ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಕೃಷಿ ಮಸೂದೆ ವಿರುದ್ಧ ಕರೆ ನೀಡಲಾಗಿದ್ದ ಭಾರತ್ ಬಂದ್’ಗೆ ನಗರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಶೇ.50ಕ್ಕಿಂತಲೂ ಕಡಿಮೆ ಯಶಸ್ವಿಯಾಗಿದೆ ಎಂದು ಹೇಳಬಹುದು.
ಇಂದು ಮುಂಜಾನೆ ಬಹುತೇಕ 11.30ರವರೆಗೂ ವ್ಯಾಪಾರ ವ್ಯವಹಾರಗಳು, ಜನ ಹಾಗೂ ವಾಹನ ಓಡಾಟ ಸಹಜ ಸ್ಥಿತಿಯಲ್ಲಿತ್ತು. ನಗರದ ಪ್ರಮುಖ ರಸ್ತೆಗಳಲ್ಲಿ ಹಾಗೂ ಮಾರುಕಟ್ಟೆಗಳಲ್ಲಿ ಶೇ.50ರಷ್ಟು ಮಾತ್ರ ಅಂಗಡಿಗಳು ತೆರೆದಿದ್ದವು.

ಇನ್ನು, ದೆಹಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟ ಬೆಂಬಲಿಸಿ ಕರೆ ನೀಡಿದ್ದ ಭಾರತ್ ಬಂದ್‌ಗೆ ಪ್ರಗತಿಪರ ಸಂಘಟನೆಗಳ ಒಕ್ಕೂಟ, ರೈತ ಸಂಘಟನೆಗಳು, ದ.ಸಂ.ಸ ಬೆಂಬಲ ವ್ಯಕ್ತಪಡಿಸಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಒಕ್ಕೂಟದ ಅಧ್ಯಕ್ಷ ಹಾಗೂ ಹಿರಿಯ ಕಾರ್ಮಿಕ ಮುಖಂಡ ಡಿ.ಸಿ.ಮಾಯಣ್ಣ ನೇತೃತ್ವದಲ್ಲಿ ನಗರದ ಹುತ್ತಾ ಬಸ್ ನಿಲ್ದಾಣದಿಂದ ಮೆರವಣಿಗೆ ಮೂಲಕ ಅಂಡರ್ ಬ್ರಿಡ್ಜ್ ಅಂಬೇಡ್ಕರ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ರೈತ ಮುಖಂಡ ಹೆಚ್.ಆರ್.ಬಸವರಾಜಪ್ಪ, ಕಾರ್ಮಿಕ ಮುಖಂಡ ನಾರಾಯಣ್, ಎಎಪಿ ರವಿಕುಮಾರ್, ಜಿ.ಪಂ.ಸದಸ್ಯ ಮಣಿಶೇಖರ್ ಮುಂತಾದವರು ಮಾತನಾಡಿ, ದೇಶದ ಪ್ರತಿಯೊಬ್ಬ ಪ್ರಜೆಗೂ ಪ್ರತಿಭಟನೆ ಮಾಡುವ ಹಕ್ಕು ಸಂವಿಧಾನ ಕೊಟ್ಟಿದ್ದರೂ ಸಹ ನರೇಂದ್ರ ಮೋದಿ ಸರ್ಕಾರ ದೆಹಲಿಯಲ್ಲಿ ರೈತರ ಮೇಲೆ ಕೋವಿಡ್ ಹೆಸರಿನಲ್ಲಿ ಪ್ರಹಾರ ನಡೆಸಿ ಹತ್ತಿಕ್ಕಲು ಮುಂದಾಗಿದೆ. ಭಾರತ್ ಬಂದ್ ಐತಿಹಾಸಿಕ ಬಂದ್ ಆಗಿದೆ. ರೈತರ ಮೇಲೆ ಜಲಫಿರಂಗಿ ಪ್ರಯೋಗ ಮಾಡುವ ಮೂಲಕ ಸ್ವಾತಂತ್ರ್ಯ ಭಾರತದ ಅತ್ಯಂತ ಭ್ರಷ್ಟ ಹಾಗೂ ದಬ್ಬಾಳಿಕೆ ಸರ್ಕಾರವಾಗಿದ್ದು, ರೈತರಿಗೆ ಮರಣಶಾಸನ ಬರೆಯುವ ರೈತವಿರೋಧಿ ಕಾಯ್ದೆ ಹಿಂಪಡೆಯುವವರೆಗೂ ನಿರಂತರ ಚಳುವಳಿ ನಡೆಸಲಾಗುವುದು ಎಂದು ಎಚ್ಚರಿಸಿದರು.
ತಾಲ್ಲೂಕು ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ, ನಂತರ ತಹಶೀಲ್ದಾರ್ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನಾ ಮೆರವಣಿಗೆಯಲ್ಲಿ ರೈತ ಮುಖಂಡರಾದ ಎಚ್.ಆರ್. ಬಸವರಾಜಪ್ಪ, ಯಶವಂತರಾವ್ ಘೋರ್ಪಡೆ, ಹಿರಿಯಣ್ಣಯ್ಯ, ರಾಮಚಂದ್ರ, ಡಿ. ವಿ. ವೀರೇಶ್, ಒಕ್ಕೂಟದ ಮುಖಂಡ ಸುರೇಶ್, ಬಿಸಿಯೂಟ ನೌಕರರ ಸಂಘದ ಅಧ್ಯಕ್ಷೆ ಶಾರದಮ್ಮ, ಆಮ್ ಆದ್ಮಿ ಪಕ್ಷದ ಎಚ್.ರವಿಕುಮಾರ್, ಇಬ್ರಾಹಿಂ ಖಾನ್, ಭಾಸ್ಕರ್, ಕರವೇ ಅಧ್ಯಕ್ಷ ಎಂ ಪರಮೇಶ್, ರಾಜೇಂದ್ರ, ಜನಶಕ್ತಿ ಜಿ.ರಾಜು, ಪೀರ್ ಶರೀಫ್, ಬಸವರಾಜ ಬಿ ಆನೆಕೊಪ್ಪ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news








Discussion about this post