ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಲೋಕ ಕಲ್ಯಾಣಾರ್ಥವಾಗಿ ಶ್ರೀ ಗೋದಾದೇವಿ ಮತ್ತು ಶ್ರೀ ರಂಗಮನ್ನಾರ್ ಸ್ವಾಮಿ ಅವರ ತಿರುಕಲ್ಯಾಣೋತ್ಸವ, ವರ್ಧಂತಿ ಮಹೋತ್ಸವ ಮತ್ತು ಕನೂ ಹಬ್ಬದ ಅಂಗವಾಗಿ ಜ.16ರ ನಾಳೆ ಹಿರೇಮಗಳೂರು ಕಣ್ಣನ್ ಅವರಿಂದ ಹರಟೆ ಕಾಯಕ್ರಮ ಆಯೋಜನೆ ಮಾಡಲಾಗಿದೆ.
ದೇವನರಸೀಪುರದ ಐತಿಹಾಸಿಕ ಪ್ರಸಿದ್ಧ ಶ್ರೀ ಭೂನೀಳಾಸಮೇತ ಶ್ರೀ ಲಕ್ಷ್ಮೀ ರಂಗನಾಥ ದೇವಸ್ಥಾನ ಹಾಗೂ ತಾಲೂಕು ವೈಷ್ಣವ ಪರಿಷತ್ ವತಿಯಿಂದ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ.
ನಾಳೆ ಬೆಳಗ್ಗೆ 10.30ಕ್ಕೆ ದಿವ್ಯ ಪ್ರಬಂಧ ಪಾರಾಯಣ, 11.30ಕ್ಕೆ ಅಮ್ಮನವರು ಮತ್ತು ಶ್ರೀ ರಂಗಮನ್ನಾರ್ ಸ್ವಾಮಿಯವರಿಗೆ ವಿಶೇಷ ಅಲಂಕಾರ ಮತ್ತು ಶ್ರೀ ಆಂಡಾಳ್ ಗೋಷ್ಠಿ ಮಾತೆಯವರಿಂದ ತಿರುಪ್ಪಾವೈ, ಮುಕುಂದಮಾಲ, ಶ್ರೀ ವಿಷ್ಣುಸಹಸ್ರನಾಮ ಪಾರಾಯಣ ನಂತರ ಗೋದಾದೇವಿ ಮತ್ತು ಶ್ರೀ ರಂಗಮನ್ನಾರ್ ಸ್ವಾಮಿಯವರ ಕಲ್ಯಾಣೋತ್ಸವ, ಉಯ್ಯಾಲೋತ್ಸವ ಮತ್ತು ಕನೂ ಅರ್ಪಣೆ ನಡೆಯಲಿದೆ.
12 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಕನ್ನಡ ಪೂಜಾರಿ ಶ್ರೀ ಹಿರೇಮಗಳೂರು ಕಣ್ಣನ್ ಹಾಗೂ ಚಿಕ್ಕಮಗಳೂರಿನ ಸಂಸ್ಕೃತಿ ಚಿಂತಕರಾದ ನಾಗಶ್ರೀ ತ್ಯಾಗರಾಜ್ ಎನ್ ಅವರಿಂದ ಸಂಸಾರ-ಸಂಸ್ಕಾರ ಹರಟೆ ಕಾರ್ಯಕ್ರಮ ನಡೆಯಲಿದೆ.
ವೇದಿಕೆಯಲ್ಲಿ ಭದ್ರಾವತಿ ತಾಲೂಕು ವೈಷ್ಣವ ಪರಿಷತ್ ಅಧ್ಯಕ್ಷ ಜಗನ್ನಾಥ್ ಭಟ್, ಚಿಕ್ಕಮಗಳೂರು ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ತ್ಯಾಗರಾಜ್ ಟಿ, ಶಿವಮೊಗ್ಗದ ಗುರುಗುಹ ಸಂಗೀತ ವಿದ್ಯಾಲಯ-ಕಂಚಿ ಮಠದ ಆಸ್ಥಾನ ವಿದ್ವಾಂಸರಾದ ವಿದ್ವಾನ್ ಶೃಂಗೇರಿ ಎಚ್.ಎಸ್. ನಾಗರಾಜ್, ವೈಷ್ಣವ ಸಂಘದ ಜಿಲ್ಲಾಧ್ಯಕ್ಷ ಕೃಷ್ಣಸ್ವಾಮಿ ಎಂ.ಕೆ. ಅವರುಗಳು ಪಾಲ್ಗೊಳ್ಳಲಿದ್ದಾರೆ.
ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರು ಸ್ಯಾನಿಟೈಸರ್ ಬಳಸುವುದು, ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಪಾಡುವುದು ಕಡ್ಡಾಯವಾಗಿರುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news















