ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕು ಪ್ರದೇಶ ಪ್ರಾಕೃತಿಕ ರಮ್ಯತೆಯ ತಾಣವಾಗಿದೆ. ಪಶ್ಚಿಮ ಘಟ್ಟದ ತಪ್ಪಲು, ದಟ್ಟ ಮಲೆನಾಡು. ಪ್ರಕೃತಿಯ ನೈಸರ್ಗಿಕ ಸೊಬಗಿನ ನಯನ ಮನೋಹರ ದೃಶ್ಯಗಳು. ನಿತ್ಯ ಹರಿದ್ವರ್ಣದ ಕಾನನಗಳಲ್ಲಿ ಗಗನಚುಂಬಿ ವೃಕ್ಷ ಸಮೂಹಗಳು. ವೃಕ್ಷರಾಜಿಗಳನ್ನು ಸುತ್ತಿ ತಬ್ಬಿ ಪಸರಿಸಿ ನಿಂತ ಬಳ್ಳಿ, ತರುಲತೆ ವನಸುಮಗಳು. ಬೆಟ್ಟ ಗುಡ್ಡ, ಗಿರಿ, ಕಂದರಗಳು. ಅವುಗಳಿಂದ ತರಂಗ ತರಂಗಗಳಾಗಿ ಧುಮ್ಮಿಕ್ಕುವ ಅಬ್ಬಿಗಳು. ವೈವಿಧ್ಯಮಯ ಪ್ರಾಣಿ ಸಂಕುಲ.
ಪ್ರಕೃತಿಯ ತದ್ಯಾತ್ಮತೆಗೆ ಅನುಗುಣವಾಗಿ ಸಂಗೀತದ ಕಲರವ ಹೊಮ್ಮಿಸುವ ಖಗ ಸಂಕುಲಗಳು. ಇಲ್ಲಿಯ ಜಾವಲಿ ಎಂಬಲ್ಲಿಂದ ಹೇಮಾವತಿ ನದಿಯ ಉಗಮವಾಗುತ್ತದೆ. ’ದೇವರ ಮನೆ’ ಮುಂತಾದ ಐತಿಹಾಸಿಕ ಚಾರಣ ಧಾಮಗಳಿವೆ. ಪ್ರಕೃತಿದತ್ತವಾದ ನಿಸರ್ಗಕ್ಕೆ ಅನುವಾಗಿ ಮಾನವ ಸೃಜಿತ ವಿಸ್ತಾರವಾದ ಕಾಫಿ, ಕಂಗು, ತೆಂಗು ಏಲಕ್ಕಿ, ಕಾಳು ಮೆಣಸುಗಳ ತೋಟಗಳು, ಬತ್ತದ ಗದ್ದೆಗಳೂ ಕಣ್ – ಮನ ಸೆಳೆಯುತ್ತವೆ. ನಾಡಿನ ಖ್ಯಾತ ಸಾಹಿತಿ ಪೂರ್ಣ ಚಂದ್ರ ತೇಜಸ್ವಿಯವರ ’ನಿರುತ್ತರ’ ಎಸ್ಟೇಟ್ ಇಲ್ಲಿದೆ. ಅವರ ಪ್ರಸಿದ್ಧ ’ಕರ್ವಾಲೋ’ ಕಾದಂಬರಿಯಲ್ಲಿ ಜೀವ ವಿಕಾಸದ ನಿಗೂಢತೆಗಳೊಂದಿಗೆ ಮೂಡಿಗೆರೆ ಮತ್ತು ಪಶ್ಚಿಮ ಘಟ್ಟದ ನೈಸರ್ಗಿಕತೆಯ ರಮ್ಯತೆ ದೃಶ್ಯ ಕಾವ್ಯಗಳಂತೆ ಚಿತ್ರಿಸಲ್ಪಟ್ಟಿದೆ.

ಕಾಲೇಜು ದಿನಗಳಲ್ಲಿ ಮತ್ತು ಅನಂತರ ಅನೇಕ ಬೀದಿ ನಾಟಕಗಳಲ್ಲಿ ಅಭಿನಯಿಸಿದವರು. ಬೀದಿನಾಟಕಗಳು ಸಮಕಾಲೀನ ಸಾಮಾಜಿಕ ಪಿಡುಗುಗಳ ವಿರುದ್ಧದ ಧ್ವನಿಯಾಗಿದ್ದವು. ಮುಖ್ಯವಾಗಿ ಸ್ತ್ರೀ ಸ್ವಾತಂತ್ರ್ಯ, ಮಹಿಳಾ ಶೋಷಣೆ, ಜಾತಿ ತಾರತಮ್ಯಗಳು, ಕೂಲಿಕಾರರ, ದಲಿತರ ಶೋಷಣೆ, ಅರಣ್ಯ ರಕ್ಷಣೆ, ಮತದಾನ ಜಾಗೃತಿ, ಏಡ್ಸ್ ಜಾಗೃತಿ, ಸ್ವಚ್ಛ ಪರಿಸರ, ಸರ್ವ ಶಿಕ್ಷಣ, ದೌರ್ಜನ್ಯ, ಅತ್ಯಾಚಾರ ಮೊದಲಾದ ವಿಚಾರಗಳ ಕುರಿತು ಜನಜಾಗೃತಿಗೊಳಿಸುವ ಗುರಿಯನ್ನು ಹೊಂದಿದ್ದವು. ಮಧು ಅವರು ಈ ಬೀದಿ ನಾಟಕಗಳಿಂದ ಅಭಿನಯದ ಗಟ್ಟಿ ತಳಹದಿಯನ್ನು ಪಡೆದು ಮತ್ತಷ್ಟು ಆಸಕ್ತಿಯನ್ನು ಹೆಚ್ಚಿಸಿಕೊಂಡರು.
ಬೀದಿ ನಾಟಕಗಳ ಅನುಭವದ ಆಧಾರದ ಮೇಲೆ ಮಧು ಅವರನ್ನು ರಂಗಭೂಮಿ ಕೈಬೀಸಿ ಕರೆಯಿತು. ಹಲವಾರು ಪ್ರಸಿದ್ಧ ರಂಗಕರ್ಮಿಗಳ ಹಾಗೂ ನಿರ್ದೇಶಕರ ಗರಡಿಯಲ್ಲಿ ಪಳಗುವ ಅವಕಾಶ ದೊರೆಯಿತು. ಮಧು ಅವರು ಅನೇಕ ನಾಟಕಗಳಲ್ಲಿ ಅಭಿನಯಿಸಿ ನಿರ್ದೇಶಕರಿಂದಲೂ, ಪ್ರೇಕ್ಷಕರಿಂದಲೂ ಸೈ ಎನಿಸಿಕೊಂಡರು. ’ಒಂದು ಬೊಗಸೆ ನೀರು’, ’ಗರ್ಭ ಸಂಘರ್ಷ’ , ’ಬದುಕು ಜಟಕಾ ಬಂಡಿ’, ಸಂಭಾವಿತರು’, ’ಮತ್ತೆ ಏಕಲವ್ಯ’, ’ಅಶೋಕ’ ’ಮಾಧ್ಯಮ ಆಯೋಗ, ಮೃಗನಯನಿ (ಹಿಂದಿ) ಕುವೆಂಪು ಅವರ ’ಜಲಗಾರ’ ಮುಂತಾದ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಒಂದು ಬೊಗಸೆ ನೀರು ಪ್ರೊ. ರಾಜಪ್ಪ ದಳವಾಯಿಯವರ ಸುಪ್ರಸಿದ್ಧ ನಾಟಕ. ಮಹತ್ವಾಕಾಂಕ್ಷೆಯೇ ಮನುಜ ರೂಪದಲ್ಲಿ ಮೂರ್ತಿವೆತ್ತು ಬಂದಿತ್ತೋ ಎಂದೆಣಿಸುವ ಗ್ರೀಕ್ ವೀರ ಅಲೆಕ್ಸಾಂಡರನ ಬದುಕಿನ ಅಸಹಾಯಕತೆಯ ದಾರುಣ ಚಿತ್ರಣ. ನಿರ್ದೇಶನ ಚಂದ್ರಶೇಖರ ಆಚಾರಿ ಅವರದು. ಈ ನಾಟಕದಲ್ಲಿ ಜಗತ್ತು ಕಂಡ ಶ್ರೇಷ್ಠ ತತ್ವಜ್ಞಾನಿ, ಅಲೆಕ್ಸಾಂಡರನ ಗುರು ಅರಿಸ್ಟಾಟಲನ ಪಾತ್ರವನ್ನು ಮನೋಜ್ಞವಾಗಿ ಅಭಿನಯಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದವರು ಮಧು.
ಮುಂದೆ, ಮನೆ ಗೆದ್ದು ಮಾರು ಗೆಲ್ಲು ಎನ್ನುವ ಗಾದೆಯಂತೆ ಬೀದಿ ನಾಟಕ ಹಾಗೂ ರಂಗಭೂಮಿಯಲ್ಲಿ ಗಳಿಸಿದ ಅಭಿನಯದ ಅನುಭವದಿಂದ ಕಿರುತೆರೆಗೆ ಬಂದರು. ಕಲ್ಹರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುವ ಮಜಭಾರತ ಕಾರ್ಯಕ್ರಮದಲ್ಲಿ ಒಂದು ವರ್ಷ ಕಾಲ ಸತತವಾಗಿ ಅಭಿನಯಿಸಿದರು. ಅದಕ್ಕೆ ನಡೆದ ಆಯ್ಕೆ ಪ್ರಕ್ರಿಯೆ ಕುತೂಹಲಕರವಾಗಿದೆ. ಶಿವಮೊಗ್ಗದಲ್ಲಿ ಆಯ್ಕೆ (Audition) ನಡೆಯಲಿದೆ ಎಂದು ಇವರಿಗೆ ತಿಳಿದದ್ದೆ ಎರಡು ದಿನ ಮುಂಚಿತವಾಗಿ. ಯಾವುದೇ ಪೂರ್ವ ತಯಾರಿಯಿಲ್ಲದೇ ನೇರವಾಗಿ ಶಿವಮೊಗ್ಗಕ್ಕೆ ತೆರಳಿ ಎಂದೋ ಹಿಂದೆ ಮಾಡಿದ್ದ ಪಾತ್ರವನ್ನೇ ಅಭಿನಯಿಸಿದರು. ಮೊದಲ ಸುತ್ತು ಗೊಂದಲದಲ್ಲಿ ಮುಗಿದು, ಕೇವಲ ಮೂರು ನಿಮಿಷ ಕಾಲಾವಕಾಶ ನೀಡಿ ಒಂದು ವಿಭಿನ್ನ ಪಾತ್ರದ ತಯಾರಿ ಮಾಡಿಕೊಂಡು ಬನ್ನಿ ಎಂದರು. ನಿಂತ ನೆಲದಲ್ಲೇ ಬಜಾರಿ ಸೊಸೆ ಹಾಗೂ ಅತ್ತೆಗೆ ಹೆದರುವ (ಒಂದರಲ್ಲೇ ದ್ವಿಪಾತ್ರ) ನಿರ್ವಹಿಸಿದರು.
ಅಂತಿಮ ಸುತ್ತಿನಲ್ಲಿ ಬೇರೆ ಬೇರೆ ಜಿಲ್ಲೆಯಿಂದ ಬಂದ ಐದೈದು ಕಲಾವಿದರ ತಂಡದೊಂದಿಗೆ ಪಾತ್ರಗಳನ್ನು ಹಂಚಿಕೊಂಡು ಹತ್ತು ನಿಮಿಷಗಳ ಕಾಲಾವಕಾಶದಲ್ಲಿ ಅಭಿನಯಿಸಬೇಕಿತ್ತು. ಹಾಗೆ ಅಭಿನಯಿಸಿ ಊರಿಗೆ ಬಂದರು. ನಾಲ್ಕು ವಾರಗಳ ಅನಂತರ ಕರೆ ಬಂತು. ಆ ಒಂದು ಕರೆ ನನ್ನ ಬದುಕಿನ ದಿಕ್ಕನ್ನೇ ಬದಲಾಯಿಸಿತು ಎಂದು ಕೃತಜ್ಞತೆಯಿಂದ ಸ್ಮರಿಸಿಕೊಳ್ಳುತ್ತಾರೆ. ಮಾರ್ಚ್ 1, 2019 ರಿಂದ ಒಂದು ವರ್ಷ ಕಾಲ ಉತ್ತಮ್ ಅವರ ನಿರ್ಮಾಣದ ಸಂಗೀತ ನಿರ್ದೇಶಕ ಗುರುಕಿರಣ್ ಹಾಗೂ ಚಲನಚಿತ್ರ ನಟಿ ರಚಿತಾ ರಾಮ್ ಮೌಲ್ಯಮಾಪಕರಾಗಿರುವ ಮಜಭಾರತ ಕಾರ್ಯಕ್ರಮದಲ್ಲಿ ಅಭಿನಯಿಸಿದ ಅನುಭವ ಮಧು ಅವರದ್ದು. ’ಸಿಲ್ಲಿ ಲಲ್ಲಿ’ ಎಂಬ ಧಾರಾವಾಹಿಯ ಒಂದು ಕಂತಿನಲ್ಲಿ ಅಭಿನಯಿಸಿದ್ದಾರೆ.

Get In Touch With Us info@kalpa.news Whatsapp: 9481252093









Discussion about this post