ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಸ್ವಾಮಿ ವಿವೇಕಾನಂದರು ಸಾಧಕರ ಕುರಿತು ಒಂದೆಡೆ ಹೀಗೆ ಹೇಳುತ್ತಾರೆ. ಸಾಧನೆ ಸುಮ್ಮನೆ ಆಗುವುದಿಲ್ಲ. ಆ ದಾರಿಯಲ್ಲಿ ನಡೆಯಲು ಕಾಲುಗಳು ಗಟ್ಟಿ ಇದ್ದರೆ ಸಾಲದು. ಸಾಗುವ ಮನಸ್ಸೂ ಇರಬೇಕು. ’ಸಾಧನೆ’ ಎನ್ನುವುದು ಒಂದು ಮೂರಕ್ಷರದ ಪದ. ಸಾಧಕರು ಮಾತ್ರ ಸಾಧನೆಯನ್ನು ತಮ್ಮ ಪದತಲದಲ್ಲಿ ಕೆಡವಿಕೊಳ್ಳಬಲ್ಲರು. ಸಾಧನೆ ಎಂಬ ಈ ಸರಳವಾದ ಪದದಲ್ಲಿ ಸಾವಿರ ದುಮ್ಮಾನಗಳಿರುತ್ತವೆ, ಸಂಕಷ್ಟಗಳಿರುತ್ತವೆ.
ಸಾಧನೆ ಲೋಕದ ಮುನ್ನೆಲೆಗೆ ಬರಬೇಕಾದರೆ ಹಿನ್ನೆಲೆಯಲ್ಲಿ ಸಾಧಕರು ಸತತವಾದ ಅಧ್ಯಯನ, ಚಿಂತನ, ಮಂಥನ ಮಾಡಬೇಕು. ಒಮ್ಮೆ ಹೆಜ್ಜೆ ಇಟ್ಟ ಮೇಲೆ ಗುರುತು ಮೂಡಿಸದೆ ಅಲ್ಲಿಂದ ಕದಲುವುದಿಲ್ಲ ಎಂಬ ಸ್ವಯಂ ಬದ್ಧತೆಗೆ ಒಳಗೊಂಡಿರಬೇಕು. ಸಾಧನೆ ಪ್ರಯತ್ನಿಸದೆ, ಪರಿಶ್ರಮ ಪಡದೆ, ಪರಿತಪಿಸದೆ, ಹಪಹಪಿಸದೆ, ಬೆವರು ಸುರಿಸದೆ, ನಿರಂತರ ಅಭ್ಯಾಸ ಮಾಡದೆ ಸುಲಭವಾಗಿ ಅಥವಾ ಸರಳವಾಗಿ ಬಂದು ಕೈಗೂಡುವುದಿಲ್ಲ. ಎಲ್ಲರಲ್ಲೂ ಜ್ಞಾನ ಅಥವಾ ಪ್ರತಿಭೆ ಎಂಬ ಬೆಳಕು ಇರುತ್ತದೆ. ಈ ಬೆಳಕು ಪ್ರಜ್ವಲಿಸಬೇಕಾದರೆ ಸೂಕ್ತ ಅವಕಾಶ, ವಾತಾವರಣ, ಮಾರ್ಗದರ್ಶನ, ಮಾರ್ಗ ದೊರೆಯಬೇಕಾಗುತ್ತದೆ. ಆದರೂ ಕೆಲವೇ ಕೆಲವು ಮಂದಿಗೆ ಮಾತ್ರ ಅಂತರಂಗದಲ್ಲಿರುವ ಪ್ರತಿಭೆಯನ್ನು ವಿಕಸನಗೊಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಹೀಗೆ ಪ್ರತಿಭೆಯನ್ನು ತಮ್ಮ ಬಾಲ್ಯಾವಸ್ಥೆಯಲ್ಲಿಯೇ ವಿಕಸನಗೊಳ್ಳಿಸಿ ಸಾಧನೆಯ ಹಿರಿತನ ಸಾಧಿಸಿದ ಬಾಲಕಿ ಖುಷಿ ಹರೀಶ್ ಶೆಟ್ಟಿ ಅವರು.
ಹಿಂದಿನ ಕಾಲದಲ್ಲಿ ಮೂರರ ಹರೆಯದ ಮಕ್ಕಳು ತಾಯ ಎದೆ ಹಾಲನ್ನು ಬಿಟ್ಟಿರುವುದಿಲ್ಲ. ಈ ಕಾಲದಲ್ಲಾದರೂ ತಾಯ ಸೆರಗನ್ನಂತು ಬಿಡುವುದಿಲ್ಲ. ಈ ಪ್ರಾಯದಲ್ಲೆ ತನ್ನ ಪುಟ್ಟ ಪುಟ್ಟ ಕಾಲ್ಗಳಿಗೆ ಗೆಜ್ಜೆಕಟ್ಟಿಸಿ ಭರತ ನಾಟ್ಯದ ಹೆಜ್ಜೆ ಹಾಕಿದವರು ಬಾಲೆ ಖುಷಿ ಶೆಟ್ಟಿ. ಗುರು ಇನ್ನಂಜೆ ಸುಕನ್ಯಾ ಭಟ್ ಅವರ ರಾಧಾಕೃಷ್ಣ ನೃತ್ಯ ಅಕಾಡೆಮಿ ಎಂಬ ನೃತ್ಯಶಾಲೆಯ ಶಿಷ್ಯತ್ವದ ದೀಕ್ಷೆ ಪಡೆದವರು. ಆರರ ಹರೆಯದಲ್ಲಿ ’ರಂಗಪ್ರವೇಶ’ (ಆರಂಗೇಟ್ರಂ) ಮಾಡಿ ದಾಖಲೆ ನಿರ್ಮಿಸುತ್ತಾರೆ. ಬೊರಿವೆಲಿ ಪಶ್ಚಿಮದ ಪ್ರಬೋಧನ್ ಠಾಕ್ರೆ ಸಭಾಗೃಹದಲ್ಲಿ ನಡೆದದ್ದ ರಂಗಪ್ರವೇಶ ಕಾರ್ಯಕ್ರಮದಲ್ಲಿ ಕಿಕ್ಕಿರಿದು ಸೇರಿದ್ದ ಕಲಾ ರಸಿಕರು ಸಾಕ್ಷಿಯಾಗಿದ್ದರು.
ಸುಮಾರು ಎರಡೂವರೆ ಗಂಟೆಗಳ ನಡೆದಿದ್ದ ಕಾರ್ಯಕ್ರಮದಲ್ಲಿ ಪುಷ್ಪಾಂಜಲಿ, ಅಲರಿಪು, ನಟೇಶ ಕೌತಕಂ, ಜತಿಸ್ವರಂ, ಶಬ್ದಂ ವರ್ಣ, ಹೇ ರಘುನಂದನ, ಸ್ವಾಗತಂ ಕೃಷ್ಣ ಮೊದಲಾದ ಗೀತೆಗಳಿಗೆ ಹೆಜ್ಜೆ ಹಾಕಿದವರು. ಹಲವು ನಾಟ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಿತರಾಗಿದ್ದಾರೆ. ಗುರುವಾಯೂರು, ಧರ್ಮಸ್ಥಳ, ಕೊಲ್ಲೂರು, ಉಡುಪಿ, ಬೆಂಗಳೂರು, ಚೋಟ ಚಿದಂಬರಂ, ಮಂತ್ರಾಲಯ, ಮುಂಬೈ, ಪುಣೆ ಮೊದಲಾದ ಕಡೆಗಳಲ್ಲಿ ನೃತ್ಯ ಪ್ರದರ್ಶನ ನೀಡಿ ಕಲಾರಸಿಕರ ಮನತಣಿಸಿದ್ದಾರೆ.
ಅಖಿಲ ಭಾರತೀಯ ಗಂಧರ್ವ ಮಹಾ ವಿದ್ಯಾಲಯ ನಡೆಸಿದ್ದ ’ಮಧ್ಯಮ ಪೂರ್ಣ’’ ಪರೀಕ್ಷೆ ಹಾಗೂ ಕರ್ನಾಟಕ ಬೋರ್ಡು ನಡೆಸುವ ’ಸೀನಿಯರ್’ ಪರೀಕ್ಷೆಯಲ್ಲೂ ಉತ್ತೀರ್ಣರಾಗಿದ್ದಾರೆ. ಗುರು ಡಾ. ಸುಕನ್ಯಾ ಭಟ್ ಅವರ ರಾಧಾಕೃಷ್ಣ ನೃತ್ಯ ಅಕಾಡೆಮಿಯ ವತಿಯಿಂದ ನಡೆದ ಭಾರತ ಮತ್ತು ಏಷ್ಯಾ ಬುಕ್ ಆಫ್ ರೆಕಾರ್ಡ್ ಸಾಮೂಹಿಕ ನೃತ್ಯ ಪ್ರದರ್ಶನಲ್ಲಿ ನೃತ್ಯ ಮಾಡಿದ್ದಾರೆ. ಮೀರಾ ರೋಡಿನ ಬಾಳಾ ಸಾಹೇಬ್ ಠಾಕ್ರೆ ಮೈದಾನದಲ್ಲಿ ನಡೆದ ಈ ಬೃಹತ್ ಕಾರ್ಯಕ್ರಮ ನಡೆದಿತ್ತು. 738 ಭರತನಾಟ್ಯ ನರ್ತಕಿಯರು ಕಣ್ಣಿಗೆ ಬಟ್ಟೆಕಟ್ಟಿಕೊಂಡು 70 ನಿಮಿಷಗಳ ಕಾಲ ನೃತ್ಯ ಮಾಡಿದ್ದರು.
ವಾರ ಭವಿಷ್ಯ: ನಿಖರ ಜ್ಯೋತಿಷಿ ಶ್ರೀ ನಾರಾಯಣ ಭಟ್ ಅವರಿಂದ: 20.09.2020 ರಿಂದ 26.09.2020
2011ರಲ್ಲಿ, ಎತ್ತರ, ಬಿತ್ತರದಿಂದಲೂ ಮಹತ್ತ್ ಹಾಗೂ ಬೃಹತಾಗಿರುವ ಚಿಣ್ಣರ ಬಿಂಬ ಸಂಸ್ಥೆಯ ಮೀರಾ ರೋಡ್ ಶಿಬಿರದ ವಿದ್ಯಾರ್ಥಿಯಾಗಿ ಕನ್ನಡ ಶಿಕ್ಷಣ ಪಡೆಯುತ್ತಾರೆ. ಏಕಪಾತ್ರಾಭಿನಯ ಮತ್ತು ಛದ್ಮವೇಷ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆಯುತ್ತಾರೆ. 2012 ರಲ್ಲಿ ಮದರ್ ಇಂಡಿಯಾ ವಿದ್ಯಾ ಸಂಸ್ಥೆಯವರು ಏರ್ಪಡಿಸಿದ್ದ ’ಭರತ ವೈಭವ’ ನೃತ್ಯ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆಯುತ್ತಾರೆ. ಸಮೂಹ ನೃತ್ಯದಲ್ಲಿ ಇವರ ತಂಡಕ್ಕೆ ದ್ವಿತೀಯ ಬಹುಮಾನ ಬರುತ್ತದೆ. ’ಪಾರ್ಲಾ ಮಹೋತ್ಸವ’ದ ನೃತ್ಯ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆಯುತ್ತಾರೆ. ಯುನೈಟೆಡ್ ಸ್ಪೋರ್ಟ್ಸ್ ಕ್ಲಬ್ ಸಂಯೋಜಿಸುತ್ತಿದ್ದ ನಾಟ್ಯ ಸ್ಪರ್ಧೆಯಲ್ಲಿ ಸತತ ನಾಲ್ಕು ವರ್ಷ ಬಹುಮಾನಿತರಾಗಿದ್ದಾರೆ. ಮೀರಾ ರೋಡಿನ ರಾಯಲ್ ಗಲ್ಸರ್ ಹೈಸ್ಕೂಲಿನ ವಿದ್ಯಾರ್ಥಿಯಾಗಿರುವ ಖುಷಿ ಶಾಲಾ ಪಠ್ಯ ಶಿಕ್ಷಣದಲ್ಲಿಯೂ ಅತ್ಯುತ್ತಮ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಶಾಲೆಯ ಕ್ರಿಡೆಗಳಲ್ಲಿ ಸತತವಾಗಿ ಭಾಗವಹಿಸುತ್ತ ಅನೇಕ ಬಹುಮಾನಗಳನ್ನು ಗೆದ್ದಿದ್ದಾರೆ, ಕರಾಟೆಯನ್ನೂ ಕಲಿತಿದ್ದಾರೆ.
ಬಾಬಾ ಪ್ರಸಾದ್ ಅರಸ್ ಕುತ್ಯಾರು ಅವರ ನೇತೃತ್ವದ ಕಲಾ ಸ್ಪಂದನ ಸಂಸ್ಥೆಯ ಸದಸ್ಯೆಯಾಗಿ ಹಲವು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಮುಂಬೈಯ ಕರ್ನಾಟಕ ಸಂಘದಲ್ಲಿ ನಡೆದಿದ್ದ ಕುವೆಂಪು ಏಕಾಂಕ ನಾಟಕ ಸ್ಪರ್ಧೆಯಲ್ಲಿ ’ಸೋತು ಗೆದ್ದವಳು’ ನಾಟಕದಲ್ಲಿ ನಟಿಸಿ ಅತ್ಯುತ್ತಮ ಬಾಲನಟಿ ಪ್ರಶಸ್ತಿಯಿಂದ ಪುರಸ್ಕೃತರಾಗಿದ್ದಾರೆ. ಇದೇ ನಾಟಕವು ಮುದ್ರಾಡಿಯ ನಾಟ್ಕದೂರು ನವರಂಗೋತ್ಸವ ಏಕಾಂಕ ನಾಟಕ ಸ್ಪರ್ಧೆಯಲ್ಲಿ ಪ್ರದರ್ಶನಗೊಂಡಾಗ ಅತ್ಯುತ್ತಮ ಬಾಲನಟಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಶಾಸ್ತ್ರೀಯವಾದ ಭರತ ನಾಟ್ಯ, ಜಾನಪದ, ಆಧುನಿಕ ನೃತ್ಯ, ರಂಗಭೂಮಿಯೊಂದಿಗೆ ಪಳಗಿರುವ ಖುಷಿಯವರು ಕರ್ನಾಟಕ ಕರಾವಳಿಯ ಗಂಡುಕಲೆ ಯಕ್ಷಗಾನದ ಉಭಯ ತಿಟ್ಟುಗಳನ್ನು ನಿಯತವಾಗಿ ಕಲಿತವರು. ಬಡಗು ತಿಟ್ಟು ಯಕ್ಷಗಾನವನ್ನು ಯಕ್ಷಗುರು ಶಂಕರ್ ನಾಯಕ್ ಎಳ್ಳಾರೆ ಅವರ ಯಕ್ಷ ವೈಭವ ಮಕ್ಕಳ ಮೇಳದ ಸದಸ್ಯೆಯಾಗಿ ಅಭ್ಯಾಸ ಮಾಡಿದವರು.
ಬಾಲಗೋಪಾಲ, ಪಿಠೀಕಾ ಸ್ತ್ರೀವೇಷಗಳನ್ನು ತನ್ನ ನೃತ್ಯ ಚತುರತೆಯಿಂದ ಮೆಚ್ಚುವಂತೆ ಅಭಿನಯಿಸುತ್ತಾರೆ. ಸುಧನ್ವಾರ್ಜುನದ ಕುವಲೆ, ಪ್ರಭಾವತಿ, ವೃಷಕೇತು, ಪ್ರದ್ಯುಮ್ನ ಮುಂತಾದ ಪಾತ್ರಗಳಲ್ಲಿ ಮಿಂಚಿದವರು. ಪ್ರಭಾವತಿಯಾಗಿ ’ಸತಿ ಶಿರೋಮಣಿ’ ಹಾಗೂ ’ಆವಲ್ಲಿಗೆ ಪಯಣವಯ್ಯ’ ಹಾಡುಗಳಿಗೆ ವೃತ್ತಿಪರ ಕಲಾವಿದರಂತೆ ಅಭಿನಯಿಸುತ್ತಾರೆ. ಪಾಪಣ್ಣ ವಿಜಯದ ಯಕ್ಷಿಣಿ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ತೆಂಕು ತಿಟ್ಟಿನ ಯಕ್ಷಗಾನವನ್ನು ಯಕ್ಷಗುರುಗಳಾದ ಸದಾನಂದ್ ಶೆಟ್ಟಿ ಕಟೀಲು ಹಾಗೂ ನಾಗೇಶ್ ಪೊಳಲಿಯವರಿಂದ ಕಲಿತವರು. ದೇವಿ ಮಹಾತ್ಮೆಯ ಮಾಲಿನಿ, ಸುದರ್ಶನ ವಿಜಯದ ಲಕ್ಷ್ಮೀ, ಛಲದಂಕ ಮಲ್ಲ ಕೌರವೇಶ್ವರದ ಕೃಷ್ಣ, ಬಪ್ಪನಾಡು ಕ್ಷೇತ್ರ ಮಹಾತ್ಮೆಯ ಭಾಗೀರಥಿ, ಶನೀಶ್ವರ ಮಹಾತ್ಮೆಯ ಅಲೋಲಿಕೆ ಮುಂತಾದ ಪಾತ್ರಗಳನ್ನು ಯಕ್ಷರಸಿಕರು ಮೆಚ್ಚುವಂತೆ ನಿರ್ವಹಿಸುತ್ತಾರೆ.
ಸಂದ ಪ್ರಶಸ್ತಿ ಪುರಸ್ಕಾರಗಳು
ಪ್ರತಿಭೆಯೊಂದಿಗೆ ಪರಿಶ್ರಮವೂ ಮೇಳೈಸಿದರೆ ಪಲಿತಾಂಶ ಮತ್ತು ಪರಿಣಾಮಗಳೂ ಕಳೆಗಟ್ಟುವುದರಲ್ಲಿ ಯಾವ ಸಂಶಯವೂ ಇಲ್ಲ. ಹೀಗೆ ಕೊನರಿದ ಖುಷಿ ಅವರ ಪ್ರತಿಭೆ ಮತ್ತು ಪರಿಶ್ರಮಕ್ಕೆ ಹಲವು ಪ್ರಶಸ್ತಿ ಪುರಸ್ಕಾರಗಳು ಪ್ರಾಪ್ತವಾಗಿವೆ. ಮುಂಬೈಯ ದೈನಿಕ, ಮಾಸಿಕಗಳಲ್ಲಿ ಅವರ ಕುರಿತ ಲೇಖನಗಳು ಬಂದಿವೆ.
ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಸಾಧಕ ಪ್ರಶಸ್ತಿ, ಅರಳು ಮಲ್ಲಿಗೆ ರಾಜ್ಯ ಪ್ರಶಸ್ತಿ, ಭಾರತ ವಿಕಾಸ ರತ್ನ ರಾಷ್ಟ್ರ ಪ್ರಶಸ್ತಿ, ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿ, ರಾಷ್ಟ್ರೀಯ ಲೋಕ ಕಲ್ಯಾಣ ಮಾನವ ಸೇವಾ ಪ್ರಶಸ್ತಿ, ದಾನ ಪ್ರಕಾಶ ಶ್ರೀ ಎನ್. ತಿಮ್ಮಪ್ಪ ಸಾಮಾಜಿಕ ಮತ್ತು ಸಾಂಸ್ಕೃತಿಕ ವಿದ್ಯಾ ಟ್ರಸ್ಟ್ ಬೆಂಗಳೂರು ಇವರಿಂದ ಪ್ರತಿಭಾ ಪುರಸ್ಕಾರ, ರಾಷ್ಟ್ರೀಯ ನಾಟ್ಯ ಮಯೂರಿ ಪ್ರಶಸ್ತಿ, ಯಕ್ಷ ತುಳು ಪರ್ಬ ಸಮಿತಿ ಕುಡ್ಲ ಇವರಿಂದ ಪ್ರತಿಭಾ ಪುರಸ್ಕಾರ ಹೀಗೆ ಹತ್ತು ಹಲವು ಪ್ರಶಸ್ತಿಗಳು ಲಭಿಸಿವೆ. ಬೊರಿವೆಲಿ ಕ್ಷೇತ್ರದ ಲೋಕಸಭಾ ಸದಸ್ಯ ಶ್ರೀ ಗೋಪಾಲ ಶೆಟ್ಟಿಯವರಿಂದ ಸನ್ಮಾನ, ಅಪ್ಪಾಜಿಬೀಡು ರಮೇಶ್ ಗುರುಸ್ವಾಮಿ ದಂಪತಿಗಳಿಂದ ಸನ್ಮಾನ, ಯಕ್ಷ ಕಲಾ ರಕ್ಷಣಾ ವೇದಿಕೆ ಮುಂಬಯಿ ಇವರಿಂದ ಸನ್ಮಾನಗಳು ಸಂದಿವೆ. ಯಕ್ಷಗಾನ ವಿಮರ್ಶಕ ಪ್ರಸಂಗಕರ್ತ, ಕಲಾವಿದರೂ ಆಗಿರುವ ಕೋಲ್ಯಾರು ರಾಜು ಶೆಟ್ಟಿಯವರಿಂದ ಹಾಗೂ ಯಕ್ಷಗಾನದ ಹಿತಚಿಂತಕ, ಕಲಾ ಪೋಷಕರೂ ಆಗಿರುವ ಪೊಲ್ಯ ಉಮೇಶ್ ಶೆಟ್ಟಿಯವರಿಂದ ಶ್ಲಾಘನೆಗೆ ಪಾತ್ರರಾದವರು ಖುಷಿ.
ಮುಂಬೈ, ಮೀರಾ ರೋಡಿನ ನಿವಾಸಿ, ಹೋಟೆಲ್ ಉದ್ಯಮಿ, ನಿಂಜೂರು ಹರೀಶ್ ಶೆಟ್ಟಿ ಹಾಗೂ ಪಂಜಿಮಾರು ಜಲಜ ನಿವಾಸ ವಿನಯ ಶೆಟ್ಟಿ ದಂಪತಿಗಳ ಪ್ರಥಮ ಪುತ್ರಿ ಖುಷಿ ಪ್ರಸ್ತುತ ಹತ್ತನೆ ತರಗತಿಯ ವಿದ್ಯಾರ್ಥಿ. ಎರಡನೆ ಮಗಳು ಕೃತಿ ಆರನೆ ತರಗತಿಯ ವಿದ್ಯಾರ್ಥಿ. ಖುಷಿ ಅವರ ಮುಂದಿನ ವಿದ್ಯಾಭ್ಯಾಸ ಹಾಗೂ ಕಲಾ ಬದುಕು ಹಸನಾಗುತ್ತ ಸಾಗಲಿ. ಅವರಿಂದ ಮತ್ತಷ್ಟು ಕಲಾ ಸೇವೆ ನಡೆಯಲಿ.
Get In Touch With Us info@kalpa.news Whatsapp: 9481252093
Discussion about this post