ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಇಡಿಯ ವಿಶ್ವದಲ್ಲೇ ಅತ್ಯಂತ ಶ್ರೇಷ್ಠವಾಗಿರುವ ನಮ್ಮ ಸಂವಿಧಾನದ ಆಶಯದಂತೆ ಚುನಾವಣೆಗಳಲ್ಲಿ ಯೋಗ್ಯರನ್ನು ಆಯ್ಕೆ ಮಾಡುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕಾರಣಕರ್ತರಾಗಬೇಕು ಎಂದು ಸ್ನೇಹ ಜೀವಿ ಬಳಗದ ಪೊಲೀಸ್ ಉಮೇಶ್ ಕರೆ ನೀಡಿದರು.
ನಗರದ ಹೊಸಬುಳ್ಳಾಪುರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ) ವತಿಯಿಂದ ಹಮ್ಮಿಕೊಳ್ಳಲಾಗಿದ್ದ 71 ನೇ ಸಂವಿಧಾನ ದಿನಾಚರಣೆ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್‌ರವರ ಮಹಾನಾಯಕ ಕಾರ್ಯಕ್ರಮದಲ್ಲಿ ಬುದ್ಧರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದರು.
ಪ್ರತಿಯೊಬ್ಬರು ಬಾಬಾ ಸಾಹೇಬ್ ಅಂಬೇಡ್ಕರ್‌ರವರು ಈ ದೇಶಕ್ಕೆ ನೀಡಿರುವ ಸಂವಿಧಾನವನ್ನು ಗೌರವಿಸಬೇಕು. ಸಂವಿಧಾನದ ಆಶಯಗಳನ್ನು ಅರಿತು ಮುನ್ನಡೆಬೇಕು. ಭಾರತರತ್ನ, ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್‌ರವರು ಸಂವಿಧಾನದ ಮೂಲಕ ಈ ದೇಶದ ಪ್ರತಿಯೊಬ್ಬ ಪ್ರಜೆಗೂ ಮತದಾನದ ಹಕ್ಕು ನೀಡಿದ್ದಾರೆ. ಮತ ಮಾರಾಟ ಮಾಡಿಕೊಳ್ಳದೆ, ತಮ್ಮ ಹಕ್ಕನ್ನು ಅಮಿಷಗಳಿಗೆ ಬಲಿಯಾಗಿ ಮಾರಿಕೊಳ್ಳದೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಜ್ಞಾನವಂತರು, ಸಮರ್ಥರು ಹಾಗು ಜನರ ಸಮಸ್ಯೆಗಳಿಗೆ ಪೂರಕವಾಗಿ ಸ್ಪಂದಿಸುವವರನ್ನು ಆಯ್ಕೆ ಮಾಡಬೇಕೆಂದು ಮನವಿ ಮಾಡಿದರು.
ತಹಶೀಲ್ದಾರ್ ಜಿ. ಸಂತೋಷ್ ಕುಮಾರ್ ಮಾತನಾಡಿ, ಸಂವಿಧಾನ ಸಮಿತಿಯ ಅಧ್ಯಕ್ಷರಾಗಿ ಡಾ.ಬಿ.ಆರ್. ಅಂಬೇಡ್ಕರ್ ರವರು ರಚಿಸಿರುವ ಸಂವಿಧಾನವು ಸಾರ್ವಭೌಮತ್ವದಲ್ಲಿ ಅತ್ಯಂತ ಶ್ರೇಷ್ಠವಾಗಿದೆ ಎಂದರು.
ಅಂಬೇಡ್ಕರ್ ಅವರು ಜಾತಿ, ಮತ, ಧರ್ಮ, ಶ್ರೀಮಂತ, ಬಡವ, ಅಕ್ಷರಸ್ಥ, ಅನಕ್ಷರಸ್ಥ ಎಂಬ ಯಾವುದೇ ಅಸಮಾನತೆ ಇಲ್ಲದೆ ದೇಶದ ಪ್ರತಿಯೊಬ್ಬರಿಗೂ ಮತದಾನದ ಹಕ್ಕನ್ನು ನೀಡಿದ್ದಾರೆ. ಇದರ ಮಹತ್ವದಿಂದ ಇಂದು ಇಡಿ ವಿಶ್ವಕ್ಕೆ ವಿಶ್ವಜ್ಞಾನಿಯಾಗಿ ಹೊರಹೊಮ್ಮಿದ್ದಾರೆ ಎಂದರು.
ಪ್ರೊ.ಬಿ. ಕೃಷ್ಣಪ್ಪರವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದ ದಲಿತ ಸಂಘರ್ಷ ಸಮಿತಿ ರಾಜ್ಯ ಖಜಾಂಚಿ ಸತ್ಯ ಭದ್ರಾವತಿ, ಅಂಬೇಡ್ಕರ್‌ರವರು ಈ ದೇಶಕ್ಕೆ ಮಾತ್ರ ಮಹಾನಾಯಕರಾಗಿ ಸೀಮಿತವಾಗಿಲ್ಲ. ಇಡೀ ಜಗತ್ತಿಗೆ ಮಹಾನಾಯಕರಾಗಿದ್ದು, ಈ ಹಿನ್ನಲೆಯಲ್ಲಿ ಅವರಿಗೆ ವಿಶ್ವಜ್ಞಾನಿ ಎಂಬ ಬಿರುದನ್ನು ನೀಡಲಾಗಿದೆ. ಹಲವು ಸಂಕಷ್ಟಗಳ ನಡುವೆ ತಮ್ಮಲ್ಲಿನ ಅಪಾರ ಜ್ಞಾನದ ಮೂಲಕ ವಿದ್ಯಾರ್ಜನೆ ಪಡೆದು ಉನ್ನತ ಮಟ್ಟಕ್ಕೆ ಏರಿದರು. ಅವರ ಆಶಯ ಪ್ರತಿಯೊಬ್ಬರು ವಿದ್ಯಾವಂತರಾಗಬೇಕೆಂಬುದಾಗಿದೆ. ದಲಿತರು ವಾಸಿಸುವ ಸ್ಥಳಗಳಲ್ಲಿ ದೇವಸ್ಥಾನ, ಮಸೀದಿ, ಚರ್ಚ್ ಸೇರಿದಂತೆ ಮಠಮಂದಿರಗಳು ತೆರೆಯುವ ಬದಲು ಶಾಲೆಗಳು, ಗ್ರಂಥಾಲಯಗಳು ತೆರೆಯಬೇಕೆಂಬುದಾಗಿದೆ. ಇದನ್ನು ಅರಿತು ದಲಿತರು ಮುನ್ನಡೆಯಬೇಕು. ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಸಮಾಜ ಸೇವೆಯಲ್ಲಿ ತೊಡಗಿರುವ ಉಮೇಶ್ ರವರು ಈ ಭಾಗದಲ್ಲಿ ಒಂದು ಗ್ರಂಥಾಲಯಕ್ಕೆ ಅವಕಾಶ ಕಲ್ಪಿಸಿಕೊಡಲು ಮನವಿ ಮಾಡಿದರು.
ದಲಿತ ನೌಕರರ ಒಕ್ಕೂಟದ ರಾಜ್ಯ ಕಾರ್ಯಾಧ್ಯಕ್ಷ ಸಿ. ಜಯಪ್ಪ, ತಾಲೂಕು ಅಧ್ಯಕ್ಷೆ ಎಸ್. ಉಮಾ, ರಾಜ್ಯ ಸಂಘಟನಾ ಸಂಚಾಲಕಿ ಶಾಂತಿ, ನ್ಯಾಯವಾದಿ ನಾರಾಯಣ್, ಅಂಗವಿಕಲರ ವಿಭಾಗದ ಜಿಲ್ಲಾಧ್ಯಕ್ಷ ಕಾಣಿಕ್ ರಾಜ್, ಮಣಿ ಜಿಂಕ್‌ಲೈನ್, ಆರ್. ವರಲಕ್ಷ್ಮೀ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಾರ್ಡ್ ಸಂಚಾಲಕ ಆರ್. ವೆಂಕಟೇಶ್ ಅಧ್ಯಕ್ಷತೆ ವಹಿಸಿದ್ದರು. ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಚಿನ್ನಯ್ಯ ಪ್ರಾಸ್ತಾವಿಕ ನುಡಿಗಳನ್ನಾಡಿದರು. ತಾಲೂಕು ಸಂಚಾಲಕ ರಂಗನಾಥ್ ಸ್ವಾಗತಿಸಿ. ಈಶ್ವರಪ್ಪ ನಿರೂಪಿಸಿದರು. ನಗರ ಸಂಚಾಲಕ ಗೋವಿಂದ ವಂದಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಪೊಲೀಸ್ ಉಮೇಶ್ ರವರಿಂದ ಬಸ್ ನಿಲ್ದಾಣ ಮುಂಭಾಗದ ಡಾ.ಬಿ.ಆರ್. ಅಂಬೇಡ್ಕರ್ ರವರ ಪುತ್ಥಳಿಗೆ ಮಾಲಾರ್ಪಣೆ ಹಾಗೂ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ದಲಿತ ಸಂಘರ್ಷ ಸಮಿತಿ ವತಿಯಿಂದ ಪೊಲೀಸ್ ಉಮೇಶ್ ಅವರನ್ನು ಸನ್ಮಾನಿಸಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post