ ಹಿಂದಿನ ಉದ್ದೇಶ.
ಮಂಗಳಗೌರೀ ವ್ರತ
ವಿವಾಹಿತ ಮಹಿಳೆಯರು ಮದುವೆಯಾದ ಮೊದಲ ಐದು ವರ್ಷಗಳವರೆಗೆ ಮಾಡುವ ವ್ರತವಿದು. ಈ ವ್ರತವನ್ನು ಶ್ರಾವಣಮಾಸದಲ್ಲಿ ಬರುವ ನಾಲ್ಕು ಮಂಗಳವಾರಗಳಲ್ಲಿ ಆಚರಿಸಬೇಕು. ಮಂಗಳವಾರದ ದಿನ ಎಣ್ಣೆಯ ಸ್ನಾನ ಮಾಡಿ ಮಂಗಳದ್ರವ್ಯಗಳನ್ನು ಸಿದ್ಧಪಡಿಸಿಟ್ಟುಕೊಂಡು, ತಟ್ಟೆಯಲ್ಲಿ ಅಕ್ಕಿಯನ್ನು ಹರಡಿ ಅದರ ಮಧ್ಯೆ ಮಂಗಳವಾರದ ಅರಿಶಿನದಿಂದ ಗೋಪುರಾಕಾರದಲ್ಲಿ ಮಾಡಿದ ಮಂಗಳಗೌರಿಯನ್ನು ಸ್ಥಾಪಿಸಬೇಕು. ಕಲಶವನ್ನು ಸ್ಥಾಪಿಸಿ, ಕನ್ನಡಿ ಮುಂದಿಟ್ಟು, ಐದು ಕಣಗಳನ್ನು ಇಟ್ಟು, ಪೂರ್ಣಫಲವಾದ ತೆಂಗಿನಕಾಯಿಯನ್ನು ಬದಿಯಲ್ಲಿಟ್ಟು, ಆಮೇಲೆ ಗೌರಿಗೆ ಅವಾಹನೆ, ಆಸನಗಳನ್ನು ನೀಡಬೇಕು. ತಂಬಿಟ್ಟು-ಕೋಸಂಬರಿಗಳನ್ನು ನಿವೇದಿಸಬೇಕು. ತಂಬಿಟ್ಟಿನಲ್ಲಿ ಮಾಡಿದ 16 ದೀಪಗಳನ್ನು ಹಚ್ಚಬೇಕು. ವಾಯನದಾನ ಹಾಗೂ ಮೊರದ ಬಾಗಿನಗಳನ್ನು, ನಿವೇದಿತವಾದುದನ್ನು ಸುವಾಸಿನಿಯರಿಗೆ ಕೊಡಬೇಕು.
ಜೀವನದಲ್ಲಿ ಮದುವೆಯ ಮಂಗಳಕಾರ್ಯ ಆದ ಆನಂತರ, ಮನೆಗೆ ಮಂಗಳವಾದಂತೆ ಮುಂದಿನ ಜೀವನವು ಮಕ್ಕಳು, ಆರೋಗ್ಯ, ಆರೈಕೆಗಳಿಂದ ಮಂಗಳಮಯವಾಗಿ ಸಾಗಬೇಕಲ್ಲವೇ. ಅದಕ್ಕೆ ಮಂಗಳ ಗೌರಿಯ ಅನುಗ್ರಹ ಅತ್ಯವಶ್ಯ. ಈ ಆರಾಧನೆಯಿಂದ ಶಿವನು ಗೌರಿಯ ಅರ್ಧದೇಹ ಹಂಚಿ ಅರ್ಧನಾರೀಶ್ವರನಾದಂತೆ, ಸಂಪೂರ್ಣ ಸಾಮರಸ್ಯ ದಂಪತಿಗಳಲ್ಲಿ ಬರುವುದು ಖಚಿತ. ಇದನ್ನು ಐದು ವರ್ಷದವರೆಗೆ ಆಚರಿಸಿ ಪಾತ್ರೆಯಲ್ಲಿ ಧಾನ್ಯಾದಿಗಳನ್ನು ತುಂಬಿ ಪ್ರತಿಮೆಯನ್ನು ಇಟ್ಟು, ಪಾತ್ರೆಯ ಮುಖವನ್ನು ಮುಚ್ಚಿ ಮೊರದ ಬಾಗಿನದೊಂದಿಗೆ (ಸೀರೆ ಸಹಿತ) ದಾನಕೊಡುವ ಪದ್ಧತಿ ಇದೆ. ಇದರಿಂದ ಉಮಾಮಹೇಶ್ವರಾಂತರ್ಗತ ಜಯಾಪತಿ ಸಂಕರ್ಷಣ ಪ್ರೀತನಾಗುವನು. ಮದುವೆಯಾದ ದಂಪತಿಗಳಲ್ಲಿ ಸಾಮರಸ್ಯಕ್ಕೆ ಮನೋಭಿಮಾನಿಯಾದ ರುದ್ರದೇವರ ಅನುಗ್ರಹ ಬೇಡವೇ?
Get In Touch With Us info@kalpa.news Whatsapp: 9481252093
Discussion about this post