ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ನಗರದ ಉದಯಾಚಾರ್ ಅವರಿಗೆ ಅಂಚೆ ಇಲಾಖೆ ನೀಡುವ ಪ್ರತಿಷ್ಠಿತ ‘2020ರ ಟಾಪ್ ಪರ್ಫಾಮಿಂಗ್ ಪೋಸ್ಟ್’ಮ್ಯಾನ್ 2020 ಪ್ರಶಸ್ತಿಯ ಗೌರವ ಸಂದಿದೆ.
ಮುಖ್ಯ ಅಂಚೆ ಕಚೇರಿಯಲ್ಲಿ ಸಾರ್ಟಿಂಗ್ ಪೋಸ್ಟ್ ಮ್ಯಾನ್ ಆಗಿ ಸೇವೆ ಸಲ್ಲಿಸುತ್ತಿರುವ ಉದಯಾಚಾರ್ ಅವರ ಸಮಗ್ರ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗಿದ್ದು, ತಮ್ಮ ಸೇವಾ ಪರತೆಗಾಗಿ ಇವರು ಅಂಚೆ ಪ್ರಾದೇಶಿಕ ವಲಯದಲ್ಲಿಯೇ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಅತ್ಯಂತ ಸರಳ, ಸಜ್ಜನಿಕೆ ವ್ಯಕ್ತಿತ್ವದ ಇವರು ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ಎತ್ತಿದ ಕೈ. ಸಾರ್ಟಿಂಗ್ ಪೋಸ್ಟ್ ಮ್ಯಾನ್ ಆಗಿ ತಮ್ಮದಷ್ಟೇ ಕರ್ತವ್ಯವನ್ನು ನಿರ್ವಹಿಸದೇ ಇಲಾಖೆಗೆ ಸಂಬಂಧಿಸಿ ಇತರೆ ಕಾರ್ಯಗಳು ಹಾಗೂ ಸಾರ್ವಜನಿಕರು ಸರ್ಕಾರದ ಯೋಜನೆಗಳನ್ನು ಪಡೆದುಕೊಳ್ಳಲೂ ಸಹ ಹಲವಾರು ರೀತಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಅಂಚೆ ಎಟಿಎಂ ಸೆಂಟರ್’ಗಳಲ್ಲಿ ವಯೋವೃದ್ಧರು, ಅಂಗವಿಲಕರು ಹಾಗೂ ಅನಕ್ಷರಸ್ಥರು ಬಂದ ವೇಳೆ ಸ್ವತಃ ತಾವೇ ಹೋಗಿ ಅವರಿಗೆ ಸಹಾಯ ಮಾಡುವುದು ಮಾತ್ರವಲ್ಲದೇ ಅವರಿಗೆ ಸಾಧ್ಯವಾದಷ್ಟು ತಿಳುವಳಿಕೆ ನೀಡುವ ಕಾರ್ಯ ಮಾಡುತ್ತಾರೆ. ಪ್ರಮುಖವಾಗಿ ವೃದ್ಧಾಪ್ಯ ವೇತನಗಳನ್ನು ಸಂಬಂಧಿಸಿದವರು ಪಡೆಯಲು ಸಹಾಯ ಮಾಡುವುದು, ಆಧಾರ್ ಕಾರ್ಡ್, ಆರ್’ಡಿ ಸೇರಿದಂತೆ ಅಂಚೆ ಇಲಾಖೆಯಲ್ಲಿ ಸೇವೆ ಪಡೆಯುವ ಅಗತ್ಯವಿರುವ ಗ್ರಾಹಕರಿಗೆ ಸ್ವಯಂ ಪ್ರೇರಿತರಾಗಿ ಸಹಾಯ ಮಾಡುವ ಮೂಲಕ ಒಳ್ಳೆಯ ಹೆಸರು ಸಂಪಾದಿಸಿದ್ದಾರೆ.
ತಮ್ಮ ನಿಗದಿತ ಕರ್ತವ್ಯವನ್ನು ಹೊರತುಪಡಿಸಿಯೂ ಸಹ ಗ್ರಾಹಕರ ಸೇವೆಗಾಗಿ ಸದಾ ಸಿದ್ದವಿರುವ ಉದಯಾಚಾರ್ ಅವರನ್ನು ಗುರುತಿಸಿರುವ ಇಲಾಖೆ ಈ ಒಂದು ಪ್ರಶಸ್ತಿ ನೀಡಿರುವುದು ಸಂತಸದ ವಿಚಾರ.
ಇವರ ಕರ್ತವ್ಯ ಬದ್ದತೆ ಹಾಗೂ ಸೇವಾ ಮನೋಭಾವನೆ ಇತರರಿಗೆ ಮಾದರಿಯಾಗಲಿ ಎಂದು ಹಾರೈಸುತ್ತಾ, ಉದಯಾಚಾರ್ ಅವರನ್ನು ಕಲ್ಪ ಮೀಡಿಯಾ ಹೌಸ್ ಅಭಿನಂದಿಸುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post