ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಜನರ ಅಹವಾಲುಗಳನ್ನು ಸ್ವೀಕರಿಸಿ, ಅವರ ನೋವು-ನಲಿವುಗಳಿಗೆ ದನಿಯಾಗಲು ಮಹಾನಗರಪಾಲಿಕೆಯ ವತಿಯಿಂದ ಪಾಲಿಕೆಯ ಚುನಾಯಿತ ಪ್ರತಿನಿಧಿಗಳಿಗಾಗಿ ನಿರ್ಮಿಸಲು ಉದ್ದೇಶಿಸಿರುವ ಸುಶಾಸನ ಭವನಕ್ಕೆ ಕೊರತೆಯಾಗಿರುವ 2ಕೋಟಿ ರೂ.ಗಳ ಮಂಜೂರಾತಿಗೆ ಕ್ರಮ ಕೈಗೊಳ್ಳುವುದಾಗಿ ಗ್ರಾಮೀಣಾಭಿವೃದಿ, ಪಂಚಾಯತ್‌ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಅವರು ಇಂದು ಮಹಾನಗರಪಾಲಿಕೆಯ ಆವರಣದಲ್ಲಿ ಶೇ.5ರ ನಿಧಿಯಲ್ಲಿ ಪ್ರತಿ ವಾರ್ಡಿನ ಓರ್ವ ಅರ್ಹ ವಿಕಲಚೇತನ ಫಲಾನುಭವಿಗಳಿಗೆ ಕರ್ಣಸಾಧನ ಮತ್ತು ತ್ರಿಚಕ್ರವಾಹನಗಳನ್ನು ವಿತರಿಸಿದ ನಂತರ ಪರಿಷತ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಈ ಕಟ್ಟಡ ನಿರ್ಮಾಣಕ್ಕಾಗಿ ಈಗಾಗಲೇ ಪಾಲಿಕೆ ವಿವಿಧ ಯೋಜನೆಗಳಿಂದ ಹಣವನ್ನು ಕಾಯ್ದಿರಿಸಲಾಗಿದ್ದು, ತ್ವರಿತಗತಿಯಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ, ಕಟ್ಟಡ ನಿರ್ಮಾಣ ಕಾರ್ಯವನ್ನು ಕೂಡಲೇ ಪೂರ್ಣಗೊಳಿಸಲು ಕ್ರಮವಹಿಸುವಂತೆ ಸೂಚಿಸಿದರು.
ಸುಶಾಸನ ಭವನ ನಿರ್ಮಾಣ ಕಾರ್ಯ ರಾಜ್ಯಕ್ಕೆ ಮಾದರಿಯಾಗಿರಲಿದೆ. ಈ ಕಟ್ಟಡದಲ್ಲಿ ಪಾಲಿಕೆಯ ಸದಸ್ಯರಿಗೆ ಹಾಗೂ ತಮ್ಮ ಕೆಲಸಗಳಿಗಾಗಿ ಬರುವ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಜನಸೇವೆ ಮಾಡಲಿಚ್ಚಿಸುವ ಜನಪ್ರತಿನಿಧಿಗಳು ಜನಸಾಮಾನ್ಯರ ಸಂಕಷ್ಟಕ್ಕೆ ಸ್ಪಂದಿಸಲು ಅನುಕೂಲವಾಗಲಿದೆ ಎಂದರು.
4 ಅಂತಸ್ತುಗಳ 22,000 ಚ.ಅಡಿ. ವಿಸ್ತೀರ್ಣ ಹೊಂದಿರುವ ಈ ಕಟ್ಟಡ ಕೇವಲ ಭೌತಿಕ ಸ್ವರೂಪದ್ದಾಗಿ ಉಳಿಯದೇ ಜನರ ನೋವು-ನಲಿವುಗಳಿಗೆ ಸ್ಪಂದಿಸುವ ಆಶ್ರಯತಾಣವಾಗಿ ರೂಪುಗೊಳ್ಳಲಿ ಎಂದವರು ನುಡಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಮಹಾನಗರಪಾಲಿಕೆ ಆಯುಕ್ತ ಚಿದಾನಂದ ವಟಾರೆ ಮಾತನಾಡಿ, ವಿಕಲಚೇತನ ಕಲ್ಯಾಣ ಯೋಜನೆಯಡಿ ಕೈ ಮತ್ತು ಕಣ್ಣು ಸುರಕ್ಷಿತವಾಗಿರುವ 35ಜನ ವಿಕಲಚೇತನರಿಗೆ ತ್ರಿಚಕ್ರವಾಹನಗಳನ್ನು ಹಾಗೂ ಕಿವುಡರಿಗೆ ಕರ್ಣಸಾಧನಗಳನ್ನು ವಿತರಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಮಹಾನಗರಪಾಲಿಕೆ ಮೇಯರ್ ಸುವರ್ಣ ಶಂಕರ್, ಉಪಮೇಯರ್ ಸುರೇಖಾ ಮುರಳೀಧರ್ ಸೇರಿದಂತೆ ಪಾಲಿಕೆ ಎಲ್ಲಾ ಸ್ಥಾಯಿ ಸಮಿತಿಗಳ ಅಧ್ಯಕ್ಷರು, ಆಡಳಿತ ಮತ್ತು ವಿಪಕ್ಷಗಳ ಸದಸ್ಯರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news









Discussion about this post