ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಿಕ್ಕಬಳ್ಳಾಪುರ: ಶಿವಮೊಗ್ಗ ಜಿಲ್ಲೆಯ ಹುಣಸೋಡಿಯಲ್ಲಿ ಸಂಭವಿಸಿದ್ದ ಜಿಲೆಟಿನ್ ಸ್ಫೋಟ ಪ್ರಕರಣ ಮಾಸುವ ಮುನ್ನವೇ ಅಂತಹುದೇ ರೀತಿಯ ಮತ್ತೊಂದು ದುರಂತ ಸಂಭವಿಸಿದ್ದು, ಕನಿಷ್ಠ 6 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಜಿಲ್ಲೆಯ ಹಿರೇನಾಗವೇಲಿ ಗ್ರಾಮದ ಬಳಿ ಅಕ್ರಮವಾಗಿ ಜಿಲೆಟಿನ್ ಸಾಗಿಸುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ಸ್ಫೋಟದ ತೀವ್ರತೆಗೆ ಸ್ಥಳದಲ್ಲಿದ್ದ ಕಾರ್ಮಿಕರ ದೇಹಗಳು ಗುರುತು ಸಿಗಲಾರದಷ್ಟು ಛಿದ್ರವಾಗಿದೆ. ದುರಂತದಲ್ಲಿ ಆರು ಮಂದಿ ಮೃತಪಟ್ಟು, ಮೂವರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.
ಮೂಲಗಳ ಪ್ರಕಾರ ಭ್ರಮರವಾಸಿನಿ ಕ್ರಷರ್‌ನಿಂದ ಸರಿಸುಮಾರು ಒಂದೂವರೆ ಕಿಲೋಮೀಟರ್ ದೂರದ ಅರಣ್ಯಪ್ರದೇಶದಲ್ಲಿ ಈ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ಮೃತಪಟ್ಟವರನ್ನು ಕ್ರಷರ್ ಇಂಜಿನಿಯರ್ ಉಮಾಕಾಂತ್, ಕಂಪ್ಯೂಟರ್ ಅಪರೇಟರ್ ಗಂಗಾಧರ್, ವೇಯರ್ ಮುರುಳಿ ಹಾಗೂ ವಾಚ್ ಮೆನ್ ಮಹೇಶ್ ಸೇರಿದಂತೆ ಸ್ಥಳೀಯ ರಾಮು ಎಂದು ಗುರುತಿಸಲಾಗಿದೆ.
ಟಾಟಾ ಏಸ್ ಚಾಲಕ ರಿಯಾಜ್ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಮೃತರು ಟಾಟಾ ಏಸ್ ಹಾಗೂ ಒಂದು ಬೈಕ್ ಮೂಲಕ ಭ್ರಮರವಾಸಿನಿ ಕ್ರಷರ್ ನಿಂದ ಒಂದು ಕಿಲೋಮೀಟರ್ ದೂರದ ಅರಣ್ಯ ಪ್ರದೇಶಕ್ಕೆ ತೆರಳಿ ಅಲ್ಲಿ ಅಕ್ರಮವಾಗಿ ಅಡಗಿಸಿಟ್ಟಿದ್ದ ಜಿಲೆಟಿನ್ ಹಾಗೂ ಎಲೆಕ್ಟ್ರಿಕ್ ಡಿಟೋನೇಟರ್ಸ್ ಹೊತ್ತು ತರಲು ಮುಂದಾಗಿದ್ದ ಸಂದರ್ಭದಲ್ಲಿ ಏಕಾಏಕಿ ಬ್ಲಾಸ್ಟ್ ಆಗಿದ್ದು, ಪರಿಣಾಮ ಐದು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಮೃತಪಟ್ಟವರ ದೇಹಗಳು ಛಿದ್ರವಾಗಿ ನೂರಾರು ಮೀಟರ್‌ವರೆಗೂ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ ಎಂದು ಹೇಳಲಾಗಿದೆ.
ಪೆರೇಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಘಟನಾ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಮುಖ್ಯಮಂತ್ರಿ ಯಡಿಯೂರಪ್ಪ
ಚಿಕ್ಕಬಳ್ಳಾಪುರದ ಹಿರೇನಾಗವಲ್ಲಿ ಗ್ರಾಮದ ಬಳಿ ಜಿಲೆಟಿನ್ ಸ್ಫೋಟದಿಂದ ಆರು ಮಂದಿ ಸಾವನ್ನಪ್ಪಿರುವುದು ತೀವ್ರ ಆಘಾತ ತಂದಿದೆ. ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಹಿರಿಯ ಅಧಿಕಾರಿಗಳಿಂದ ಘಟನೆಯ ಸಂಪೂರ್ಣ ಮಾಹಿತಿ ಪಡೆಯಲಾಗುತ್ತಿದ್ದು, ಪ್ರಕರಣದ ಸಂಪೂರ್ಣ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, ಮೃತರ ಆತ್ಮಕ್ಕೆ ಶಾಂತಿ ಕೋರುತ್ತಾ, ಅವರ ಕುಟುಂಬದವರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಈ ದುರ್ಘಟನೆ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯುತ್ತಿದ್ದು, ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post