ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಂಕರಘಟ್ಟ: ಒಂದು ಸಮಾಜ, ದೇಶ ಅಭಿವೃದ್ಧಿಯಾಗಬೇಕಾದರೆ ಅಲ್ಲಿನ ದೀನ-ದಲಿತ, ದುರ್ಬಲರ ಉನ್ನತಿಯ ಕಡೆಗೆ ಆಡಳಿತ ವ್ಯವಸ್ಥೆಯು ಹೆಚ್ಚು ಗಮನ ನೀಡಬೇಕು. ಬಾಬಾ ಸಾಹೇಬರು ಇದನ್ನು ಪ್ರತಿಪಾದಿಸುವ ಜೊತೆಗೆ ಸಂವಿಧಾನಾತ್ಮಕ ರೂಪುರೇಷೆಗಳನ್ನು ನಿರ್ಮಿಸಿಕೊಟ್ಟರು ಎಂದು ಅಂಬೇಡ್ಕರ್ ವಿಚಾರವಾದಿ ಎಂ. ಗೋಪಿನಾಥ್ ಅಭಿಪ್ರಾಯಪಟ್ಟರು.
ಕುವೆಂಪು ವಿಶ್ವವಿದ್ಯಾಲಯದ ಡಾ. ಬಿ. ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರದ ವತಿಯಿಂದ ಪ್ರೊ.ಎಸ್.ಪಿ. ಹಿರೇಮಠ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಡಾ.ಬಿ.ಆರ್. ಅಂಬೇಡ್ಕರ್‌ರವರ 64ನೆಯ ಪರಿನಿರ್ವಾಣ ದಿನಾಚರಣೆ ಕಾರ್ಯಕ್ರಮದ ಮುಖ್ಯಅತಿಥಿಯಾಗಿ ಆಗಮಿಸಿ ಅವರು ಮಾತನಾಡಿದರು.
ಸಮಾಜ ಮತ್ತು ಕುಟುಂಬಗಳೊಳಗೆ ದುರ್ಬಲರನ್ನು ಸ್ಪಷ್ಟವಾಗಿ ಗುರುತಿಸಿದ ಅಂಬೇಡ್ಕರ್, ಹೆಣ್ಣುಮಕ್ಕಳಿಗೂ ಸಮಾನ ಆಸ್ತಿ ಹಕ್ಕು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ತಮ್ಮ ಪ್ರತಿನಿಧಿ ಆಯ್ದುಕೊಳ್ಳುವ ಹಕ್ಕು, ಎಲ್ಲಜಾತಿ ವರ್ಗಗಳಿಗೂ ಶಿಕ್ಷಣ ಪಡೆಯುವ ಅವಕಾಶಗಳನ್ನು ನೀಡಬೇಕೆಂದು ಹೋರಾಡಿದರು ಎಂದರು.
ಅಂಬೇಡ್ಕರ್ ದುರ್ಬಲರ ಕಲ್ಯಾಣಕ್ಕಾಗಿ ಕೇವಲ ಸಂವಿಧಾನದ ಮೂಲಕವಲ್ಲದೇ ಚೌಡಕೆರೆ ನೀರು ಕುಡಿಯುವ, ಕಾಳಾರಾಂ ಸ್ವಾಮಿ ದೇವಾಲಯ ಪ್ರವೇಶಿಸುವ ಹೋರಾಟಗಳನ್ನು ಕೈಗೊಂಡರು. ಕಾನೂನು ಮಂತ್ರಿ ಪದವಿ ತೊರೆದ ಮೇಲೆ ಪ್ರಬುದ್ಧ ಭಾರತ ಪತ್ರಿಕೆ ಮೂಲಕ ಶೋಷಿತರಲ್ಲಿ ಜಾಗೃತಿ ಮೂಡಿಸಲು, ವ್ಯವಸ್ಥೆಗೆ ಅವರ ದನಿ ತಲುಪಿಸುವ ಕೆಲಸಕ್ಕೆ ಮುಂದಾಗಿದ್ದರು. ದುರ್ಬಲರು, ಶೋಷಿತರು ತಮ್ಮ ಹಿನ್ನೆಲೆಗಳ ಬಗ್ಗೆ ಕೀಳರಿಮೆ ಹೊಂದದೆ ಸಮಾನ ಅವಕಾಶಗಳನ್ನು ಬಳಸಿಕೊಂಡು ಸಾಧನೆ ತೋರಬೇಕು, ತಮ್ಮ ಗುರುತನ್ನು ಮುಕ್ತವಾಗಿ ಘೋಷಿಸಿಕೊಂಡು ಇತರರಿಗೆ ಧೈರ್ಯ ಮತ್ತು ಸ್ಫೂರ್ತಿ ತುಂಬಬೇಕು ಎಂಬ ಸಂದೇಶವನ್ನು ತಮ್ಮ ಜೀವನದ ಮೂಲಕವೇ ಅಂಬೇಡ್ಕರ್ ರವಾನಿಸಿದ್ದರು ಎಂದು ತಿಳಿಸಿದರು.
ಕುಲಪತಿ ಪ್ರೊ.ಬಿ.ಪಿ. ವೀರಭದ್ರಪ್ಪ ಮಾತನಾಡಿ, ಅರ್ಥಶಾಸ್ತ್ರ, ರಾಜಕೀಯ, ಶಿಕ್ಷಣ, ಪತ್ರಿಕೋದ್ಯಮ ಸೇರಿದಂತೆ ಹಲವು ಆಯಾಮಗಳಲ್ಲಿ ನಿಪುಣತೆ ಹೊಂದಿದ್ದ ಅಂಬೇಡ್ಕರ್ ಎಲ್ಲ ಜ್ಞಾನ, ಶಕ್ತಿಗಳನ್ನು ದುರ್ಬಲರ ಏಳಿಗೆಗಾಗಿ ಬಳಸಿದ್ದರಿಂದ ಭಾರತ ಪ್ರಜಾಸತ್ತತ್ಮಕ, ಸಾರ್ವಭೌಮ ದೇಶವಾಗಿ ನಿರ್ಮಾಣವಾಯಿತು. ಉನ್ನತ ಶಿಕ್ಷಣ ಪಡೆಯುತ್ತಿರುವ ಇಂದಿನ ಯುವಜನಾಂಗ ಅಂಬೇಡ್ಕರ್ ಶ್ರಮ, ಹೋರಾಟಗಳನ್ನು, ತ್ಯಾಗ-ದುಡಿಮೆಗಳನ್ನು ಅರಿತು, ಜನರಲ್ಲಿ ಜಾಗೃತಿ ಮೂಡಿಸಿ ಅವರ ಅನುಯಾಯಿಗಳಾಗುವ ಮೂಲಕ ದೇಶಕಟ್ಟು ಕಾರ್ಯದಲ್ಲಿ ಕೈ ಜೋಡಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ವಿವಿಯ ಕುಲಸಚಿವ ಪ್ರೊ.ಎಸ್.ಎಸ್. ಪಾಟೀಲ್, ಪ್ರೊ.ಪಿ. ಕಣ್ಣನ್, ಕೇಂದ್ರದ ನಿರ್ದೇಶಕ ಡಾ. ಬಿ.ಎಚ್. ಅಂಜನಪ್ಪ ಮಾತನಾಡಿದರು. ವಿವಿಯ ವಿವಿಧ ವಿಭಾಗಗಳ ಅಧ್ಯಾಪಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post