ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಂಕರಘಟ್ಟ: ಯಾವುದೇ ತೆರನಾದ ಹಿಂಸೆ, ಶೋಷಣೆ, ಲೈಂಗಿಕ ದೌರ್ಜನ್ಯಕ್ಕೆ ತುತ್ತಾಗುವ ಹೆಣ್ಣುಮಕ್ಕಳ ಸಮಗ್ರ ರಕ್ಷಣೆಗಾಗಿ ಸಖಿ ಕೇಂದ್ರವನ್ನು ಆರಂಭಿಸಲಾಗಿದ್ದು, ಈ ಕುರಿತು ಎಲ್ಲ ವಿದ್ಯಾರ್ಥಿನಿಯರು ಮತ್ತು ಮಹಿಳೆಯರಲ್ಲಿ ಜಾಗೃತಿ ಮೂಡಿಸಬೇಕು ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲ ಎಸ್ ಕುಂದರ್ ಸೂಚಿಸಿದರು.
ಕುವೆಂಪು ವಿವಿಯ ಮಹಿಳಾ ಶೋಷಣೆ ಮತ್ತು ಲೈಂಗಿಕ ದೌರ್ಜನ್ಯ ತಡೆ ಕುರಿತ ಸಮಿತಿಯ ಆಂತರಿಕ ಸದಸ್ಯರೊಂದಿಗೆ ನಡೆಸಿದ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸಮಾಜದಲ್ಲಿ ಮಹಿಳೆಯರ ಮೇಲಿನ ಹಿಂಸೆಯ ಪ್ರಕರಣಗಳು ಹೆಚ್ಚಾಗುತ್ತಿವೆ. ಇದನ್ನು ತಡೆಯುವ ನಿಟ್ಟಿನಲ್ಲಿ ಜಿಲ್ಲೆಗಳಲ್ಲಿ ಸಖಿ ಕೇಂದ್ರ ಆರಂಭಿಸಲಾಗಿದೆ. ಇಲ್ಲಿ ದೌರ್ಜನ್ಯ, ಶೋಷಣೆಗಳಿಗೆ ಒಳಗಾದ ಮಹಿಳೆಯರಿಗೆ ವೈದ್ಯಕೀಯ, ಕಾನೂನಾತ್ಮಕ, ಆರಕ್ಷಕ ಮತ್ತು ಮಾನಸಿಕ ಸಲಹೆ ಸೇರಿದಂತೆ ಸಮಗ್ರ ರೀತಿಯಲ್ಲಿ ನೆರವು ಮತ್ತು ರಕ್ಷಣೆ ನೀಡುವ ಕೆಲಸ ಮಾಡಲಾಗುತ್ತದೆ ಎಂದು ತಿಳಿಸಿದರು.
ಮಹಿಳೆಯರ ಮೇಲೆ ಮೊಬೈಲ್ ಮತ್ತು ಸೈಬರ್ ಆಧರಿತ ಅಪರಾಧ, ಬೆದರಿಕೆಗಳು ಹೆಚ್ಚುತ್ತಿವೆ. ಮಹಿಳಾ ಸುರಕ್ಷತೆ ಮತ್ತು ಲೈಂಗಿಕ ದೌರ್ಜನ್ಯದ ವಿರುದ್ಧ ಜಾಗೃತಿ ಮೂಡಿಸಲು ವಿಶ್ವವಿದ್ಯಾಲಯ ಮಟ್ಟದಲ್ಲಿ ಸ್ನಾತಕ, ಸ್ನಾತಕೋತ್ತರ ಪದವಿ ಓದುತ್ತಿರುವ ವಿದ್ಯಾರ್ಥಿನಿಯರೇ ಸೂಕ್ತ. ಕಾನೂನು ತಜ್ಞರ ಮೂಲಕ ಮಹಿಳಾ ಸುರಕ್ಷತೆಗಾಗಿ ಇರುವಂತಹ ಕಾಯ್ದೆ, ಕಾನೂನು, ನಿಯಮಾವಳಿಗಳ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಸರಣಿ ವಿಚಾರ ಸಂಕಿರಣ, ತರಬೇತಿ ಕಾರ್ಯಕ್ರಮಗಳನ್ನು ಸಂಸ್ಥೆಗಳು ನಡೆಸಬೇಕು. ಪ್ರತಿ ಸಂಸ್ಥೆಯು ತಮ್ಮ ಆಂತರಿಕ ಸಮಿತಿಯ ಸದಸ್ಯರಿಗೆ ಮೊಟ್ಟಮೊದಲು ತರಬೇತಿ ನೀಡಿ ಸಕ್ರಿಯವಾಗಿ ಕಾರ್ಯನಿರ್ವಹಿಸಲು ಪ್ರೇರೇಪಿಸಬೇಕು ಎಂದರು.
ಕುಲಪತಿ ಪ್ರೊ. ಬಿ.ಪಿ. ವೀರಭದ್ರಪ್ಪ ಮಾತನಾಡಿ, ಕುವೆಂಪು ವಿವಿಯಲ್ಲಿ ಕಳೆದ 11 ವರ್ಷಗಳಿಂದ ಯಾವುದೇ ಮಹಿಳಾ ದೌರ್ಜನ್ಯ ಸಂಬಂಧಿ ದೂರುಗಳು ದಾಖಲಾಗಿಲ್ಲ. ವಿವಿಯ ಒಟ್ಟು ಪ್ರವೇಶಾತಿಯಲ್ಲಿ ಶೇ.80ಕ್ಕಿಂತ ಹೆಚ್ಚು ವಿದ್ಯಾರ್ಥಿನಿಯರಿದ್ದು ಈಗಾಗಲೇ ಲಿಂಗಸೂಕ್ಷ್ಮತೆ, ಸುರಕ್ಷತೆ ಕುರಿತ ಸ್ವರಕ್ಷಾ ಎಂಬ ಮಹಿಳಾ ಸಬಲೀಕರಣದ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದರು.
ಸಭೆಯಲ್ಲಿ ವಿವಿಯ ಕುಲಸಚಿವ ಪ್ರೊ. ಎಸ್. ಎಸ್. ಪಾಟೀಲ್, ಪ್ರೊ. ಪಿ. ಕಣ್ಣನ್, ಸಮಿತಿ ಅಧ್ಯಕ್ಷೆ ಡಾ. ಸರ್ವಮಂಗಳಾ, ಕಾನೂನು ಸದಸ್ಯೆ ಶೋಭಾ, ಜಿಲ್ಲಾದಿಕಾರಿಗಳ ಕಛೇರಿ ಪ್ರತಿನಿಧಿಗಳು ಸೇರಿದಂತೆ ಹಲವರು ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post