ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಸೊರಬ: ಕೊರೋನಾ ಭೀತಿಯ ನಡುವೆಯೂ ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಗೌರಿ-ಗಣೇಶ ಹಬ್ಬವನ್ನು ಸರಳವಾಗಿ ಸಂಪ್ರದಾಯ ಬದ್ಧವಾಗಿ ಸಂಭ್ರಮದಿಂದ ಆಚರಿಸಲಾಯಿತು.
ಗ್ರಾಮೀಣ ಪ್ರದೇಶಗಳಲ್ಲಿ ಗೌರಿ ಪೂಜೆ, ಬಾಗಿನ ವಿನಿಮಯ ಸೇರಿದಂತೆ ಶ್ರದ್ಧಾ ಭಕ್ತಿಯಿಂದ ಪೂಜಾ ಕೈಂಕರ್ಯಗಳು ಜರುಗಿದವು. ಕೊರೋನಾ ಆತಂಕದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಒಂದಡೆ ಸೇರಲು ಕೆಲವಡೆ ಸಾಧ್ಯವಾಗಲಿಲ್ಲ. ಹೊಸದಾಗಿ ಮದುವೆಯಾಗಿ ತವರಿಗೆ ಹೆಣ್ಣುಮಕ್ಕಳಿಗೆ ವಿಶೇಷವಾಗಿ ಬಾಗೀನ ಕೊಡುವ ಸಂಪ್ರದಾಯ ಗ್ರಾಮೀಣ ಪ್ರದೇಶದಲ್ಲಿ ನಡೆದುಕೊಂಡು ಬಂದಿದೆ. ಇನ್ನೂ ಕೆಲ ಗ್ರಾಮಗಳಲ್ಲಿ ಹೊರ ಊರಿನ ಹೆಣ್ಣುಮಕ್ಕಳು ತವರಿಗೆ ಆಗಮಿಸದಂತೆ ಗ್ರಾಮ ಸಮಿತಿಗಳ ಮೂಲಕ ನಿಷೇಧ ಹೇರಿಕೊಂಡಿದ್ದರು.
ಕೆರೆಗಳಿಗೆ ತೆರಳಿ ಗೌರಿ ತರುವ ಮೂಲಕ ಹಬ್ಬವನ್ನು ಆಚರಿಸಿದರೆ ಇನ್ನುಳಿದಂತೆ ಕೆಲವರು ಸ್ವರ್ಣ ಗೌರಿ ಮತ್ತೆ ಕೆಲವರು ಹರಿತಾಳಿಕ ಗೌರಿ ವ್ರತ ಆಚರಿಸಿದರೆ, ಸಾರ್ವಜನಿಕ ಗಣೇಶೋತ್ಸವ ಒಂದೇ ದಿನ ಆಚರಿಸುವಂತೆ ಸ್ಥಳೀಯ ಆಡಳಿತ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಯಾವುದೇ ಆಡಂಬರ ಕಾಣಲಿಲ್ಲ. ಮನರಂಜನಾ ಕಾರ್ಯಕ್ರಮಗಳು, ಅನ್ನಸಂತರ್ಪಣೆ, ಹೋಮ-ಹವನಗಳು, ಉತ್ಸವ ಮೆರವಣಿಗೆಗೂ ನಿಷೇದ ಹೇರಲಾಗಿತ್ತು. ಇನ್ನೂ ವ್ಯಾಪಾರ-ವಹಿವಾಟುಗಳು ಸಹ ಸಾಧಾರಣವಾಗಿ ನಡೆದವು.
ಆಕರ್ಷಕ ಗಣೇಶವಿಲ್ಲ!
ಸಾರ್ವಜನಿಕ ಗಣೇಶೋತ್ಸವದ ಮೇಲೆ ಕೊರೋನಾ ಕರಿ ನೆರಳು ಬಿದ್ದ ಹಿನ್ನೆಲೆಯಲ್ಲಿ ಬೃಹತ್ ಪೆಂಡಲ್‌ಗಳಲ್ಲಿ ವಿವಿಧ ಭಂಗಿಯಲ್ಲಿ ಪ್ರತಿಷ್ಠಾಪಿಸಲ್ಪಡುತ್ತಿದ್ದ ಗಣೇಶ ಮೂರ್ತಿಗಳು ಈ ಬಾರಿ ಕಾಣಲಿಲ್ಲ. ಮನೆಗಳಲ್ಲಿ ಕೇವಲ ಎರಡು ಅಡಿ ಮತ್ತು ಸಾರ್ವಜನಿಕವಾಗಿ ಗರಿಷ್ಟ ನಾಲ್ಕು ಅಡಿಯ ಗಣಪತಿಯನ್ನು ಪ್ರತಿಷ್ಠಾಪಿಸಲು ತಾಲೂಕು ಆಡಳಿತ ಸೂಚನೆ ನೀಡಿತ್ತು. ಪಟ್ಟಣದ ಭೂತೇಶ್ವರ ವಾಹನ ಮಾಲಿಕರು ಮತ್ತು ಚಾಲಕರ ಸಂಘ ಹಾಗೂ ನಾಗಚೌಡೇಶ್ವರಿ ಯುವಕ ಸಂಘದ ವತಿಯಿಂದ ಪಿಕಪ್ ವಾಹನದಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದು ವಿಶೇಷವಾಗಿತ್ತು.
ಪಟ್ಟಣದ ಮುಖ್ಯರಸ್ತೆ ಮತ್ತು ಮಾರ್ಕೆಟ್ ರಸ್ತೆಗಳಲ್ಲಿ ಸಾರ್ವಜನಿಕರು ಅಗತ್ಯ ವಸ್ತುಗಳನ್ನು ಖರೀದಿಸಿದರು. ಹೂವು, ಹಣ್ಣು, ಬಾಳೆಗಿಡ ಮತ್ತು ಮಾವಿನಸೊಪ್ಪಗೆ ಭರ್ಜರಿ ಡಿಮ್ಯಾಂಡ್ ಬಂದಿದ್ದು, ಸಾಮಾನ್ಯ ದಿನಗಳಿಗಿಂತ ಬೆಲೆಯಲ್ಲಿಯೂ ಏರಿಕೆ ಕಂಡು ಬಂದಿತು. ಈ ಬಾರಿ ಸಂಭ್ರಮವಿಲ್ಲದೇ ಸರಳವಾಗಿ ಗೌರಿ-ಗಣೇಶ ಹಬ್ಬವನ್ನು ಆಚರಿಸಿದರೆ, ಸಾರ್ವಜನಿಕರು ಮುಂದಿನ ದಿನಗಳಲ್ಲಿ ದೇಶ ಕೊರೋನಾ ಮುಕ್ತವಾಗಲಿ, ನಾಡು ಸಹಜ ಸ್ಥಿತಿಯತ್ತ ಮರಳಲಿ ಎಂದು ದೇವರಲ್ಲಿ ಪ್ರಾರ್ಥಿಸಿ, ವಿಶೇಷ ಪೂಜೆ ಸಲ್ಲಿಸಿದರು.
ನಂತರ ಸಂಜೆ 5ರ ಸುಮಾರಿಗೆ ಪಟ್ಟಣದ ಎಲ್ಲಾ ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಪುಣ್ಯ ನದಿ ದಂಡಾವತಿಯಲ್ಲಿ ವಿಸರ್ಜನೆ ಮಾಡಲಾಯಿತು.
(ವರದಿ: ಮಧುರಾಮ್, ಸೊರಬ)
Get In Touch With Us info@kalpa.news Whatsapp: 9481252093
Discussion about this post