ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ ನೇತೃತ್ವದಲ್ಲಿ ಅಸಂಘಟಿತ ಕಾರ್ಮಿಕರು ನಗರದ ಪ್ರಮುಖ ಬೀದಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ, ನಂತರ ಶಾಸಕರ ಭವನಕ್ಕೆ ತೆರಳಿ ಮನವಿ ಸಲ್ಲಿಸಿದರು.
ಹಮಾಲಿ ಕಾರ್ಮಿಕ ಸಂಘಟನೆ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಟಿ. ತಿಪ್ಪೇಸ್ವಾಮಿ ಮಾತನಾಡಿ, ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಕೂಲಿ ಕೆಲಸ ನಿರ್ವಹಿಸುತ್ತಿರುವ ಹಮಾಲರ ಹೆಸರಿನಲ್ಲಿ ಕಲ್ಯಾಣ ಮಂಡಳಿ ಸ್ಥಾಪಿಸಬೇಕು. ಭವಿಷ್ಯ ನಿಧಿ ಹಾಗೂ ಪಿಂಚಣಿ ಯೋಜನೆಯನ್ನು ಕೂಡಲೇ ಜಾರಿಗೊಳಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ತಾಲ್ಲೂಕು ಅಧ್ಯಕ್ಷ ಕೆ.ವೀರಭದ್ರಪ್ಪ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಾರ್ಮಿಕ ವಿರೋಧಿ ನೀತಿಯಿಂದಾಗಿ ಅಸಂಘಟಿತ ವಲಯ ತತ್ತರಿಸಿ ಹೋಗಿದೆ. ಹಾಗಾಗಿ ರೈತ ಹಾಗೂ ಕಾರ್ಮಿಕ ವಿರೋಧಿ ತಿದ್ದುಪಡಿಯ ಮಸೂದೆಗಳನ್ನು ಮಂಡಿಸುವ ಅಯವ್ಯಯದಲ್ಲಿ ಯಾವುದೇ ಕಾರಣಕ್ಕೂ ಸೇರ್ಪಡೆ ಮಾಡಬಾರದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿದರು.
ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಇಂದ್ರಮ್ಮ ಮಾತನಾಡಿ, ಕಾರ್ಯಕರ್ತೆಯರ ಸೇವೆಯನ್ನು ಕಾಯಂಗೊಳಿಸಬೇಕು. ಪ್ರತಿ ತಿಂಗಳು 25,000ರೂ. ವೇತನ ನೀಡಬೇಕು. ಕೊರೋನಾ ವಾರಿಯರ್‍ಸ್‌ಗಳಾಗಿ ಸೇವೆ ಸಲ್ಲಿಸಿ ಮರಣ ಹೊಂದಿದ ಕುಟುಂಬಕ್ಕೆ 15ಲಕ್ಷರೂ. ಪರಿಹಾರ ನೀಡಬೇಕು. ಹಾಗೂ ನಿವೃತ್ತರಾದ ಕಾರ್ಯಕರ್ತೆಯರಿಗೆ ಪಿಂಚಣಿ ಸೌಲಭ್ಯವನ್ನು ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರನ್ನು ಆಗ್ರಹಿಸಿದರು.

ಉಪಾಧ್ಯಕ್ಷೆ ಈ. ಬೋರಮ್ಮ, ಗಂಗಮ್ಮ, ಜಿ. ಗಂಗಮ್ಮ, ಗಿರಣಿ ಕಾರ್ಮಿಕರ ಸಂಘದ ಅಧ್ಯಕ್ಷ ಕೆ. ಪ್ರಭು, ಹಮಾಲರ ಮುಖಂಡ ಎಚ್. ಒ. ನಾಗರಾಜ, ನಾರಾಯಣಪ್ಪ, ಬೋರಯ್ಯ ಉಪಸ್ಥಿತರಿದ್ದರು.
ವರದಿ: ಸುರೇಶ್ ಬೆಳಗೆರೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















