ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ನಾಡಹಬ್ಬ ದಸರಾಗೆ ಭದ್ರಾವತಿಯಲ್ಲಿ ಮಾಜಿ ಯೋಧರು ಅಧಿಕೃತವಾಗಿ ಚಾಲನೆ ನೀಡಿದ್ದಾರೆ.
ಹಳೇನಗರದಲ್ಲಿರುವ ಗ್ರಾಮ ದೇವತೆ ಹಳದಮ್ಮ ದೇವಾಲಯದ ಆವರಣದಲ್ಲಿ ನಗರಸಭೆಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನವರಾತ್ರಿಗೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಬಿ.ಕೆ. ಸಂಗಮೇಶ್ವರ್, ನಮ್ಮನ್ನೆಲ್ಲಾ ಕಾಪಾಡುವ ಶಕ್ತಿ ದೇವತೆಗಳನ್ನು ಆರಾಧಿಸುವ ನವರಾತ್ರಿಗೆ ಚಾಲನೆ ನೀಡಿರುವುದು ಸಂತಸವಾಗಿದೆ. ಕೋವಿಡ್19ನಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿಯೂ ಸಾಂಪ್ರದಾಯಿಕ ಆಚರಣೆಯನ್ನು ನಡೆಸುತ್ತಿದ್ದೇವೆ. ನಮ್ಮೆಲ್ಲರ ಈ ಶ್ರದ್ಧಾಭಕ್ತಿಗೆ ತಕ್ಕದಾದ ಫಲ ದೊರೆಯುತ್ತದೆ ಎಂದರು.
ಸಾಂಪ್ರದಾಯಿಕ ಆಚರಣೆಗಳನ್ನು ನಾವು ಮುಂದುವರೆಸಿಕೊಂಡು ಹೋದಾಗ ಮುಂದಿನ ಪೀಳೆಗೆಗೂ ಸಹ ನಮ್ಮ ಸಂಸ್ಕಾರಗಳು ಬರುತ್ತವೆ. ಹೀಗಾಗಿ, ನಮ್ಮಲ್ಲಿನ ಆಚರಣೆಗಳನ್ನು ಎಂದಿಗೂ ನಿಲ್ಲಿಸಬಾರದು ಎಂದರು.
ಮಾಜಿ ಯೋಧ ಸುಬೇಧಾರ್ ಎಲ್.ಡಿ. ಅಶೋಕ್ ಮಾತನಾಡಿ, ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿ ಈಗ ನಿವೃತ್ತರಾಗಿರುವ ನಮ್ಮನ್ನು ಗುರುತಿಸಿ ಇಂದು ನಮ್ಮಿಂದ ನಾಡ ಹಬ್ಬಕ್ಕೆ ಚಾಲನೆ ನೀಡಿಸಿರುವುದು ಅತ್ಯಂತ ಸಂತಸದ ವಿಚಾರವಾಗಿದೆ ಎಂದರು.
ಕೊರೋನಾ ವಾರಿಯರ್ಸ್‌ಗಳಾಗಿ ಸೇವೆ ಸಲ್ಲಿಸಿದ ಅಂಗನವಾಡಿ ಕಾರ್ಯಕರ್ತೆ ಜಯಶ್ರೀ, ಆರೋಗ್ಯ ಇಲಾಖೆ ನಿರೀಕ್ಷಕ ನೀಲೇಶ್ ರಾಜ್, ಆಶಾ ಕಾರ್ಯಕರ್ತೆಯರಾದ ಆಶಾ, ಶೃತಿ, ಪೊಲೀಸ್ ಇಲಾಖೆಯ ಶ್ರೀನಿವಾಸ್, ಪೌರ ಕಾರ್ಮಿಕ ಕುಮಾರಸ್ವಾಮಿ, ಯೋಜನಾ ನಿರ್ದೇಶಕರು, ಮಾಜಿ ಯೋಧ ವಿನೋದ್ ಪೂಜಾರ್, ಮಾಜಿ ಯೋಧ ಬೋರೇಗೌಡ, ನಗರಾಭಿವೃದ್ಧಿ ಕೋಶದ ಎಇ ಮಂಜುನಾಥ್ ಅವರಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮಕ್ಕೂ ಮುನ್ನ ಶಾಸಕರು, ಮಾಜಿ ಸೈನಿಕರು, ಕೊರೋನಾ ವಾರಿಯರ್ಸ್‌ಗಳು ಹಾಗೂ ಅಧಿಕಾರಿಗಳು ಗ್ರಾಮ ದೇವತೆಗೆ ವಿಶೇಷ ಪೂಜೆ ಸಲ್ಲಿಸಿದರು.
Discussion about this post