ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಜೀವನದಲ್ಲಿ ಆರೋಗ್ಯವೇ ಮಹಾಭಾಗ್ಯ ಎಂಬುದನ್ನು ಪ್ರತಿಯೊಬ್ಬರು ಅರಿಯಬೇಕು ಎಂದು ಬಿಳಿಕಿ ಹಿರೇಮಠದ ಶ್ರೀರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಅವರು ಹಳೇನಗರದ ವೀರಶೈವ ಸಭಾಭವನದಲ್ಲಿ ಲಯನ್ಸ್ ಕ್ಲಬ್, ಅಖಿಲ ಭಾರತ ವೀರಶೈವ ಮಹಾಸಭಾ ಹಾಗೂ ಸಾರ್ವಜನಿಕ ಆಸ್ಪತ್ರೆ ಸಹಯೋಗದಲ್ಲಿ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ, ಆಟೋ ಚಾಲಕರಿಗೆ ಸ್ಯಾನಿಟೈಸ್, ಮಾಸ್ಕ್, ಆಟೋ ವಾಶ್ ಮಾಡುವ ಸ್ಯಾನಿಟೈಸ್, ಕೊರೊನಾ ಎಚ್ಚರಿಕೆ ಜಾಗೃತಿಯ ಭಿತ್ತಿಪತ್ರವುಳ್ಳ ಕಿಟ್ ವಿತರಿಸುವ ಸಮಾರಂಭವನ್ನು ಉದ್ಘಾಟಿಸಿ ಆಟೋ ಚಾಲಕರಿಗೆ ಕಿಟ್‌ಗಳನ್ನು ವಿತರಿಸಿ ಆಶೀರ್ವಚನ ನೀಡಿದರು.
ಜೀವನದಲ್ಲಿ ಆರೋಗ್ಯವಿದ್ದರೆ ಮಾತ್ರ ಏನನ್ನಾದರು ಸಾಧಿಸಲು ಸಾಧ್ಯ. ಅದಕ್ಕಾಗಿ ಪ್ರತಿಯೊಬ್ಬರೂ ಆಹಾರ, ವಿಹಾರ, ಪರಿಸರ ಎಲ್ಲವನ್ನೂ ಶುದ್ಧವಾಗಿರುವಂತೆ ನೋಡಿಕೊಳ್ಳಬೇಕು. ಕೊರೋನಾ ಸಂಕಷ್ಟ ಕಾಲದಲ್ಲಿ ಜೀವದ ಹಂಗನ್ನು ತೊರೆದು ಅಸಂಖ್ಯಾತ ವೈದ್ಯರು, ಶೂಶ್ರಷಕಿಯರು, ದಾದಿಯರು, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಪೌರಕಾರ್ಮಿಕರು ಸೇರಿದಂತೆ ಶ್ರಮಿಸಿದ ಕೊರೊನಾ ವಾರಿಯರ್‍ಸ್‌ಗಳ ಸೇವೆ ಸದಾ ಸ್ಮರಣೀಯವಾದ ಕಾರ್ಯವಾಗಿದೆ. ಇದಕ್ಕೆ ಪೂರಕವಾಗಿ ಇಂದು ಲಯನ್ಸ್ ಕ್ಲಬ್ ನಡೆಸುತ್ತಿರುವ ಇಂದಿನ ಕಾರ್ಯ ಸಮಯೋಚಿತವಾದ ಸೇವಾ ಕಾರ್ಯವಾಗಿದೆ ಎಂದರು.
ಸಾರ್ವಜನಿಕ ಆಸ್ಪತ್ರೆಯ ವೈದ್ಯ ಡಾ. ಎಂ. ರವೀದ್ರನಾಥ್ ಕೋಠಿ ಆರೋಗ್ಯ ಕುರಿತು ಅರಿವು ಮೂಡಿಸಿ ಮಾತನಾಡಿ, ವೈದ್ಯಕೀಯ ಸಿಬ್ಬಂದಿಯ ತಂಡದವರಿಂದ ನೂರಕ್ಕೂ ಹೆಚ್ಚು ಜನರ ಆರೋಗ್ಯ ತಪಾಸಣೆ ಹಾಗು ರಕ್ತ ಪರೀಕ್ಷೆ ಮಾಡಿದರು. ಜಿಲ್ಲಾ ಉಪಗವರ್ನರ್ ಕೆ.ಸಿ.ವೀರಭದ್ರಪ್ಪ ಲಯನ್ಸ್ ಕ್ಲಬ್ ಕೈಗೊಂಡಿರುವ ಸಾಮಾಜಿಕ ಕಾರ್ಯಗಳ ಕುರಿತು ವಿವರಿಸಿದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಕೆ.ವಿ.ಚಂದ್ರಶೇಖರ್ ಅಧ್ಯಕ್ಷತೆ ವಹಿಸಿ ಸರ್ವರನ್ನು ಸ್ವಾಗತಿಸಿದರು. ವೇದಿಕೆಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಸಿದ್ದಲಿಂಗಯ್ಯ, ಲಯನ್ಸ್ ಪದಾಧಿಕಾರಿಗಳಾದ ಆರ್.ರಾಮಮೂರ್ತಿ, ಅತ್ತಿಗುಂದ ಪ್ರಹ್ಲಾದ್ ಉಪಸ್ಥಿತರಿದ್ದರು. ಯಶೋಧ ಪ್ರಾರ್ಥಿಸಿದರು. ಎಂ.ಎಸ್. ಜನಾರ್ಧನ್ ಅಯ್ಯಂಗಾರ್ ನಿರೂಪಿಸಿದರು. ಅಶು ಇನ್ಫೋಟೆಕ್ ಸಂಸ್ಥೆಯ ರಾಜೇಶ್ ನೀಡಿದ ಸುಮಾರು 450 ರೂ. ಬೆಲೆಯ 200 ಕಿಟ್‌ಗಳನ್ನು ಆಟೋ ಚಾಲಕರಿಗೆ ವಿತರಿಸಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post