ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಪುತ್ತೂರು: ಕಾಲೇಜುಗಳಲ್ಲಿ ಕಲಿಕಾ ಬೋಧನಾ ಕ್ರಮಗಳು ಬದಲಾಗಬೇಕು. ವಿದ್ಯಾರ್ಥಿಗಳಲ್ಲಿ ಹೆಚ್ಚು ಆಸಕ್ತಿ ಮೂಡಿಸುವ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು ಎಂದು ಮಂಗಳೂರಿನ ಸೈಂಟ್ ಆಲೋಷಿಯಸ್ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಎ.ಎಮ್. ನರಹರಿ ಹೇಳಿದರು.
ವಿವೇಕಾನಂದ ಕಾಲೇಜಿನ ಐಕ್ಯುಎಸಿ ಘಟಕದ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಶೋಧನ ಮಾರ್ಗದರ್ಶನ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಉನ್ನತ ಶಿಕ್ಷಣದಲ್ಲಿ ಸಂಶೋಧನಾತ್ಮಕ ಕಲಿಕೆಯ ಮಾತುಗಳು ಎಲ್ಲೆಡೆ ಕೇಳಿಬರುತ್ತಿದೆ. ಸಂಶೋಧನೆ ಎಂದರೆ ಹೊಸ ಆವಿಷ್ಕಾರ. ಸಮಸ್ಯೆಗಳಿಗೆ ಪರಿಹಾರ ಎನ್ನುವುದು ಪದವಿ ವಿದ್ಯಾರ್ಥಿಗಳಿಗೆ ದೊಡ್ಡ ಮಾತಾಗುತ್ತದೆ. ಬದಲಿಗೆ ಚಿಕ್ಕ ವಿಷಯಗಳನ್ನು ಆರಿಸಿಕೊಂಡು, ಸ್ವಯಂ ಅಧ್ಯಯನ ಮಾಡಿ ಕಲಿತುಕೊಳ್ಳುವ ವಿಧಾನ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹಾಗೂ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.
ಬೋಧನೆ ಮಾತ್ರದಿಂದ ಪರೀಕ್ಷೆಗಳಿಗೆ ತಯಾರು ಮಾಡುವ ಕಾಲಘಟ್ಟದಲ್ಲಿ ನಾವಿಲ್ಲ. ಜ್ಞಾನದ ಪ್ರಸರಣೆ ಜೊತೆಗೆ ಹೊಸ ಜ್ಞಾನ ಸೃಷ್ಟಿ ಮಾಡುವ ಕಾಲವಿದು. ನಾವೆಲ್ಲಾ ಹಳೇ ಪದ್ಧತಿಯಲ್ಲೇ ಕಲಿತು ಬರಲಿಲ್ಲವೇ ಎಂದು ಕೆಲವರು ಪ್ರಶ್ನೆ ಮಾಡುತ್ತಾರೆ. ಆದರೆ ಮಾಹಿತಿ ಸ್ಪೋಟದ ಯುಗದಲ್ಲಿ ನಾವೂ ಬದಲಾಗಿದ್ದೇವೆ. ನಿವೃತ್ತಿಯಾದ ನಂತರವೂ ಕಲಿಯುತ್ತಿದ್ದೇವೆ. ಮಕ್ಕಳಿಗೆ ಪ್ರೋತ್ಸಾಹ ನೀಡಿ, ಹುರಿದುಂಬಿಸಿ, ಅವಕಾಶಗಳನ್ನು ಸೃಷ್ಟಿಸಿ ಯಶಸ್ಸು ಸಾಧಿಸುವ ನಿಟ್ಟಿನಲ್ಲಿ ಶಿಕ್ಷಕರು ಮಾರ್ಗದರ್ಶನ ಮಾಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿ ಸಂಚಾಲಕ ಕೆ.ಎನ್. ಮುರುಳಿಕೃಷ್ಣ ಮಾತನಾಡಿ, ಕಾಲೇಜಿನ ಯಶಸ್, ಭವಿಷ್ ಹಾಗೂ ವಿಕಾಸ ಘಟಕದ ಸಾಲಿಗೆ ಸಂಶೋಧನ ಮಾರ್ಗದರ್ಶನ ಘಟಕವು ಸೇರ್ಪಡೆಗೊಂಡಿರುವುದು ನಮಗೆ ಹೆಮ್ಮೆ ತರುವಂತಹ ವಿಷಯ. ಈ ಎಲ್ಲಾ ಘಟಕಗಳು ವಿದ್ಯಾರ್ಥಿಗಳಿಗೆ ಮುಂದಿನ ಭವಿಷ್ಯವನ್ನು ರೂಪಿಸುವ ನಿಟ್ಟಿನಲ್ಲಿ ಮಾರ್ಗದರ್ಶನ ನೀಡುತ್ತಿದೆ, ವಿದ್ಯಾರ್ಥಿಗಳು ಈ ಅವಕಾಶಗಳನ್ನು ಉಪಯೋಗಿಸಿಕೊಳ್ಳಬೇಕು ಎಂದರು.
ವೇದಿಕೆಯಲ್ಲಿ ಕಾಲೇಜು ಪ್ರಾಂಶುಪಾಲ ಪ್ರೊ. ವಿ.ಜಿ ಭಟ್ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಮಾನಸ ಪ್ರಾರ್ಥಿಸಿ, ಸಂಶೋಧನ ಮಾರ್ಗದರ್ಶನ ಘಟಕದ ಸಂಯೋಜಕ ಡಾ. ಎಚ್.ಜಿ. ಶ್ರೀಧರ ಸ್ವಾಗತಿಸಿ, ಐಕ್ಯುಎಸಿ ಘಟಕದ ಸಂಯೋಜಕ ಶಿವಪ್ರಸಾದ್ ವಂದಿಸಿ, ಉಪನ್ಯಾಸಕ ಮುಕುಂದ ಕೃಷ್ಣ ಕಾರ್ಯಕ್ರಮವನ್ನು ನಿರ್ವಹಿಸಿದರು.
(ವರದಿ: ಅರುಣ್ ಕಿರಿಮಂಜೇಶ್ವರ, ಪುತ್ತೂರು)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post