ಕಲ್ಪ ಮೀಡಿಯಾ ಹೌಸ್ | ಆನಂದಕಂದ ಲೇಖನ ಮಾಲಿಕೆ-14 |
ಒಂದು ದಟ್ಟವಾದ ಕಾಡು. ಅಲ್ಲಿ ಒಂದು ಹಣ್ಣಿನ ಮರ, ಮುಳ್ಳು ಮರಗಳ ಮಧ್ಯದಲ್ಲಿ ಮರೆಯಾಗಿ ಯಾರಿಗೂ ಕಾಣದ ಹಾಗೆ ಇತ್ತು. ಆದರೆ ಆಶ್ರಯಿಸಿ ಬಂದವರನ್ನು ಎಂದೂ ದೂರ ಮಾಡುತ್ತಿರಲಿಲ್ಲ. ‘ಆದರೆ ಸುತ್ತ ಹಬ್ಬಿದ್ದ ಮುಳ್ಳುಗಳ ಕಾರಣದಿಂದ ಯಾರೂ ಬಳಿ ಬರುತ್ತಿರಲಿಲ್ಲ.
ನಾನು ಹುಟ್ಟಿದ್ದು ಪ್ರಕೃತಿಯಿಂದ ಎಂದರೆ ಅವಳಿಗೆ ಬೇಡವಾಗಿ ಇರುವುದಿಲ್ಲ. ಇಂದಲ್ಲ ನಾಳೆ ನನ್ನನ್ನು ಯಾರಾದರು ಬಳಸುತ್ತಾರೆ ಎಂಬ ನಂಬುಗೆಯಿಂದ ಜೀವನ ನಡೆಸುತ್ತಿತ್ತು.
ಅದು ತನ್ನ ಹಿಂದಿನ ನೆನಪಿಗೆ ಹೋಯಿತು. ಬಿಸಿಲಿನಿಂದ ತಾಪ ಹೆಚ್ಚಾದಾಗ ತನ್ನ ನೆರಳನ್ನು ಆಶ್ರಯಿಸಿ ಬಂದಿದ್ದ, ತನ್ನ ಕೊಂಬೆಯನ್ನು ಆಶ್ರಯಿಸಿ ಅಲ್ಲೇ ಹುಟ್ಟಿ ಬೆಳೆದಿರುವ ಅನೇಕ ಪ್ರಾಣಿ, ಪಕ್ಷಿಗಳು, ಅವುಗಳ ಜೀವನ, ಕಾಡಿನಲ್ಲಿದ್ದ ತನ್ನದೇ ಜಾತಿಯ ಮರಗಳ ನಡುವೆ ನಡೆಯುತ್ತಿದ್ದ ಸಂವಹನ, ನಂತರ ಕಾಡಿನಲ್ಲಿ ಬೇರೆ ಮುಳ್ಳು ಮರಗಳ ಆಗಮನ, ತನ್ನ ಜಾತಿಯ ಮರಗಳ ನಾಶ ಇವೆಲ್ಲವನ್ನು ನೆನೆದು ದುಃಖಿಸಿತು. ತಾನು ಉದುರಿಸಿದ ಬೀಜ ಬೆಳೆಯಲು ಅಸಾಧ್ಯ ಎಂದು ತಿಳಿದರೂ ಅದು ಒಂದಿಷ್ಟು ಬೀಜಗಳನ್ನು ಉದುರಿಸಿತು. ಆ ಮರದಲ್ಲೇ ಹುಟ್ಟಿ-ಬೆಳೆದಿದ್ದ ಒಂದು ಪಕ್ಷಿ ಆ ಮರದ ಬೀಜಗಳ ದುಃಸ್ಥಿತಿಯನ್ನು ಕಂಡು ಮರುಕಪಟ್ಟಿತು. ತಾನು ಆ ಮರದ ಕೊಂಬೆಗಳಲ್ಲಿ ಆಡಿ ಬೆಳೆದಿದ್ದನ್ನು ನೆನಪಿಸಿಕೊಂಡಿತು. ತನಗೆ ಆಶ್ರಯ ಕೊಟ್ಟ ಮರಕ್ಕೆ ನೆರವಾಗಲು ನಿರ್ಧರಿಸಿತು. ತನ್ನ ಎಲ್ಲಾ ಮಿತ್ರ ಪಕ್ಷಿಗಳಿಂದ ಕೂಡಿ ಆ ಬೀಜಗಳನ್ನು ಪಕ್ಕದ ಕಾಡಿಗೆ ಒಯ್ಯಿತು.
ಸೂಕ್ತ ಜಾಗಗಳಲ್ಲಿ ಆ ಮರದ ಬೀಜಗಳನ್ನು ಉದುರಿಸುತ್ತಾ ಬಂದವು. ಪ್ರತಿದಿನ ಅಲ್ಲಿದ್ದ ಒಂದು ಕೆರೆಯಲ್ಲಿ ತಮ್ಮ ತಮ್ಮ ಮೈ ಒದ್ದೆ ಮಾಡಿಕೊಂಡು ತಾವು ಬೀಜಗಳನ್ನು ಉದುರಿಸಿದ್ದ ಜಾಗದಲ್ಲಿ ತಮ್ಮ ಮೈ ಜಾಡಿಸಿಕೊಳ್ಳುತ್ತಿದ್ದವು. ಕಾಲ ಕ್ರಮೇಣ ಆ ಬೀಜಗಳು ಚಿಗುರೊಡೆದವು. ಬೆಳೆದು ಗಿಡದಿಂದ ಮರವಾಗುವವರೆಗೂ ಆ ಪಕ್ಷಿಯ ಸಂಪೂರ್ಣ ಕುಲ ಈ ಮರಗಳಿಗೆ ಸಹಾಯ ಮಾಡುತ್ತಲೇ ಬಂದವು. ಮರಗಳು ಆ ಪಕ್ಷಿಗಳಿಗೆ ಎಂದೂ ಕೃತಜ್ಞವಾಗಿ ಇದ್ದವು. ಅಷ್ಟೇ ಅಲ್ಲದೆ ಆ ಮರಗಳು ಎಲ್ಲರಿಗೂ ತಮ್ಮ ತಮ್ಮ ಹಣ್ಣುಗಳನ್ನು ನೀಡುತ್ತಿದ್ದವು. ಇದರಿಂದ ಆ ಪಕ್ಷಿಗಳು ಬಹಳ ಸಂತೋಷ ಪಟ್ಟವು.
ಇದು ನನಗೆ ಗೋಚರವಾದ ಕಥೆ. ಇದರಲ್ಲಿರುವ ಆ ಮರ ನಮ್ಮ ಪರಂಪರೆ. ಕಲೆಗಳು ಅದರ ಬೀಜ, ಆಧುನಿಕತೆ ಎಂಬ ಮುಳ್ಳಿನ ಮರಗಳಿಂದ ಪರಂಪರೆಯ ಇರುವು ಮರೆತು ಹೋಗುತ್ತಿದೆ. ಪಕ್ಷಿಗಳು ಆ ಮರದ ಬೀಜಗಳನ್ನು ರಕ್ಷಿಸಿದ ಹಾಗೆ ಆ ಕಲೆಗಳನ್ನು ರಕ್ಷಿಸಲು ನಾವೆಲ್ಲರೂ ಸಂಘಟಿತರಾಗಿ ಪ್ರಯತ್ನಿಸಬೇಕು.
ಹರಿ-ಗುರು ಕಾರುಣ್ಯ, ಸಂಸ್ಕೃತಿ, ಸಂಸ್ಕಾರವೆಂಬ ಕೆರೆಯ ನೀರನ್ನು ಒದಗಿಸೋಣ. ಹೇಗೆ ಹಕ್ಕಿಗಳು ಆ ಮರದ ಸಂಕಷ್ಟವನ್ನು ಉಪೇಕ್ಷೆ ಮಾಡಲಿಲ್ಲವೋ, ತಮ್ಮ ಒಗ್ಗಟ್ಟಿನ ಸಮಾನ ಪ್ರಯತ್ನದಿಂದ ಮರ ಬೆಳೆಸಿದವೋ.. ಹಾಗೆಯೇ ನಮ್ಮ ಪರಂಪರೆಯನ್ನು, ಪರಂಪರಾಗತ ಕಲೆಗಳನ್ನು, ನಾವು ಒಗ್ಗಟ್ಟಿನಿಂದ ರಕ್ಷಿಸಬೇಕು, ಕಿತ್ತೊಗೆಯಲಾಗದ ಆಧುನಿಕತೆ ಎಂಬ ಮುಳ್ಳನ್ನು ನಮ್ಮ ಪರಂಪರೆಯೆಂಬ ವೃಕ್ಷಕ್ಕೆ ಸಂರಕ್ಷಣೆಯ ಬೇಲಿಯಂತೆ ಪೂರಕವಾಗಿಸಲು ಪ್ರಯತ್ನಿಸೋಣ. ಅದಕ್ಕಾಗಿ ನಾವೆಲ್ಲಾ ಆ ಹಕ್ಕಿಗಳಂತೆ ಒಗ್ಗೂಡಿ ಕ್ರಿಯಾಶೀಲರಾಗಿ ಸತತವಾಗಿ ಪರಿಶ್ರಮಿಸೋಣ. ಪರಂಪರೆಯ ಬೀಜಗಳನ್ನು ರಕ್ಷಿಸಿ, ಬೆಳೆಸಲು ಪಕ್ಷಿ ಪ್ರಯತ್ನ (ಅವಿರತ ಪ್ರಯತ್ನ) ಮಾಡೋಣ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post