ಉಡುಪಿ, ಸೆ.18: ಇಲ್ಲಿನ ಕೋಟತಟ್ಟು ಗ್ರಾಮ ಪಂಚಾಯಿತಿ, ಡಾ.ಶಿವರಾಮ ಕಾರಂತ ಪ್ರತಿಷ್ಠಾನಗಳು ಡಾ.ಶಿವರಾಮ ಕಾರಂತ ಜನ್ಮದಿನೋತ್ಸವದ ಅಂಗವಾಗಿ ಸೆ.25ರಂದು ಕೋಟ ವಿವೇಕ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಆಯೋಜಿಸಿರುವ ಉಡುಪಿ – ದಕ್ಷಿಣ ಕನ್ನಡ ಜಿಲ್ಲೆಗಳ ಪಂಚಾಯತ್ ರಾಜ್ ಮತ್ತು ಸ್ಥಳೀಯಾಡಳಿತ ಪ್ರತಿನಿಧಿಗಳ ಕ್ರೀಡೋತ್ಸವ ಮತ್ತು ಸಾಂಸ್ಕೃತಿಕ ಸ್ಪರ್ಧೆ ಹೊಳಪು – 2016ರ ಲಾಂಛನವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆ ಅವರು ಬಿಡುಗಡೆಗೊಳಿಸಿದರು.
ನಂತರ ಮಾತನಾಡಿದ ಅವರು, ಅವಳಿ ಜಿಲ್ಲೆಗಳ ಪಂಚಾಯತ್ ರಾಜ್ ಮತ್ತು ಸ್ಥಳೀಯಾಡಳಿತ ಪ್ರತಿನಿಧಿಗಳಿಗೆ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಆಯೋಜನೆಯ ಮೂಲಕ ಒಗ್ಗೂಡಿಸಲು ಹೊರಟ ಕೋಟತಟ್ಟು ಪಂಚಾಯಿತಿಯ ಕಾರ್ಯ ಶ್ಲಾಘನಾರ್ಹ. ರಾಜ್ಯದಲ್ಲಿ ಕಾರಂತರ ಹುಟ್ಟೂರ ಪಂಚಾಯಿತಿ ಅಪರೂಪ ಮತ್ತು ವಿಶಿಷ್ಟ ಚಿಂತನೆಯ ಕಾರ್ಯಕ್ರಮದ ಮೂಲಕ ರಾಜ್ಯದಲ್ಲಿ ಗುರುತಿಸಿಕೊಂಡಿದೆ ಇದು ಸಂತಸದ ವಿಚಾರ ಎಂದರು.
ಈ ಸಂದರ್ಭದಲ್ಲಿ ಸಚಿವ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಕೋಟತಟ್ಟು ಪಂಚಾಯಿತಿ ಅಧ್ಯಕ್ಷ ಎಚ್.ಪ್ರಮೋದ್ ಹಂದೆ, ಕೋಟ ಕಾರಂತ ಥೀಂ ಪಾರ್ಕ್ ಮಾಧ್ಯಮ ವಕ್ತಾರ ಅಶ್ವಥ್ ಆಚಾರ್ಯ ಎಡಬೆಟ್ಟು, ಪಂಚಾಯಿತಿ ಉಪಾಧ್ಯಕ್ಷ ಲೋಕೇಶ್ ಶೆಟ್ಟಿ, ಪ್ರತಿಷ್ಠಾನದ ಸದಸ್ಯ ಸುಬ್ರಾಯ ಆಚಾರ್ಯ, ಪಂಚಾಯಿತಿ ಸದಸ್ಯರಾದ ವಾಸು ಪೂಜಾರಿ, ರಘು ತಿಂಗಳಾಯ, ಜಯಪ್ರಕಾಶ್ ಉಪಸ್ಥಿತರಿದ್ದರು.















