ಕಲ್ಪ ಮೀಡಿಯಾ ಹೌಸ್
ಚಳ್ಳಕೆರೆ: ತಾಲೂಕಿನಲ್ಲಿ ತೀರಾ ಹಿಂದುಳಿದ ಮಡಿವಾಳ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ನಗರದಲ್ಲಿ ನಿವೇಶನವನ್ನು ಒದಗಿಸಿಕೊಡುವುದಾಗಿ ಶಾಸಕ ಟಿ.ರಘುಮೂರ್ತಿ ಭರವಸೆ ನೀಡಿದರು.
ತಾಲ್ಲೂಕಿನ ಹುಲಿಕುಂಟೆ ಗ್ರಾಮದಲ್ಲಿ ಆಯೋಜಿಸಿದ್ದ ಮಡಿವಾಳ ಮಾಚಿದೇವ ಜಯಂತ್ಯುತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಶೈಕ್ಷಣಿಕ ಪ್ರಗತಿ ಇಲ್ಲದೆ ಮಡಿವಾಳ ಸಮಾಜವನ್ನು ಅಭಿವೃದ್ಧಿಪಡಿಸಲು ಸಾಧ್ಯವಿಲ್ಲ. ಆದ್ದರಿಂದ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಮತ್ತು ಸಮುದಾಯಕ್ಕಾಗಿ ಶ್ರಮಿಸಿದ ಮಹಾನೀಯರನ್ನು ಸದಾ ಸ್ಮರಿಸುವುದರ ಮೂಲಕ ರಚನಾತ್ಮಕವಾದ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಮಡಿವಾಳ ಸಮಾಜದ ಮುಖಂಡರಿಗೆ ಕಿವಿ ಮಾತು ಹೇಳಿದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಸುರೇಶ್‌ಬಾಬು ಮಾತನಾಡಿ, ವಿದ್ಯಾವಂತರೇ ಹೆಚ್ಚಾಗಿ ತಮ್ಮ ತಂದೆ-ತಾಯಿಯರನ್ನು ವೃದ್ದಾಶ್ರಮಕ್ಕೆ ಸೇರಿಸಿ ಪಾಲನೆ, ಪೋಷಣೆಯ ಜವಬ್ಧಾರಿಯಿಂದ ತಪ್ಪಿಸಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಚಿತ್ರದುರ್ಗ ಮಡಿವಾಳ ಮಾಚಿದೇವ ಮಹಾ ಸಂಸ್ಥಾನದ ಬಸವ ಮಾಚಿದೇವ ಸ್ವಾಮೀಜಿ ಮಾತನಾಡಿ, ಯಾವ ಸಮಾಜವನ್ನೂ ಓಲೈಸಬಾರದು. ಸರ್ವ ಸಮಾಜವನ್ನು ಸಮಾನತೆಯಿಂದ ಕಾಣಬೇಕು. ಮತ್ತು ೧೨ನೆಯ ಶತಮಾನದ ಶರಣರ ತತ್ವ-ಸಿದ್ಧಾಂತವನ್ನು ಪಾಲನೆ ಮಾಡುವುದರ ಜತೆಗೆ ತಮ್ಮ ಮಕ್ಕಳಿಗೆ ಮೌಲ್ಯಯುತವಾದ ನೈತಿಕ ಶಿಕ್ಷಣವನ್ನು ಕೊಡಿಸಬೇಕು ಎಂದು ಪೋಷಕರಿಗೆ ಸಲಹೆ ನೀಡಿದರು.
ದೇವರಾಜ ಅರಸು ನಿಗಮದ ಅಧ್ಯಕ್ಷ ರಘು ಕೌಟಿಲ್ಯ, ಮಾಚಿದೇವರ ಭಾವಚಿತ್ರವನ್ನು ಸಾರೋದಲ್ಲಿಟ್ಟು ಗ್ರಾಮದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಿದರು.
ಚಿತ್ರದುರ್ಗ ಮಹಾರಾಣಿ ಪದವಿ ಕಾಲೇಜಿನ ಪ್ರಾಧ್ಯಾಪಕ ಡಾ. ವಿ.ಬಸವರಾಜ, ತಾಲ್ಲೂಕು ಪಂಚಾಯಿತಿ ಸದಸ್ಯೆ ಸುವರ್ಣಮ್ಮ, ಬೆಳಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆರ್. ರೂಪ, ಸದಸ್ಯೆ ಸುರ್ವಣಮ್ಮ, ಮಡಿವಾಳ ಸಮಾಜದ ಜಿಲ್ಲಾ ಅಧ್ಯಕ್ಷ ರಾಮಪ್ಪ, ತಾಲ್ಲೂಕು ಗೌರವಾಧ್ಯಕ್ಷ ಎಂ.ನಾಗರಾಜ, ತಾಲ್ಲೂಕು ಅಧ್ಯಕ್ಷ ಎನ್.ನಾಗರಾಜ, ಮಂಜುನಾಥ್ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post