ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ದೇವಕಾತಿಕೊಪ್ಪ ಕೈಗಾರಿಕಾ ಪ್ರದೇಶ ವ್ಯಾಪ್ತಿಯಿಂದ ಗ್ರಾಮಸ್ಥರ ಮನೆ ಹಾಗೂ ಸ್ಮಶಾನದ ಜಾಗವನ್ನು ಕೈಬಿಡಲು ರಾಜ್ಯ ಸರ್ಕಾರ ಮಹತ್ವ ತೀರ್ಮಾನ ಕೈಗೊಂಡಿದೆ.
ಈ ಕುರಿತಂತೆ ಸಂಸದ ಬಿ.ವೈ. ರಾಘವೇಂದ್ರ ಅವರ ಕಚೇರಿಯಿಂದ ಅಧಿಕೃತ ಮಾಹಿತಿ ಬಿಡುಗಡೆ ಮಾಡಿದ್ದು, ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ಸಭೆಯಲ್ಲಿ ಕೈಗಾರಿಕೋಧ್ಯಮಿಗಳಿಗೆ ವಿಧಿಸಲಾಗಿದ್ದ ಬಡ್ಡಿ ಹಾಗೂ ಪೆನಾಲ್ಟಿಯನ್ನು ಮನ್ನಾ ಮಾಡಲು ಹಾಗೂ ಗ್ರಾಮದ ಗ್ರಾಮಸ್ಥರ ಮನೆ ಮತ್ತು ಸ್ಮಶಾನದ ಜಾಗವನ್ನು ಕೈಗಾರಿಕಾ ಪ್ರದೇಶ ವ್ಯಾಪ್ತಿಯಿಂದ ಕೈಬಿಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಲಾಗಿದೆ.
ಜುಲೈ 1ರಂದು ಶಿವಮೊಗ್ಗ ದೇವಕಾತಿ ಕೈಗಾರಿಕಾ ಪ್ರದೇಶಕ್ಕೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಜಗದೀಶ್ ಶೆಟ್ಟರ್ ಅವರು ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅಲ್ಲಿನ ಮೂಲಭೂತ ಸೌಕರ್ಯಗಳ ಕೊರತೆ ಬಗ್ಗೆ ಹಾಗೂ ಈಗಾಗಲೇ ಕೈಗಾರಿಕಾ ಪ್ರದೇಶ ಮಂಜೂರಾಗಿದ್ದರೂ ವಿದ್ಯುಚ್ಚಕ್ತಿ ಸರಬರಾಜು ಘಟಕ ಸ್ಥಾಪನೆಯಾಗದೇ ಕೈಗಾರಿಕೆಗಳನ್ನು ಸ್ಥಾಪನೆ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ, ಕೈಗಾರಿಕೋದ್ಯಮಿಗಳು ಕೈಗಾರಿಕೆ ಸ್ಥಾಪನೆ ಮಾಡದೇ ಇದ್ದರೂ, ಅವರುಗಳಿಗೆ ಬಡ್ಡಿ ಹಾಗೂ ಪೆನಾಲ್ಟಿ ಕಟ್ಟುವಂತೆ ಕೆ.ಐ.ಎ.ಡಿ.ಬಿ. ವತಿಯಿಂದ ನಿರಂತರ ನೋಟೀಸ್‌ಗಳನ್ನು ನೀಡುತ್ತಿರುವುದನ್ನು ಮಾನ್ಯ ಸಚಿವರ ಗಮನಕ್ಕೆ ಸಂಸದ ರಾಘವೇಂದ್ರ ಅವರು ತಂದಿದ್ದರು.
ಅದಷ್ಟು ಶೀಘ್ರ ಬಡ್ಡಿ ಮತ್ತು ಪೆನಾಲ್ಟಿಯನ್ನು ಮನ್ನಾ ಮಾಡುವಂತೆ ಒತ್ತಾಯಿಸಲಾಗಿತ್ತು. ಮತ್ತು ಅದೇ ರೀತಿ ದೇವಕಾತಿ ಕೊಪ್ಪದ ಕೈಗಾರಿಕಾ ಪ್ರದೇಶದ ಆರಂಭದಲ್ಲಿ ಗ್ರಾಮಸ್ಥರ ಮನೆಗಳು ಮತ್ತು ಸ್ಮಶಾನವಿದ್ದು, ಸದರಿ ಪ್ರದೇಶವನ್ನು ಕೈಗಾರಿಕಾ ಪ್ರದೇಶದಿಂದ ಕೈಬಿಡುವಂತೆ ಸಹ ವಿನಂತಿಸಲಾಗಿತ್ತು. ಸಂಸದರ ಮನವಿಯನ್ನು ಪರಿಗಣಿಸಿದ ರಾಜ್ಯ ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದೆ.
ಸಂಸದ ಬಿ.ವೈ. ರಾಘವೇಂದ್ರ, ಗ್ರಾಮಾಂತರ ಕ್ಷೇತ್ರದ ಶಾಸಕ ಕೆ.ಬಿ. ಅಶೋಕ್‌ನಾಯ್ಕ್ ಹಾಗೂ ಕರ್ನಾಟಕ ಆರ್ಯವೈಶ್ಯ ಅಭಿವೃದ್ದಿ ನಿಗಮದ ಅಧ್ಯಕ್ಷ ಡಿ.ಎಸ್. ಅರುಣ್ ಇವರುಗಳ ಮನವಿಗೆ ಸ್ಪಂದಿಸಿ ಸೂಕ್ತ ನಿರ್ಧಾರವನ್ನು ತೆಗೆದುಕೊಂಡು ದೇವಕಾತಿಕೊಪ್ಪದಲ್ಲಿ ಆದಷ್ಟು ತ್ವರಿತವಾಗಿ ಕೈಗಾರಿಕಾ ಘಟಕಗಳನ್ನು ಸ್ಥಾಪಿಸಲು ಅನುಕೂಲ ಮಾಡಿಕೊಟ್ಟ ಸಚಿವ ಜಗದೀಶ್ ಶೆಟ್ಟರ್ ಅವರಿಗೆ ಸಂಸದ ಬಿ.ವೈ. ರಾಘವೇಂದ್ರ ಅವರು ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಿದ್ದಾರೆ.
Get In Touch With Us info@kalpa.news Whatsapp: 9481252093
















