ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಎಲ್ಲರೂ ಒಟ್ಟಾಗಿ, ಒಂದಾಗಿ, ಮನ ಮನಸ್ಸಿನ ಬೇದ- ಪ್ರಬೇಧಗಳಾನ್ನು, ವಿರೋದಾಭಾಸಗಳನ್ನು ಅಸಹಿಷ್ಣುತಾ ಮನೋಭಾವನೆಗಳನ್ನು ಹೊರತುಪಡಿಸಿದಾಗ ಮಾತ್ರವೇ ಮಾಡುವ ವ್ರತ, ಪೂಜೆಯಲ್ಲಿ ಸಾರ್ಥಕತೆ ಕಂಡು ಬರುತ್ತದೆ. ಗೌರಿ ಪೂಜೆಯೊಳಗೆ ಅಂತಹದ್ದೊಂದು ತಾದಾತ್ಮ್ಯತೆವಿದೆ.
ಗೌರಿ ನೆಲ ಮುಗಿಲು ಬೆಸೆಯುವ ದೇವಿ. ಇವಳು ನಮ್ಮ ಮಣ್ಣಿನ ಮಗಳು, ಭೂಮಿಯ ಮಗಳು. ಆದ್ದರಿಂದಲೇ ಹತ್ತು ಹಲವು ಬಗೆಗಳಲ್ಲಿ ಗೌರಿ ನೆಮ್ಮೆಲ್ಲರ ಅಕ್ಕ. ಹೆಣ್ಣುಮಕ್ಕಳ ಪಾಲಿಗೆ ವಿಶೇಷ ಆದರ್ಶ ಇವಳು. ದಾಂಪತ್ಯ, ವಾತ್ಸಲ್ಯ, ಲಾವಣ್ಯಗಳು ಮಾತ್ರವಲ್ಲದೆ, ಗಟ್ಟಿತನ, ಗರ್ವ, ಆತ್ಮಸಮ್ಮಾನಗಳಿಗೂ ಗೌರಿ ನಮಗೆ ಮಾದರಿಯಾಗುತ್ತಾಳೆ. ಇವಳು ತ್ರಿಪುರ ಸುಂದರಿ. ಅಷ್ಟೇ ಶಕ್ತಿಶಾಲಿ ಕೂಡ. ಲೀಲೆಯಲ್ಲಿ, ಪಾರಮ್ಯದಲ್ಲಿ, ಭಕ್ತರ ಹೊಂದುವಿಕೆಯಲ್ಲಿ, ಜನಪ್ರಿಯತೆಯಲ್ಲೂ ಪತಿರಾಯ ಶಿವನಿಗೆ ಸರಿಸವಾಗಿ ನಿಲ್ಲುವ ಗೌರಿ, ಅರ್ಧ ನರೇಶ್ವರಿಯಾಗಿಯೂ ವೈಯುಕ್ತಿಕ ಗುರುತುಳ್ಳ ಆದರ್ಶ ಸ್ತ್ರೀ. ಇವಳು ಆಶ್ರಯ ಕೋರಿ ಬಂದವರಿಗಾಗಿ, ತನ್ನ ನಿರ್ಧಾರಗಳಿಗಾಗಿ ಶಿವನಿಗೆ ಮುಖಾಮುಖಿಯಾಗುತ್ತಲೇ ಸಾಂಗತ್ಯವನ್ನು ಉಳಿಸಿಕೊಳ್ಳುತ್ತಾಳೆ. ಎಷ್ಟರಮಟ್ಟಿಗೆ ಎಂದರೆ, ಒಂದು ಹಂತದಲ್ಲಿ ಈಕೆ ತನ್ನ ಭಕ್ತೆಯ ಗಂಡನನ್ನು ಉಳಿಸಲಿಕ್ಕಾಗಿ ಶಿವನೊಡನೆ ಯುದ್ಧಕ್ಕೂ ನಿಲ್ಲುತ್ತಾಳೆ! ಯುದ್ಧದಲ್ಲಿ ಗೆದ್ದು, ಅನಂತರ ಪ್ರೀತಿಯಿಂದಲೂ ಶಿವನನ್ನು ಗೆದ್ದುಕೊಳ್ಳುತ್ತಾಳೆ.
ಗೌರಿದೇವಿಯ ಕುರಿತ ಪೌರಾಣಿಕೆ ಕತೆಗಳಿಗೆ ಸಂವಾದಿಯಾಗಿ ಜಾನಪದ ಕಥೆಗಳು ಸಾಕಷ್ಟಿವೆ. ವಾಸ್ತವದಲ್ಲಿ ಈ ಕಥೇಗಳೇ ಹೆಚ್ಚು ಆಪ್ತವೂ ಜನಪ್ರಿಯವೂ ಆಗಿವೆ. ಅವುಗಳಲ್ಲೆಲ್ಲ ನಮಗೆ ಹಲವು ಮುಖಗಳ, ಹಲವು ಸಾಧ್ಯತೆಗಳ ಗೌರಿ ಕಾಣಸಿಗುತ್ತಾಳೆ. ಆ ಎಲ್ಲ ಮುಖಗಳೂ ನಮ್ಮ, ಅದರಲ್ಲೂ ಭಾರತೀಯ ಹೆಣ್ಣುಮಕ್ಕಳ ಅಂತರಂಗಕ್ಕೆ ಕನ್ನಡಿಯಂತಿವೆ. ಹೆಣ್ಣಿನ ನಿಜವಾದ ಶಕ್ತಿಗಳೇನು ಎನ್ನುವುದು ಗೌರಿಯ ವ್ಯಕ್ತಿತ್ವದಲ್ಲಿ ಅನಾವರಣಗೊಳ್ಳುತ್ತವೆ.
ಲೋಕದ ತಾಯಿ
ಗೌರೀ ಸಂಸಾರ ಅತ್ಯಂತ ವಿಲಕ್ಷಣವಾದುದು. ಇವರ ಕುಟುಂಬದಲ್ಲಿ ಗಂಡ ಹೆಂಡತಿ ಸೇರಿ ಕುಣಿಯುತ್ತಾರೆ. ಮಕ್ಕಳೂ ಸೇರಿದಂತೆ ಒಬ್ಬೊಬ್ಬರು ಒಂದೊಂದು ಕಡೆ ರಾಕ್ಷಸರನ್ನ ಕೊಲ್ಲಲಿಕ್ಕೋ ಯಾರದೋ ಸಹಾಯಕ್ಕೋ ಯುದ್ಧ ಹೂಡಿ ಹೊರಡುತ್ತಾರೆ. ಇವರೆಲ್ಲರ ವಾಹನಗಳು ನಂದಿ, ಸಿಂಹ, ಹಾವು, ನವಿಲು, ಇಲಿ, ಹೀಗೆ, ಪರಸ್ಪರ ಶತ್ರುಗಳು. ಆದರೂ ಅಲ್ಲಿ ಸೌಹಾರ್ದವಿದೆ. ಕುಟುಂಬದ ಇಂಥಹ ಸೌಹಾರ್ದ ತಾಯಿಯಿಂದ ಮಾತ್ರ ಸಾಧ್ಯವಾಗುವಂಥದ್ದು. ತಂದೆ-ಮಕ್ಕಳ ನಡುವೆ, ಇಬ್ಬರು ಮಕ್ಕಳ ಅನಡುವೆ ಸಂಬಂಧ ಗಟ್ಟಿಗೊಳ್ಳುಸುವ, ಅದನ್ನು ಕಾಯ್ದುಕೊಳ್ಳುವಲ್ಲಿ ಗೌರಿಯ ಎಚ್ಚರ ಅದ್ಭುತವಾದುದು. ಇದನ್ನು ಸಾರುವಂತಹ ಜನಪದ ಕಥೆಯೊಂದಿದೆ. ಅದರಲ್ಲಿ ಗಣಪನು ಶಿವನಿಗೆ ತಮಗಿಂತ ಕುಮಾರನ ಮೇಲೆ ಪ್ರೀತಿ ಜಾಸ್ತಿಯೆಂದು ಅಮ್ಮ ಬಳಿ ದೂರುತ್ತಾನೆ. ಅದನ್ನು ಅಲ್ಲಗೆಳೆಯುತ್ತಾ, ಕುಮಾರ ದೇವತೆಗಳ ಸೇನಾಧಿಪತಿ ಮಾತ್ರ, ನೀನಾದರೋ ನಿನ್ನಪ್ಪನ ಗಣಗಳಿಗೆಲ್ಲ ಅಧಿಪತಿ. ಆ ಪಟ್ಟ ಕೊಟ್ಟವನು ಶಿವನೇ ಎಂದು ಸಮಾಧಾನ ಹೇಳುತ್ತಾಳೆ. ಅದರಿಂದ ಗಣಪನಿಗೆ ಸಮಾಧಾನವಾಗುವುದಿಲ್ಲ. ಕೊನೆಗೆ ಗೌರಿಯು ಶಿವನ ಬಳಿ ಹೋಗಿ, ಅವನನ್ನು ಓಲೈಸಿ, ತಲೆ ಮೇಲಿನ ಚಂದ್ರನ ಮತ್ತೊಂದು ಭಾಗವನ್ನು ಗಣಪನಿಗೆ ಕೊಡಿಸುತ್ತಾಳೆ. ಇದರಿಂದ ಬಾಲಗಣಪ ಖುಷಿಯಾಗುತ್ತಾನೆ. ತಲೆ ಮೇಲಿದ್ದ ಚಂದ್ರನನ್ನು ಕೇಳಿದ ಕೂಡಲೇ ಕೊಟ್ಟ ಶಿವನ ಬಗ್ಗೆ ಪ್ರೀತಿ ಮತ್ತಷ್ಟು ಹೆಚ್ಚಾಗುತ್ತದೆ. ಮತ್ತೊಂದು ಸಂದರ್ಭದಲ್ಲಿ ಗೌರಿ ತನ್ನ ಮಗನಿಗೆ ಪಾಠ ಕಲಿಸುವ ಬಗೆಯೂ ಅದ್ಭುತವಾಗಿದೆ.
ಯಾವುದೇ ಕಳಕಳಿಯುಳ್ಳ ತಾಯಿ ತನ್ನ ಮಗುವನ್ನು ಸರಿದಾರಿಗೆ ತರಲು ಅನುಸರಿಸುವ ಮಾರ್ಗವನ್ನೇ ಅವಳೂ ಆಯ್ದುಕೊಳ್ಳುತ್ತಾಳೆ. ಅಥವಾ ಆದಿಶಕ್ತಿಯಾದ ಅವಳ ಗುಣದ ಬೀಜಗಳೂ ನಮ್ಮ ತಾಯಂದಿರಲ್ಲಿ ಮೊಳೆತು ಅಂತಹ ಸೈರಣೆಯನ್ನು ಚಿಗುರಿಸಿವೆ. ಒಮ್ಮೆ ಹೀಗಾಗುತ್ತದೆ. ಪುಟ್ಟ ಗಣಪ, ಆಟಕ್ಕಾಗಿ ಬೆಕ್ಕೊಂದನ್ನು ಹಿಡಿದು ಹಿಂಸಿಸುತ್ತ ಇರುತ್ತಾನೆ. ಹಾಗೆಲ್ಲ ಮಾಡಬಾರದೆಂದು ಹೇಳುವ ಗೌರಿಗೆ, ಅದು ತನ್ನ ಇಲಿಯನ್ನು ತಿನ್ನಲು ಬಂದಿತ್ತೆಂದು ಸಮಾಜಾಯಿಷಿ ಕೊಡುತ್ತಾನೆ. ಆ ಕ್ಷಣಕ್ಕೆ ಗೌರಿ ಸುಮ್ಮನಾಗುತ್ತಾಳೆ. ಗಣಪನ ಹೊಡೆಯುವ ಆಟ ಮುಗಿದು, ಹಸಿವಾಗಿ ಅಮ್ಮನ ಬಳಿ ಬಂದರೆ, ಅವಳ ಮೈಮೇಲೆಲ್ಲ ಕೆಂಪು ಬರೆಯ ಗೆರೆ! ಏನಾಯ್ತೆಂದು ಕೇಳಲು, ‘ಜಗತ್ತಿನ ಯಾವ ಜೀವಿಯನ್ನು ಹಿಂಸೆ ಮಾಡಿದರೂ ಅದು ನಅನಗೆ ತಲುಪುತ್ತದೆ. ನೀನು ಬೆಕ್ಕಿಗೆ ಹೊಡೆದಿದ್ದರಿಂದ ನನಗೇ ಹೊಡೆದಂತಾಗಿ ಬರೆ ಬಿದ್ದಿದೆ ಅನ್ನುತ್ತಾಳೆ ಗೌರಿ. ಮಗನಿಗೆ ಪಾಠ ಕಲಿಸುವುದಕ್ಕಾಗಿ ತನಗೆ ತಾನೇ ಬರೆ ಮೂಡಿಸಿಕೊಂಡಿರುತ್ತಾಳೆ ಆ ತಾಯಿ.
ಅಪ್ಪಟ ಹೆಣ್ಣು
‘ಗೌರಿ ಎಂದ ಕೂಡಲೆ ನಮ್ಮ ಕಣ್ಮುಂದೆ ಬರುವುದು ಮುಗುಳ್ನಗೆಯಿಂದ ಶಾಂತ ಸುಂದರ ಸುಖ. ‘ಗೌರಿ (ಗೌರ ಅಂದರೆ ಬಿಳಿ) ಎಂಭ ಹೆಸರು ಅನ್ವರ್ಥವಾಗುವಂಥ ಹಾಲ್‌ಬಿಳಿಯ ಬಣ್ಣ. ಲಜ್ಜೆ, ಲಾವಣ್ಯ, ತಾಯ್ತನ ಸತೀರೂಪ ಇತ್ಯಾದಿಗಳು. ಆದರೆ ಗೌರಿ ಇಷ್ಟು ಮಾತ್ರ ಅಲ್ಲ. ಸಮಯ ಬಂದಾಗ ತನ್ನನ್ನು ತಾನು ರಕ್ಷಿಸಿಕೊಳ್ಳಲು ಚತುರೆ, ತೋಳ್ಬಲವುಳ್ಳ ಬಸಲೆ ಕೂಡ. ಹಾಗೆಂದೇ ಗೌರಿ ಕಾಳಿಯೂ ಆಗಿ ಭಿವ್ಯಕ್ತಗೊಂಡಿದ್ದಾಳೆ. ಇವಳು ಸೌಮ್ಯ ಭಾವದವಳೆಂದು ಕೆಣಕುವಂತಿಲ್ಲ. ಕೋಪ ಬಂದರೆ ಗಂಡನಾದ ಶಿವನನ್ನೂ ಸುಮ್ಮನೆ ಬಿಡದಂಥ ಹೆಣ್ಣೀಕೆ. ಮುನಿದು ಜಗಳವಾಡುವ ನಮ್ಮ ಯಾವ ಹೆಣ್ಣಿಗೂ ಕಡಿಮೆ ಇಲ್ಲದಂತಿರುವ ಗೌರಿಯನ್ನು ಜನಪದ ಸಾಹಿತ್ಯದಲ್ಲಿ ನೋಡಬಹುದು.
ಪುರಾಣಗಳ ಗೌರಿ ಕೂಡ ಆಗಾಗ ‘ಮುನಿದು ಭೂಮಿಗೆ ಬರುವುದನ್ನೋ ಗಂಡನೊಟ್ಟಿಗೆ ಮಾತು ಬಿಡುವುದನ್ನೋ ಮಾಡುತ್ತಾಳೆ. ಗೌರಿಯ ಚಾತುರ್ಯಕ್ಕೆ ಇಲ್ಲೊಂದು ಕಥೆಯಿದೆ. ರಾವಣ, ಆತ್ಮಲಿಂಗ ಬೇಡಿ ಶಿವನನ್ನು ಕುರಿತು ತಪಸ್ಸು ಮಾಡುತ್ತಾನೆ. ಶೀವ ಪ್ರತ್ಯಕ್ಷನಾದಾಗ ನಾರದರ ಚೇಷ್ಟೆಯಿಂದ ಮರುಳಾಗಿ ಗೌರಿಯನ್ನು ತನಗೆ ಕೊಡೆಂದು ಕೇಳಿಬಿಡುತಾನೆ. ಶಿವ ಮೊದಲೇ ‘ಕೇಳಿದ್ದನ್ನು ಕೊಡುವ ಆಶುತೋಷ. ಯೋಚನೆಯನ್ನೇ ಮಾಡದೆ ಗೌರಿ ಅವನ ಜತೆ ಹೋಗೆಂದು ಬಿಡುತ್ತಾನೆ. ಗೌರಿಗೆ ಇಲ್ಲಿ ಎರದು ಸವಾಲು. ಗಂಡನ ಮರ್ಯಾದೆಯನ್ನೂ ಕಾಪಾಡಬೇಕು, ತನ್ನನ್ನೂ ಉಳಸಿಕೊಳ್ಳಬೇಕು. ಎದುರಾಡದೆ ರಾವಣನ ಜತೆ ಹೊರಡುತ್ತಾಳೆ. ದಾರಿಯುದ್ಧಕ್ಕೂ ತನ್ನನ್ನು ಆ ಅಸುರನಿಂದ ಬಚಾವು ಮಾಡಿಕೊಳ್ಳುವ ಉಪಾಯದ ಚಿಂತೆ. ಸ್ವಲ್ಪ ದೂರ ಸಾಗುವ ಹೊತ್ತಿಗೆ, ರಾವಣನ ಪಕ್ಕ ಚಲಿಸುತ್ತಿದ್ದ ನೆರಳು ಉದ್ದವೂ ದಪ್ಪವೂ ಆಗತೊಡಗುತ್ತದೆ. ಇದೇನು ಸೋಜಿಗವೆಂದು ಹಿಂದೆ ತಿರುಗಿದ ರಾವಣನಿಗೆ ಗಾಬರಿ.
ಅಲ್ಲಿ ಲಾವಣ್ಯವತಿಯಾದ, ಚಿನ್ನದ ಕಾಂತಿಯ ಗೌರಿಯ ಬದಲು, ಆಗಾಧ ದೇಹದ, ರುಂಡ ಮಾಲೆಗಳ, ಮೋಡಗಳ ಬಣ್ಣದ ಕಾಳಿ ಇರುತ್ತಾಳೆ! ಈ ಕಥೆ ಗೌರಿ ತನ್ನ ಸುಪ್ತ ಶಕ್ತಿಯನ್ನು ಪ್ರಕಟಗೊಳಿಸಿ, ರಾವಣನನ್ನು ಬೆದರಿಸಿ, ಯಾರ ಸಹಾಯವೂ ಇಲ್ಲದೆ ಸ್ವಯಂ ರಕ್ಷಣೆ ಮಾಡಿಕೊಳ್ಳುವುದರ ಸಂಕೇತವಾಗಿದೆ.
ಅಂತಃಸತ್ವವುಳ್ಳ ಹೆಣ್ಣುಗಳೂ ಹೀಗೆಯೇ. ಹೂವಿನಂತೆ ಮೃದುವಾಗಿದ್ದರೂ ಸಮಯ ಸಂದರ್ಭಕ್ಕೆ ಅಗತ್ಯ ಬಿದ್ದಾಗ ವಜ್ರದಂತೆ ಕಠಿಣವಾಗುತ್ತಾರೆ. ಇಂದೂ ರಾವಣರಿದ್ದಾರೆ. ಹೀಗಾಗಿ ಹೆಣ್ಣುಮಕ್ಕಳು ಗೌರಿಯಂತೆ ಸಬಲರಾಗುವುದು ಅವಶ್ಯಕ. ಗೌರಿ ಹಬ್ಬದ ಸಲುವಾಗಿ ಹೊಸ ಸೀರೆ, ಪೂಜೆ, ಬಾಗಿನ ವಿನಿಮಯ, ಹಬ್ಬದೂಟಗಳಂತೂ ಇದ್ದುದೇ. ಅವುಗಳ ಜೊತೆಗೆ ಗೌರಿಸ್ವರೂಪದ ಸಂಕೇತ, ಗುಣಗಳನ್ನು ಅರ್ಥೈಸಿಕೊಂಡು ಅನುಸರಿಸಿದ ಭಾದ್ರಪದ ತದಿಗೆಯ ಆಚರಣೆ ಸಾರ್ಥಕಗೊಳ್ಳುತ್ತದೆ.
ಶರಣೆಂದವರನು ಪೊರೆವಳು ಎಂಬುವ ಬಿರುದು ನಿನ್ನದು ಎಂದರಿದೆನು ತ್ವರಿದಿ ಎಂದು ಬೇಡಿಕೊಳ್ಳುತ್ತಾರೆ. ಹೌದು, ಮನುಜನಾದವನು ಬಾಗುವುದನ್ನು ಕಲಿಯಬೇಕು. ಹಿರಿಯರಿಗೆ, ದೈವಕ್ಕೆ ತಲೆಬಾಗಿ ನಡೆಯದ ಹೊರತು ಮನದೊಳಗಿನ ಅಜ್ಞಾನದ ಮುಸುಕು ಬದಿಗೆ ಸರಿಯದು ಎನ್ನುವುದು ಹರಿದಾಸರ ಅಭಿಪ್ರಾಯ.
ಸ್ವರ್ಣಗೌರಿ ವ್ರತ
ಬ್ರಾಹ್ಮಿ ಮುಹೂರ್ತದಲ್ಲಿ ಸ್ನಾನ ಮಾಡಿ ಮನೆ, ದೇವಾಲಯ ಅಥವಾ ಮರದ ಕೆಳಗೆ ಸ್ವರ್ಣಗೌರಿಯನ್ನು ಪ್ರತಿಷ್ಠಾಪಿಸಿ ಪೂರ್ವಾಭಿಮುಖವಾಗಿ ಕುಳಿತು ಪೂಜೆಯ ಸಂಕಲ್ಪ ಮಾಡಬೇಕು. 16 ಗಂಟು ಹಾಕಿದ ಹಸಿ ದಾರ ಇಟ್ಟು ಶಾಸ್ತ್ರೋಕ್ತವಾಗಿ ಪೂಜಿಸಿ ಸುಮಂಗಲಿಯರಿಗೆ ಬಾಗಿನ (ಹೊಸ ಮೊರಗಳಲ್ಲಿ ಹಣ್ಣು, ಎಲೆ, ಅಡಿಕೆ, ಬಾಗಿನದ ಸಾಮಾನು ಇಟ್ಟು ಹಸಿದಾರಕ್ಕೆ ಅರಿಶಿಣಕೊಂಬನ್ನು ಕಟ್ಟಿ ದಾನ ಕೊಡುವುದು ಬಾಗಿನ) ಕೊಡಬೇಕು. ಸಂಜೆಯೂ ವಿಧಿಪೂರ್ವಕವಾಗಿ ಪೂಜೆ ಮಾಡಿ ಸ್ವರ್ಣಗೌರಿಯನ್ನು ವಿಸರ್ಜಿಸಬೇಕು. ತದಿಗೆಯಂದು ಕೂರಿಸಿದ ಗೌರಿಯನ್ನು ಚೌತಿಯಂದು ಕೂರಿಸಿದ ಗಣೇಶನ ಜತಗೆ ವಿಸರ್ಜನೆ ಮಾಡುವ ಪದ್ಧತಿಯೂ ಇದೆ.
ಗೌರಿ, ಭಾರತೀಯ ಹೆಣ್ಣುಗಳ ಆದರ್ಶ ರೂಪ. ನಮ್ಮ ಹೆಣ್ಣುಮಕ್ಕಳ ಎಲ್ಲ ಗುಣಗಳ ಉತ್ಕೃಷ್ಟ ಅಭಿವ್ಯಕ್ತಿ ಅವಳು. ನೆಲದಲ್ಲಿ ಹುಟ್ಟಿ ಮುಗಿಲ ದೇವಿಯಾದ ಗೌರಿ, ಹಲವು ಹತ್ತು ಬಗೆಯಲ್ಲಿ ದೇವಿಯರಂತೆಯೇ ಬದುಕುತ್ತಿರುವ ಹೆಣ್ಣುಗಳ ಮೂಲಸ್ರೋತವೂ ಮಾದರಿಯೂ ಆಗಿದ್ದಾಳೆ.
ಬಾಗಿನ ತಾರೇ ಗೌರಿಗೆ…..
ಆಧುನಿಕ ಬಾಗಿನ
ಆಫೀಸು/ ಮನೆ ಕೆಲಸದ ಒತ್ತಡದಲ್ಲಿ ಇರುವವರಿಗೆ ಗೌರಿ ಹಬ್ಬಕ್ಕೆ ನೀಡುವ ಬಾಗಿನ ಸಿದ್ಧಪಡಿಸಲು ಸಮಯ ಇರುವುದಿಲ್ಲ. ಇಂಥವರಿಗಾಗಿಯೇ ಮಾರುಕಟ್ಟೆಯಲ್ಲಿ ಸಿದ್ಧಪಡಿಸಿದ ಬಾಗಿನ ಸೆಟ್ ದೊರೆಯುತ್ತದೆ. ಎಲ್ಲಾ ಧಾನ್ಯಗಳು, ಮಂಗಲ ದ್ರವ್ಯಗಳು, ಪೂಜಾ ಸಾಮಾಗ್ರಿಗಳನ್ನು ಹಾಕಿ ಬಾಗಿನವನ್ನು ಸಿದ್ಧಪಡಿಸುತ್ತಾರೆ.
ಇಂಥ ಬಾಗಿನಗಳು ನೋಡಲು ಸುಂರವಾಗಿ ಅಲಂಕಾರಗೊಂಡಿರುತ್ತವೆ. ಮೊರಕ್ಕೆ ಕೆಂಪು ಹಾಗೂ ಹಸಿರು ಬಣ್ಣ ಹಚ್ಚಿರುವ, ರೇಷ್ಮೆ ಝರಿಯಿಂದ ಅಲಂಕಾರಗೊಂಡ, ಬಣ್ಣ ಬಣ್ಣದ ಕುಂದನ್‌ಗಳಿಂದ ಸಿಂಗಾರಗೊಂಡ, ಗೌರಿಯ ಮುಖವಾಡ ಇರುವ, ಬಣ್ಣದ ಕಾಗದದಿಂದ ಸಿದ್ಧಗೊಂಡ ನಾನಾ ಬಗೆಯ ಬಾಗಿನಗಳು ನೋಡಲು ಸುಂದರವಾಗಿರುತ್ತವೆ. ಇದನ್ನು ಅವರವರ ಅನುಕೂಲಕ್ಕೆ ತಕ್ಕಂತೆ ಕೊಂಡುಕೊಳ್ಳಬಹುದು.
ಬಾಗಿನದಲ್ಲಿ ಏನಿರುತ್ತದೆ?
ಅಕ್ಕಿ, ಬೆಲ್ಲ, ಗೋಧಿ ಹಿಟ್ಟು, ಕಡ್ಲೆಬೇಳೆ, ಉದ್ದಿನ ಬೇಳೆ, ಹೆಸರು ಬೇಳೆ, ತೊಗರಿ ಬೇಳೆ, ರವೆ, ವೀಳ್ಯದೆಲೆ, ಅಡಿಕೆ, ಕಾಯಿ, ರವಿಕೆ, ಗಾಜಿನ ಬಳೆ, ಸಿಂಗಾರದ ವಸ್ತುಗಳಾದ ಬಿಚ್ಚೋಲೆ, ಕನ್ನಡಿ, ಕುಂಕುಮ, ದಕ್ಷಿಣೆ, ಹಣ್ಣು, ಬೆಲ್ಲದ ಅಚ್ಚು, ಉಪ್ಪು, ಅವರವರ ಶಕ್ತಿಗೆ ಅನುಸಾರವಾಗಿ ಅವರಿಗೆ ಬೇಕಾದ ಅಮೂಲ್ಯ ವಸ್ತುಗಳನ್ನು ಸಹ ಇಟ್ಟು ಉಡುಗೊರೆ ನೀಡಲಾಗುತ್ತದೆ. ಈ ಸಾಮಾಗ್ರಿಗಳ ಜತೆ ಗೆಜ್ಜೆವಸ್ತ್ರ ಶ್ರೀಗಂಧ, ಗಂಧದ ಕಡ್ಡಿ ಇತ್ಯಾದಿ ವಸ್ತುಗಳನ್ನು ಸಹ ಕೆಲವರು ಇಡುತ್ತಾರೆ.
ಮಹತ್ವ
ಮಂಗಳ ದ್ರವ್ಯಗಳನ್ನು ಬಾಗಿನದಲ್ಲಿಟ್ಟು ದಾನ ಮಾಡುವುದರಿಂದ ಗೌರಿ ದೇವಿಯ ಪೂರ್ಣ ಅನುಗ್ರಹ ದೊರೆತು, ದೀರ್ಘ ಸುಮಂಗಲಿ ಯೋಗ ಲಭಿಸುತ್ತದೆ ಎಂಬ ನಂಬಿಕೆ ಇದೆ.
ಬಾಗಿನದಲ್ಲಿ ಧಾನ್ಯಗಳನ್ನು ಕೊಡುವುದಕ್ಕೆ ಹಲವು ಹಿನ್ನೆಲೆಗಳಿವೆ. ‘ಒಂದೊಂದು ಧಾನ್ಯಕ್ಕೆ ಒಂದೊಂದು ದೇವರನ್ನು ಹೋಲಿಸುವುದರಿಂದ ಎಲ್ಲಾ ದೇವರ ಅನುಗ್ರಹ ದೊರೆತು, ದೋಷಗಳೆಲ್ಲಾ ನಿವಾರಣೆ ಆಗಿ, ಮನೆಯಲ್ಲಿ ಸಂಪತ್ತು ಅಭಿವೃದ್ಧಿಯಾಗುತ್ತದೆ ಎಂಬ ಪ್ರತೀತಿ ಇದೆ ಎನ್ನುತ್ತಾರೆ ಪುರೋಹಿತರಾದ ಮಂಜುನಾಥ್.
‘ಸಕಲ ಧಾನ್ಯಗಳನ್ನು ಕೊಡುವ ಉದ್ದೇಶ ಸ್ವಯಂಪಾಕ. ದೇವಿಗೆ ನಾವು ಸಮರ್ಪಿಸುವ ಮಹಾನೈವೇದ್ಯದ ಜತೆಗೆ ಇದನ್ನು ಕೊಡುವ ಉದ್ದೇಶ. ಬೇರೆ ಏನನ್ನಾದರೂ ದೇವಿ ಅಪೇಕ್ಷಿಸಿದರೆ ಅದು ಈ ಧಾನ್ಯಗಳ ಮೂಲಕ ನೆರವೇರಿ, ದೇವಿ ಸಂತೃಪ್ತಳಾಗಿ ನಮ್ಮನ್ನು ತುಂಬು ಹೃದಯದಿಂದ ಹರಸುತ್ತಾಳೆ ಎಂಬ ನಂಬಿಕೆ ಇದೆ .
ಬಾಗಿನದ ಹುಟ್ಟಿನ ಬಗ್ಗೆ ಹೇಳುವುದಾದರೆ ಹಿಂದಿನ ಕಾಲದಲ್ಲಿ ಧಾನ್ಯಗಳ ಕಟಾವು, ಸುಗ್ಗಿ ಎಲ್ಲಾ ವಿಜೃಂಭಣೆಯಿಂದ ಆಚರಿಸಲಾಗುತ್ತಿತ್ತು. ತಮ್ಮ ಹೊಲದಲ್ಲಿ ಬೆಳೆದ ಧಾನ್ಯಗಳ ರುಚಿ ಹೇಗಿದೆ ಎಂದು ಬೇರೆಯವರು ಸವಿದು ಹೇಳಿದರೆ ಚೆನ್ನ ಎಂದು ಹಬ್ಬದ ಸಂದರ್ಭದಲ್ಲಿ ಧಾನ್ಯಗಳ ವಿನಿಮಯ ಮಾಡಲಾಗುತ್ತಿತ್ತು. ಕಾಲ ಬದಲಾದಂತೆ ಧಾನ್ಯಗಳ ಜತೆ ಉಡುಗೊರೆಯೂ ಸೇರಿ ಬಾಂಧವ್ಯದ ಬೆಸುಗೆ ಮತ್ತಷ್ಟು ಹೆಚ್ಚಾಗಿದೆ.
Get In Touch With Us info@kalpa.news Whatsapp: 9481252093
Discussion about this post