ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಕರಡಕಲ್ ಹೊರವಲಯದಲ್ಲಿರುವ ವಸತಿ ನಿಲಯಗಳಿಗೆ ಸಾರಿಗೆ ಇಲಾಖೆಯ ಬಸ್ ನಿಲ್ದಾಣ ನಿರ್ಮಿಸಿ, ಬಸ್ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಿಕೊಡುವಂತೆ ಒತ್ತಾಯಿಸಿ ಸಾರಿಗೆ ಸಚಿವರಿಗೆ ಬರೆದ ಮನವಿ ಪತ್ರವನ್ನು ಲಿಂಗಸುಗೂರಿನ ಸಹಾಯಕ ಆಯುಕ್ತರಿಗೆ ಸಲ್ಲಿಸಲಾಯಿತು.
ಕರಡಕಲ್ ಹೊರವಲಯದಲ್ಲಿರುವ ಮೆಟ್ರಿಕ್ ನಂತರದ ಪರಿಶಿಷ್ಟ ಪಂಗಡ, ಡಿ.ದೇವರಾಜ ಅರಸು, ಅಂಬೇಡ್ಕರ್, ಅಲ್ಪಸಂಖ್ಯಾತರ ವಸತಿ ನಿಲಯ ಸೇರಿದಂತೆ ನಾಲ್ಕು ವಸತಿ ನಿಲಯಗಳಲ್ಲಿ ಸುಮಾರು 2000 ವಿದ್ಯಾರ್ಥಿಗಳಿದ್ದು, ಪ್ರತಿನಿತ್ಯ ಸುಮಾರು 4 ಕಿಮೀ ದೂರದಷ್ಟು ನಡೆದು ಸಾಗಿ ಕಾಲೇಜು ಓದುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಲಾಗಿದೆ.
ವಸತಿ ನಿಲಯಗಳ ಮುಂಭಾಗದ ಲಿಂಗಸುಗೂರು ನಾರಾಯಣಪುರ ಮುಖ್ಯ ರಸ್ತೆಯಲ್ಲೇ ಪ್ರತಿನಿತ್ಯ ನೂರಾರು ಬಸ್‌ಗಳು ಸಂಚರಿಸಿದರೂ ವಸತಿ ನಿಲಯಗಳಿಗೆ ಬಸ್ ನಿಲ್ಲಿಸುತ್ತಿಲ್ಲ. ಬಸ್ ನಿಲ್ಲಿಸುವಂತೆ ಈಗಾಗಲೇ ಅನೇಕ ಬಾರಿ ಮನವಿ ಮಾಡಿದರೂ ಅದು ಫಲಿಸಿಲ್ಲ. ಬಸ್ ನಿಲ್ಲಿಸದ ಕಾರಣದಿಂದಾಗಿ ವಿದ್ಯಾರ್ಥಿಗಳು ತರಗತಿಗಳನ್ನು ತಪ್ಪಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದು ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಮೇಲೆ ಗಂಭೀರ ಪರಿಣಾಮ ಬಿರುತ್ತಿದೆ ಎನ್ನಲಾಗಿದೆ.
ಬಸ್ ನಿಲ್ದಾಣ ನಿರ್ಮಿಸಿ, ಬಸ್ ನಿಲ್ಲಿಸುವ ವ್ಯವಸ್ಥೆ ಕಲ್ಪಿಸಿಕೊಡಬೇಕು ಹಾಗೂ ಸಾರಿಗೆ ಇಲಾಖೆಯಿಂದ ನಗರ ಸಂಚಾರ ಬಸ್‌ಗಳನ್ನು ವಸತಿ ನಿಲಯಗಳಿಗೆ ಬಿಡಬೇಕು. ವಿದ್ಯಾರ್ಥಿಗಳಿಗೆ ನೀಡಿರುವ ಬಸ್ ಪಾಸುಗಳಿಗೆ ವಿಶೇಷ ಸೀಲ್‌ಗಳನ್ನು ಹಾಕುವ ಮೂಲಕ ಅವರು ವಸತಿ ನಿಲಯದಿಂದ ಕಾಲೇಜುಗಳಿಗೆ ಸಂಚರಿಸಲು ಅನುಕೂಲ ಕಲ್ಪಿಸಿಕೊಡುವ ವ್ಯವಸ್ಥೆಯನ್ನು ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಮನವಿಯನ್ನು ಗಂಭೀರವಾಗಿ ಪರಿಗಣಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಧರಣಿ ಸತ್ಯಾಗ್ರಹ ನಡೆಸುತ್ತೇವೆಂದು ಆಗ್ರಹಿಸಿದರು. ಇದೇ ವೇಳೆ ಲಿಂಗಸುಗೂರಿನ ಡಿಪೋ ಮ್ಯಾನೇಜರ್, ತಹಶಿಲ್ದಾರರ ಕಛೇರಿ, ಶಾಸಕರ ಕಛೇರಿಗೂ ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಉಸ್ಕಿಹಾಳ ವಾಲ್ಮೀಕಿ ಆಶ್ರಮದ ಆತ್ಮಾನಂದ ಸ್ವಾಮೀಜಿಗಳು, ರಾಷ್ಟ್ರೀಯ ಮಾನವ ಹಕ್ಕುಗಳ ರಕ್ಷಣೆ ಮತ್ತು ಭ್ರಷ್ಟಾಚಾರ ನಿಯಂತ್ರಣ ಮಂಡಳಿಯ ಜಿಲ್ಲಾಧ್ಯಕ್ಷರು ಹಾಗೂ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ತಾಲೂಕು ಕಾನೂನು ಸಲಹೆಗಾರರಾಗಿರುವ ಅಮರೇಶ ನಾಯಕ ಐದಭಾವಿ, ಮುಖಂಡರಾದ ಅಶೋಕ ನಾಯಕ ದಿದ್ದಿಗಿ, ವೆಂಕಿ ನಾಯಕ ಮುರ್ಕಿಗುಡ್ಡ, ಅಯ್ಯಣ್ಣ ನಾಯಕ ಪಾಮನಕಲ್ಲೂರು, ರಾಜ್ ಗಂಟ್ಲಿ ಪಾಮನಕಲ್ಲೂರು, ಅಂಜಿ ನಾಯಕ ಕೋಟೆಕಲ್, ರವಿ ನಾಯಕ, ಸದಾನಂದ ನಾಯಕ, ಕಳಸಪ್ಪ ನಾಯಕ, ಹನುಮನಗೌಡ ಗೋನವಾಟ್ಲಾ, ಸುರೇಶ್ ಅಡವಿಭಾವಿ, ರಮೇಶ್ ಅಡವಿಭಾವಿ, ಅಮರೇಗೌಡ ಕಾಚಾಪುರ, ದುರ್ಗೇಶ್ ಹಾಲಭಾವಿ, ಪ್ರಶಾಂತ ಹಾಲಭಾವಿ, ತಿಮ್ಮನಗೌಡ ಗುಂತಗೋಳ, ಮಂಜುನಾಥ ಗುಂತಗೋಳ ಸೇರಿದಂತೆ ಅನೇಕರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post