ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶ್ರೀರಾಮ ರಾವಣನನ್ನು ಸಂಹರಿಸಿ ಲಂಕೆಯಿಂದ ಮರಳಿ ಅಯೋಧ್ಯೆಗೆ ಮರಳಿ ಪಟ್ಟವನ್ನು ಅಲಂಕರಿಸುವ ಹೊತ್ತಿಗೆ ಸರಿಯಾಗಿ 21ದಿನಗಳು ಕಳೆದಿದ್ದವಂತೆ. ಅದಕ್ಕೆ ಸರಿಯಾಗಿ ಸಂಭ್ರಮಾಚರಣೆಯ ಪ್ರತೀಕವೆಂಬಂತೆ ವಿಜಯದಶಮಿಯಿಂದ 21ದಿನಕ್ಕೆ ಸರಿಯಾಗಿ ದೀಪಾವಳಿಯನ್ನು ಆಚರಿಸಲಾಗುತ್ತದೆ ಎಂಬ ನಂಬಿಕೆ ಭಾರತದಲ್ಲಿದೆ. ದೀಪಾವಳಿ ಎಂದರೆ ದೀಪಗಳ ಹಬ್ಬ, ಪಟಾಕಿ, ಪೂಜೆ, ಆಹಾರಗಳ ಸಂಭ್ರಮ. ಹಾಗಾಗಿಯೇ ದಶಮಿಯಿಂದ ಪ್ರಾರಂಭವಾದ ಮಾಲಿನ್ಯದ ಕೂಗು ದೀಪಾವಳಿಯ ಹೊತ್ತಿಗೆ ಪ್ರಖರ ಧ್ವನಿಯನ್ನು ಪಡೆಯುತ್ತದೆ. ಕೊರೊನ ಕಾಲದಲ್ಲಿ ವೈದ್ಯಕೀಯ, ವಿಜ್ಞಾನಿಗಳ ವಲಯದಿಂದಲೂ ಇದೇ ರೀತಿಯ ಅಭಿಪ್ರಾಯಗಳು ಬರುತ್ತಿವೆ. ಅನೇಕ ಪರಿಸರವಾದಿಗಳು, ಸಂಘ-ಸಂಸ್ಥೆಗಳು, ಮೊದಲಿಗೆ ರಾವಣ ದಹನದಂತಹ ಕಾರ್ಯಕ್ರಮ ಮತ್ತು ದೀಪಾವಳಿಗೆ ಪಟಾಕಿಗಳನ್ನು ನಿಷೇಧಿಸಬೇಕು ಹಾಗಾದಾಗ ದೇಶಾದ್ಯಂತ ವಾಯುಮಾಲಿನ್ಯ ನಿಯಂತ್ರಣಗೊಳ್ಳುತ್ತದೆ ಎಂಬ ವಾದವನ್ನು ಮುಂದಿಡುತ್ತಾರೆ. ದೀಪಾವಳಿ ಹತ್ತಿರವಾದಂತೆ ಈ ಬಗೆಯ ಒತ್ತಡಗಳು ತೀವ್ರಗೊಳ್ಳುತ್ತವೆ. ಅನೇಕ ಭಾರತೀಯರಿಗೆ ಇದು ಒಂದು ಧರ್ಮದ ಆಚರಣೆ, ಪರಂಪರೆಗಳ ಮೇಲೆ ನಡೆಸುವ ವ್ಯವಸ್ಥಿತ ಪಿತೂರಿಯಂತೆ ತೋರುತ್ತದೆ. ಇಂತಹ ಚರ್ಚೆಗಳ ನಡುವೆ ೨೦೧೮ರ ಸರ್ವೋಚ್ಛ ನ್ಯಾಯಾಲಯದ ತೀರ್ಪಿನ ಆಶಯದಂತೆ, ಶಬ್ಧ ವಾಯು ಹಾಗೂ ಒಟ್ಟಾರೆ ಪರಿಸರ ಮಾಲಿನ್ಯ ಕಡಿಮೆಗೊಳಿಸಲು ಈ ಬಾರಿ ಕೇವಲ “ಹಸಿರು ಪಟಾಕಿ”ಗಳನ್ನೇ ಖರೀದಿಸಬೇಕು ಎಂದು ರಾಜ್ಯ ಸರಕಾರ ಆದೇಶಿಸಿದೆ. ಈ ನಿರ್ಧಾರದ ಆಶಯ, ಸಾಧ್ಯತೆ ಮತ್ತು ಅನಿವಾರ್ಯತೆಗಳ ಕುರಿತು ಸಾಕಷ್ಟು ಚರ್ಚೆಗಳೂ ಆಗುತ್ತಿವೆ.
ವಾಸ್ತವದಲ್ಲಿ ಬೇರಿಯಂ, ಅಲ್ಯುಮಿನಿಯಂ, ಬೂದಿ ಹೀಗೆ ಅನೇಕ ಪರಿಸರಕ್ಕೆ ಹಾನಿಯುಂಟುಮಾಡುವ ವಿಷಯುಕ್ತ ರಾಸಯನಿಕಗಳನ್ನು ಬಳಸುವ ಪಟಾಕಿಗಳ ಸುಡುವಿಕೆಯಿಂದ ಸಹಜವಾಗಿ ವಾಯು, ಶಬ್ಧ, ಜಲ ಮಾಲಿನ್ಯಗಳ ಪ್ರಮಾಣ ಹೆಚ್ಚಾಗುತ್ತಿದ್ದರೂ, ದೆಹಲಿ ಸೇರಿದಂತೆ ಭಾರತದ ನಗರಗಳಲ್ಲಿ ಮಾಲಿನ್ಯ ಹೆಚ್ಚಾಗುತ್ತಿರುವುದಕ್ಕೆ ಅನೇಕ ಕಾರಣಗಳಿವೆ. ವಾಹನಗಳು, ಕಾರ್ಖಾನೆಗಳು, ದೆಹಲಿಯ ಹೊರವಲಯ ಹಾಗೂ ಆಸುಪಾಸಿನ ರಾಜ್ಯಗಳ ರೈತರು ತಮ್ಮ ಹೊಲಗಳಲ್ಲಿ ಸುಡುವ ಕೊಯ್ದ ಪೈರಿನ ಕೂಳೆ (ಸ್ಟಬಲ್), ದಿನನಿತ್ಯದ ಅಭಿವೃದ್ಧಿ ಕಾರ್ಯಗಳಿಂದ ಹೊರಹೊಮ್ಮುವ ಇಂಗಾಲದ ಮೊನಾಕ್ಸೈಡ್, ಇಂಗಾಲದ ಡೈ ಆಕ್ಸೈಡ್, ತೀರಾ ಕನಿಷ್ಟ ಗಾತ್ರದ “ಪಾರ್ಟಿಕ್ಯುಲೆಟ್ ಮ್ಯಾಟರ್(ಪಿ.ಎಂ. 2.5 ಮತ್ತು 10)” ಇತ್ಯಾದಿಗಳು ನಗರಪ್ರದೇಶಗಳ ಮಾಲಿನ್ಯಕ್ಕೆ ನಿಜವಾದ ಮತ್ತು ಪ್ರಮುಖವಾದ ಕಾರಣಗಳು. “ಟೆರಿ(ದಿ ಎನರ್ಜಿ ಆಂಡ್ ರಿಸೋರ್ಸಸ್ ಇಸ್ಟಿಟ್ಯೂಟ್)” ಸೇರಿದಂತೆ ಅನೇಕ ಸಂಸ್ಥೆಗಳು ನಡೆಸಿರುವ ಅಧ್ಯಯನಗಳು ಇದನ್ನು ಸಾಬೀತುಪಡಿಸಿವೆ.
ಕನಿಷ್ಟ ವಿಸ್ತರಣೆಗೆ ಅವಕಾಶವಿರುವ ನಗರಪ್ರದೇಶಗಳಲ್ಲಿ ಜನರ ಬೇಕುಗಳನ್ನು ಪೂರೈಸಲು ಗರಿಷ್ಠ ಬೆಳವಣಿಗೆ ಮೇಲ್ಮುಖವಾಗಿ, ಎತ್ತರವಾಗಿ ಸಾಗುತ್ತದೆ. ಪರಿಣಾಮ ಗಾಳಿ-ಬೆಳಕುಗಳ ಸಹಜ ಚಲನೆಗೆ ಧಕ್ಕೆ ಉಂಟಾಗುತ್ತದೆ. ದಿನನಿತ್ಯದ ಕೈಗಾರಿಕಾ ಚಟುವಟಿಕೆಗಳು ಮತ್ತು ರಸ್ತೆ, ಕಟ್ಟಡ ಕಾಮಗಾರಿ, ಇಂಧನ ಬಳಕೆಗಳಿಂದ ಹೊರಬರುವ ನೈಟ್ರೋಜನ್ ಆಕ್ಸೈಡ್ಸ್, ಸೋಡಿಯಂ ಡೈ ಆಕ್ಸೈಡ್, ಕಾರ್ಬನ್ ಮೊನಾಕ್ಸೈಡ್, ಕಾರ್ಬನ್ ಡೈ ಆಕ್ಸೈಡ್, ಪರ್ಟಿಕಯುಲೇಟ್ ಮ್ಯಾಟರ್ 2.5 ಮತ್ತು 10 ಮೊದಲಾದ ಮಾಲಿನ್ಯಕಾರಕಗಳು ಗಾಳಿಯನ್ನು ಸೇರಿಕೊಂಡು ಮಂಜಿನಂತಹ ವಾತಾವರಣವನ್ನು ಸೃಷ್ಟಿಸುತ್ತವೆ. ಇದನ್ನೇ ಸ್ಮಾಗ್(ಸ್ಮೋಕ್+ಫಾಗ್) ಅಥವಾ ಇಂಡಸ್ಟ್ರಿಯಲ್ ಸ್ಮಾಗ್ ಎಂದು ಕರೆಯುವುದು. ಇವು ವಾತಾವರಣದ ಸಹಜತೆಯನ್ನು ನಾಶಮಾಡಿ ಮಾಲಿನ್ಯದ ಮೂಲಕ ಸಹಜ ಬೆಳಕಿನ ಪ್ರಸರಣ, ಗಾಳಿಯ ಚಲಿಸುವಿಕೆ, ಪಾರದರ್ಶಕ ವಾತಾವರಣವನ್ನು ವಿಷಯುಕ್ತಗೊಳಿಸುತ್ತದೆ. ಇವುಗಳು ದೀರ್ಘಕಾಲಿಕವಾಗಿ ಹಸಿರುಮನೆ ಪರಿಣಾಮ, ಆಮ್ಲ ಮಳೆ, ಹವಾಮಾನ ಬದಲಾವಣೆ, ತಾಪಮಾನ ಏರಿಕೆ, ಪರಿಸರದಲ್ಲಿ ಜತನವಾಗದ ಅನೇಕ ಮಾಲಿನ್ಯಕಾರಕಗಳು ಜೀವಿಗಳ ಆಹಾರ ಸರಪಳಿಯಲ್ಲಿ ಸೇರಿಕೊಂಡು ವಿಷಕಾರಕ ಅಂಶಗಳ ಶೇಖರಣೆ (ಬಯೋಮ್ಯಾಗಿಫಿಕೇಶನ್) ಹೀಗೆ ಅನೇಕ ರೀತಿಗಳ ಗಂಭೀರ, ದೀರ್ಘಕಾಲಿಕ ದುಷ್ಪರಿಣಾಮಗಳಿಗೆ ಕಾರಣವಾಗುತ್ತವೆ. ಕಿರು ಅವಧಿಯಲ್ಲಿ ಇವು ಮೆದುಳು, ಶ್ವಾಸಕೋಶ, ಒಟ್ಟಾರೆ ಜೀವಿಗಳ ಆರೋಗ್ಯದ ಮೇಲೂ ನೇರವಾಗಿ ಪರಿಣಾಮ ಉಂಟುಮಾಡುತ್ತವೆ. ಇದಕ್ಕೆ ದೀಪಾವಳಿಯ ಸಂದರ್ಭದಲ್ಲಿ ಪಟಾಕಿಗಳ ಸುಡುವಿಕೆಯೂ ಸೇರಿಕೊಳ್ಳುತ್ತದೆ. ಅಧಿಕ ಶಬ್ಧ ಸುಸುವ, ವಿವಿಧ ಬಣ್ಣಗಳನ್ನು ಚಿಮ್ಮಿಸುವ, ಒಂದರಲ್ಲೇ ಹಲವು ವೈವಿಧ್ಯತೆಗಳನ್ನು ಸೃಷ್ಟಿಸುವ ಮತ್ತು ಚೀನಾ ದೇಶದಿಂದ ಆಮದಾಗುತ್ತಿರುವ ಅಗ್ಗದ ಹೆಸರಿನ ಅಪಾಯಕಾರಿ ಸುಡುಮದ್ದುಗಳನ್ನು ಮಾರುವ ಹಂಬಲದಿಂದ ವಾತಾವರಣದಲ್ಲಿ ಕರಗಿ, ಜತನಗೊಳ್ಳದ ಅನೇಕ ವಿಷಕಾರಿ ರಾಸಯನಿಕಗಳ ಬಳಕೆ ಕೇವಲ ಮನುಷ್ಯ, ಪ್ರಾಣಿಗಳಿಗಷ್ಟೇ ಅಲ್ಲ ಇಡೀ ಭೂಮಿಗೆ ಅಪಾಯಕಾರಿ. ಭೂಮಿಯ ತಾಪಮಾನ ಏರಿಕೆ ಕುರಿತಾಗಿ ಇತ್ತೀಚೆಗೆ “ಐಪಿಸಿಸಿ” ಪ್ರಕಟಿಸಿದ್ದ ವರದಿಯನ್ನು ಇದಕ್ಕೆ ಪೂರಕವಾಗಿ ಗಮನಿಸಬಹುದು.
ಮನುಷ್ಯ ಚಟುವಟಿಕೆಗಳು ವಾತಾವರಣವನ್ನು ಸುಲಭವಾಗಿ ಮಲಿನಗೊಳಿಸುತ್ತಿವೆ ಆದರೆ ಆ ಮಾಲಿನ್ಯವನ್ನು ಶುಚಿಗೊಳಿಸುವ, ಪರಿಸರವನ್ನು ಸಹಜ ಸ್ಥಿತಿಗೆ ತರುವ ವಿಧಾನ ಮಾತ್ರ ಯಾರಿಗೂ ತಿಳಿದಿಲ್ಲ. ಹಾಗಾಗಿ ಅನಿವಾರ್ಯವಾಗಿ ನಾವು ಮಾಲಿನ್ಯದ ಪ್ರಮಾಣವನ್ನು ಕಡಿಮೆಗೊಳಿಸುವತ್ತ ಗಮನ ಹರಿಸಬೇಕು. ಜಾಗತಿಕ ಮಟ್ಟದಲ್ಲಿ ಹವಾಮಾನ ಬದಲಾವಣೆ, ಭೂಮಿಯ ತಾಪಮಾನದ ಏರುವಿಕೆಯನ್ನು ತಡೆಗಟ್ಟಲು ಕೈಗೊಳ್ಳುತ್ತಿರುವ ಕ್ರಮಗಳಾದ “ಪ್ಯಾರಿಸ್ ಶೃಂಗಸಭೆ 2015″, ಕ್ಯೋಟೊ ಪ್ರೋಟೊಕಾಲ್ 1997, ರಿಯೋ ಭೂ ಶೃಂಗಸಭೆ”, “2015ರಲ್ಲಿ ಭಾರತವೇ ಪ್ರಸ್ತಾಪಿಸಿ, ಜಾರಿಗೆ ತರುತ್ತಿರುವ “ಅಂತರಾಷ್ಟ್ರೀಯ ಸೌರ ಮಿತ್ರಕೂಟ” ಹಾಗೂ ದೇಶಿಯ ಮಟ್ಟದಲ್ಲಿ ಕೈಗೊಳ್ಳಲಾಗುತ್ತಿರುವ ಅನೇಕ ಸರಕಾರ ಹಾಗೂ ಸಾರ್ವಜನಿಕ ಮಟ್ಟದ ಕಾರ್ಯತಂತ್ರಗಳೂ ಬಹುಮುಖ್ಯವಾದವು.
ದೀಪಾವಳಿಗೆ ಪಟಾಕಿ ಸಿಡಿಸುವುದು ಬಹಳ ಹಿಂದಿನಿಂದಲೂ ನಡೆದುಕೊಂಡು ಬರುತ್ತಿದೆ. ಕಾಲಕ್ಕೆ ತಕ್ಕಂತೆ, ರಾಸಾಯನಿಕಗಳ ಆವಿಷ್ಕಾರ, ಬಳಕೆ, ಅಭಿವೃದ್ಧಿಗೆ ಪೂರಕವಾಗಿ ಪಟಾಕಿಗಳ ರಚನೆ, ಸ್ವರೂಪ ಹಾಗೂ ಸ್ವಭಾವಗಳಲ್ಲಿಯೂ ಬದಲಾವಣೆಗಳು ಆಗುತ್ತಿವೆ. ಈಗಲೂ ಹಳ್ಳಿಗಳಲ್ಲಿ ಗನ್‍ಪೌಡರ್ ಮೊದಲಾದ ರಾಸಾಯನಿಕಗಳನ್ನು ಬಳಸಿ “ನಾಟಿ” ಪಟಾಕಿಗಳನ್ನು ತಯಾರಿಸುವ ವಾಡಿಕೆಯಿದೆ. ದೀಪಾವಳಿ ಎಂದರೆ ಸೆಷ್ಟೆಂಬರ್-ನವೆಂಬರ್ ತಿಂಗಳುಗಳ ಹೊತ್ತಿಗೆ ಬರುವ ಹಬ್ಬ. ಸಹಜವಾಗಿ ನೈರುತ್ಯ ಮಾನ್ಸೂನ್ ಮಳೆಗಾಲದ ಕೊನೆ. ಅಲ್ಲಲ್ಲಿ ನಿಂತಿರುವ ನೀರು ಅನೇಕ ಕ್ರಿಮಿ, ಕೀಟಗಳ ಉತ್ಪತ್ತಿಗೆ ಆಶ್ರಯ ತಾಣ. ಇಂತಹ ಹೊತ್ತಿನಲ್ಲಿ ಮನೆಯಲ್ಲಿ ದೀಪಗಳನ್ನು ಹಚ್ಚಿಡುವುದು, ಪಟಾಕಿಗಳನ್ನು ಸಿಡಿಸುವುದು ಆ ಮೂಲಕ ಅವುಗಳಲ್ಲಿರುವ ರಾಸಾಯನಿಕಗಳು ಇಂತಹ ಸಾಂಕ್ರಾಮಿಕ ರೋಗ ಹರಡುವ ಕ್ರಿಮಿ, ಕೀಟಗಳ ನಾಶಕ್ಕೆ ಕಾರಣವಾಗುದಲ್ಲದೆ, ಮನೆಯಲ್ಲಿ ಬೆಚ್ಚಗಿನ ವಾತಾವರಣ ನಿರ್ಮಿಸಲು ಕಾರಣವಾಗುತ್ತದೆ. ಹಾಗಾಗಿಯೇ ಕಾರ್ತಿಕ ಮಾಸ(ಚಳಿಗಾಲ)ದಲ್ಲಿ ನಾಡಿನಾದ್ಯಂತ ದೀಪೋತ್ಸವಗಳನ್ನು ಆಚರಿಸುವ ಪ್ರತೀತಿ ಹಿಂದಿನಿಂದಲೂ ನಡೆದುಕೊಂಡು ಬರುತ್ತಿದೆ. ಹಾಗೆ ನೋಡಿದರೆ ನಾವು ಹಚ್ಚುವ ಹಣತೆಯಿಂದ ಹೊರಹೊಮ್ಮುವ ಇಂಗಾಲದ ಡೈ ಆಕ್ಸೈಡ್ ಕೂಡ ಮಾಲಿನ್ಯಕಾರಕ. ಹಾಗೆಂದು ಮನುಷ್ಯರ ಇತರ ಚಟುವಟಿಕೆಗಳನ್ನು ನಿಯಂತ್ರಿಸದೆ ಹಬ್ಬದ ಸಮಯದಲ್ಲಿ ಹಣತೆ ಹಚ್ಚುವುದನ್ನೂ ನಿಷೇಧಿಸಬೇಕು ಎಂದರೆ ಅದು ಅತಾರ್ಕಿಕ.
ಪಟಾಕಿ, ರಾವಣದಹನ ಆಚರಣೆಗಳಿಂದಲೇ ಮಾಲಿನ್ಯವೇ?
ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಯನದ ವರದಿಯ ಪ್ರಕಾರ, ದೆಹಲಿಯಲ್ಲಿ, 2013 ರಿಂದ 2016ರ ವರೆಗಿನ ಅವಧಿಯಲ್ಲಿ, ದೀಪಾವಳಿಯ ಸಮಯದಲ್ಲಿ ಪಾರ್ಟಿಕ್ಯುಲೆಟ್ ಮ್ಯಾಟರ್ 2.5 ಪ್ರಮಾಣ ಗಣನೀಯವಾಗಿ ಏರಿರುವುದನ್ನು ಕಾಣಬಹುದು. 2015 ರಿಂದ 2017ರ ಸೆಪ್ಟೆಂಬರ್-ನವೆಂಬರ್ ತಿಂಗಳುಗಳ ಅವಧಿಯಲ್ಲಿ ಏರ್ ಕ್ವಾಲಿಟಿ ಇಂಡೆಕ್ಸ್ (ಎ.ಐ.ಕ್ಯು.) 326 ಮತ್ತು 426 ಅಂಕದಲ್ಲಿತ್ತು. ಅಂದರೆ ಆ ಅಂಕಗಳನ್ನು ಗಾಳಿಯ ಆರೋಗ್ಯದಲ್ಲಿ ಕಳಪೆ ಮತ್ತು ತುರ್ತು ಪರಿಸ್ಥಿತಿ ಎಂದು ಪರಿಗಣಿಸಲಾಗಿದೆ. ದೆಹಲಿಯಲ್ಲಿ ಗಾಳಿಯ ಮಲಿನತೆಯನ್ನು ಆನ್‍ಲೈನ್‍ನಲ್ಲಿ ಅಳೆಯುವ 40 ಕೇಂದ್ರಗಳಿದ್ದರೂ ತುರ್ತುಪರಿಸ್ಥಿತಿಯನ್ನು ಎದುರಿಸುವ ನಿರ್ದಿಷ್ಟ ಯೋಜನೆಗಳಿಲ್ಲ. ದೆಹಲಿ ವಾಯುಮಾಲಿನ್ಯದ ತುರ್ತುಪರಿಸ್ಥಿತಿಯನ್ನು ನಿಯಂತ್ರಿಸಲು ಜಾರಿಗೆ ತಂದ ಸಮ-ಬೆಸ ವಾಹನ ಚಲಾವಣೆ ಒಂದು ಉದಾಹರಣೆಯಷ್ಟೆ,
ದೆಹಲಿ ಒಳಗೊಂಡಂತೆ ಉತ್ತರ ಭಾರತದಲ್ಲಿ ಚಳಿಗಾಲ ಪ್ರಾರಂಭವಾದಂತೆ ವಾಯುಮಾಲಿನ್ಯದ ಪ್ರಮಾಣವೂ ಹೆಚ್ಚಾಗುತ್ತದೆ. ಅದಕ್ಕೆ ವೈಜ್ಞಾನಿಕ ಕಾರಣವೂ ಇದೆ. ಚಳಿಗಾಲದ ತಿಂಗಳುಗಳಲ್ಲಿ ಗಾಳಿಯ ಚಲನೆಯ ವೇಗದ ಪ್ರಮಾಣ ನಿಧಾನವಾಗಿರುತ್ತದೆ. ಇದರ ಜೊತೆಗೆ ಎರಡು ಭಿನ್ನ ಉಷ್ಣತೆ, ತೇವಾಂಶದ ಗಾಳಿಗಳು ಪರಸ್ಪರ ಸೇರುವ ಎತ್ತರವೂ ಗಣನೀಯವಾಗಿ ಕೆಳಮಟ್ಟದಲ್ಲಿರುತ್ತದೆ. ಇದು ಬೇಸಿಗೆಯ ಕಾಲದ ಗಾಳಿಯ ವೇಗ ಹಾಗೂ ಗಾಳಿಗಳ ಮಿಶ್ರಣದ ಎತ್ತರಕ್ಕಿಂತ ಕಡಿಮೆ ಎತ್ತರದಲ್ಲಿರುತ್ತದೆ. ಚಳಿಗಾಲದಲ್ಲಿ ವಾತಾವರಣದ ಉಷ್ಣತೆಯೂ ಕಡಿಮೆಯಾಗಿರುತ್ತದೆ. ಮೇಲಾಗಿ ಎತ್ತರದ ಕಟ್ಟಡಗಳಿಂದ ಆವೃತ್ತವಾದ ಪ್ರದೇಶಗಳಲ್ಲಿ ಅಳಿದುಳಿದ ಸೂರ್ಯನ ಬೆಳಕಿನ, ಉಷ್ಣತೆಯ ಪ್ರಭಾವವೂ ನೇರವಾಗಿ ಬೀಳುವುದಿಲ್ಲ. ಅಂದರೆ ಬಿಸಿಯಾಗದ ಗಾಳಿ ಮೇಲೇಳುವುದಿಲ್ಲ. ಸ್ವಾಭಾವಿಕವಾಗಿ ಇದು ಕಡಿಮೆ ಎತ್ತರದಲ್ಲಿಯೇ ಮಾಲಿನ್ಯಕಾರಕಗಳ ಶೇಖರಣೆಗೆ ಕಾರಣವಾಗುತ್ತದೆ. ಇವುಗಳ ಮೇಲೆ ರೂಪುಗೊಳ್ಳುವ ಮಂಜಿನಂತಹ ಕ್ರಿಯೆಗಳು ವಾಯುಮಾಲಿನ್ಯವನ್ನು ವಾತಾವರಣದಲ್ಲಿಯೇ ಸಂಗ್ರಹವಾಗುವಂತೆ, ನಿಲ್ಲುವಂತೆ ಮಾಡುತ್ತವೆ. ಹಾಗಾಗಿಯೇ ಚಳಿಗಾಲದ ಅವಧಿಯಲ್ಲಿ ಮಾಲಿನ್ಯದ ಪ್ರಮಾಣ ಹೆಚ್ಚಾಗುತ್ತದೆ. ವಿವಿಧ ಸಾಂದ್ರತೆಯ ಗಾಳಿಗಳ ಮಿಶ್ರಣದ ವೇಗ ಮತ್ತು ಎತ್ತರ ಕುಂಠಿತಗೊಳ್ಳುತ್ತಿರುವುದು ಮತ್ತೊಂದು ಗಂಭೀರ ಸಂಗತಿ. ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ 2015ರಲ್ಲಿ 590 ಮೀಟರ್‍ಗಳಿದ್ದ ಗಾಳಿಯ ಮಿಶ್ರಣದ ಪ್ರಮಾಣ 2017ರ ಹೊತ್ತಿಗೆ 481 ಮೀಟರ್‍ಗೆ ಇಳಿದಿರುವುದು ಹಾಗೂ 2015ರಲ್ಲಿ ಸೆಕೆಂಡಿಗೆ 3.4 ಮೀಟರ್‍ಗಳಷ್ಟಿದ್ದ ಗಾಳಿಯ ವೇಗ 2017ರ ಹೊತ್ತಿಗೆ 0.57ರಿಂದ 0.71 ಮೀಟರ್/ಸೆಕೆಂಡ್‍ಗೆ ಇಳಿದಿರುವುದು ಮಾಲಿನ್ಯವನ್ನು ಮತ್ತಷ್ಟು ಭೂಮಿಯಿಂದ ಕಡಿಮೆ ಎತ್ತರದಲ್ಲಿ ಶೇಖರವಾಗುವಂತೆ ಮಾಡಿದೆ. ಸುಗಮವಾದ ಗಾಳಿಯ ಚಲನೆಗೆ ದೊರೆಯದ ವಿಶಾಲ ಪ್ರದೇಶ, ಭೂಮಿಗೆ ಮುಟ್ಟದ ಸೂರ್ಯನ ಬೆಳಕು ಮೊದಲಾದ ಸಂಗತಿಗಳು ಹೀಗೇ ಸಾಗಿದರೆ ಎಲ್ಲಾ ನಗರಗಳ ಬೆಳವಣಿಗೆ, ಮಾಲಿನ್ಯ ಹಾಗೂ ಗಾಳಿಯ ಚಲನೆಯ ತಟಸ್ಥತೆಯ ಪರಿಣಾಮ ನಗರಗಳ ಬದುಕು ಶುದ್ಧ ಗಾಳಿ, ಬೆಳಕು, ಪರಿಸರಕ್ಕಾಗಿ ನಡೆಸುವ ಅನಿವಾರ್ಯ ಹೋರಾಟದ ಜೀವನವಾಗಿ ರೂಪಾಂತರವಾಗುವ ಅಪಾಯವಿದೆ.

ಪಟಾಕಿಗಳನ್ನು ಸಂಪೂರ್ಣ ನಿಷೇಧ ಮಾಡಬೇಕೆಂಬ ಪರಿಸರವಾದಿ ಸಂಘಸಂಸ್ಥೆಗಳ ಕೋರಿಕೆಯನ್ನು ೨೦೧೮ರಲ್ಲಿ ಸರ್ವೋಚ್ಛ ನ್ಯಾಯಾಲಯ ನಿರಾಕರಿಸಿತ್ತು. ಆ ಮೂಲಕ ಸುಮಾರು 8 ಲಕ್ಷ ಜನರಿಗೆ ಉದ್ಯೋಗ ನೀಡಿರುವ ಮತ್ತು ನಾರಾರು ಕೋಟಿ ವ್ಯವಹಾರ ನಡೆಸುವ ಪಟಾಕಿ ತಯಾರಿಕಾ ಉದ್ಯಮ (ಮೂಲಭೂತ ಹಕ್ಕುಗಳ ಅನುಚ್ಛೇದ 19(ಜಿ) ಮತ್ತು “ಸಾರ್ವಜನಿಕರ ಆರೋಗ್ಯ ಹಕ್ಕು (ಅನುಚ್ಛೇದ 21)” ಎರಡನ್ನೂ ಸರಿದೂಗಿಸುವ ಪ್ರಯತ್ನ ಮಾಡಿತ್ತು. ಆ ಆದೇಶದಲ್ಲಿ ಹಸಿರುಪಟಾಕಿಗಳ ತಯಾರಿಕೆ, ಪಟಾಕಿಗಳ ಮಾರಾಟ, ಹಾನಿಕಾರಕ-ಹಳೆಯ ಪಟಾಕಿಗಳ ನಿಷೇಧ, ಸುಡುಮದ್ದಿನ ಶಬ್ಧದ ಪ್ರಮಾಣ, ಜನಾರೋಗ್ಯ, ಹೊಡೆಯುವ ರೀತಿ, ಸಾಮುದಾಯಿಕ ಸುಡುಮದ್ದು ಆಚರಣೆ ಮತ್ತು ಪಟಾಕಿ ಹೊಡೆಯುವಿಕೆಗೆ ಸಮಯ ನಿಗಧಿ ಮೊದಲಾದ ಪ್ರಮುಖ ವಿಚಾರಗಳನ್ನು ಚರ್ಚಿಸಿತ್ತು. ಆ ನಂತರ ದೆಹಲಿ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಬೇರೆ ಬೇರೆ ನಿಯಮಗಳನ್ನು ಮಾಡಲಾಗಿದೆ. ಕರ್ನಾಟಕ ರಾಜ್ಯ ಸರಕಾರದ ಪ್ರಸ್ತುತ ಹಸಿರು ಪಟಾಕಿಗಳನ್ನೇ ಮಾರಬೇಕು ಎಂಬ ಆದೇಶಕ್ಕೆ ಇದೇ ಪ್ರೇರಣೆ. ಉಚ್ಛ ನ್ಯಾಯಾಲಯವೂ ಇದನ್ನು ಅನುಮೋದಿಸಿದೆ.
ಸಂವಿಧಾನದ ಮೂಲಭೂತ ಹಕ್ಕುಗಳಲ್ಲಿನ 25ನೇ ಅನುಚ್ಚೇದ 21ನೇ ಅನುಚ್ಛೇದಕ್ಕೆ ಅಧೀನ. ಸಂವಿಧಾನದ ಮೂಲಭೂತ ಆಶಯದಂತೆಯೂ ಧಾರ್ಮಿಕ ಹಕ್ಕು ಬದುಕುವ ಹಕ್ಕಿಗೆ ಅಧೀನ. “ಯಾವುದೇ ಧರ್ಮ(ಮತ, ಪಂಥ)ಗಳ ಆಚರಣೆ ಜನರ ಜೀವ(ಬದುಕು) ಮತ್ತು ಆರೋಗ್ಯವನ್ನು ಹಾಳುಗೆಡವುವಂತಿದ್ದರೆ ಅಂತಹ ಧಾರ್ಮಿಕ ಆಚರಣೆಗಳಿಗೆ 25ನೇ ಅನುಚ್ಛೇದದ ಅಡಿಯಲ್ಲಿ ರಕ್ಷಣೆ ದೊರೆಯುವುದಿಲ್ಲ” ಎಂಬ ಆದೇಶ ನಮ್ಮ ನಡುವೆ ರಕ್ಷಣೆ ಪಡೆದಿರುವ ಪ್ರಾಣಿಬಲಿ, ಮತಾಂತರ ಮೊದಲಾದ ಅನೇಕ “ಧಾರ್ಮಿಕ ಹಕ್ಕು”ಗಳ ಕುರಿತಾದ ಬದಲಾವಣೆಗಳಿಗೆ, ವಿಮರ್ಶೆಗೆ ದಾರಿ ತೆರೆದಂತಾಗಿದೆ. ಅದೇ ರೀತಿ ದೀಪಾವಳಿಯ ಪಟಾಕಿಗಳ ಹೊಡೆಯುವಿಕೆಯಿಂದ ಮಾತ್ರವೇ ಮಾಲಿನ್ಯವಾಗುತ್ತಿದೆ, ಆ ಮೂಲಕ ಜನರ ಆರೋಗ್ಯ-ಬದುಕಿನ ಮೇಲೆ ಹಾನಿಯಾಗುತ್ತಿದೆ ಎಂಬ ಸಂಕುಚಿತಾರ್ಥದ ಸಂದೇಶವನ್ನೂ ನಿರಾಕರಿಸಿತ್ತು. ಮಾಲಿನ್ಯಕಾರಕ ಪಟಾಕಿಗಳನ್ನು ನಿಷೇಧಿಸಬೇಕೆಂಬ ಆದೇಶ ಇಡೀ ದೇಶಕ್ಕೆ ಕಾಲಕ್ರಮೇಣ ಅನ್ವಯವಾಗಲಿದ್ದರೂ, ಅಂದಿನ ಆದೇಶ ಸ್ವಲ್ಪ ಮಟ್ಟಿಗೆ ಜಾರಿಗೆ ಬಂದಿದ್ದು ದೆಹಲಿಯಲ್ಲಿ ಮಾತ್ರ. ಕೇವಲ ೨ ಘಂಟೆ ಮಾತ್ರ ಪಟಾಕಿ ಹೊಡೆಯಬೇಕು ಎಂಬ ಆದೇಶ ಪಾಲನೆಯಾಗದಿದ್ದರೂ, ಇದು ದೇಶದಲ್ಲಿ ಹಸಿರು ಪಟಾಕಿಗಳ ಹೊಸ ಸಂಶೋಧನೆ ಮತ್ತು ಉತ್ಪಾದನೆಗೆ ಪೂರಕವಾಯಿತು. ಉಚ್ಛ ನ್ಯಾಯಾಲಯದ “ಹಸಿರು ಪಟಾಕಿ” ಅನುಮೋದನೆಗೂ ಇದೇ ಆಧಾರ.
ಆಶಯ ಒಳ್ಳೆಯದಿರಬಹುದು, ಆದರೆ ತರಾತುರಿಯ ಜಾರಿ ಪರಿಣಾಮಕಾರಿಯೇ?
ಹಾಗೆ ನೋಡಿದರೆ ಹಸಿರು ಪಟಾಕಿಗಳನ್ನು ಹೋದ ವರ್ಷ ಜಾರಿಗೊಳಿಸಲಾಗಿತ್ತು. ಸರಕಾರವೂ ಎಲ್ಲಾ ಉತ್ಪಾದಕರಿಗೆ “ಹಸಿರು ಪಟಾಕಿ”ಗಳನ್ನು ಮಾತ್ರ ಉತ್ಪಾದಿಸಿ, ಮಾರಿ ಎಂಬ ಆದೇಶ ಹೊರಡಿಸಬೇಕಿತ್ತು. ಕೇಂದ್ರ ಸರಕಾರ, ಇದೊಂದು ಭಾವನಾತ್ಮಕ ವಿಚಾರವಾದ ಕಾರಣಕ್ಕೋ ಏನೋ, ಇದನ್ನು ರಾಜ್ಯಗಳ ವಿವೇಚನೆಗೆ ಬಿಟ್ಟಿದೆ. “ಹಸಿರು ಪಟಾಕಿ”ಗಳನ್ನೇ ತಯಾರಿಸಬೇಕು, ಮಾರಬೇಕು ಮತ್ತು ಹಚ್ಚಬೇಕು ಎಂಬ ಸರಕಾರದ ಆದೇಶ ಅಗತ್ಯವಾದರೂ, ಇದನ್ನು ಒಂದೆರಡು ತಿಂಗಳ ಹಿಂದೆಯೇ ನಿರ್ಧರಿಸಿದ್ದರೆ ಎಲ್ಲರಗೂ ಸ್ಪಷ್ಟತೆ ಸಿಗುತ್ತಿತ್ತು ಮತ್ತು ನಿರ್ಧಾರವೂ ಯಶಸ್ವಿಯಾಗಿ ಜಾರಿಯಾಗುತ್ತಿತ್ತು. ಕೊರೊನ ಕಾಲದಲ್ಲಿ ಹೆಚ್ಚಿನ ವಾಯುಮಾಲಿನ್ಯ ಹೆಚ್ಚಿನ ಉಸಿರಾಟ ಸಂಬಂಧಿ ಕಾಯಿಲೆ ಮತ್ತು ಕೊರೊನಾ ಹರಡುವಿಕೆ ಹೆಚ್ಚಾಗಬಹುದು ಎಂಬ ಆತಂಕ ಮೊದಲಿನಿಂದಲೂ ಇತ್ತು. ಸರಕಾರ ಎಲ್ಲರೊಂದಿಗೆ ಚರ್ಚಿಸಿ ದೂರಗಾಮಿ ನಿರ್ಧಾರ ಕೈಗೊಳ್ಳಬೇಕಿತ್ತು. ಯಾವುದೇ ಪೂರ್ವಸಿದ್ಧತೆ ಮಾಡಿಕೊಳ್ಳದೆ ಅದನ್ನು ಈ ಬಾರಿಯೇ ಜಾರಿಗೊಳಿಸಬೇಕಿತ್ತೆ? ಯಾವ ಮಾರುಕಟ್ಟೆಯಲ್ಲೀಗ ಕೇವಲ ಹಸಿರು ಪಟಾಕಿಗಳನ್ನು ಮಾತ್ರವೇ ಮಾರಲಾಗುತ್ತಿದೆ? ಸಾಂಪ್ರದಾಯಿಕ ಪಟಾಕಿಗಳನ್ನು ಜನ ಕೊಳ್ಳುತ್ತಿಲ್ಲವೆ? ಇದನ್ನು ನಿಯಂತ್ರಿಸುವುದಕ್ಕೆ ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ? ಈ ಮೊದಲಾದ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರವಿದ್ದಂತಿಲ್ಲ. ಆದರೆ ದೇಶದಲ್ಲಿ ಮುಂದಿನ ದಿನಗಳಲ್ಲಿ ಮಾಲಿನ್ಯಕಾರಕ ಪಟಾಕಿಗಳು ಉತ್ಪಾದನೆ ಆಗದಂತೆ ಕೇಂದ್ರ ಹಾಗೂ ರಾಜ್ಯಗಳು ಸ್ಪಷ್ಟವಾದ ಕಾನೂನು ಮತ್ತು ನಿಯಂತ್ರಣ ನೀತಿಯನ್ನು ನಿರೂಪಿಸಬೇಕು. ಕಾಳಸಂತೆಯ ಮಾರಟವನ್ನೂ ತಡೆಯಬೇಕು. ಆಗ ಮಾತ್ರ ಹಸಿರು ಪಟಾಕಿಗಳ ಕ್ರಾಂತಿ ಮತ್ತು ಇಂತಹ ಆದೇಶಕ್ಕೆ ಯಶಸ್ಸು ಸಿಗುತ್ತದೆ. ಈ ನೆಲೆಯಲ್ಲಿ ಸಿ.ಎಸ್.ಐ.ಆರ್ ಮತ್ತು ಖಾಸಗಿ ಸಂಸ್ಥೆಗಳು ಹೆಚ್ಚಿನ ಸಂಶೋಧನೆ ಮತ್ತು ಅಭಿವೃದ್ಧಿ ನಡೆಸಬೇಕು. ವಾಮಮಾರ್ಗದಲ್ಲಿ ಗ್ರಾಹಕರ ಕೈಸೇರಬಹುದಾದ ಅತೀ ಮಾಲಿನ್ಯಕಾರಕ ಸುಡುಮದ್ದುಗಳ ದೇಶಿಯ ಉತ್ಪಾದನೆ ಹಾಗೂ ಅಂತರಾಷ್ಟ್ರೀಯ ಅಮದನ್ನು ತಡೆಯಲು ಪಿ.ಇ.ಎಸ್.ಒ ಕಟ್ಟುನಿಟ್ಟಿನ ನಿಯಂತ್ರಣವನ್ನು ಜಾರಿಗೆ ತರಬೇಕು.
ದೀಪಾವಳಿಯ ಈ ಹೊತ್ತಿನಲ್ಲಿ ಮಾರುಕಟ್ಟೆಯಲ್ಲಿರುವ ಶೇಕಡ 40% ಪಟಾಕಿಗಳು ಬಣ್ಣ ಮತ್ತು ಬೆಳಕನ್ನು ಸೂಸುವಂಥವು. ಅವುಗಳೆಲ್ಲ ಈಗ ಸರಕಾರ ಮತ್ತು ನ್ಯಾಯಾಲಯ ನಿಷೇಧ ಹೇರಿರುವ ಬೇರಿಯಂ, ಲೀಥಿಯಂ, ಆರ್ಸೆನಿಕ್, ಲೆಡ್, ಮಕ್ರ್ಯುರಿ, ಆಂಟಿಮೊನಿ ಮೊದಲಾದ ಲವಣಗಳನ್ನೇ ಅವಲಂಬಿಸಿವೆ. ಇವುಗಳಲ್ಲಿ ಹೆಚ್ಚಿನ ಲವಣಗಳು ಚೀನಾದಿಂದ ಆಮದಾಗುತ್ತಿವೆ! ಭೂಚಕ್ರ, ಸುರ್‍ಸುರ್ ಬತ್ತಿ, ಹೂಕುಂಡ, ಆಕಾಶದಲ್ಲಿ ಬಣ್ಣಬಣ್ಣದ ಚಿತ್ತಾರ ಸೂಸುವ ಶಾಟ್‍ಗಳು ಇವೆಲ್ಲವುಗಳಿಗೆ ಈ ಮೊದಲು ಉಲ್ಲೇಖಿಸಿದ ನಿಷೇಧಿತ ಲವಣಗಳೇ ಮೂಲವಸ್ತು. ಪಟಾಕಿಗಳ ಅಂದವನ್ನು ಹೆಚ್ಚಿಸುವ ಸಂಗತಿಗಳೂ ಕೂಡ ಹೌದು. ಇವುಗಳನ್ನು ಹೊರತುಪಡಿಸಿದರೆ ಉಳಿಯುವುದು ಬಾಂಬ್ ಮೊದಲಾದ ಶಬ್ಧಕಾರುವ ಸುಡುಮದ್ದುಗಳು. ಅವೂ “ಹಸಿರು ಪಟಾಕಿ”ಗಳ ವರ್ಗಕ್ಕೆ ಸೇರುವುದಿಲ್ಲ.
ಈ ಹಸಿರು ಪಟಾಕಿಗಳು ಎಂದರೇನು? ಜಲ ಹಾಗೂ ಗಾಳಿಗೆ ಸುರಕ್ಷಿತವಾದ, ಬೂದಿಯನ್ನು ಭರ್ತಿಸಾಮಾಗ್ರಿಯಾಗಿ ಬಳಸದ ಕಡಿಮೆ ಶಬ್ಧ ಹಾಗೂ ಬೆಳಕನ್ನು ಹೊರಸೂಸುವ ಸುಧಾರಿತ ಪಟಾಕಿಗಳೇ ಹಸಿರು ಪಟಾಕಿಗಳೆಂದು ವಿಶದಿಕರಿಸಬಹುದು. ಹಸಿರು ಪಟಾಕಿಯ ಬಳಕೆಯಿಂದ ವಾತಾವರಣದ ಪಾರ್ಟಿಕ್ಯುಲೆಟ್ ಮ್ಯಾಟರ್(PM 2.5, PM 10) ಪ್ರಮಾಣವನ್ನು 30-35% ರಷ್ಟು ಹಾಗೂ ಗಾಳಿಯಲ್ಲಿ ಬಿಡುಗಡೆಯಾಗುವ ನೈಟ್ರೋಜನ್ ಆಕ್ಸೈಡ್ಸ್ ಪ್ರಮಾಣಗಳನ್ನು ತಗ್ಗಿಸಲಿವೆ ಎಂಬ ನಿರೀಕ್ಷೆಯಿದೆ. ಬೇರಿಯಂ ಬಳಸದ, ಅಲ್ಯುಮಿನಿಯಂಗೆ ಪ್ರತಿಯಾಗಿ ಮೆಗ್ನಿಶಂ ಬಳಸುವ, ಬೂದಿರಹಿತ ರಾಸಯನಿಕಗಳನ್ನು ಮೊದಲ ಹಂತದಲ್ಲಿ ಹಸಿರು ಪಟಾಕಿಗಳೆಂದು ಗುರುತಿಸಲಾಗಿದೆ. ಹಿಂದೆ ಸರ್ವೋಚ್ಛ ನ್ಯಾಯಾಲಯದ ಆದೇಶದಲ್ಲಿ ಉಲ್ಲೇಖಿಸಿದ್ದ ಬೇರಿಯಂ, ಅಲ್ಯುಮಿನಿಯಂ, ಬೂದಿ ಹೀಗೆ ಕೆಲವು ರಾಸಾಯನಿಕಗಳನ್ನು ಬಳಸದಂತೆ ತಡೆಯುವ ಸಂಶೋಧನೆಯನ್ನು ಕೌನ್ಸಿಲ್ ಫಾರ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (CSIR) 65ಲಕ್ಷ ವೆಚ್ಚದಲ್ಲಿ ಕೈಗೊಂಡಿತ್ತು. ಹೀಗೆ ಅಭಿವೃದ್ಧಿಪಡಿಸಲಾದ ಹಸಿರು ಪಟಾಕಿಗಳನ್ನು ಕಳೆದ ವರ್ಷ ಮಾರುಕಟ್ಟೆಗೆ ಲೋಕಾರ್ಪಣೆಗೊಳಿಸಲಾಗಿತ್ತು.
ಹಸಿರು ಪಟಾಕಿ ಎಂದರೆ ಪರಿಸರ ಮತ್ತು ಮನುಷ್ಯರ ಆರೋಗ್ಯಕ್ಕೆ ಕನಿಷ್ಟ ಹಾನಿ ಮಾಡುವ ಅಥವಾ ವಿಷಯುಕ್ತ ಸಾಂಪ್ರದಾಯಿಕ ಪ್ರತಿರೂಪಗಳಿಗಿಂತ ಶೇ.30ರಷ್ಟು ಕಡಿಮೆ ಪ್ರಮಾಣದಲ್ಲಿ ಮಾಲಿನ್ಯಕಾರಕಗಳನ್ನು ಹೊರಸೂಸುತ್ತವೆ ಎಂದು ಅಂದಾಜಿಸಲಾಗಿದೆ. 2005ರಲ್ಲಿ ಸರ್ವೋಚ್ಛ ನ್ಯಾಯಾಲಯ, ಪಟಾಕಿಗಳ ಶಬ್ಧ ಹಾಗೂ ಬೆಳಕಿನ ಆಧಾರದಲ್ಲಿ ಪುನರ್ವಿಂಗಡಿಸಿ ದಾಖಲಿಸಲು ಸೂಚಿಸಿತ್ತು. ೨೦೧೮ರಲ್ಲಿ ಪಟಾಕಿಗಳ ನಿಷೇಧದ ವಾದವನ್ನು ನಿರಾಕರಿಸಿದ್ದ ಸರ್ವೋಚ್ಛ ನ್ಯಾಯಾಲಯದ ತೀರ್ಪು, ಪಟಾಕಿಗಳ ಶಬ್ಧದ ನಿಯಂತ್ರಣ, ಬಳಸುವ ರಾಸಾಯನಿಕಗಳ ಸಂಯೋಜನೆಯನ್ನು ವ್ಯಾಖ್ಯಾನಿಸಿತು. ದೆಹಲಿಯ ಮಟ್ಟಿಗೆ ಸರಕಾರ ಅದನ್ನು ಜಾರಿಗೊಳಿಸಿತ್ತು. ಈಗ ಕರ್ನಾಟಕ ಸರಕಾರ ಮತ್ತು ಉಚ್ಛ ನ್ಯಾಯಾಲಯದ ಆದೇಶ ಅದನ್ನು ಇಲ್ಲಿಗೂ ಜಾರಿಗೆ ತರುವ ಪ್ರಯತ್ನ ಮಾಡಿದೆ. ತರಾತುರಿ ಸರಿಯಲ್ಲವಾದರೂ, ಹಸಿರು ದೀಪಾವಳಿ ಆಚರಣೆಯ ಭವಿಷ್ಯಕ್ಕೆ ಬುನಾದಿ ಹಾಕಲಾಗಿದೆ. ಇದು ಪಟಾಕಿಯಿಂದಲೇ ಮಾಲಿನ್ಯ ಎಂಬ ವಾದ ಹಿಂದೆ ಸರಿಯಲ್ಪಟ್ಟು ಮುಕ್ತ ದೀಪಾವಳಿ ಆಚರಣೆಗೆ ಪೂರಕವಾಗಬಹುದು. ಒಂದು ರೀತಿಯಲ್ಲಿ ಇಂತಹ ಅವಕಾಶ ಪರಿಸರಸ್ನೇಹಿ ಶುದ್ಧ ಪಟಾಕಿಗಳ ಹೊಸ ಆವಿಷ್ಕಾರ, ಹೊಸ ಅವಕಾಶಗಳು, ಜನರ ಆರೋಗ್ಯ ಹಾಗೂ ಸ್ವದೇಶಿ ಪಟಾಕಿಗಳ ಉದ್ಯಮಕ್ಕೆ ಹೊಸ ಮಾರ್ಗವನ್ನೊದಗಿಸಬಲ್ಲದು. ಆದರೆ ಯಾವುದೇ ರಾಸಾಯನಿಕ ಬಳಸದೆ ಪಟಾಕಿಗಳ ತಯಾರಿ ಸಾಧ್ಯವಿಲ್ಲ. ಹಾಗಾಗಿ ಈ ಪರ್ಯಾಯಗಳು ಮುಂದಿನ ದಿನಗಳಲ್ಲಿ ಮತ್ತಷ್ಟು ಬದಲಾವಣೆಯನ್ನು ಕಾಣಲಿವೆ.
ಜನನಿಬಿಡ ನಗರಗಳ ಆಯಕಟ್ಟಿನ ಪ್ರದೇಶಗಳಲ್ಲಿ, ವಿಶೇಷವಾಗಿ ಚಳಿಗಾಲದಲ್ಲಿ ವೇಗವಾಗಿ ಚಲಿಸದ ಗಾಳಿಯ ಕಾರಣ ವಾತಾವರಣದಲ್ಲಿ ಮಾಲಿನ್ಯ ಶೇಖರಣೆಯಾದಂತೆ ಭಾಸವಾಗುವುದು ಸಹಜ. ದೆಹಲಿಯ ಮಟ್ಟಿಗೆ ದೀಪಾವಳಿಯ ಪಟಾಕಿಗಳ ಅಬ್ಬರ ಹೇಗಿರುತ್ತದೆ ಎಂದರೆ, ಹಬ್ಬದ ನಂತರದ ಎರಡು ದಿನ ಅಕ್ಕಪಕ್ಕದವರೂ ಕಾಣದಷ್ಟು ಗಾಳಿ ಮಲಿನಗೊಂಡಿರುತ್ತದೆ ಮತ್ತು ಸಾಂದ್ರಗೊಂಡಿರುತ್ತದೆ. ಹಾಗೆಂದು ವಾತಾವರಣದಲ್ಲಿ ಮೂರ್ನಾಲ್ಕು ದಿನಗಳ ಸುಡುಮದ್ದು ಹಚ್ಚುವಿಕೆ ಇಡೀ ವರ್ಷದ ಮಾಲಿನ್ಯಕ್ಕೆ ಖಂಡಿತ ಕಾರಣವಾಗಲಾರದು. ಎಲ್ಲಾ ಆಯಾಮಗಳ ಮಾಲಿನ್ಯವನ್ನು ನಿಯಂತ್ರಿಸಲಾಗದ ಪರಿಸರ ಮಾಲಿನ್ಯ ಹೋರಾಟ, ಪ್ರಕ್ರಿಯೆಗಳು ಏಕಮುಖಿಯಾಗಿ ಸಾಗಿದಾಗ ಇಂತಹ ಗೊಂದಲಗಳು ಸೃಷ್ಟಿಯಾಗಿ ಪರಿಸರ ಸಂರಕ್ಷಣೆಯ ಪ್ರಯತ್ನಗಳನ್ನು ದಾರಿ ತಪ್ಪಿಸುತ್ತವೆ. ನಮಗೆ ಬೇಕಿರುವುದು ಪರಿಸರವನ್ನು ಅರಿಯುವ, ಪರಿಸರಕ್ಕೆ ಸ್ಪಂದಿಸುವ ಮತ್ತು ಪರಿಸರದ ಭಾಗವಾಗಿ ಬದುಕುವ ನೈಸರ್ಗಿಕ ಜೀವಂತಿಕೆ.
ದೀಪಾವಳಿ ಆಚರಣೆಯ ಭಾಗವಾಗಿ ಬೆಳೆದುಬಂದಿರುವ ಪಟಾಕಿ ಹಚ್ಚುವಿಕೆಯ ಸಂಭ್ರಮ, ಹಬ್ಬದ ಸಮಯದಲ್ಲಿ ಮಾಲಿನ್ಯಕ್ಕೆ ಮಾಧ್ಯಮವೇ ಹೊರತು ಕೇವಲ ಪಟಾಕಿಯಿಂದಲೇ ಮಾಲಿನ್ಯ ಮತ್ತು ಪಟಾಕಿಗಳ ನಿಷೇಧದಿಂದ ಸಂಪೂರ್ಣ ಮಾಲಿನ್ಯ ನಿಯಂತ್ರಣವಾಗುತ್ತದೆ ಎಂಬುದು ಸುಳ್ಳು. ಪರಂಪರೆ ಮತ್ತು ಪರಿಸರ ಕಾಳಜಿ ಎರಡೂ ಜೊತೆಯಲ್ಲಿಯೇ ಸಾಗಬೇಕಾದ ಅನಿವಾರ್ಯ ಚಕ್ರಗಳು, ಮನುಷ್ಯಕುಲವನ್ನು ಬೆಳಗಿಸುವ ದೀಪಾವಳಿಯ ದೀಪಗಳು.
-ಶ್ರೇಯಾಂಕ ಎಸ್ ರಾನಡೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news














Discussion about this post