ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಹೈದರಾಬಾದ್: ಎಸ್.ಪಿ. ಬಾಲಸುಬ್ರಹ್ಮಣ್ಯಂ ಎಂಬ ಸ್ವರ ಸಾಮ್ರಾಟ್ ಭಾರತೀಯ ಚಿತ್ರರಂಗ ಹಾಗೂ ಗಾನ ಲೋಕ ಕಂಡ ಸಂಗೀತದ ಮೇರು ಪರ್ವತ. ಬಹುಷಃ ಭವಿಷ್ಯದಲ್ಲಿ ಇಂತಹ ಮೇರು ಗಾಯಕರನ್ನು ಭಾರತ ಮತ್ತೆ ಕಾಣಲು ಸಾಧ್ಯವೇ ಇಲ್ಲ ಎಂದರೆ ಅತಿಶಯೋಕ್ತಿಯಲ್ಲ.
ಆಗೊಂದು ಯುಗ, ತೆಲುಗಿನಲ್ಲಿ ಘಂಟಸಾಲ, ತಮಿಳಿನಲ್ಲಿ ಟಿ.ಎಂ. ಸೌಂದರ್ ರಾಜನ್, ಕನ್ನಡದಲ್ಲಿ ಪಿ.ಬಿ. ಶ್ರೀನಿವಾಸ್ ಹೀಗೆ ಒಬ್ಬೊಬ್ಬರೂ ಒಂದೊಂದು ಭಾಷೆಯ ಚಿತ್ರರಂಗದಲ್ಲಿ ಸಾರ್ವಭೌಮರು.
ಬಾಲು ಚಿತ್ರರಂಗಕ್ಕೆ ಬಂದು ಈ ಎಲ್ಲ ಭಾಷೆಗಳಿಗೂ ಸಾರ್ವಭೌಮರಾಗಿಬಿಟ್ಟರು. ಒಮ್ಮೆ ಅವರು ತಮಿಳು ತೆಲುಗಿನಲ್ಲಿ ಒಂದೇ ದಿನದಲ್ಲಿ 19 ಗೀತೆಗಳನ್ನು ಧ್ವನಿ ಮುದ್ರಿಸಿದ್ದರು. ಕನ್ನಡದಲ್ಲಿ ಒಂದೇ ದಿನ 17 ಗೀತೆಗಳನ್ನು ಧ್ವನಿ ಮುದ್ರಿಸಿದ್ದರು, ಹಿಂದಿಯಲ್ಲಿ ಒಂದೇ ದಿನ 16 ಹಾಡುಗಳನ್ನು ಧ್ವನಿಮುದ್ರಿಸಿದ್ದರು. ಇದು ಎಸ್’ಪಿ.ಬಿ ಅವರ ಸಾಮರ್ಥ್ಯ, ಅವರಿಗಿದ್ದ ಬೇಡಿಕೆ, ಅವರಿಗಿರುವ ವೈಶಾಲ್ಯತೆಗಳಿಗಿರುವ ನಿದರ್ಶನ. ಸಂಗೀತ ಪ್ರಧಾನವಾದ ಭಾರತೀಯ ಚಿತ್ರರಂಗದಲ್ಲಿ ಒಂದು ರೀತಿಯಲ್ಲಿ ಹಿನ್ನೆಲೆ ಗಾಯಕರು ಅಭಿನಯಿಸುವವರ ಆತ್ಮವಿದ್ದಂತೆ.
ಇದನ್ನೇ ಡಾ. ರಾಜ್ ಕುಮಾರ್ ಅವರು ಒಮ್ಮೆ ಪಿಬಿಎಸ್ ಬಗ್ಗೆ ಹೇಳುತ್ತಾ ಪಿಬಿಎಸ್ ನನ್ನ ಆತ್ಮ, ನಾನು ಶರೀರ ಎನ್ನುತ್ತಿದ್ದರು. ರಾಜ್’ಕಪೂರ್ ಮುಖೇಶ್ ಬಗ್ಗೆ ಇದನ್ನೇ ಹೇಳುತ್ತಿದ್ದರು. ಹಾವಿನ ದ್ವೇಷ ಹನ್ನೆರಡು ವರುಷ ಎಂದು ಎಸ್.ಪಿ. ಹಾಡಿದಾಗ ವಿಷ್ಣುವರ್ಧನ್ ರಾಮಾಚಾರಿಯಾಗಿಬಿಟ್ಟರು. ಸ್ನೇಹದ ಕಡಲಲ್ಲಿ ಎಂದು ಹಾಡಿದಾಗ ಶ್ರೀನಾಥ್ ಗರಿಗೆದರಿಬಿಟ್ಟರು. ಎಲ್ಲಿರುವೇ ಮನವ ಕಾಡುವ ರೂಪಸಿಯೇ ಎಂದು ಅನಂತ್ ನಾಗ್ ಆಕಾಶಕ್ಕೆ ಹಾರಿದರು.
ನಲಿವಾ ಗುಲಾಬಿ ಹೂವೆ ಎಂದು ಶಂಕರ್ ಭಾವಸ್ಥರಾದರು. ದಕ್ಷಿಣ ಭಾರತದ ರಜನೀಕಾಂತ್, ಕಮಲಹಾಸನ್, ಚಿರಂಜೀವಿ ಹೀಗೆ ಎಪ್ಪತ್ತು ಎಂಭತ್ತರ ದಶಕದಿಂದ ಎರಡು ಸಾವಿರದ ದಶಕದವರೆಗಿನ ಬಹುತೇಕ ಹೀರೋಗಳ ಅಂತರ್ಧ್ವನಿ ಶಕ್ತಿ ಬಾಲು ಅವರದ್ದು. ಅವರ ಧ್ವನಿಯ ಮೋಡಿ ಎಂ.ಜಿ. ರ್ಆ, ಶಿವಾಜಿ ಗಣೇಶನ್, ಎನ್.ಟಿ. ರಾಮರಾವ್, ರಾಜ್ ಕುಮಾರ್, ಅಕ್ಕಿನೇನಿ ಅಂತಹ ಹಿರಿಯರಿಗೆ ಕೂಡಾ ಆಗಾಗ ಇಣುಕಿತ್ತು.
ಹಿಂದಿಯಲ್ಲಿ ಏಕ್ ದೂಜೇ ಕೆ ಲಿಯೇ ಬಂದಾಗ ಬಾಲು ಹಿಂದಿ ಚಿತ್ರರಂಗವನ್ನೂ ತಮ್ಮ ಮೋಡಿಗೆ ಸೆಳೆದುಕೊಂಡರು. ಸಾಜನ್, ಮೈ ನೇ ಪ್ಯಾರ್ ಕಿಯಾ ಮುಂತಾದ ಚಿತ್ರಗಳು ಬಂದಾಗ ರಫಿ, ಕಿಶೋರ್ ಅವರನ್ನು ಕಳೆದುಕೊಂಡು ಕಂಗಾಲಾಗಿದ್ದ ಹಿಂದಿ ಚಿತ್ರರಂಗಕ್ಕೆ ಬಾಲು ಬೆನ್ನೆಲುಬಾಗಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post