ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ ತಾಲೂಕು ಶಾಖೆ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಸೇವಾ ಹಿರಿತನದ ಆಧಾರದಲ್ಲಿ ಗೌರವಧನ ಹೆಚ್ಚಿಸುವುದು ಅಥವಾ ಪ್ರತಿ ವರ್ಷ ಸೇವಾಧನ ನಿಗದಿಪಡಿಸುವುದು. 2015ರ ನಂತರ ನಿವೃತ್ತಿ ಹೊಂದಿದ ಸುಮಾರು 7294 ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ಇಡಿಗಂಟು ನೀಡುವುದು ಹಾಗು ಕನಿಷ್ಠ 5 ಸಾವಿರ ರೂ. ಮಾಸಿಕ ಪಿಂಚಣಿ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಲಾಯಿತು.
ಇಎಸ್‌ಐ ಸೌಲಭ್ಯ, ಕಾರ್ಯಕರ್ತೆಯರಿಗೆ ತರಬೇತಿ ಹಾಗೂ ಮಕ್ಕಳಿಗೆ ಪಠ್ಯಪುಸ್ತಕ, ಸಮವಸ್ತ್ರ ನೀಡಿ ಅಂಗನವಾಡಿ ಕೇಂದ್ರಗಳಲ್ಲೇ ಎಲ್‌ಕೆಜಿ ಹಾಗು ಯುಕೆಜಿ ಪ್ರಾರಂಭಿಸುವುದು. ಮಿನಿ ಅಂಗನವಾಡಿ ಕೇಂದ್ರಗಳಿಗೆ ಸಹಾಯಕಿಯರನ್ನು ನೇಮಿಸುವುದು ಹಾಗೂ ಮಿನಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೂ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೂ ಗೌರವಧನದಲ್ಲಿ ತಾರತಮ್ಯವಿಲ್ಲದಂತೆ ನೋಡಿಕೊಳ್ಳಲು ಮನವಿಯಲ್ಲಿ ಆಗ್ರಹಿಸಲಾಗಿದೆ.
ಸರ್ಕಾರದ ವಿವಿಧ ಯೋಜನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಯಶಸ್ವಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಬೇಡಿಕೆಗಳನ್ನು ಈಡೇರಿಸುವಲ್ಲಿ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದ್ದು, ಈಗಾಗಲೇ ಸಂಬಂಧಪಟ್ಟ ಸಚಿವರಿಗೆ, ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಗಿದೆ. ಆದರೂ ಸಹ ಈ ಬಾರಿ ಬಜೆಟ್‌ನಲ್ಲಿ ಯಾವುದೇ ಬೇಡಿಕೆಗಳನ್ನು ಈಡೇರಿಸದ ಹಿನ್ನಲೆಯಲ್ಲಿ ಬೇಡಿಕೆ ಈಡೇರುವವರೆಗೂ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಲಾಗಿದೆ.
ಫೆಡರೇಷನ್ ತಾಲೂಕು ಅಧ್ಯಕ್ಷೆ ಸುಶೀಲಬಾಯಿ ನೇತೃತ್ವ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಆರ್. ಭಾಗ್ಯಮಣಿ, ರಾಜ್ಯ ಸಮಿತಿ ಮುಖಂಡರಾದ ಕೆ.ಸಿ. ವಿಶಾಲಾ, ಜಿ.ಕೆ. ಸುಲೋಚನ ಹಾಗು ತಾಲೂಕು ಕಾರ್ಯಕಾರಿ ಸಮಿತಿ ಸದಸ್ಯ ಆರ್. ವೇದಾವತಿ ಸೇರಿದಂತೆ ಕಾರ್ಯಕರ್ತೆಯರು, ಸಹಾಯಕಿಯರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post