ಕಲ್ಪ ಮೀಡಿಯಾ ಹೌಸ್ | ಲೇಖನ: ಕೌಸಲ್ಯಾ ರಾಮ |
ಮೈಸೂರಿನ ನೃತ್ಯ ಗಿರಿ ಕೇಂದ್ರದ ಪ್ರಖ್ಯಾತ ನೃತ್ಯಗುರು, ವಿದುಷಿ ಕೃಪಾ ಫಡ್ಕೆ ಅವರ ಶಿಷ್ಯೆ ಸ್ತುತಿ ಹೆಗಡೆ ರಂಗಾರೋಹಣಕ್ಕೆ ಈಗ ಸಿದ್ಧ.
ಸಾಂಸ್ಕೃತಿಕ ರಾಜಧಾನಿ ಮೈಸೂರು ನಗರದ ಗಾನಭಾರತೀ ಆವರಣದ ರಮಾ ಗೋವಿಂದ ಕಲಾವೇದಿಕೆಯಲ್ಲಿ ಡಿ. 6ರ ಸಂಜೆ 6ಕ್ಕೆ ಸ್ತುತಿ ಹೆಗಡೆ ಭರತನಾಟ್ಯ ರಂಗ ಪ್ರವೇಶ ಕಾರ್ಯಕ್ರಮ ಆಯೋಜನೆಗೊಂಡಿದೆ.
ಈ ಸಂದರ್ಭಕ್ಕೆ ನಿವೃತ್ತ ಸೇನಾಧಿಕಾರಿ ಮಹಾಬಲೇಶ್ವರ ಹೆಗಡೆ, ಖ್ಯಾತ ಪ್ಲಾಸ್ಟಿಕ್ ಸರ್ಜನ್ ಡಾ. ನಾರಾಯಣ ಹೆಗಡೆ ಮತ್ತು ಹಿರಿಯ ನೃತ್ಯ ನಿರ್ದೇಶಕಿ , ಗುರು ಬೃಂದಾ ಅಯ್ಯಂಗಾರ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ನಾಗೇಂದ್ರ ಹೆಗಡೆ ಹಾಗೂ ರೂಪಾ ಹೆಗಡೆ ಹಾಜರಿರುತ್ತಾರೆ.
ತಾಯಿಯ ಕಲ್ಪನೆಗಳನ್ನು ಸಂಪನ್ನಗೊಳಿಸುವ ಸ್ತುತಿ
ಬಾಲ್ಯದಲ್ಲಿ ತಕ್ಕಮಟ್ಟಿಗೆ ಸಂಗೀತ ಮತ್ತು ನೃತ್ಯವನ್ನು ಕಲಿತುಕೊಂಡ ಅಮ್ಮ ಉನ್ನತ ಸಾಧನೆಯನ್ನು ಮಾಡಲಾಗಲಿಲ್ಲ. ಅದರೆ ಅದು ಮಗಳ ಮೂಲಕ ಈಗ ಸಂಪನ್ನಗೊಳ್ಳುವ ಕಾಲ ಕೂಡಿ ಬರುತ್ತಿದೆ. ಕಲಾರಂಗದ ಬಗ್ಗೆ ಅಮ್ಮನಿಗೆ ಇದ್ದ ಕನಸು, ಕಲ್ಪನೆ, ಭಾವ ಮತ್ತು ಉತ್ಕಟ ಆಕಾಂಕ್ಷೆಗಳೆಲ್ಲವೂ ಪುತ್ರಿಯ ಸ್ವರೂಪದಲ್ಲಿ ಪಡಮೂಡುವ ಸಂದರ್ಭವೇ ಇಡೀ ಕುಟುಂಬಕ್ಕೆ ಒಂದು ವಸಂತೋತ್ಸವವಾಗಿದೆ.
ಹೌದು. ಶಿರಸಿ ಮೂಲದ ರೂಪಾಹೆಗಡೆ ಪ್ರತೀಕವೇ ಅವರ ಪ್ರತಿಭಾನ್ವಿತ ಪುತ್ರಿ ಸ್ತುತಿ ಆಗಿರುವುದು ಒಂದು ಮಹಾ ಸುಕೃತ. ರೂಪಾ ಅವರ ತಾಯಿ ಮತ್ತು ದೊಡ್ಡಮ್ಮಂದಿರೆಲ್ಲರೂ ಹಿಂದುಸ್ತಾನಿ ಸಂಗೀತದಲ್ಲಿ ಸಾಕಷ್ಟು ಅಭ್ಯಾಸ, ಸಾಧನೆ ಮಾಡಿ ಆಗಿನ ಕಾಲದಲ್ಲೇ ಆಕಾಶವಾಣಿಯ ಕಲಾವಿದರಾಗಿದ್ದರು.
ರೂಪಾಗೂ ಅದೇ ಸಂಸ್ಕೃತಿ ಬಳವಳಿಯಾಗಿ ಬಂತು. ಪದವಿ ಮುಗಿಸುವ ಹೊತ್ತಿಗೆ ಒಂದಷ್ಟು ಸಂಗೀತ- ನರ್ತನ ಕಲಿತರೂ ಅದರಲ್ಲಿ ಔನ್ನತ್ಯ ಸಾಧಿಸಬೇಕು ಎಂಬ ಆಸೆ ಆಗ ಸಾಧ್ಯವಾಗಲಿಲ್ಲ. ‘ನಾನು ಏನೇನು ಕಲಾರಂಗದಲ್ಲಿ ಮಾಡಬೇಕು ಎಂದುಕೊಂಡಿದ್ದೆನೋ ಅವೆಲ್ಲವನ್ನೂ ಮಾಡುವಂತಹ ಮಗಳನ್ನು ಭಗವಂತ ನನಗೆ ಕೊಟ್ಟಿದ್ದು ಒಂದು ಯೋಗವೇ ಆಗಿದೆ. ನಾಲ್ಕು ಜನ ಸಾತ್ವಿಕರು, ವಿದ್ವಾಂಸರಿಂದ ಸ್ತುತಿಗೆ ಅರ್ಹವಾಗುವ ಮಗುವನ್ನು ಕೊಡು ಎಂದು ನಾನು ಮಾಡಿದ ಪ್ರಾರ್ಥನೆ ಫಲ ಪ್ರಾಪ್ತಿ ಆಗುವ ಹಂತದಲ್ಲಿರುವುದಕ್ಕೆ ನಾನು ಧನ್ಯ’ ಎನ್ನುತ್ತಾರೆ ರೂಪಾ.
ಮಗಳು ಸ್ತುತಿ ನನ್ನ ಇಷ್ಟಾರ್ಥಗಳನ್ನು ಈಡೇರಿಸುವ ಭರವಸೆಯ ಪ್ರತೀಕವಾಗಿ ರೂಪುಗೊಂಡಿರುವುದು, ನರ್ತನ ಕಲಿತು ರಂಗ ಪ್ರವೇಶದ ಹಂತಕ್ಕೆ ಬಂದಿರುವುದು ನಮಗೆಲ್ಲಾ ಹಬ್ಬದ ವಾತಾವರಣವನ್ನೇ ರೂಪಿಸಿಕೊಟ್ಟಿದೆ ಎಂದು ಖುಷಿಯಿಂದಲೇ ಹೇಳುತ್ತಾರೆ ರೂಪಾ.
ಗುರುವಂದನೆ
ರಂಗ ಪ್ರವೇಶ ಸಂದರ್ಭ ಭರತನಾಟ್ಯ ಗುರು ಡಾ. ಕೃಪಾ ಫಡ್ಕೆ ಅವರಿಗೆ ರೂಪಾ- ನಾಗೇಂದ್ರ ಹೆಗಡೆ ಕುಟುಂಬದವರು ಗುರುವಂದನೆ ಸಮರ್ಪಣೆ ಮಾಡಿ ಗೌರವಾದರ ಸಮರ್ಪಣೆ ಮಾಡಲಿರುವುದು ಮಾದರಿ ಕಾರ್ಯವಾಗಲಿದೆ.
ಸಂಗೀತ ಸಹಕಾರ
ಸ್ತುತಿ ಹೆಗಡೆ ರಂಗ ಪ್ರವೇಶಕ್ಕೆ ನಟವಾಂಗದಲ್ಲಿ ಪೂಜಾಸುಗಮ್, ಹಾಡುಗಾರಿಕೆಯಲ್ಲಿ ವಿದ್ವಾನ್ ದೀಪು ಕರುಣಾಕರನ್, ಮೃದಂಗದಲ್ಲಿ ವಿದ್ವಾನ್ ಶಿವ ಪ್ರಸಾದ್ ಮತ್ತು ಕೊಳಲು ವಾದನದಲ್ಲಿ ವಿದ್ವಾನ್ ಎ.ಪಿ. ಕೃಷ್ಣ ಪ್ರಸಾದ್ ಸಹಕಾರ ನೀಡಿ ರಂಗಪ್ರವೇಶ ಇನ್ನಷ್ಟು ಕಳೆಗಟ್ಟುವಂತೆ ಮಾಡಲು ಅಣಿಯಾಗಿದ್ದಾರೆ.
ಸ್ತುತಿ ಒಬ್ಬ ಪ್ರತಿಭಾನ್ವಿತ ವಿದ್ಯಾರ್ಥಿನಿ. ಅದಕ್ಕಿಂತಲೂ ಮಿಗಿಲಾಗಿ ಅವಳಲ್ಲಿ ಇರುವ ವಿನಯವಂತಿಕೆ ಮತ್ತು ಕಲಾಸಕ್ತಿಗಳು ಕಲಿಕೆಯನ್ನು ಸರಾಗ ಗೊಳಿಸಿವೆ. ಹೆತ್ತವರ ಸಹಕಾರ ಮತ್ತು ಕುಟುಂಬದ ಸಂಸ್ಕೃತಿ, ಮಗುವಿನಲ್ಲಿರುವ ಅದಮ್ಯ ಕಲಾಕಾಂಕ್ಷೆಗಳೇ ಆಕೆಯನ್ನು ಕಲಾ ರಂಗಕ್ಕೆ ಹೆಚ್ಚು ಹೆಚ್ಚು ಒಗ್ಗಿಸಿಕೊಳ್ಳುವಂತೆ ಮಾಡಿವೆ. ನಿರಂತರ ಕಲಿಕೆ ಮತ್ತು ಅಭ್ಯಾಸಗಳೇ ಒಬ್ಬ ಕಲಾವಿದರನ್ನು ಕ್ರಿಯಾಶೀಲವಾಗಿ ಇಡುತ್ತದೆ. ಈ ನಿಟ್ಟಿನಲ್ಲಿ ಸ್ತುತಿ ಸಾಧನೆ ಸಾವಿರ ಪಟ್ಟು ಹೆಚ್ಚಾಗಲಿ ಎಂದು ಶುಭ ಹಾರೈಸುವೆ.
-ವಿದುಷಿ ಕೃಪಾ ಫಡ್ಕೆ, ನೃತ್ಯಗಿರಿ ಸಂಸ್ಥೆ ನಿರ್ದೇಶಕಿ
ಬಹುಮುಖೀ ಚಟುವಟಿಕೆ
ಪ್ರತಿಭಾನ್ವಿತ ಕಲಾವಿದೆ ಸ್ತುತಿ ಹೆಗಡೆ ಮೂಲತಃ ಉತ್ತರ ಕನ್ನಡ ಜಿಲ್ಲೆ ಶಿರಸಿ ನಾಗೇಂದ್ರ ಹೆಗಡೆ (ಕಮರ್ಷಿಯಲ್ ಮೇನೇಜರ್ )- ರೂಪಾ ಹೆಗಡೆ ಪುತ್ರಿ. ಮೈಸೂರಿನ ಪ್ರಮತಿ ಹಿಲ್ ವ್ಯೆ ಅಕಾಡೆಮಿ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ. ಪಠ್ಯ ಮತ್ತು ಪಠ್ಯೇತರ ಚಟುವಟಿಕೆಯಲ್ಲಿ ನಂಬರ್ 1. ಎಳವೆಯಿಂದಲೇ ನರ್ತನ ಕಲಿಯುವ ವಿಶೇಷ ಆಸಕ್ತಿ ರೂಢಿಸಿಕೊಂಡ ಸ್ತುತಿಗೆ 6ನೇ ವಯಸ್ಸಿನಲ್ಲಿ ವಿದುಷಿ ಕೃಪಾ ಫಡ್ಕೆ ಶಿಷ್ಯತ್ವ ದೊರಕಿದ್ದು ಸುಯೋಗವೇ ಆಯಿತು. ಅವರ ಸಮರ್ಥ ಗರಡಿಯಲ್ಲಿ ಪಳಗುತ್ತ ಇರುವ ಸ್ತುತಿಗೆ ನೃತ್ಯ ಅಭ್ಯಾಸಗಳು ಎಂದೂ ಕಷ್ಟಕರವಾಗಿಲ್ಲ. ಮನೆಯ ಸುಸಂಸ್ಕೃತ ವಾತಾವರಣ, ಮಾತೆಯ ನಿರಂತರ ಪ್ರೋತ್ಸಾಹ, ತಂದೆಯ ಬೆಂಬಲಗಳು ವರವಾಗಿವೆ.
ಗಾಯನದಲ್ಲೂ ಆಸಕ್ತಿ
ಭರತನಾಟ್ಯದಲ್ಲಿ ಜೂನಿಯರ್ ಪರೀಕ್ಷೆಯನ್ನು ಮುಗಿಸಿ, ಸದ್ಯ ಸೀನಿಯರ್ ಹಂತದ ಅಭ್ಯಾಸ ಸಾಗಿದೆ.
ಹಾಡುಗಾರಿಕೆಯಲ್ಲೂ ಆಸಕ್ತಿ
ನರ್ತನ ಕಲೆಯೊಂದಿಗೆ ಸ್ತುತಿಗೆ ಹಾಡುವ ಹವ್ಯಾಸವೂ ಇದೆ. ಉಭಯ ಗಾನ ಕಲೆ ಸಿದ್ಧಿ ಮಾಡಿಕೊಳ್ಳಲು ತಾಲೀಮು ಸಾಗುತ್ತಿದೆ. ಹಿಂದುಸ್ತಾನಿ ಸಂಗೀತವನ್ನು ಗುರು ಗೀತಾ ಹೆಬ್ಬಾರ್ ಅವರಲ್ಲಿ, ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಗುರು ಉಮಾ ನಾಗಭೂಷಣ ಅವರಲ್ಲಿ ಕಲಿಯುತ್ತಿದ್ದಾಳೆ. ಇಲ್ಲಿಯೂ ಜೂನಿಯರ್ ಹಂತದ ಪರೀಕ್ಷೆ ಪೂರ್ಣಗೊಂಡಿದೆ. ಕರಾಟೆ ಪಟ್ಟುಗಳೂ ಕಗತವಾಗಿದೆ.
ಬೆಳೆಯುವ ಸಿರಿ
ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಸ್ತುತಿ ಸ್ಪರ್ಧಿಸಿದ ಅನೇಕ ಸಂಗೀತ- ನೃತ್ಯ ಸ್ಪರ್ಧೆಗಳಲ್ಲಿ ಬಹುಮಾನವನ್ನು ತನ್ನದಾಗಿಸಿಕೊಂಡಿದ್ದಾಳೆ. ರಾಷ್ಟ್ರೀಯ ಮಟ್ಟದ ರಂಗೋತ್ಸವ ಸೇರಿದಂತೆ ವಿವಿಧ ನೃತ್ಯ ಸ್ಪರ್ಧೆಯಲ್ಲಿ ಬಹುಮಾನ ಅಲಂಕೃತವಾಗಿವೆ. ಚಿತ್ರಕಲೆಯಲ್ಲಿಯೂ ವಿಶೇಷ ಆಸಕ್ತಿ ಹೊಂದಿರುವ ಸ್ತುತಿಗೆ ಚಿತ್ರಕಲಾ ಸ್ಪರ್ಧೆಯ ಬಹುಮಾನಗಳೂ ದೊರಕಿರುವುದು ಗಮನಾರ್ಹ ಸಂಗತಿ. ವಿದುಷಿ ಕೃಪಾ ಅವರ ಅಭಿಮಾನ, ವಿಶ್ವಾಸ ಮತ್ತು ಅನುಗ್ರಹ ಗಳಿಸಿರುವ ಸ್ತುತಿಗೆ ರಂಗಾರೋಹಣವು ನೃತ್ಯ ಕಲಾರಂಗದಲ್ಲಿ ಹೊಸ ಭರವಸೆಗಳನ್ನು ತುಂಬಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post