Read - < 1 minute
ಉಡುಪಿ, ಸೆ.4: ಕೃಷ್ಣಮಠದ ಇತಿಹಾಸದಲ್ಲಿ ಐದನೆಯ ಬಾರಿಗೆ ದ್ವೈವಾರ್ಷಿಕ ಕೃಷ್ಣಪೂಜಾ ಪರ್ಯಾಯ ನಿರತರಾಗಿರುವ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ತಮ್ಮ ಪರ್ಯಾಯಾವಧಿಯಲ್ಲಿ ಉದ್ದೇಶಿಸಿರುವ ಅನೇಕ ಯೋಜನೆಗಳ ಪೈಕಿ ಕೃಷ್ಣಮಠದ ಸುತುಪೌಳಿಯ ನವೀಕರಣ ಕಾರ್ಯಕ್ಕೆ ಭಾನುವಾರ ಚಾಲನೆ ನೀಡಲಾಯಿತು.
ಪೇಜಾವರ ಶ್ರೀಗಳು ಕೃಷ್ಣಮುಖ್ಯಪ್ರಾಣರು ಮತ್ತು ಮಧ್ವಾಚಾರ್ಯರ ಸನ್ನಿಧಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಈ ಕಾರ್ಯಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಪೇಜಾವರ ಕಿರಿಯ ಶ್ರೀವಿಶ್ವಪ್ರಸನ್ನ ತೀರ್ಥರು ಉಪಸ್ಥಿತರಿದ್ದರು.
ಪರ್ಯಾಯ ದರ್ಬಾರ್ ಸಭೆಯಲ್ಲಿ ಶ್ರೀಗಳು ಮುಂದಿನ 2 ವರ್ಷಗಳಲ್ಲಿ ಕೃಷ್ಣಮಠಕ್ಕೆ, ಭಕ್ತರಿಗೆ ಅನುಕೂಲವಾಗುವ ಯೋಜನೆಗಳನ್ನು ಮತ್ತು ಸಮಾಜ ಮುಖಿ ಕಾರ್ಯಯೋಜನೆಗಳನ್ನು ಅನುಷ್ಠಾನಿಸುವುದಾಗಿ ಘೋಷಿಸಿದ್ದರು. ಅದರಂತೆ ಕಳೆದ ಅನೇಕ ದಶಕಗಳ ಹಿಂದೆ (1928ರ ಆಸುಪಾಸು) ನಿರ್ಮಿಸಲಾಗಿದ್ದ ಪ್ರಸ್ತುತ ಜೀರ್ಣಾವಸ್ಥೆಯಲ್ಲಿರುವ ಮತ್ತು ಗಾಳಿ ಬೆಳಕುಗಳ ಸಂಚಾರ ಕಡಿಮೆ ಇರುವ ಕಾರಣಕ್ಕೆ ಸುತ್ತು ಪೌಳಿಯನ್ನು ತುಳುನಾಡಿನ ವಾಸ್ತು ವಿನ್ಯಾಸಕ್ಕೆ ಅನುಗುಣವಾಗಿ ನವೀಕರಿಸಿ ಸುಂದರಗೊಳಿಸುವ ಮಹತ್ವದ ಯೋಜನೆಯ ಬಗ್ಗೆ ಉದ್ದೇಶಿಸಿದ್ದಾರೆ.
ಈ ಜೀರ್ಣೋದ್ದಾರದ ಅವಧಿಯಲ್ಲಿ ನಿತ್ಯಪೂಜೆ ಮತ್ತು ಭಕ್ತರಿಗೆ ಯಾವುದೇ ತೊಂದರೆ ಉಂಟಾಗಬಾರದೆಂಬ ಎಚ್ಚರದೊಂದಿಗೆ ನುರಿತ ವಾಸ್ತು ತಜ್ಞರು ಮತ್ತು ಕಟ್ಟಡ ನಿರ್ಮಾಣ ಪರಿಣತರೊಂದಿಗೆ ಸುದೀರ್ಘ ಚರ್ಚೆ ನಡೆಸಿ ಯೋಜನೆಯ ನೀಲನಕಾಶೆಯನ್ನು ಸಿದ್ಧಪಡಿಸಿದ್ದಾರೆ. ಮುಂದಿನ ಒಂದು ವರ್ಷದೊಳಗೆ ಕಾಮಗಾರಿ ಮುಗಿಸಿ ಕೃಷ್ಣನಿಗೆ ಅರ್ಪಿಸಲಿದ್ದಾರೆ ಎಂದು ಮಠದ ದಿವಾಣರ ಪ್ರಕರಣೆ ತಿಳಿಸಿದೆ.
Discussion about this post